ಮಧ್ಯಪ್ರದೇಶ ಮುಖ್ಯಮಂತ್ರಿ ಮದ್ಯ ವಿತರಣೆಗೆ ಒತ್ತಾಯಿಸಿದ್ದಾರೆ ಎಂದು ತಪ್ಪಾಗಿ ಬಿಂಬಿಸಲು ಕ್ರಾಪ್ ಮಾಡಿದ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ನವೆಂಬರ್ 2 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಧ್ಯಪ್ರದೇಶ ಮುಖ್ಯಮಂತ್ರಿ ಮದ್ಯ ವಿತರಣೆಗೆ ಒತ್ತಾಯಿಸಿದ್ದಾರೆ ಎಂದು ತಪ್ಪಾಗಿ ಬಿಂಬಿಸಲು ಕ್ರಾಪ್ ಮಾಡಿದ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಮದ್ಯ ವಿತರಣೆಯನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನು ಸಂದರ್ಭಕ್ಕೆ ಮೀರಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ ದೀರ್ಘ ವೀಡಿಯೋದ ಭಾಗವಾಗಿದೆ ಮತ್ತು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ

ಕ್ಲೈಮ್ ಐಡಿ 531e80a6

ಭಾರತದ ಮಧ್ಯಪ್ರದೇಶ ರಾಜ್ಯವು ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆಯೇ, ಮತದಾರರ ಮೇಲೆ ಪ್ರಭಾವ ಬೀರಲು ರಾಜಕೀಯ ಪಕ್ಷಗಳು ಹೈ-ಪಿಚ್ ಆಫ್‌ಲೈನ್ ಮತ್ತು ಆನ್‌ಲೈನ್ ಪ್ರಚಾರಗಳನ್ನು ಪ್ರಾರಂಭಿಸಿವೆ. ನವೆಂಬರ್ ೧೭ ರಂದು ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಚುನಾವಣಾ ಜ್ವರ ಆವರಿಸಿರುವಂತೆಯೇ, ರಾಜಕೀಯ ವ್ಯಕ್ತಿಗಳ ಸುತ್ತ ತಪ್ಪು ಮಾಹಿತಿಯು ಆತಂಕಕಾರಿ ವೇಗದಲ್ಲಿ ಹೆಚ್ಚುತ್ತಿದೆ. 

ಹೇಳಿಕೆಗಳು ಏನು?

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಮದ್ಯದ ವಿತರಣೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಹೇಳಲು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ೧೭ ಸೆಕೆಂಡುಗಳ ಅವಧಿಯ ವೀಡಿಯೋವನ್ನು ಬಳಸಲಾಗುತ್ತಿದೆ. "ರೈತರ ಸಾಲ ಮನ್ನಾ ಕೇಳಬಾರದು, ಯುವಕರು ನಿರುದ್ಯೋಗ ಭತ್ಯೆ ಕೇಳಬಾರದು, ಬಡವರು ಸಂಬಲ್ ಯೋಜನೆ ಬಗ್ಗೆ ಮಾತನಾಡಬಾರದು, ಮುಖ್ಯಮಂತ್ರಿ ಕನ್ಯಾದಾನ ನಿಧಿ ಯಾರೂ ಕೇಳಬಾರದು ಮತ್ತು ಅದಕ್ಕಾಗಿಯೇ ರಾಜ್ಯದಲ್ಲಿ ಮದ್ಯವನ್ನು ಅವರು ಕುಡಿದು ಮತ್ತೆ ಎದ್ದೇಳದ ರೀತಿಯಲ್ಲಿ ಹಂಚುತ್ತಾರೆ (ಮೂಲತಃ ಹಿಂದಿಯಲ್ಲಿ)" ಎಂದು ಚೌಹಾಣ್ ಹೇಳಿರುವ ವೀಡಿಯೋ ವೈರಲ್ ಆಗಿದೆ.

