ಬೆಂಗಳೂರಿನ ಗುತ್ತಿಗೆದಾರರ ಮನೆಯಲ್ಲಿ ವಶ ಮಾಡಿಕೊಂಡ ರೂ.೪೨ ಕೋಟಿಯನ್ನು ಈ ಚಿತ್ರವು ತೋರಿಸುವುದಿಲ್ಲ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಅಕ್ಟೋಬರ್ 20 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬೆಂಗಳೂರಿನ ಗುತ್ತಿಗೆದಾರರ ಮನೆಯಲ್ಲಿ ವಶ ಮಾಡಿಕೊಂಡ ರೂ.೪೨ ಕೋಟಿಯನ್ನು ಈ ಚಿತ್ರವು ತೋರಿಸುವುದಿಲ್ಲ

ಬಿಬಿಎಂಪಿ ಗುತ್ತಿಗೆದಾರರ ಸಂಘದ ವಿಪಿಗೆ ಸಂಬಂಧಿಸಿದ ಮನೆಯಿಂದ ಐಟಿ ಅಧಿಕಾರಿಗಳು ೪೨ ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವ ಫೋಟೋವನ್ನು ತೋರಿಸುವುದಾಗಿ ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ನಡೆದ ದಾಳಿಯನ್ನು ತೋರಿಸುತ್ತದೆ ಎಂದು ೨೦೨೧ ರ ಉತ್ತರ ಪ್ರದೇಶದ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 6dd6bcef

ಅಕ್ಟೋಬರ್ ೧೩ ರಂದು, ಬೆಂಗಳೂರಿನ ಆದಾಯ ತೆರಿಗೆ (ಐಟಿ) ಇಲಾಖೆಯು ಕರ್ನಾಟಕದ ಹಲವಾರು ಪ್ರಮುಖ ಗುತ್ತಿಗೆದಾರರನ್ನು ಗುರಿಯಾಗಿಸಿಕೊಂಡು ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವ ಪ್ರಕಾರ ಐಟಿ ಅಧಿಕಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್. ಅಂಬಿಕಾಪತಿ ಅವರದ್ದೆಂದು ಹೇಳಲಾದ ಅಪಾರ್ಟ್ಮೆಂಟ್ ಕಟ್ಟಡವೊಂದರಿಂದ ಸುಮಾರು ರೂ. ೪೨ ಕೋಟಿಯಷ್ಟು ವಶಪಡಿಸಿಕೊಂಡಿದೆ.

ಇಲ್ಲಿನ ಹೇಳಿಕೆಯೇನು?

ಹಲವಾರು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು, ಐದು ಪುರುಷರು ಕೊಠಡಿಯಲ್ಲಿ ಹಾಳೆಯ ಮೇಲೆ ಕುಳಿತಿರುವ ಚಿತ್ರವನ್ನು ಹಂಚಿಕೊಂಡಿವೆ. ಅವರ ಸುತ್ತಲೂ ನಗದು ಮತ್ತು ಲಾಕರ್‌ನ ಪಕ್ಕದಲ್ಲಿ ಎರಡು ನೋಟು ಎಣಿಸುವ ಯಂತ್ರಗಳು ಕೂಡ ಕಾಣಿಸಿಕೊಂಡಿವೆ. ಅಂಬಿಕಾಪತಿ ಅವರ ಹೆಸರನ್ನು ಉಲ್ಲೇಖಿಸದೆ ಅವರ ಆಸ್ತಿಯ ಮೇಲೆ ಇತ್ತೀಚೆಗೆ ನಡೆದ ಐಟಿ ದಾಳಿಗೆ ಸಂಬಂಧಿಸಿದೆ ಎಂದು ಹೇಳಿಕೊಂಡು ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ ಬಳಕೆದಾರರು ಇಂತಹ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ, "ಹಿರಿಯ ಕಾಂಗ್ರೆಸ್ ನಾಯಕರ ಆಪ್ತ ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಮತ್ತು ಅವರ ಪತ್ನಿ ಮನೆಯಲ್ಲಿ ಐಟಿ ಅಧಿಕಾರಿಗಳು ೪೨ ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. - ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್ - ಈ ಹಿಂದೆ ಕರ್ನಾಟಕದಲ್ಲಿ ಹಿಂದಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಸರ್ಕಾರಿ ಯೋಜನೆಗಳನ್ನು ಅನುಮೋದಿಸಲು ೪೦% ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ಸುಳ್ಳು ಆರೋಪ ಮಾಡಿದರು." ಆರ್ಕೈವ್ ಮಾಡಿದ ಪೋಷ್ಟ್ ಅನ್ನು ಇಲ್ಲಿ ನೋಡಬಹುದು.

ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಇದೇ ರೀತಿಯ ಪೋಷ್ಟ್ ಗಳನ್ನು ಎಕ್ಸ್‌ನಲ್ಲಿ ಪ್ರಸಾರ ಮಾಡಲಾಗಿದ್ದು, ಬಿಜೆಪಿ ನಾಯಕ ಸಿಟಿ ರವಿ ಅವರ ಅಂತಹ ಒಂದು ಪೋಷ್ಟ್ ೭,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಆರ್ಕೈವ್ ಮಾಡಿದ ಪೋಷ್ಟ್ ಅನ್ನು ಇಲ್ಲಿ ನೋಡಬಹುದು.

ಬಿಜೆಪಿ ನಾಯಕ ಸಿ.ಟಿ.ರವಿ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಐಟಿ ಅಧಿಕಾರಿಗಳು ಸುಮಾರು ರೂ. ೪೨ ಕೋಟಿ  ಅಂಬಿಕಾಪತಿಗೆ ಸಂಬಂಧಿಸಿದ ನಿವಾಸದಿಂದ ವಶಪಡಿಸಿಕೊಂಡಿದ್ದರೂ, ಪೋಷ್ಟ್ ನಲ್ಲಿರುವ ಚಿತ್ರವು ಈ ಘಟನೆಗೆ ಸಂಬಂಧಿಸಿಲ್ಲ.

ಸತ್ಯಾಂಶಗಳೇನು?

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಕಾನ್ಪುರ ಮೂಲದ ಸುಗಂಧ ದ್ರವ್ಯ ವ್ಯಾಪಾರಿಯ ನಿವಾಸದಲ್ಲಿ ಐಟಿ ಇಲಾಖೆಯು ಡಿಸೆಂಬರ್ ೨೦೨೧ ರಲ್ಲಿ ದಾಳಿ ಮಾಡಿ ರೂ. ೨೮೪ ಕೋಟಿ ನಗದು ರೂಪದಲ್ಲಿ ವಶಪಡಿಸಿಕೊಂಡಿದೆ ಎಂದು ಹೇಳುವ ಹಲವಾರು ಸುದ್ದಿ ವರದಿಗಳು ಕಂಡುಬಂದಿವೆ. ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಮಾಧ್ಯಮಗಳ ವರದಿಗಳಲ್ಲಿ ಈ ಚಿತ್ರವು ವ್ಯಾಪಕವಾಗಿ ಕಾಣಿಸಿಕೊಂಡಿದೆ.

೨೦೨೧ ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಕಾಣಿಸಿಕೊಂಡಿರುವ ಚಿತ್ರದ ಸ್ಕ್ರೀನ್‌ಶಾಟ್, ಪಿಯೂಷ್ ಜೈನ್‌ಗೆ ಸೇರಿದ ಆಸ್ತಿಯಲ್ಲಿ ಆದಾಯ ತೆರಿಗೆ ಸರ್ಚ್  ಸಮಯದಲ್ಲಿ ಪತ್ತೆಯಾದ ಹಣವನ್ನು ತೋರಿಸುತ್ತದೆ (ಮೂಲ: ಇಂಡಿಯನ್ ಎಕ್ಸ್‌ಪ್ರೆಸ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಟೈಮ್ಸ್ ಆಫ್ ಇಂಡಿಯಾದ ೨೦೨೧ ರ ವರದಿಯು ಅಹಮದಾಬಾದ್‌ನಲ್ಲಿರುವ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ಕಾನ್ಪುರ ಮೂಲದ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ಕಾನ್ಪುರ ಮತ್ತು ಕನೌಜ್‌ನಲ್ಲಿರುವ ಅವರ ನಿವಾಸಗಳಿಂದ ರೂ ೨೮೪  ಕೋಟಿ ವಶಪಡಿಸಿಕೊಂಡ ನಂತರ ಆತನನ್ನು ಬಂಧಿಸಿದೆ ಎಂದು ಹೇಳಿಕೊಂಡಿದೆ.  ಡಿಜಿಜಿಐ ಮೂಲಗಳು ಶೋಧ ಕಾರ್ಯಾಚರಣೆಗಳು ರೂ ೧೭೭ ಕೋಟಿ ನಗದು ಹಣವನ್ನು ಕಾನ್ಪುರದ ಆನಂದನಗರದಲ್ಲಿರುವ ಜೈನ್ ಅವರ ನಿವಾಸದಲ್ಲಿ ಸಿಕ್ಕಿದೆ, ಮತ್ತು ಹೆಚ್ಚುವರಿ ರೂ. ೧೦೭ ಕೋಟಿ ಲೆಕ್ಕವಿಲ್ಲದ ನಗದು ಕನೌಜ್‌ನಲ್ಲಿರುವ ಅವರ ನಿವಾಸದಲ್ಲಿ ಸಿಕ್ಕಿದೆ ಎಂದು ಹೇಳಿವೆ.

