ಉತ್ತರಾಖಂಡದಲ್ಲಿ ಮಹಿಳೆಯರ ಮೇಲೆ ನಡೆದ ಚಿರತೆ ದಾಳಿಯನ್ನು ಬೆಂಗಳೂರಿನದ್ದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ
ಡಿಸೆಂಬರ್ 13 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಉತ್ತರಾಖಂಡದಲ್ಲಿ ಮಹಿಳೆಯರ ಮೇಲೆ ನಡೆದ ಚಿರತೆ ದಾಳಿಯನ್ನು ಬೆಂಗಳೂರಿನದ್ದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ಮಾಡಿರುವ ವೀಡಿಯೋ ಉತ್ತರಾಖಂಡದ್ದು. ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದರೂ, ವೀಡಿಯೋ ಬೆಂಗಳೂರಿನದ್ದಲ್ಲ.

ಕ್ಲೈಮ್ ಐಡಿ 451a6afd


ಸಂದರ್ಭ

ಎರಡು ವಾರಗಳ ಹಿಂದೆ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನವೆಂಬರ್ ೨೯ ರಂದು ಬೆಂಗಳೂರಿನ ಹೊರಭಾಗದಲ್ಲಿ, ಕೆಂಗೇರಿಯ ತುರಹಳ್ಳಿ ಅರಣ್ಯ ಪ್ರದೇಶದ ಸಮೀಪದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದವು, ಅದೇ ದಿನ ಉತ್ತರ ಬೆಂಗಳೂರಿನ ಮೀನಾಕುಂಟೆಯಲ್ಲಿ ಒಂದು ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಹಲವಾರು ನಿವಾಸಿಗಳು ಭಯಭೀತರಾಗಿದ್ದಾರೆ. ಡಿಸೆಂಬರ್ ೦೨ ರಂದು ಮೈಸೂರು ಜಿಲ್ಲೆಯಲ್ಲಿ ಇಬ್ಬರು ಚಿರತೆ ದಾಳಿಯಿಂದ ಸಾವನ್ನಪಿರುವುದು ಅವರ ಭಯ ಮತ್ತು ಆತಂಕವನ್ನು ಹೆಚ್ಚಿಸಿದೆ, ಆದರೆ ಬೆಂಗಳೂರಿನ ಹೊರವಲಯದಲ್ಲಿ ಯಾವುದೇ ಹೊಸ ಚಿರತೆ ಕಾಣಿಸಿಕೊಂಡಿಲ್ಲಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.


ಈ ಹಿನ್ನಲೆಯಲ್ಲಿ ಚಿರತೆಯೊಂದು ಇಬ್ಬರು ಮಹಿಳೆಯರ ಮೇಲೆ ದಾಳಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೊಳ್ಳಲಾಗಿದೆ. ಬೆಟ್ಟದ ಹುಲ್ಲುಗಾವಲಿನಲ್ಲಿ ಇಬ್ಬರು ಮಹಿಳೆಯರು ಚಿರತೆ ಬೆನ್ನಟ್ಟುತ್ತಿದ್ದಂತೆ ಓಡಿಹೋಗಲು ಪ್ರಯತ್ನಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಸ್ವಲ್ಪ ಸಮಯದಲ್ಲೇ, ಚಿರತೆ ಮಹಿಳೆಯೊಬ್ಬಳ ಮೇಲೆ ದಾಳಿ ಮಾಡುತ್ತದೆ, ಆಕೆಯನ್ನು ಇಳಿಜಾರಿನ ಕೆಳಗೆ ಉರುಳಿಸಲು ಬಿಟ್ಟು ಇತರ ಮಹಿಳೆಯ ಮೇಲೆ ಹಾರುತ್ತದೆ ಮತ್ತು ಅಂತಿಮವಾಗಿ ಓಡಿಹೋಗುತ್ತದೆ.


