ವಿಶೇಷ ತೀರ್ಥಯಾತ್ರೆಯ ರೈಲಿನ ವೀಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಆಗಸ್ಟ್ 17 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವಿಶೇಷ ತೀರ್ಥಯಾತ್ರೆಯ ರೈಲಿನ ವೀಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ಕರ್ನಾಟಕದ ವಾಡಿ ಮತ್ತು ಹೈದರಾಬಾದ್ ನಡುವೆ ಚಲಿಸುವ ವಿಶೇಷ ತೀರ್ಥಯಾತ್ರೆಯ ರೈಲಿನ ವೀಡಿಯೋ. ಇಂತಹ ರೈಲುಗಳನ್ನು ಹೆಚ್ಚಾಗಿ ಭಾರತೀಯ ರೈಲ್ವೆ ನಡೆಸುತ್ತದೆ.

ಕ್ಲೈಮ್ ಐಡಿ 6f4863d9

ಸಾಮಾಜಿಕ ಮಾಧ್ಯಮದಲ್ಲಿ ಪ್ರಸರಿಸುತ್ತಿರುವ ಹೇಳಿಕೆ ಏನು?

ಭಾರತದಲ್ಲಿ ರೈಲನ್ನು "ಮುಸ್ಲಿಂ ಎಕ್ಸ್‌ಪ್ರೆಸ್" ಆಗಿ ಪರಿವರ್ತಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ತೆಲಂಗಾಣದ ಹೈದರಾಬಾದ್ ಮತ್ತು ಪಶ್ಚಿಮ ಬಂಗಾಳದ ನಡುವೆ ಚಲಿಸುವ ಪ್ರಯಾಣಿಕರನ್ನು "ಮುಸ್ಲಿಂ ಎಕ್ಸ್‌ಪ್ರೆಸ್" ಆಗಿ ಪರಿವರ್ತಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಪೋಷ್ಟ್ ಗಳಲ್ಲಿನ ವೈರಲ್ ವೀಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ನಿಂತ್ತಿರುವುದನ್ನು ತೋರಿಸುತ್ತದೆ, ಅದರ ಎಂಜಿನ್ ಅನ್ನು ರಟ್ಟಿನಿಂದ ಮಾಡಿರುವ ಮಸೀದಿಯ ಪ್ರತಿಕೃತಿಯಿಂದ ಅಲಂಕರಿಸಲಾಗಿದೆ. 'ಜಿಹಾದಿಗಳು'-ಮುಸ್ಲಿಮರನ್ನು ವಿವರಿಸಲು ಬಲಪಂಥೀಯರು ಹೆಚ್ಚಾಗಿ ಬಳಸುವ ಅವಹೇಳನಕಾರಿ ಪದ-ರೈಲಿನ ಮತಾಂತರಕ್ಕೆ ಕಾರಣರಾಗಿದ್ದಾರೆ ಎಂಬ ಇಸ್ಲಾಮೋಫೋಬಿಕ್ ನಿರೂಪಣೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಂತಹ ಒಂದು ಪೋಷ್ಟ್‌ನ ಮೂಲತಃ ಹಿಂದಿಯಲ್ಲಿ ಬರೆಯಲಾದ ಶೀರ್ಷಿಕೆಯ ಒಂದು ಭಾಗ ಹೀಗಿದೆ: "ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುವ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ಕಾರು ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ಕಾರನ್ನು ಹೀಗೆಯೇ ಕಳುಹಿಸಬೇಕು ಎಂದು ಹಠ ಹಿಡಿದಿದ್ದಾರೆ. ಇದು ಯಾವ ಮನಸ್ಥಿತಿ?" X (ಟ್ವಿಟ್ಟರ್) ನಲ್ಲಿನ ಒಂದು ಪೋಷ್ಟ್ ವೀಡಿಯೋದೊಂದಿಗೆ ಇದುವರೆಗೆ ೧೮,೫೦೦ ವೀಕ್ಷಣೆಗಳನ್ನು ಗಳಿಸಿದೆ.

(ಮೂಲ: ಎಕ್ಸ್(X)/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅನೇಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಅದೇ ನಿರೂಪಣೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

(ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆ ತಪ್ಪು.

ನಾವು ಕಂಡುಕೊಂಡಿದ್ದು ಏನು?

ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ರೈಲು ಎಂಜಿನ್‌ನ ಮೇಲೆ ಉರ್ದು ಪಠ್ಯ "ಉರ್ಸ್ ಕ್ವಾದೀರ್ ಮುಬಾರಕ್" ನೊಂದಿಗೆ ಪೋಷ್ಟ್ ರ್ ಇರುವುದನ್ನು ಕಂಡುಕೊಂಡಿದ್ದೇವೆ. ಇದರಿಂದ ಸುಳಿವನ್ನು ತೆಗೆದುಕೊಂಡು, ನಾವು ಯೂಟ್ಯೂಬ್ ಚಾನೆಲ್ 'gohash' ಪೋಷ್ಟ್ ಮಾಡಿದ ವೀಡಿಯೋವನ್ನು ಪತ್ತೆಹಚ್ಚಿದ್ದೇವೆ. ವೀಡಿಯೋವನ್ನು ಆಗಸ್ಟ್ ೨, ೨೦೨೩ ರಂದು, ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “46 URS-E-QUADEER HAZRAT KHWAJA SYED MOHAMMED BADSHAH QUADRI CHISHTI YAMANI QUADEER HALKATTA SHAREEF." 

(ಮೂಲ:ಯುಟ್ಯೂಬ್.ಕಾಮ್/ಗೋಹಾಶ್)

ಯೂಟ್ಯೂಬ್‌ ವೀಡಿಯೋವು ೯-ಸೆಕೆಂಡ್ ಸಮಯದಲ್ಲಿ ವೈರಲ್ ಕ್ಲಿಪ್‌ನಂತೆಯೇ ಅದೇ ರೈಲನ್ನು ಒಳಗೊಂಡಿತ್ತು. ಎರಡೂ ವೀಡಿಯೋಗಳು ಮಸೀದಿಯ ಒಂದೇ ರಟ್ಟಿನ ಪ್ರತಿಕೃತಿ, ಒಂದೇ ಎಂಜಿನ್ ಸಂಖ್ಯೆ ಮತ್ತು ರೈಲು ಎಂಜಿನ್‌ನ ಮುಂದೆ "೪೬ ನೇ ಯುಆರ್‌ಎಸ್-ಇ-ಕ್ವಾದೀರ್" ಎಂದು ಬರೆಯಲಾದ ಅದೇ ಬ್ಯಾನರ್ ಅನ್ನು ಹೊಂದಿರುವುದನ್ನು ತೋರಿಸುತ್ತದೆ.

(ಮೂಲ:ಎಕ್ಸ್(X)/ಯುಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಎರಡೂ ದೃಶ್ಯಗಳಲ್ಲಿ ರೈಲಿನ ಒಂದು ಬದಿಯಲ್ಲಿ ಪ್ಲ್ಯಾಸ್ಟರ್ಡ್ ಮಾಡಲಾದ "ಉರ್ಸ್ ಕ್ವಾದೀರ್ ಮುಬಾರಕ್" ಪೋಷ್ಟ್ ರ್ ಅನ್ನು ಸಹ ನಾವು ಗುರುತಿಸಿದ್ದೇವೆ.

(ಮೂಲ:ಎಕ್ಸ್(X)/ಯುಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

"ಉರ್ಸ್" ಎಂಬ ಉರ್ದು ಪದವು ಸೂಫಿ ಸಂತ ಅಥವಾ ಆಧ್ಯಾತ್ಮಿಕ ನಾಯಕನ ಮರಣದ ವಾರ್ಷಿಕ ಸ್ಮರಣಾರ್ಥ ಅಥವಾ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಮತ್ತು '೪೬ ನೇ ಉರ್ಸ್-ಇ-ಕ್ವಾದೀರ್' - ಬಾದಶಾ ಕ್ವಾದ್ರಿಯ ಉರ್ಸ್‌ನ ೪೬ ನೇ ಆಚರಣೆಯನ್ನು ಸೂಚಿಸುತ್ತದೆ. ಬಾದಶಾ ಕ್ವಾದ್ರಿ ಅಥವಾ ಬಡೇಶ ಖಾದ್ರಿ ಎಂದು ವ್ಯಾಪಕವಾಗಿ ನೆನಪಿಸಿಕೊಳ್ಳುತ್ತಾರೆ, ಸೈಯದ್ ಮೊಹಮ್ಮದ್ ಬಾದಶಾ ಖಾದ್ರಿ-ಉಲ್-ಚಿಶ್ತಿ ಯಮಾನಿ ರಾಯಚೂರಿ ಅವರು ಚಿಶ್ತಿ ಕ್ರಮಕ್ಕೆ ಸೇರಿದ ಗೌರವಾನ್ವಿತ ಭಾರತೀಯ ಸೂಫಿ ಸಂತರಾಗಿದ್ದರು.

