ಕೇರಳ ಸರ್ಕಾರ ಶಬರಿಮಲೆ ಭಕ್ತರಿಗೆ ಕಿರುಕುಳ ನೀಡುತ್ತಿದೆ ಎಂದು ತಪ್ಪಾಗಿ ಬಿಂಬಿಸಲು ಅಳುತ್ತಿರುವ ಮಗುವಿನ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಉಮ್ಮೆ ಕುಲ್ಸುಮ್
ಡಿಸೆಂಬರ್ 14 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೇರಳ ಸರ್ಕಾರ ಶಬರಿಮಲೆ ಭಕ್ತರಿಗೆ ಕಿರುಕುಳ ನೀಡುತ್ತಿದೆ ಎಂದು ತಪ್ಪಾಗಿ ಬಿಂಬಿಸಲು ಅಳುತ್ತಿರುವ ಮಗುವಿನ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಶಬರಿಮಲೆ ಭಕ್ತಾದಿಗಳ ಮೇಲೆ ಆಪಾದಿತ ಪೋಲೀಸ್ ಕ್ರಮದ ವೇಳೆ ಮಗುವನ್ನು ಬಂಧಿಸಲಾಗಿದೆ ಎಂದು ಸೂಚಿಸುವ ವೈರಲ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಶಬರಿಮಲೆ ಯಾತ್ರೆಯ ವೇಳೆ ತಂದೆಯನ್ನು ಕಳೆದುಕೊಂಡ ನಂತರ ಮಗುವೊಂದು ತನ್ನ ತಂದೆಯನ್ನು ಹುಡುಕುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಮಗುವನ್ನು ಪೊಲೀಸರು ವಶಕ್ಕೆ ಪಡೆದಿಲ್ಲ.

ಕ್ಲೈಮ್ ಐಡಿ 3e4993a5

ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ಪ್ರಮುಖ ಹಿಂದೂ ದೇವಾಲಯವಾದ ಶಬರಿಮಲೆ ಅಯ್ಯಪ್ಪ ದೇವಾಲಯದ ವಾರ್ಷಿಕ ತೀರ್ಥಯಾತ್ರೆಯು ಈ ವರ್ಷ ನವೆಂಬರ್ ೧೭ ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ ೨೬ ರವರೆಗೆ ನಡೆಯಲಿದೆ.

ಹೇಳಿಕೆ ಏನು?

ತೀರ್ಥಯಾತ್ರೆಗಾಗಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುವುದನ್ನು ಮುಂದುವರೆಸುತ್ತಿರುವಾಗ, ಶಬರಿಮಲೆಗೆ ತೆರಳುವ ಭಕ್ತರ ಮೇಲೆ ಕೇರಳ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂಬ ಹೇಳಿಕೆಯೊಂದಿಗೆ ವಾಹನದೊಳಗೆ ಮಗುವಿನ ಗೋಳಾಟದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (Marxist) ನೇತೃತ್ವದ ಕೇರಳ ಸರ್ಕಾರವು ರಾಜ್ಯದಲ್ಲಿ 'ಹಿಂದೂಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ' ಎಂಬ ಹೇಳಿಕೆಯೊಂದಿಗೆ ಹಲವಾರು ಬಲಪಂಥೀಯ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದಿನ ಟ್ವಿಟರ್) ಬಳಕೆದಾರ 'ಮಿಸ್ಟರ್ ಸಿನ್ಹಾ (@MrSinha_)' ಈ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಕೇರಳದಲ್ಲಿ ಹಿಂದೂಗಳ ಸ್ಥಿತಿ. ಅವರು ಮಗುವನ್ನು ಸಹ ಬಿಡಲಿಲ್ಲ...#ಶಬರಿಮಲ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಹಂಚಿಕೊಳ್ಳುವ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಮತ್ತೊಬ್ಬ ಎಕ್ಸ್ ಬಳಕೆದಾರ, ರಿಷಿ ಬಾಗ್ರೀ ಅವರು ಹೀಗೆ ಬರೆದಿದ್ದಾರೆ, "ಸರ್ಕಾರದ ಅಧಿಕಾರಿಗಳು ಭಕ್ತರ ಮೇಲೆ ದಬ್ಬಾಳಿಕೆ ನಡೆಸಿದ ಕೇರಳದಲ್ಲಿ ಹಿಂದೂಗಳ ದುರವಸ್ಥೆ. ಅವರು ಮಕ್ಕಳನ್ನು ಸಹ ಉಳಿಸಲಿಲ್ಲ." ಇಬ್ಬರೂ ಬಳಕೆದಾರರು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹಕ್ಕುಗಳನ್ನು ಹಂಚಿಕೊಳ್ಳುವ ಇತಿಹಾಸವನ್ನು ಹೊಂದಿದ್ದಾರೆ. 

