ಲೋಕಸಭೆ ಚುನಾವಣೆಯ ನಂತರ ಕಂಟೆಂಟ್ ಕ್ರಿಯೇಟರ್‌ನ ವೀಡಿಯೋವನ್ನು 'ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ' ಎಂದು ಹಂಚಿಕೊಂಡಿದ್ದಾರೆ

ಮೂಲಕ: ಉಮ್ಮೆ ಕುಲ್ಸುಮ್
ಜೂನ್ 7 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಲೋಕಸಭೆ ಚುನಾವಣೆಯ ನಂತರ ಕಂಟೆಂಟ್ ಕ್ರಿಯೇಟರ್‌ನ ವೀಡಿಯೋವನ್ನು 'ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ' ಎಂದು ಹಂಚಿಕೊಂಡಿದ್ದಾರೆ

೨೦೨೪ ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳನ್ನು ನಿಂದಿಸುತ್ತಿರುವುದನ್ನು ಬಿಂಬಿಸುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಉತ್ತರ ಪ್ರದೇಶದ ಧೀರೇಂದ್ರ ರಾಘವ್. ಅವರು ತಮ್ಮನ್ನು ಕಲಾವಿದ ಎಂದು ಗುರುತಿಸಿಕೊಂಡಿದ್ದಾರೆ ಮತ್ತು ಬಿಜೆಪಿ ಪರ ವಿಷಯವನ್ನು ಪೋಷ್ಟ್ ಮಾಡುತ್ತಾರೆ.

ಕ್ಲೈಮ್ ಐಡಿ 3b853111

ಹೇಳಿಕೆ ಏನು?

೨೦೨೪ ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳನ್ನು ನಿಂದಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಇಸ್ಲಾಂ ಟೋಪಿಯನ್ನು ಧರಿಸಿರುವ ವ್ಯಕ್ತಿಯೊಬ್ಬರು ಹಿಂದೂ ಸಮುದಾಯವನ್ನು ಟೀಕಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಚುನಾವಣೆಗಳಲ್ಲಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ಡಿಎ) ೨೯೩ ಸ್ಥಾನಗಳನ್ನು ಗೆದ್ದುಕೊಂಡಿತು, ಬಿಜೆಪಿ ೨೪೦ ಸ್ಥಾನಗಳನ್ನು ಪಡೆದುಕೊಂಡಿತು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದರೂ ಬಿಜೆಪಿಗೆ  ಹಿಂದೂಗಳು ಮತ  ಹಾಕಿಲ್ಲ ಎಂದು ವೀಡಿಯೋದಲ್ಲಿ ಟೀಕಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ (ಇಲ್ಲಿದೆ ಆರ್ಕೈವ್)  ಪ್ರಕಾರ ಅಯೋಧ್ಯೆ ಇರುವ ಫೈಜಾಬಾದ್ ಕ್ಷೇತ್ರವನ್ನು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು ೫೪,೫೬೭ ಮತಗಳಿಂದ ಸೋಲಿಸಿದರು.

ವೀಡಿಯೋದಲ್ಲಿ ಕಾರಿನಲ್ಲಿ ಕುಳಿತಿರುವಂತೆ ತೋರುವ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಾ ಹಿಂದೂಗಳನ್ನು ಅಪಹಾಸ್ಯ ಮಾಡಿದ್ದಾರೆ. ವಿರೋಧ ಪಕ್ಷವು ಮುಸ್ಲಿಮರಿಗಾಗಿ ಮಹತ್ವದ ಸ್ಮಾರಕವನ್ನು ನಿರ್ಮಿಸಿದ್ದರೆ, ಮುಸ್ಲಿಂ ಸಮುದಾಯವು ತಮ್ಮ ನಾಯಕನನ್ನು ನಿರಂತರವಾಗಿ ಬೆಂಬಲಿಸುತ್ತಿತ್ತು ಎಂದು ವೀಡಿಯೋದಲ್ಲಿ ಹೇಳಲಾಗಿದೆ. ಅವರು ವೀಡಿಯೋದ ಉದ್ದಕ್ಕೂ ಅವಹೇಳನಕಾರಿ ಟೀಕೆಗಳನ್ನು ಮಾಡುವುದನ್ನು ಕೇಳಬಹುದು.

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ "ಮೋದಿಜಿಯವರ ಹಿನ್ನಡೆಗೆ ಕಾರಣವಾದ ನಾಮರ್ಧ ಹಿಂದುಗಳಿಗೆ ಕ್ಯಾಕರಿಸಿ ಉಗಿದ ಉಸ್ತಾದ್...ರಾಮ ಮಂದಿರ ಕಟ್ಟಿದ ಮೋದಿಜಿಯವರನ್ನು ಹಿಂದೂಗಳು ಕೈ ಬಿಟ್ಟರು.ಅದೇ ಜಾಗದಲ್ಲಿ ಮೋದಿಜಿ ಮಸೀದಿ ಕಟ್ಟಿ ಕೊಟ್ಟಿದ್ದರೆ, ಮುಸಲ್ಮಾನರು ಜೀವನ ಪೂರ್ತಿ ಮೋದಿಜಿಗೆ ವೋಟ್ ಹಾಕುತ್ತಿದ್ದರು..ಹಿಂದೂ ನಿನ್ನ ನಾಶಕ್ಕೆ ನೀನೇ ಮುನ್ನುಡಿ ಬರೆದುಕೊಂಡಿದ್ದೀಯಾ."