"ಹಿಂದೂ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶ. ಅವರು ರಾಷ್ಟ್ರೀಯವಾದಿ ಪಕ್ಷಕ್ಕೆ ಸೇರಿದವರು ಮತ್ತು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು" ಎಂದು ಹಿಂದಿಯಲ್ಲಿ ಕೆಲವು ಪಠ್ಯವನ್ನು ವೀಡಿಯೋದಲ್ಲಿ ಸೇರಿಸಲಾಗಿದೆ. ಹಲವಾರು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ , "ಯಾರೂ ಕೆಲಸದ ಬಗ್ಗೆ ಮಾತನಾಡದಂತೆ ಎಲ್ಲರಿಗೂ ಮದ್ಯಪಾನ ಮಾಡಿ. ವಾವ್ ಕಂಸಾ ಮಾಮಾ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅಂತಹ ಒಂದು ಪೋಷ್ಟ್ ಪ್ರಕಟಿಸುವ ಸಮಯದಲ್ಲಿ ೧,೨೬,೦೦೦ ವೀಕ್ಷಣೆಗಳನ್ನು ಮತ್ತು ೩,೩೦೦ ಕ್ಕೂ ಹೆಚ್ಚು ಇಷ್ಟಗಳನ್ನು ಗಳಿಸಿದೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಎಕ್ಸ್ ನಲ್ಲಿ 'ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್' ಎಂದು ಗುರುತಿಸಿಕೊಂಡಿರುವ ಸುರೇಂದ್ರ ರಜಪೂತ್ ಅವರು ಅಕ್ಟೋಬರ್ ೨೪ ರಂದು ವೀಡಿಯೋ ವನ್ನು ಇದೇ ರೀತಿಯ ಹೇಳಿಕೆಗಳೊಂದಿಗೆ ಹಂಚಿಕೊಂಡು ಹೀಗೆ ಬರೆದಿದ್ದರೆ, "ರೈತರು, ಯುವಕರು ಮತ್ತು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡಬಾರದು. ಆದ್ದರಿಂದ, ರಾಜ್ಯದಲ್ಲಿ ಮದ್ಯವನ್ನು ಹರಡಿ ಜನರು ಅದನ್ನು ಕುಡಿಯುತ್ತಾರೆ ಮತ್ತು ಕೆಳಗೆ ಉಳಿಯುತ್ತಾರೆ! (ಹಿಂದಿಯಿಂದ ಅನುವಾದಿಸಲಾಗಿದೆ)" ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಕ್ಲಿಪ್ ಅನ್ನು ೨೦೨೦ ರ ದೀರ್ಘ ವೀಡಿಯೊದಿಂದ ಕ್ರಾಪ್ ಮಾಡಲಾಗಿದೆ ಮತ್ತು ಸರಿಯಾದ ಸಂದರ್ಭವಿಲ್ಲದೆ ಹಂಚಿಕೊಳ್ಳಲಾಗಿದೆ. ಚೌಹಾಣ್ ಅವರು ಮದ್ಯ ವಿತರಣೆಯನ್ನು ಉತ್ತೇಜಿಸುತ್ತಿರಲಿಲ್ಲ ಆದರೆ ಆ ಸಮಯದಲ್ಲಿ ಮಧ್ಯಪ್ರದೇಶವನ್ನು ಆಳುತ್ತಿದ್ದ ಕಾಂಗ್ರೆಸ್ ಅಡಿಯಲ್ಲಿ ರಾಜ್ಯ ಮದ್ಯಪಾನ ನೀತಿಯ ಬಗ್ಗೆ ದೂರು ನೀಡುತ್ತಿದ್ದರು.

ನಾವು ಏನು ಕಂಡುಕೊಂಡಿದ್ದೇವೆ?

ಜನವರಿ ೧೨, ೨೦೨೦ ರಂದು ಚೌಹಾಣ್ ಅವರ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾದ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಕ್ಲಿಪ್ ಮೂಲ ವೀಡಿಯೋದ ಕ್ರಾಪ್ ಮಾಡಿದ ವಿಭಾಗವಾಗಿದೆ, ಇದು ೧೫೦ ಸೆಕೆಂಡುಗಳಿಗಿಂತ ಹೆಚ್ಚು  ದೀರ್ಘವಾಗಿದೆ, ಇದನ್ನು ಚೌಹಾನ್ ಹಂಚಿಕೊಂಡಿದ್ದಾರೆ. ದೀರ್ಘವಾದ ವೀಡಿಯೋದಲ್ಲಿ, ಅವರು ಹೊಸ ಮದ್ಯದ ಅಂಗಡಿಗಳನ್ನು ತೆರೆಯುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಧ್ಯಪ್ರದೇಶದ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಟೀಕಿಸುತ್ತಿದ್ದರು. 