ಈ ರೈಲುಗಳು ಯಾರಿಂದ ಚಲಿಸಲಾಗುತ್ತದೆ?

ಜುಲೈ ೨೭ ರಂದು, ದಕ್ಷಿಣ ಮಧ್ಯ ರೈಲ್ವೆಯು "ಹೈದರಾಬಾದ್-ವಾಡಿ ನಡುವೆ ಉರ್ಸ್ ಆಚರಣೆಗಾಗಿ ಕಾಯ್ದಿರಿಸದ ವಿಶೇಷ ರೈಲುಗಳು" ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿತು. ಅಧಿಸೂಚನೆಯಲ್ಲಿ ಹೀಗೆ ಹೇಳಲಾಗಿದೆ, "೨೦೨೩ ರ ಆಗಸ್ಟ್ ೧ ರಂದು ವಾಡಿ ಜಂಕ್ಷನ್ (ಕರ್ನಾಟಕದಲ್ಲಿ) ಬಳಿಯ ಹಲ್ಕಟ್ಟಾ ಶರೀಫ್‌ನಲ್ಲಿ ಉರ್ಸ್ - ಇ - ಗ್ರೇಟ್ ಸೈಂಟ್ ಹಜರತ್ ಖ್ವಾಜಾ ಸೈಯದ್ ಮೊಹಮ್ಮದ್ ಬಡೇಶ ಕ್ವಾದ್ರಿ ಚಿಸ್ತಿ ಯಮಾನಿ ಅವರ ೪೬ ನೇ ವಾರ್ಷಿಕೋತ್ಸವದ ಆಚರಣೆಗಳಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳ ಹೆಚ್ಚುವರಿ ವಿಪರೀತವನ್ನು ತೆರವುಗೊಳಿಸಲು ಕೆಳಗೆ ವಿವರಿಸಿದಂತೆ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲಾಗುವುದು." ಪತ್ರಿಕಾ ಪ್ರಕಟಣೆಯು ರೈಲು ಸಂಖ್ಯೆಗಳು ಮತ್ತು ವಿಶೇಷ ರೈಲುಗಳ ಸಮಯವನ್ನು ಒಳಗೊಂಡಿತ್ತು.

ಭಾರತೀಯ ರೈಲ್ವೆ

ಉರ್ಸ್-ಎ-ಕ್ವಾಡೀರ್‌ಗಾಗಿ ವಿಶೇಷ ರೈಲುಗಳ ಕಾರ್ಯಾಚರಣೆಗೆ ಇಂತಹ ಅಧಿಕೃತ ಅಧಿಸೂಚನೆಗಳನ್ನು ಕಳೆದ ಕೆಲವು ವರ್ಷಗಳಲ್ಲಿ ಬಿಡುಗಡೆ ಮಾಡಲಾಗಿತ್ತು. 

(ಮೂಲ:ಎಕ್ಸ್(X)/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹಲವಾರು ಯೂಟ್ಯೂಬ್ ಚಾನೆಲ್‌ಗಳು ೨೦೧೭ ಮತ್ತು ೨೦೧೮ ರಲ್ಲಿ ಭಾರತೀಯ ರೈಲ್ವೇ ನಿರ್ವಹಿಸಿದ ಈ ವಿಶೇಷ ರೈಲುಗಳನ್ನು ತೋರಿಸುವ ವೀಡಿಯೋಗಳನ್ನು ಸಹ ಹಂಚಿಕೊಂಡಿವೆ.

(ಮೂಲ:ಯುಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಭಾರತೀಯ ರೈಲ್ವೆ ಹೇಳಿದ್ದೇನು?

ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಂತೆ ಹೈದರಾಬಾದ್ ಮತ್ತು ಪಶ್ಚಿಮ ಬಂಗಾಳದ ನಡುವೆ "ಮುಸ್ಲಿಂ ಎಕ್ಸ್‌ಪ್ರೆಸ್" ರೈಲು ಓಡುತ್ತಿದೆ ಎಂಬ ಹೇಳಿಕೆಯನ್ನು ಭಾರತೀಯ ರೈಲ್ವೇ ನಿರಾಕರಿಸಿದೆ. ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಕೇಶ್ ಅವರು, "ಇದು (ವೈರಲ್ ಕ್ಲಿಪ್‌ನಲ್ಲಿರುವ ರೈಲು) ಹೈದರಾಬಾದ್ ಮತ್ತು ವಾಡಿ ನಡುವೆ ಕಾರ್ಯನಿರ್ವಹಿಸುವ ವಿಶೇಷ ರೈಲು. ಪ್ರತಿ ವರ್ಷ, ಹಸರತ್ ಖ್ವಾಜಾ ಸೈಯದ್ ಮೊಹಮ್ಮದ್ ಬಡೇಶ ಕ್ವಾದ್ರಿ ಚಿಸ್ತಿ ಯಾಮಿನಿಯ ಉರ್ಸ್-ಎ-ಶರೀಫ್ ಅವರ ವಾರ್ಷಿಕ ಆಚರಣೆಗಳಿಗೆ ಭೇಟಿ ನೀಡುವ ಯಾತ್ರಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲುಗಳನ್ನು ನಿರ್ವಹಿಸಲಾಗುತ್ತದೆ. ಈ ವರ್ಷ, ಆಗಸ್ಟ್ ೧ ಮತ್ತು ಆಗಸ್ಟ್ ೩, ೨೦೨೩ ರ ನಡುವೆ ವಿಶೇಷ ರೈಲಿನ ಎರಡು ಸುತ್ತಿನ ಪ್ರಯಾಣವನ್ನು ಏರ್ಪಡಿಸಲಾಗಿದೆ" ಎಂದು ಲಾಜಿಕಲ್ ಫ್ಯಾಕ್ಟ್ಸ್‌ಗೆ ತಿಳಿಸಿದರು.

ಭಾರತೀಯ ರೈಲ್ವೇ ವಿವಿಧ ಧಾರ್ಮಿಕ ಸಂದರ್ಭಗಳಲ್ಲಿ ಪ್ರಯಾಣಿಕರಿಗಾಗಿ ಹಲವಾರು ವಿಶೇಷ ರೈಲುಗಳನ್ನು ನಡೆಸುತ್ತದೆ. ಉತ್ತರ ರೈಲ್ವೆಯು ಜನವರಿ ೨೫, ೨೦೨೩ ರಂದು ಬಿಹಾರದ ಬರೌನಿ ಮತ್ತು ರಾಜಸ್ಥಾನದ ಅಜ್ಮೀರ್ ನಡುವೆ ಉರ್ಸ್ ವಿಶೇಷ ರೈಲುಗಳಿಗಾಗಿ ಅಧಿಸೂಚನೆಯನ್ನು ಹೊರಡಿಸಿತ್ತು.

ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ೮೧೧ ನೇ ವಾರ್ಷಿಕ ಉರ್ಸ್ ಜನವರಿ ೧೯ ರಂದು ಅಜ್ಮೀರ್‌ನಲ್ಲಿ ಪ್ರಾರಂಭವಾಯಿತು. ಕುಂಭಮೇಳಕ್ಕೆ ಸರ್ಕಾರವು ವಿಶೇಷ ರೈಲುಗಳನ್ನು ಸಹ ನಿರ್ವಹಿಸುತ್ತದೆ - ಇದು ಪ್ರಮುಖ ಹಿಂದೂ ತೀರ್ಥಯಾತ್ರೆ ಮತ್ತು ಹಬ್ಬವಾಗಿದೆ. ಡಿಡಿ ನ್ಯೂಸ್ ವರದಿಯ ಪ್ರಕಾರ, ೨೦೨೫ ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳಕ್ಕೆ ಭಕ್ತರು ಸೇರಲು ಅನುಕೂಲವಾಗುವಂತೆ ಭಾರತೀಯ ರೈಲ್ವೆ ದೇಶದ ವಿವಿಧ ಪ್ರದೇಶಗಳಿಂದ ೧,೨೦೦ ವಿಶೇಷ ರೈಲುಗಳನ್ನು ಓಡಿಸಲಿದೆ.

ತೀರ್ಪು

ಕರ್ನಾಟಕದ ವಾಡಿ ಮತ್ತು ಹೈದರಾಬಾದ್ ನಡುವಿನ ವಿಶೇಷ ತೀರ್ಥಯಾತ್ರೆಯ ರೈಲಿನ ವೀಡಿಯೋವನ್ನು ತಪ್ಪು ಕೋಮುವಾದದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಭಾರತೀಯ ರೈಲ್ವೇಯು ವಾಡಿಯಲ್ಲಿ ಬಾದಶಾಹ್ ಕ್ವಾದ್ರಿಯ ಉರ್ಸ್ ಸಂದರ್ಭದಲ್ಲಿ ಈ ವಿಶೇಷ ರೈಲನ್ನು ನಿರ್ವಹಿಸುತ್ತದೆ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ರಜಿನಿ ಕೆ.ಜಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.