೨೦೨೩ ರಲ್ಲಿ ಪ್ರತಿಭಟನಾಕಾರರೊಬ್ಬರು ಟ್ರಾಕ್ಟರ್ ಕೆಳಗೆ ಸಿಲುಕಿ ಸಾವನ್ನಪಿದ ವೀಡಿಯೋವನ್ನು ಈಗಿನ ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ಫೆಬ್ರವರಿ 16 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೩ ರಲ್ಲಿ ಪ್ರತಿಭಟನಾಕಾರರೊಬ್ಬರು ಟ್ರಾಕ್ಟರ್ ಕೆಳಗೆ ಸಿಲುಕಿ ಸಾವನ್ನಪಿದ  ವೀಡಿಯೋವನ್ನು ಈಗಿನ ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ ಫೇಸ್‌ಬುಕ್‌/ಸ್ಕ್ರೀನ್‌ಶಾಟ್‌/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಟ್ರ್ಯಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದು ರೈತ ಸಾವನ್ನಪ್ಪಿದ ಈ ವೀಡಿಯೋ ೨೦೨೩ ರದ್ದು.

ಕ್ಲೈಮ್ ಐಡಿ 860b2bd9

(ಪ್ರಚೋದಕ ಎಚ್ಚರಿಕೆ: ವೀಡಿಯೋ ಗೊಂದಲದ ದೃಶ್ಯಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಸುಮಾರು ಎರಡು ವರ್ಷಗಳ ನಂತರ ‘ದಿಲ್ಲಿ ಚಲೋ’ ಅಡಿಯಲ್ಲಿ ರೈತರು ಮತ್ತೊಮ್ಮೆ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ರೈತರ ಎರಡು ದೊಡ್ಡ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ತೆರೆಳುತ್ತಿರುವ  ರೈತರನ್ನು ತಡೆಯಲು ದೆಹಲಿ ಮತ್ತು ಹರಿಯಾಣದ ಗಡಿಯಲ್ಲಿ ಪೊಲೀಸ್ ಪಡೆಗಳು ಮತ್ತು ಭಾರೀ ಬ್ಯಾರಿಕೇಡ್‌ಗಳನ್ನು ನಿಯೋಜಿಸಲಾಗಿದೆ. ಮಂಗಳವಾರ (ಫೆಬ್ರವರಿ 13), ಹರಿಯಾಣದ ಶಂಭು ಗಡಿಯಲ್ಲಿ, ಹರಿಯಾಣ ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿ ಬಳಸಿ ರೈತರನ್ನು ಮುಂದೆ ಸಾಗದಂತೆ ತಡೆಯಲು ಪ್ರಯತ್ನಿಸಿದರು, ಹಾಗು ಪ್ರತಿಭಟನಾಕಾರರಾದ ರೈತರಿಂದ ಕಲ್ಲು ತೂರಾಟವೂ ನಡೆದಿದೆ. ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಹೇಳಲಾಗಿದೆ.

ಹೇಳಿಕೆ ಏನು?

ಇದರ ಮಧ್ಯೆ, ಟ್ರ್ಯಾಕ್ಟರ್ ಕೆಳಗೆ ವ್ಯಕ್ತಿ ಯೊಬ್ಬರು ಬಿದ್ದು ನೆರಳಾಡುತ್ತಿರುವ ವೀಡಿಯೋವನ್ನು  ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೋದಲ್ಲಿ, ರೈತ ಸಂಘಟನೆಗಳ ಧ್ವಜಗಳು, ಸಿಖ್ ಸಮುದಾಯದ ಜನರು ಮತ್ತು ಪೊಲೀಸರು ಗೋಚರಿಸುತ್ತಾರೆ. ಈ ವೀಡಿಯೋದೊಂದಿಗೆ ರೈತರು ಪ್ರತಿಭಟನೆಯ ವೇಳೆ ಹರಿಯಾಣ ಪೊಲೀಸರನ್ನು ಟ್ರ್ಯಾಕ್ಟರ್‌ ಕೆಳಗೆ ಸಿಲುಕಿಸಿ ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವೀಡಿಯೋವನ್ನು ಹಂಚಿಕೊಂಡ ಫೇಸ್‌ಬುಕ್‌ ಬಳಕೆದಾರರೊಬ್ಬರು ಹೀಗೆ ಬರೆದಿದ್ದರೆ, "ಈ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ಈ ಖಾಲಿಸ್ಥಾನ್‌ ಉಗ್ರರ..ಟ್ರ್ಯಾಕ್ಟ‌ರ್ ಕೆಳಗೆ ಸಿಲುಕಿ ಈ ಪೋಲೀಸ ತಮ್ಮ ಪ್ರಾಣ ಕಳೆದುಕೊಂಡರು.ಇವಾಗ ಇದಕ್ಕೆ ಮೋದಿಜಿಯೇ ಕಾರಣ ಎಂದು ಹೇಳುತ್ತಾರೆ." ಇದರ ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಅದೇ ರೀತಿಯ ಇತರ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. 