ವಾಸ್ತವವಾಗಿ

ವೈರಲ್ ಕ್ಲಿಪ್‌ನ ಒಂದು ಕೀಫ್ರೇಮ್‌ ಮೇಲೆ ರೀವರ್ಸ್ ಇಮೇಜ್ ಸರ್ಚ್ ಅನ್ನು ಮಾಡಿದಾಗ, ವೀಡಿಯೋ ಕರ್ನಾಟಕದದ್ದಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಅದೇ ವೀಡಿಯೋವನ್ನು ಹಿಂದಿ ನ್ಯೂಸ್ ಚಾನೆಲ್ ಟಿವಿ೯ ಭಾರತ್ವರ್ಷ್‌ನಲ್ಲಿ (TV9 Bharatvarsh) ತೋರಿಸಲಾಗಿದೆ ಮತ್ತು ಸುದ್ದಿ ವರದಿಯನ್ನು ಅದರ ಯೂಟ್ಯೂಬ್ ಚಾನೆಲ್‌ನಲ್ಲಿ ನವೆಂಬರ್ ೨೯, ೨೦೨೨ ರಂದು ಹಂಚಿಕೊಳ್ಳಲಾಗಿದೆ. ವರದಿಯ ಪ್ರಕಾರ, ಉತ್ತರಾಖಂಡದ ಅಲ್ಮೋರ ಜಿಲ್ಲೆಯ ದ್ವಾರಾಹತ್ ಬ್ಲಾಕ್‌ನಲ್ಲಿ ನವೆಂಬರ್ ೨೮ ರ ಸಂಜೆ ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ಮಾಡಿದೆ. ವೀಕ್ಷಕರೊಬ್ಬರು ಈ ಘಟನೆಯನ್ನು ವೀಕ್ಷಿಸಿದರು ಮತ್ತು ಅದನ್ನು ವೀಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದೇ ವೀಡಿಯೊವನ್ನು ನವೆಂಬರ್ ೨೯ ರಂದು ಟೈಮ್ಸ್ ನೌ ನವಭಾರತ್ (Times Now Navbharat) ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೊ ಶೀರ್ಷಿಕೆ (ಹಿಂದಿಯಿಂದ ಅನುವಾದಿಸಲಾಗಿದೆ) ಹೀಗಿದೆ: "ಉತ್ತರಾಖಂಡದ ಅಲ್ಮೋರಾದಲ್ಲಿ ಚಿರತೆ ಭಯ, ಇಡೀ ಗ್ರಾಮ ಭಯಭೀತವಾಗಿದೆ | ಚಿರತೆ ದಾಳಿ, ವೈರಲ್ ವೀಡಿಯೊ |."


ಜಾಗರಣ್ ನ್ಯೂಸ್‌ನ ಪತ್ರಕರ್ತ ಸ್ಕಂದ್ ಶುಕ್ಲಾ ಅವರು ನವೆಂಬರ್ ೨೯, ೨೦೨೨ ರಂದು ಅದೇ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಹಿಂದಿಯಲ್ಲಿ ಬರೆದಿದ್ದಾರೆ, "ಸೋಮವಾರ ಮಧ್ಯಾಹ್ನ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ದ್ವಾರಾಹತ್ ಬ್ಲಾಕ್‌ನಲ್ಲಿ ಮರ ಮತ್ತು ಮೇವು ಸಂಗ್ರಹಿಸಲು ಹೋಗಿದ್ದ ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಇಬ್ಬರೂ ಸ್ವಲ್ಪದರಲ್ಲೇ ಪಾರಾಗಿದ್ದಾರೆ." ಘಟನೆಯ ನಿಖರವಾದ ಸಮಯವನ್ನು ಲಾಜಿಕಲಿ (Logically) ಯು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ವೈರಲ್ ವೀಡಿಯೋವು ಉತ್ತರಾಖಂಡದದ್ದು ಮತ್ತು ಕರ್ನಾಟಕದಲ್ಲ ಎಂಬುದು ಸ್ಪಷ್ಟವಾಗಿದೆ.


ಹಿಂದೂಸ್ತಾನ್ ಟೈಮ್ಸ್ (Hindustan Times) ಪ್ರಕಾರ, ನವೆಂಬರ್ ೨೪ ರಿಂದ ಅಲ್ಮೋರ ಜಿಲ್ಲೆಗಳಲ್ಲಿ ಚಿರತೆ ದಾಳಿಯ ಇತರ ಮೂರು ಘಟನೆಗಳು ದಾಖಲಾಗಿವೆ. ಈ ಘಟನೆಗಳಲ್ಲಿ ಒಂದರಲ್ಲಿ ೫೮ ವರ್ಷದ ವ್ಯಕ್ತಿಯೊಬ್ಬನನ್ನು ಕೊಂದುಹಾಕಿದ ನಂತರ, ಡಿಸೆಂಬರ್ ೫ ರಂದು ಉತ್ತರಾಖಂಡ್ ವನ್ಯಜೀವಿ ಅಧಿಕಾರಿಗಳು ನರ ಭಕ್ಷಕ ಚಿರತೆಯನ್ನು ಹೊಡೆದುರುಳಿಸಲು ವ್ಯವಸ್ಥೆ ಮಾಡಿದರು. ದೂರದ ಬೆಂಗಳೂರಿನಲ್ಲಿ, ಅರಣ್ಯ ಅಧಿಕಾರಿಗಳು ಈ ಹಿಂದೆ ಚಿರತೆಗಳು ಕಾಣಿಸಿಕೊಂಡ ಪ್ರದೇಶಗಳಲ್ಲಿ ಬೋನ್‌ಗಳನ್ನು ಅಳವಡಿಸಿದ್ದಾರೆ ಎಂದು ಮತ್ತೊಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.


ತೀರ್ಪು

ಚಿರತೆ ದಾಳಿಯ ವೈರಲ್ ವೀಡಿಯೋ ಉತ್ತರಾಖಂಡದ ಅಲ್ಮೋರದಲ್ಲಿ ತೆಗೆದಿದ್ದು, ಆದರೆ ಬೆಂಗಳೂರಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.