೨೦೨೦ ರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್)

ಮೂಲ ವೀಡಿಯೋದಲ್ಲಿ ಚೌಹಾಣ್, "ಜನರು ಸಂಕಷ್ಟದಲ್ಲಿದ್ದಾರೆ. ನಾನು ತೆಂಡುಖೇಡದಲ್ಲಿ ಭತ್ತಕ್ಕಾಗಿ ಹೋರಾಟದಿಂದ ಬಂದಿದ್ದೇನೆ. ಭತ್ತ ಮಾರಾಟವಾಗುತ್ತಿಲ್ಲ, ಸಾಲ ಮನ್ನಾ ಆಗುತ್ತಿಲ್ಲ, ನಿರುದ್ಯೋಗ ಭತ್ಯೆ ನೀಡುತ್ತಿಲ್ಲ, ಮರಳು ಕಳ್ಳತನವಾಗಿದೆ, ಸಾಗಣೆಯಾಗಿದೆ. ಮಾಫಿಯಾ ಹೆಚ್ಚುತ್ತಿದೆ, ಜನರ ಬೇಡಿಕೆಗಳು ಈಡೇರುತ್ತಿಲ್ಲ, ಬೆಳವಣಿಗೆಗೆ ಕಡಿವಾಣ ಬಿದ್ದಿದೆ, ರೈತರು, ಬಡವರು ಅಳಲು ತೋಡಿಕೊಳ್ಳುತ್ತಿದ್ದಾರೆ, ಸರ್ಕಾರ ಮದ್ಯದಂಗಡಿ ತೆರೆಯುವಲ್ಲಿ ನಿರತವಾಗಿದೆ, ಪರಿಸ್ಥಿತಿ ಅತ್ಯಂತ ದುರದೃಷ್ಟಕರವಾಗಿದ್ದು, ಈಗ ಹೋರಾಟ ಆರಂಭಿಸಿದ್ದೇವೆ, ಹೋರಾಟ ಮಾಡುತ್ತೇವೆ." 

ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುತ್ತಿರುವ ಬಗ್ಗೆ ದೂರಿದ ಅವರು, “ಈ ಮದ್ಯದಂಗಡಿಗಳು ಏಕೆ?, ಇದರ ಅಗತ್ಯವೇನು?, ಆದರೆ ಈ ಸರ್ಕಾರ ಮದ್ಯ ಮಾಫಿಯಾ ನಡೆಸುತ್ತಿದೆ, ಮದ್ಯದ ನೀತಿಗಳನ್ನು ಸೃಷ್ಟಿಸುತ್ತಿದೆ, ಅವರು ಏನು ಹೇಳುತ್ತಾರೋ ಅದನ್ನು ಮಾಡುತ್ತಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಲಿದ್ದು, ಭಾರಿ ವಹಿವಾಟು ಕೂಡ ನಡೆಯುತ್ತಿದೆ. ನಾನು ಎಷ್ಟೇ ಹೋರಾಟ ಮಾಡಿದರೂ ಮಧ್ಯಪ್ರದೇಶದ ಈ ವಿನಾಶ ಸಂಭವಿಸಲು ಬಿಡುವುದಿಲ್ಲ. ನಾನು ಎರಡು ಪತ್ರಗಳನ್ನು ಬರೆದು ಈ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ. ಹೆಚ್ಚಿನ ಅಂಗಡಿಗಳನ್ನು ತೆರೆದರೆ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಲಿದೆ ಎಂದರು. ಹಾಗಾಗಿ ಹೋಮ್ ಡೆಲಿವರಿ ಆರಂಭಿಸಿದರೆ ಅಕ್ರಮ ಮಾರಾಟ ಸಂಪೂರ್ಣ ನಿಲ್ಲುತ್ತದೆ. ಇದು ವಾದವೇ? ಅಬಕಾರಿ ಇಲಾಖೆ ಏನು ಮಾಡುತ್ತಿದೆ? ಅವು ಯಾವುದಕ್ಕಾಗಿ? ಅಕ್ರಮ ಮದ್ಯ ಮಾರಾಟವನ್ನು ಏಕೆ ನಿಲ್ಲಿಸುತ್ತಿಲ್ಲ? ಜನರ ಮನೆಗೆ ಮದ್ಯ ಕಳುಹಿಸಲು ಪ್ರಾರಂಭಿಸುತ್ತೀರಾ? ಮದ್ಯವು ಯುವ ಪೀಳಿಗೆಯನ್ನು ಟೊಳ್ಳು ಮಾಡುತ್ತದೆ ಮತ್ತು ರಾಜ್ಯವನ್ನು ಹಾಳು ಮಾಡುತ್ತದೆ.” ಈ ವಾಕ್ಯಗಳ ನಂತರವೇ ವೈರಲ್ ಕ್ಲಿಪ್‌ನಲ್ಲಿ ಸೆರೆಹಿಡಿಯಲಾದ ಬಿಟ್ ಅನ್ನು ಚೌಹಾನ್ ಹೇಳುತ್ತಾರೆ, ಅದನ್ನು ಸಂದರ್ಭವಿಲ್ಲದೆ ಹಂಚಿಕೊಳ್ಳಲಾಗಿದೆ.