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ ಫೇಸ್‌ಬುಕ್‌/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋಗೂ ರೈತರ ಪ್ರಸ್ತುತ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ೨೦೨೩ ರಲ್ಲಿ ಪಂಜಾಬ್‌ನ ಸಂಗ್ರೂರ್‌ನಲ್ಲಿ ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯ ನಡುವೆ ಟ್ರ್ಯಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದು ರೈತ ಸಾವನ್ನಪ್ಪಿದಾಗ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ. 

ಸತ್ಯಾಂಶಗಳು

ವೈರಲ್ ವೀಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಅದರ ಮೇಲಿನ ಬಲಭಾಗದಲ್ಲಿ "Gagandeep singh , @Gagan4344" ಎಕ್ಸ್ ಖಾತೆಯ ವಾಟರ್‌ಮಾರ್ಕ್ ಅನ್ನು ನೋಡಬಹುದು. ಇದರಿಂದ ಸುಳಿವನ್ನು ತೆಗೆದುಕೊಂಡು, ನಾವು ಅದೇ ಎಕ್ಸ್  ಖಾತೆಯನ್ನು ತಲುಪಿದೆವು, ಅಲ್ಲಿ ವೈರಲ್ ವೀಡಿಯೋವನ್ನು ಆಗಸ್ಟ್ ೨೧, ೨೦೨೩ ರಂದು ಪೋಷ್ಟ್ ಮಾಡಲಾಗಿದೆ. ಗಗನ್‌ದೀಪ್ ಸಿಂಗ್ ಅವರ ಬಯೋ ಪ್ರಕಾರ, ಅವರು ಪತ್ರಕರ್ತರಾಗಿದ್ದಾರೆ.

ಈ ವೀಡಿಯೋದೊಂದಿಗೆ ನೀಡಲಾದ ಮಾಹಿತಿಯ ಪ್ರಕಾರ, ಸಂಗ್ರೂರ್‌ನ ಲಾಂಗೋವಾಲ್ ಗ್ರಾಮದಲ್ಲಿ ರೈತರು ಮತ್ತು ಪಂಜಾಬ್ ಪೊಲೀಸರ ನಡುವೆ ಪ್ರತಿಭಟನೆಯಲ್ಲಿ ಭಾಗವಹಿಸಲು ಚಂಡೀಗಢದ ಕಡೆಗೆ ಹೋಗುತ್ತಿದ್ದಾಗ ಘರ್ಷಣೆ ಸಂಭವಿಸಿದೆ. ಈ ವೇಳೆ ಟ್ರ್ಯಾಕ್ಟರ್ ಟ್ರಾಲಿಯ ಟೈರಿನಡಿ ಸಿಲುಕಿ ರೈತನೊಬ್ಬನ ಕಾಲು ಮುರಿದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ವೇಳೆ ಓರ್ವ ಪೊಲೀಸ್ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಹೇಳಲಾಗಿದೆ. 

ನಂತರ, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಈ ಘಟನೆಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಪರಿಶೀಲಿಸಿದ್ದೇವೆ ಮತ್ತು ನವಭಾರತ್ ಟೈಮ್ಸ್, ಪಿಟಿಸಿ ಪಂಜಾಬ್, ದಿ ಟ್ರಿಬ್ಯೂನ್, ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಮಾಧ್ಯಮ ವರದಿಗಳಲ್ಲಿ ಈ ಘಟನೆಯ ಉಲ್ಲೇಖವನ್ನು ನಾವು ಕಂಡುಕೊಂಡೆವು. 