ಇದಲ್ಲದೆ, ತೆರಿಗೆ ವಂಚನೆ ಮತ್ತು ಕಾಲ್ಪನಿಕ ಕಂಪನಿಗಳ ಹೆಸರಿನಲ್ಲಿ ಅನೇಕ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿದ್ದಕ್ಕಾಗಿ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ ಗುತ್ತಿಗೆದಾರನ ಮೇಲೆ ದಾಳಿ

ಅಕ್ಟೋಬರ್ ೨೦೨೩ ರಲ್ಲಿ ಬೆಂಗಳೂರಿನಲ್ಲಿ ಗುತ್ತಿಗೆದಾರರಿಗೆ ಲಿಂಕ್ ಮಾಡಲಾದ ಆಸ್ತಿಗಳಲ್ಲಿ ಐಟಿ ರೇಡ್ ಸಮಯದಲ್ಲಿ ನಗದು ಪತ್ತೆಯಾದ ಬಗ್ಗೆ ದಿ ಹಿಂದೂ ವರದಿ ಮಾಡಿದೆ. ಹಾಸಿಗೆಯ ಬಳಿ ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಮರುಪಡೆಯಲಾದ ಹಣವನ್ನು ತೋರಿಸುವ ಚಿತ್ರವನ್ನು ವರದಿಯು ಒಳಗೊಂಡಿತ್ತು ಮತ್ತು ಚಿತ್ರದ ಕ್ರೆಡಿಟ್ "ವಿಶೇಷ ವ್ಯವಸ್ಥೆ" ಎಂದು ನೀಡಲಾಗಿದೆ.

ಬೆಂಗಳೂರಿನಲ್ಲಿರುವ ಗುತ್ತಿಗೆದಾರ ಅಂಬಿಕಾಪತಿಗೆ ಸಂಬಂಧಿಸಿದ ಆಸ್ತಿಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದಾಗ ಪತ್ತೆಯಾದ ನಗದನ್ನು ವಿವರಿಸುವ ದಿ ಹಿಂದೂ ಪತ್ರಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ದಿ ಹಿಂದೂ/ಸ್ಕ್ರೀನ್‌ಶಾಟ್)

ಇದಲ್ಲದೆ, ಅಂಬಿಕಾಪತಿಯವರ ಹತ್ತಿರದ ಸಂಬಂಧಿ ಪ್ರದೀಪ್ ಅವರು ವಾಸಿಸುತ್ತಿದ್ದ ಬೆಂಗಳೂರಿನ ಸುಲ್ತಾನಪಾಳ್ಯದ ಅಪಾರ್ಟ್‌ಮೆಂಟ್‌ನಲ್ಲಿ ೨೦ ಕ್ಕೂ ಹೆಚ್ಚು ರಟ್ಟಿನ ಪೆಟ್ಟಿಗೆಗಳಲ್ಲಿ ಹಣವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಗಮನಾರ್ಹ ನಗದು ವಸೂಲಿಯಿಂದಾಗಿ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣದ ಪ್ರಾಥಮಿಕ ವಿಚಾರಣೆಯನ್ನು ಆರಂಭಿಸಿದೆ ಎಂದು ವರದಿ ತಿಳಿಸಿದೆ.

ತೀರ್ಪು 

ಲಾಕರ್‌ನ ಮುಂದೆ ನಗದು ಮತ್ತು ನೋಟು ಎಣಿಸುವ ಯಂತ್ರಗಳಿದ್ದು, ಅದೇ ಚಿತ್ರದಲ್ಲಿ ಐದು ಜನರನ್ನು ತೋರಿಸುವ ವೈರಲ್ ಚಿತ್ರವು ಬೆಂಗಳೂರಿನ ಗುತ್ತಿಗೆದಾರನಿಗೆ ಸಂಬಂಧಿಸಿದ ಮನೆಯಿಂದ ಇತ್ತೀಚೆಗೆ ನಡೆದ ಐಟಿ ದಾಳಿಯದ್ದಲ್ಲ. ಚಿತ್ರವು ಡಿಸೆಂಬರ್ ೨೦೨೧ ರಲ್ಲಿ ಉತ್ತರ ಪ್ರದೇಶದಲ್ಲಿ ಸುಗಂಧ ದ್ರವ್ಯದ ವ್ಯಾಪಾರಿಯ ನಿವಾಸದ ಮೇಲೆ ದಾಳಿ ನಡೆಸಿ ಗಣನೀಯ ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾದ ಪ್ರತ್ಯೇಕ ಘಟನೆಯದ್ದು.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.