ಭಾರತೀಯ ಜನತಾ ಪಕ್ಷದ ಆಂಧ್ರಪ್ರದೇಶದ ಸಹ-ಪ್ರಭಾರಿ ಸುನಿಲ್ ದಿಯೋಧರ್ ಸೇರಿದಂತೆ ಇತರ ಬಳಕೆದಾರರು X ನಲ್ಲಿನ ಪೋಷ್ಟ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಅಂತಹುದೇ ಇತರ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ ಮಾಡಿದ ತಪ್ಪು ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋವನ್ನು ತಪ್ಪು ಕೋಮುವಾದಿ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ಕ್ಲಿಪ್ ಮಲಯಾಳಂ ಟಿವಿ ಚಾನೆಲ್ ಏಷ್ಯಾನೆಟ್ ನ್ಯೂಸ್‌ನ ಲೋಗೋವನ್ನು ಹೊಂದಿದೆ, ಇದು ಡಿಸೆಂಬರ್ ೧೨ ರಂದು ಎಕ್ಸ್ ನಲ್ಲಿ ಅದೇ ದೃಶ್ಯಗಳೊಂದಿಗೆ ವೀಡಿಯೋ ವರದಿಯನ್ನು ಹಂಚಿಕೊಂಡಿದೆ. ಪೋಷ್ಟ್ ಗೆ ಹೀಗೆ ಶೀರ್ಷಿಕೆ ನೀಡಲಾಗಿದ್ದು, "ಶಬರಿಮಲೆ ರಶ್: ತನ್ನ ತಂದೆಯನ್ನು ಹುಡುಕಲು ಸಹಾಯ ಕೋರಿ ಅಳುತ್ತಿರುವ ಮಗುವಿನ ಹೃದಯ ವಿದ್ರಾವಕ ವೀಡಿಯೋ; ವೀಕ್ಷಿಸಿ." ಆ ಹುಡುಗ 'ಅಪ್ಪಾ, ಅಪ್ಪಾ' (ಅಂದರೆ ತಂದೆ ಎಂದರ್ಥ) ಎಂದು ಅಳುವುದು ಮತ್ತು ಕೈ  ಮುಗಿಯುವುದು ವೀಡಿಯೋ ತೋರಿಸುತ್ತದೆ. ವಾಹನದ ಹೊರಗೆ ನಿಂತಿರುವ ಪೊಲೀಸ್ ಅಧಿಕಾರಿಯೂ ಅಳುತ್ತಿರುವ ಮಗುವನ್ನು ಸಾಂತ್ವನ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ವೈರಲ್ ಕ್ಲಿಪ್‌ನಿಂದ ಸ್ಕ್ರೀನ್‌ಶಾಟ್‌ಗಳನ್ನು ಹೊಂದಿರುವ ಏಷ್ಯಾನೆಟ್ ನ್ಯೂಸ್ ಪ್ರಕಟಿಸಿದ ಸುದ್ದಿ ವರದಿಯು, ಬೆಟ್ಟದ ಮೇಲಿರುವ ಶಬರಿಮಲೆ ದೇವಸ್ಥಾನಕ್ಕೆ ಚಾರಣ ಮಾಡುವ ಮೊದಲು ಯಾತ್ರಿಕರ ಮೂಲ ಶಿಬಿರವಾದ ನಿಲಕ್ಕಲ್‌ನಲ್ಲಿ ಜನಸಂದಣಿಯಲ್ಲಿ ಕಳೆದುಹೋದ ಮಗುವನ್ನು ವೀಡಿಯೋ ತೋರಿಸಿದೆ ಎಂದು ಹೇಳಿದೆ. ಡಿಸೆಂಬರ್ ೧೨ ರಂದು ಪ್ರಕಟವಾದ ಏಷ್ಯಾನೆಟ್ ವರದಿಯು ಎಕ್ಸ್‌ನಲ್ಲಿ ಔಟ್ಲೆಟ್ ಹಂಚಿಕೊಂಡ ಅದೇ ವೀಡಿಯೋವನ್ನು ಹೊಂದಿದೆ. ‘‘ಪೊಲೀಸರ ಮುಂದೆ ಕೈಮುಗಿದು ಕಿರುಚುತ್ತಿದ್ದ ಮಗು, ಕೊನೆಗೆ ತನ್ನ ತಂದೆಯನ್ನು ನೋಡಿ ಕೈ ಬೀಸಿತು’’ ಎಂದು ವರದಿ ತಿಳಿಸಿದೆ.