ಆಗಸ್ಟ್ ೨೧, ೨೦೨೩ ರಂದು ಪ್ರಕಟವಾದ ಪಿಟಿಸಿ ಪಂಜಾಬ್ ವರದಿಯು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲು ಚಂಡೀಗಢಕ್ಕೆ ತೆರಳಿದ್ದಾರೆ ಎಂದು ಹೇಳುತ್ತದೆ. ಇದೇ ವೇಳೆ ಸಂಗ್ರೂರ್ ಜಿಲ್ಲೆಯ ಲೊಂಗೊವಾಲ್ ಗ್ರಾಮದಲ್ಲಿ ರೈತರು ಮತ್ತು ಪಂಜಾಬ್ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ೭೦ ವರ್ಷದ ಪ್ರೀತಮ್ ಸಿಂಗ್ ಅವರು ಟ್ರಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದು ಅದರ ಕೆಳಗೆ ಸಿಲುಕಿ ಸಾವನ್ನಪ್ಪಿದರು ಎಂದು ವಿವರಿಸಲಾಗಿದೆ.

ವೈರಲ್ ವೀಡಿಯೋದ ದೃಶ್ಯಗಳನ್ನು ಒಳಗೊಂಡ ಪಿಟಿಸಿ ಪಂಜಾಬ್ ವರದಿಯ ಸ್ಕ್ರೀನ್‌ಶಾಟ್ . (ಮೂಲ: ಪಿಟಿಸಿ ಪಂಜಾಬ್/ಸ್ಕ್ರೀನ್‌ಶಾಟ್)

ಪ್ರತಿಭಟನಾ ನಿರತ ರೈತರು ಬಾರ್ಬರ್ ಟೋಲ್ ಪ್ಲಾಜಾ ಮತ್ತು ಬರ್ನಾಲಾ ಸಂಗ್ರೂರ್ ರಾಷ್ಟ್ರೀಯ ಹೆದ್ದಾರಿಯತ್ತ ದಿಗ್ಬಂಧನಕ್ಕೆ ತೆರೆಳಿದ್ದರು ಎಂದು ವರದಿ ತಿಳಿಸಿದೆ. ಸ್ಥಳದಲ್ಲಿದ್ದ ಪೊಲೀಸರು ಮತ್ತು ಇತರ ಅಧಿಕಾರಿಗಳು ಅವರನ್ನು ಮುಂದೆ ಸಾಗದಂತೆ ತಡೆದರು. ಆದರೆ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಟ್ರ್ಯಾಕ್ಟರ್-ಟ್ರೇಲರ್‌ಗಳೊಂದಿಗೆ ಮುಂದಕ್ಕೆ ಸಾಗಿದಾಗ, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಈ ಗಲಾಟೆಯ ನಡುವೆಯೇ ಪ್ರೀತಮ್ ಸಿಂಗ್ ಎಂಬ ಹಿರಿಯ ರೈತ ಟ್ರ್ಯಾಕ್ಟರ್ ಟ್ರೈಲರ್ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ. ನಂತರ, ಅವರನ್ನು ಪಟಿಯಾಲಾದ ರಾಜಿಂದರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರು ಕಾಲಿಗೆ ಗಂಭೀರವಾದ ಗಾಯಗಳಿಂದ ಸಾವನ್ನಪ್ಪಿದರು.

ಲೊಂಗೊವಾಲ್‌ನಲ್ಲಿ ಬಿಕೆಯು ಆಜಾದ್ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದೆ ಎಂದು ಸಂಗ್ರೂರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸುರೇಂದ್ರ ಲಂಬಾ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಅದಲ್ಲದೆ, ಆಗಸ್ಟ್ ೨೧, ೨೦೨೩ ರ ಸಂಗ್ರೂರ್ ಪೋಲೀಸರ ಎಕ್ಸ್ ಪೋಷ್ಟ್ ನಲ್ಲಿ ಅದೇ ವೀಡಿಯೋವನ್ನು ನಾವು ನೋಡಬಹುದು. ಇದರಲ್ಲಿ ಪ್ರತಿಭಟನಾಕಾರರು ನಿರಾತಂಕವಾಗಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸಿಲುಕಿ ಮೃತನ ಪ್ರಾಣ ಹೋಗಿದೆ ಎಂದು ಸಾಕ್ಷಿಗಳು ಮತ್ತು ವೀಡಿಯೋ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸಂಗ್ರೂರ್ ಪೋಲೀಸರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ತೀರ್ಪು

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಪ್ರೀತಮ್ ಸಿಂಗ್ ಎಂಬ ಹಿರಿಯ ರೈತ ಸಾವನ್ನಪ್ಪಿದ ಘಟನೆಯನ್ನು ಈಗಿನ ರೈತರ ಚಳವಳಿಗೆ ಸಂಬಂಧಿಸಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ಈ ಹೇಳಿಕೆಯನ್ನು ತಪ್ಪು ಎಂದು ನಾವು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.