ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ವಿ ಪಿ ಸಿಂಗ್ ಸರ್ಕಾರ, ವಾಜಪೇಯಿ ಸರ್ಕಾರವಲ್ಲ

ಮೂಲಕ: ರಜಿನಿ ಕೆ.ಜಿ
ಡಿಸೆಂಬರ್ 5 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ವಿ ಪಿ ಸಿಂಗ್ ಸರ್ಕಾರ, ವಾಜಪೇಯಿ ಸರ್ಕಾರವಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮಾರ್ಚ್ ೩೧, ೧೯೯೦ ರಂದು ವಿ.ಪಿ. ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ.

ಕ್ಲೈಮ್ ಐಡಿ 6ef77e27


ಸಂದರ್ಭ

ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿ.ಆರ್. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಒಂದು ಪೋಸ್ಟ್ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, “ಭಾರತ ರತ್ನ ಕೊಟ್ಟಿದ್ದು ವಾಜಪೇಯಿ ಸರಕಾರ. ಈಗ ಅನೇಕ ರಾಜಕೀಯ ಪಕ್ಷಗಳು ಅಂಬೇಡ್ಕರ್ ರನ್ನು ಗುತ್ತಿಗೆ ಪಡೆದಂತೆ ಆಡುತ್ತಿವೆ. ಆದರೆ ಅಂಬೇಡ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ಅಟಲ್‌ ಬಿಹಾರಿ ವಾಜಪೇಯಿಯವರ ಸರಕಾರ ಬರಬೇಕಾಯಿತು. ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳು ನಮಗೆ ಜೀವನ ದೃಷ್ಟಿಯನ್ನು ನೀಡುತ್ತವೆ. ಸಂವಿಧಾನದ ಪೂರ್ವಪೀಠಿಕೆಯನ್ನು ಪ್ರತಿಯೊಬ್ಬರು ಬಾಯಿಪಾಠ ಮಾಡಬೇಕು,” ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗೂ ಬಿ.ಎಲ್. ಸಂತೋಷ್ ಈ ಹೇಳಿಕೆ ನೀಡಿದ್ದಾರೆ ಎಂದು ಆ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಬೊಮ್ಮರಬೆಟ್ಟು ಲಕ್ಷ್ಮೀ ಜನಾರ್ಧನ ಸಂತೋಷ್ ಅವರು ಕರ್ನಾಟಕದ ಉಡುಪಿಯಿಂದ ಬಂದವರು. ಪ್ರಸ್ತುತ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ಪೋಸ್ಟ್ ೨೦೧೯ ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.


ಆದರೆ ಇದು ತಪ್ಪು ಹೇಳಿಕೆ. ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದ್ದು ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮತ್ತು ಬಿ. ಎಲ್. ಸಂತೋಷ್ ಅವರು ಈ ರೀತಿ ಹೇಳಿಕೆ ನೀಡಿದ್ದಕ್ಕೆ ಯಾವುದೇ ಪುರಾವೆ ಇಲ್ಲ.


ವಾಸ್ತವವಾಗಿ

ಗೃಹ ಸಚಿವಾಲಯವು ಪ್ರಕಟಿಸಿದ ಭಾರತ ರತ್ನ ಪುರಸ್ಕೃತರ ಪಟ್ಟಿಯ ಪ್ರಕಾರ, ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ೧೯೯೦ ರಲ್ಲಿ ಮರಣೋತ್ತರವಾಗಿ ಪಡೆದರು. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೆ ಮಾನವ ಪ್ರಯತ್ನದ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯ ಅಸಾಧಾರಣ ಸೇವೆ/ಕಾರ್ಯನಿರ್ವಹಣೆಯನ್ನು ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ೧೯೬೬ ರಲ್ಲಿ ಮರಣೋತ್ತರವಾಗಿ ಗೌರವಿಸಲ್ಪಟ್ಟ ಮೊದಲ ವ್ಯಕ್ತಿಯಾಗಿದ್ದಾರೆ.


ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಮಾರ್ಚ್ ೩೧, ೧೯೯೦ ರಂದು ಬಿ.ಆರ್. ಅಂಬೇಡ್ಕರ್ ಅವರು ಭಾರತ ರತ್ನ ಪ್ರಶಸ್ತಿಯನ್ನು ಪಡೆದರು. ಅಂಬೇಡ್ಕರ್ ಅವರು ಏಪ್ರಿಲ್ ೧೪, ೧೮೯೧ ರಂದು ಈಗ ಮಧ್ಯಪ್ರದೇಶದಲ್ಲಿರುವ ಮೊವ ನಲ್ಲಿ ಜನಿಸಿದರು. ಅವರು ಭಾರತದ ಸಂವಿಧಾನದ ಕರಡು ರಚನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.


ಪ್ರಧಾನ ಮಂತ್ರಿ ಕಾರ್ಯಾಲಯವು ಪ್ರಕಟಿಸಿದ ಮಾಜಿ ಪ್ರಧಾನ ಮಂತ್ರಿಗಳ ಪಟ್ಟಿಯು ವಿಶ್ವನಾಥ್ ಪ್ರತಾಪ್ ಸಿಂಗ್ (ವಿ.ಪಿ. ಸಿಂಗ್) ೧೯೯೦ ರಲ್ಲಿ ಪ್ರಧಾನ ಮಂತ್ರಿಯಾಗಿದ್ದರು ಎಂದು ತೋರಿಸುತ್ತದೆ. ಅವರು ಡಿಸೆಂಬರ್ ೨, ೧೯೮೯ ರಿಂದ ನವೆಂಬರ್ ೧೦, ೧೯೯೦ ರವರೆಗೆ ಅಧಿಕಾರದಲ್ಲಿದ್ದರು ಮತ್ತು ೧೯೮೭ ರಲ್ಲಿ “ಜನ ಮೋರ್ಚಾ” ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.


ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೬ ರಲ್ಲಿ ಭಾರತದ ಪ್ರಧಾನ ಮಂತ್ರಿಯಾದರು. ಅವರ ಮೊದಲ ಅವಧಿಯು ಮೇ ೧೬, ೧೯೯೬ ರಿಂದ ಜೂನ್ ೧, ೧೯೯೬ ರವರೆಗೆ ಇತ್ತು. ಅವರ ಎರಡನೇ ಅವಧಿಯು ಮಾರ್ಚ್ ೧೯, ೧೯೯೮ ರಿಂದ ಮೇ ೨೨, ೨೦೦೪ ರವರೆಗೆ. ಬಿ.ಆರ್. ಅಂಬೇಡ್ಕರ್ ಅವರಿಗೆ “ಭಾರತ ರತ್ನ” ನೀಡಿದ್ದು ವಿ.ಪಿ. ಸಿಂಗ್ ಅವರ ಅವಧಿಯಲ್ಲಿಯೇ ಹೊರತು ವಾಜಪೇಯಿ ಅವರ ಅವಧಿಯಲ್ಲಿ ಅಲ್ಲ ಎಂದು ದೃಢಪಡುತ್ತದೆ.


ತೀರ್ಪು

೧೯೯೦ ರಲ್ಲಿ ವಿ.ಪಿ. ಸಿಂಗ್ ಸರಕಾರದ ಅವಧಿಯಲ್ಲಿ ಬಿ.ಆರ್.ಅಂಬೇಡ್ಕರ್ ಅವರಿಗೆ “ಭಾರತ ರತ್ನ” ಪ್ರಶಸ್ತಿ ನೀಡಲಾಯಿತು. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.