ಏಷ್ಯಾನೆಟ್ ನ್ಯೂಸ್ ಎಕ್ಸ್ ಪೋಷ್ಟ್‌ ನ ಸ್ಕ್ರೀನ್‌ಶಾಟ್. ವೈರಲ್ ಕ್ಲಿಪ್ ಮತ್ತು ಏಷ್ಯಾನೆಟ್ ವೀಡಿಯೋ ವರದಿಯು ವಾಹನದ ನೋಂದಣಿ ಸಂಖ್ಯೆ ಮತ್ತು ಲೋಗೋವನ್ನು ತೋರಿಸುತ್ತದೆ. (ಮೂಲ: ಸ್ಕ್ರೀನ್‌ಶಾಟ್/ಎಕ್ಸ್/ಏಷ್ಯಾನೆಟ್ ನ್ಯೂಸ್)

ಏಷ್ಯಾನೆಟ್ ವರದಿಯಲ್ಲಿ ಉಲ್ಲೇಖಿಸಲಾದ ವಿವರಗಳನ್ನು ಖಚಿತಪಡಿಸಲು ಲಾಜಿಕಲಿ ಫ್ಯಾಕ್ಟ್ಸ್ ಕೇರಳ ಪೊಲೀಸರನ್ನು ಸಂಪರ್ಕಿಸಿತು. ವೈರಲ್ ಹೇಳಿಕೆಯನ್ನು ನಿರಾಕರಿಸಿದ ಪಂಪಾ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಮಹೇಶ್ ಕುಮಾರ್ ಎಸ್, "ಈ ಘಟನೆ (ವೈರಲ್ ಕ್ಲಿಪ್‌ನಲ್ಲಿ ಸೆರೆಹಿಡಿಯಲಾಗಿದೆ) ನಿಲಕ್ಕಲ್ ಬೇಸ್ ಕ್ಯಾಂಪ್‌ನಲ್ಲಿ ಸಂಭವಿಸಿದೆ. ನಿಲಕ್ಕಲ್ ಶಬರಿಮಲೆಯ ಬೋರ್ಡಿಂಗ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಬಾಲಕನ ತಂದೆಗೆ ಬಸ್ ಹತ್ತಲು ಸಾಧ್ಯವಾಗಲಿಲ್ಲ, ಮತ್ತು ಮಗು ತನ್ನ ತಂದೆಯನ್ನು ಹುಡುಕುತ್ತಿರುವಾಗ ಅಳುತ್ತಿತ್ತು."