ವೀಡಿಯೋದಲ್ಲಿ ಈ ಕೆಳಗಿನ ಪಠ್ಯವನ್ನು ಹಿಂದಿಯಲ್ಲಿ ಬರೆಯಲಾಗಿದೆ ಮತ್ತು ಅದರ ಅನುವಾದ "ಮುಂದಿನ ಸರ್ಕಾರವು ನಮ್ಮ ದೇವಸ್ಥಾನದ ಬದಲಿಗೆ ಮಸೀದಿಯನ್ನು ನಿರ್ಮಿಸುತ್ತದೆ." ಈ ವೀಡಿಯೋವನ್ನು "ಮುಸ್ಲಿಮರಿಂದ ಹಿಂದೂಗಳಿಗೆ ಸಂದೇಶ" ಎಂದು ಹಂಚಿಕೊಳ್ಳಲಾಗುತ್ತಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆನ್‌ಲೈನ್‌ನಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ಆದರೆ ಈ ವೀಡಿಯೋದಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ. ಅವರು ಉತ್ತರ ಪ್ರದೇಶದ ಆಗ್ರಾದ ಕಲಾವಿದ, ಧೀರೇಂದ್ರ ರಾಘವ್.

ನಾವು ಕಂಡುಕೊಂಡದ್ದು ಏನು?

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ರಾಘವ್ ಅವರ ಇನ್‌ಸ್ಟಾಗ್ರಾಮ್ ಖಾತೆ- dhirendra_raghav_79 ಎಂಬ ಬಳಕೆದಾರ ಹೆಸರಿಗೆ ಕರೆದೊಯ್ಯಿತು. ಅವರು ಅದೇ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಜೂನ್ ೪, ೨೦೨೪ ರಂದು ಹಿಂದಿ ಶೀರ್ಷಿಕೆಯೊಂದಿಗೆ ಪೋಷ್ಟ್ ಮಾಡಿದ್ದಾರೆ: “ಮಂದಿರದ ಬದಲಿಗೆ ಮಸೀದಿಯನ್ನು ನಿರ್ಮಿಸಲಾಗುವುದು (ಅನುವಾದಿಸಲಾಗಿದೆ).” ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ವೀಡಿಯೋ ವೈರಲ್ ಆದ ನಂತರ ಅವರು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. 

ಅವರ ವೀಡಿಯೋಗಳನ್ನು ವಿಶ್ಲೇಷಿಸುವಾಗ, ಅವರ ಅನೇಕ ಕ್ಲಿಪ್ ಗಳಲ್ಲಿ ವಿವಿಧ ವೇಷಭೂಷಣಗಳನ್ನು ನಾವು ನೋಡಬಹುದು. ವೈರಲ್ ಕ್ಲಿಪ್‌ನಂತೆಯೇ  ಅವರು ಕಾರಿನಲ್ಲಿ ಕುಳಿತಿರುವುದನ್ನು ಕೆಲವು ವೀಡಿಯೋಗಳು ಚಿತ್ರಿಸಿತ್ತವೆ. ಅವರು ಸ್ವತಃ ಮುಸ್ಲಿಂ ಪಾತ್ರವನ್ನು ಬಿಂಬಿಸುವ ವಿಷಯವನ್ನು ಸಹ ರಚಿಸಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಗಮನಾರ್ಹವೆಂದರೆ ಅವರ ಬಹುತೇಕ ವೀಡಿಯೋಗಳು ಬಿಜೆಪಿ ಪರವಾಗಿವೆ.

ರಾಘವ್ ಅವರು ತಮ್ಮಇನ್‌ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಅವರ ಫೇಸ್‌ಬುಕ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) 'ಕಲಾವಿದ' ಎಂದು ವಿವರಿಸುತ್ತಾರೆ, ಅಲ್ಲಿ ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ನೆಲೆಸಿದ್ದಾರೆ ಎಂದು ಹೇಳುತ್ತಾರೆ.

ಈ ಹಿಂದೆ, ಏಪ್ರಿಲ್ ೨೦೨೪ ರಲ್ಲಿ ರಾಘವ್ ಅವರ ಮತ್ತೊಂದು ವೀಡಿಯೋವನ್ನು ನಾವು ಪರಿಶೀಲಿಸಿದ್ದೆವು, ಅದು ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರನ್ನು ಬೆಂಬಲಿಸುವಂತೆ ಭಾರತೀಯರನ್ನು ಕೇಳಿದ್ದಾರೆ ಎಂದು ತಪ್ಪಾಗಿ ಹೇಳಲಾಗಿತ್ತು. ಈ ಫ್ಯಾಕ್ಟ್-ಚೆಕ್ ಅನ್ನು ಇಲ್ಲಿ ಓದಬಹುದು.

ತೀರ್ಪು

೨೦೨೪ ರ ಲೋಕಸಭಾ ಚುನಾವಣೆಯ ನಂತರ ವ್ಯಕ್ತಿಯೊಬ್ಬ ಹಿಂದೂಗಳನ್ನು ಟೀಕಿಸುವ ವೀಡಿಯೋದಲ್ಲಿ ಮುಸ್ಲಿಂ ವ್ಯಕ್ತಿ ಕಾಣಿಸಿಕೊಂಡಿಲ್ಲ, ಅವರು ಆಗ್ರಾದ ಧೀರೇಂದ್ರ ರಾಘವ್ ಎಂಬ ಕಲಾವಿದ. ರಾಘವ್ ವಾಡಿಕೆಯಂತೆ ವಿಭಿನ್ನ ವೇಷಭೂಷಣಗಳಲ್ಲಿ ವೀಡಿಯೋವನ್ನು ಪೋಷ್ಟ್ ಮಾಡುತ್ತಾರೆ, ವಿವಿಧ ಪಾತ್ರಗಳಂತೆ ನಟಿಸುತ್ತಾರೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.