೨೦೨೦ ರ ಮದ್ಯ ನೀತಿ

೨೦೨೦ ರ ಮಾರ್ಚ್‌ನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರ ವಹಿಸಿಕೊಳ್ಳುವ ಮೊದಲು ಕಾಂಗ್ರೆಸ್ ನಾಯಕ ಕಮಲ್ ನಾಥ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಮಲ್ ನಾಥ್ ಸರ್ಕಾರವು ಮದ್ಯದಂಗಡಿ ಮಾಲೀಕರಿಗೆ ಪುರಸಭೆಯ ಪ್ರದೇಶಗಳಲ್ಲಿ ಪ್ರತಿ ೫ ಕಿಲೋಮೀಟರ್‌ಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ೧೦ ಕಿಲೋಮೀಟರ್‌ಗೆ ಉಪ-ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ಅಧಿಸೂಚನೆಯನ್ನು ಹೊರಡಿಸಿತ್ತು. ಚೌಹಾಣ್ ನೇತೃತ್ವದ ಅಂದಿನ ಪ್ರತಿಪಕ್ಷಗಳು ಈ ನಿರ್ಧಾರವನ್ನು ಪ್ರತಿಭಟಿಸಿ ನಂತರ ಮಾತಿನ ಸಮರವನ್ನು ಪ್ರಾರಂಭಿಸಿದವು. ಚೌಹಾಣ್ ಅವರು ನಾಥ್ ಅವರಿಗೆ ಪತ್ರಗಳನ್ನು ಬರೆದು, ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು. ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಕಲಬೆರಕೆ ಮದ್ಯ ಮಾರಾಟ ತಡೆಯಲು ಹೊಸ ನೀತಿ ಜಾರಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡಿತ್ತು.

ಈ ವೈರಲ್ ವೀಡಿಯೋವನ್ನು ೨೦೨೦ ರಲ್ಲಿ ಅದೇ ಹೇಳಿಕೆಗಳೊಂದಿಗೆ ಪ್ರಸಾರ ಮಾಡಲಾಯಿತು. ಹಲವಾರು ಫ್ಯಾಕ್ಟ್ ಚೆಕಿಂಗ್ ಸಂಸ್ಥೆಗಳು ಹೇಳಿಕೆಯನ್ನು ತಳ್ಳಿಹಾಕಿವೆ ಮತ್ತು ಇದು ಬದಲಾದ ವೀಡಿಯೋ ಎಂದು ಸಾಬೀತುಪಡಿಸಿದೆ. ಜೂನ್ ೧೫, ೨೦೨೦ ರ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಮಧ್ಯಪ್ರದೇಶ ಪೊಲೀಸರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಇತರ ೧೧ ಜನರ ವಿರುದ್ಧ ಚೌಹಾಣ್ ಅವರ "ಸಂಪಾದಿತ" ವೀಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ.

ತೀರ್ಪು

ಪ್ರಸ್ತುತ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜನವರಿ ೨೦೨೦ ರಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಗಳ ವಿರುದ್ಧ ಮಾತನಾಡಿರುವ ಎಡಿಟ್ ಮಾಡಿದ ವೀಡಿಯೋವನ್ನು ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಚೌಹಾಣ್ ರಾಜ್ಯದಲ್ಲಿ ಮದ್ಯದ ವಿತರಣೆಯನ್ನು ಪ್ರತಿಪಾದಿಸಲಿಲ್ಲ, ಮತ್ತು ವಿಸ್ತೃತ ವೀಡಿಯೋ ವಾಸ್ತವವಾಗಿ ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ದೂರು ನೀಡುವುದನ್ನು ತೋರಿಸುತ್ತದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.