ಪ್ರಮೋದ್ ಕುಮಾರ್, ಕೇರಳ ಪೊಲೀಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO), ವೈರಲ್ ಕ್ಲಿಪ್‌ನೊಂದಿಗೆ ಕೋಮು ನಿರೂಪಣೆಯನ್ನು ಸಹ ತಳ್ಳಿಹಾಕಿದ್ದಾರೆ. ಲಾಜಿಕಲಿ ಫ್ಯಾಕ್ಟ್ಸ್‌ಗೆ ಕುಮಾರ್ ಹೇಳಿದರು, "ದೊಡ್ಡ ಜನಸಂದಣಿಯನ್ನು ನಿರ್ವಹಿಸಲು, ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಸಾಮಾನ್ಯವಾಗಿ ಬಳಸುವ ನಿಲಕ್ಕಲ್-ಪಂಂಬಾ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಬಸ್‌ಗಳ ಸಂಖ್ಯೆಯನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಭಾರೀ ರಶ್ ಇದ್ದ ಕಾರಣ ಚಿಕ್ಕ ಹುಡುಗ ತನ್ನ ತಂದೆಯಿಂದ ಬೇರ್ಪಟ್ಟ, ಆದರೆ ಕೆಲವೇ ನಿಮಿಷಗಳಲ್ಲಿ ಅವರು ಮತ್ತೆ ಒಂದಾದರು.”

ವೀಡಿಯೋ ಕೇರಳದ್ದು ಎಂದು ಖಚಿತಪಡಿಸಲು, ನಾವು ವಾಹನ ನೋಂದಣಿ ಕೋಡ್ 'ಕೆಎಲ್-೧೫' ಗಾಗಿ ವಿವರಗಳನ್ನು ಪರಿಶೀಲಿಸಿದ್ದೇವೆ, ಇದು ವೈರಲ್ ಕ್ಲಿಪ್ ಮತ್ತು ಏಷ್ಯಾನೆಟ್ ನ್ಯೂಸ್‌ನ ವೀಡಿಯೋ ವರದಿಯಲ್ಲಿ ಗೋಚರಿಸುತ್ತದೆ. ಸುದ್ದಿವಾಹಿನಿ ಆನ್‌ಮನೋರಮಾ ಪ್ರಕಾರ, ಕೇರಳದಲ್ಲಿ ಸರ್ಕಾರಿ ಬಸ್‌ಗಳಿಗೆ 'ಕೆಎಲ್-೧೫' ಕೋಡ್ ಅನ್ನು ಮೀಸಲಿಡಲಾಗಿದೆ. ವಾಹನವು ಅದರ ಮೇಲೆ ಲೋಗೋವನ್ನು ಸಹ ಹೊಂದಿತ್ತು, ಮತ್ತು ರಿವರ್ಸ್ ಇಮೇಜ್ ಸರ್ಚ್ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಲೋಗೋ ಎಂದು ನಮಗೆ ತೋರಿಸಿದೆ, ಇದು ತೀರ್ಥಯಾತ್ರೆಗಾಗಿ ನಿಲಕ್ಕಲ್‌ಗೆ ಭಕ್ತರನ್ನು ಸಾಗಿಸಲು ವಿಶೇಷ ಬಸ್‌ಗಳನ್ನು ನಡೆಸುತ್ತದೆ. ಈ ಮಾಹಿತಿಯನ್ನು ಶಬರಿಮಲೆ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಕಾಣಬಹುದು.


ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಲಾಂಛನದೊಂದಿಗೆ ಬಸ್ಸಿನಲ್ಲಿ ಕಂಡುಬರುವ ಲೋಗೋದ ಹೋಲಿಕೆ.(ಮೂಲ: ಸ್ಕ್ರೀನ್‌ಶಾಟ್/ಎಕ್ಸ್/keralartc.com)

ತೀರ್ಪು

ಕೇರಳದಲ್ಲಿ ಶಬರಿಮಲೆ ಯಾತ್ರೆಯ ವೇಳೆ ಕಳೆದುಹೋದ ಮಗು ತನ್ನ ತಂದೆಗಾಗಿ ಅಳುತ್ತಿರುವ ವೀಡಿಯೋವನ್ನು ಕೇರಳ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ ಮತ್ತು ರಾಜ್ಯ ಸರ್ಕಾರವು ಭಕ್ತರಿಗೆ ಕಿರುಕುಳ ನೀಡುತ್ತಿದೆ ಎಂದು ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.