ವಿರಾಟ್ ಕೊಹ್ಲಿ ಮತ್ತು ಪತ್ರಕರ್ತೆ ಜಿಯಾ ಶರ್ಮಾ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುತ್ತಿರುವ ವೀಡಿಯೋ ಫೇಕ್

ಮೂಲಕ: ಸೋಹಮ್ ಶಾ
ಏಪ್ರಿಲ್ 5 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವಿರಾಟ್ ಕೊಹ್ಲಿ ಮತ್ತು ಪತ್ರಕರ್ತೆ ಜಿಯಾ ಶರ್ಮಾ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುತ್ತಿರುವ ವೀಡಿಯೋ ಫೇಕ್

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಕೊಹ್ಲಿ ಮತ್ತು ಶರ್ಮಾ ಅವರ ಹಳೆಯ, ಸಂಬಂಧವಿಲ್ಲದ ವೀಡಿಯೋಗಳನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.

ಕ್ಲೈಮ್ ಐಡಿ 9c8685f9

ಹೇಳಿಕೆ ಏನು?
ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಹಿಂದಿ ಸುದ್ದಿ ವಾಹಿನಿ ಜೀ ನ್ಯೂಸ್‌ನ ಆಂಕರ್ ಜಿಯಾ ಶರ್ಮಾ ಅವರು 'ಏವಿಯೇಟರ್' ಎಂಬ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಒಂದು ಫೇಸ್‌ಬುಕ್ ಪೋಷ್ಟ್ ೩೪,೦೦೦ ಲೈಕ್‌ಗಳು ಮತ್ತು ೧,೯೦೦ ಕಾಮೆಂಟ್‌ಗಳನ್ನು ಗಳಿಸಿದೆ.  ಆ್ಯಪ್ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡಬಹುದು ಎಂದು ಶರ್ಮಾ ಹೇಳುವ ಮೂಲಕ ವೀಡಿಯೋ ಪ್ರಾರಂಭವಾಗುತ್ತದೆ, ನಂತರ ಅಪ್ಲಿಕೇಶನ್ ಅನ್ನು ಅನುಮೋದಿಸುವ ಜನರ ಸಂದರ್ಶನಗಳು. ಈ ಆ್ಯಪ್ ಬಳಸಿ ದಿನಕ್ಕೆ  ೫೦,೦೦೦ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು ಎಂದು ಕೊಹ್ಲಿ ಹೇಳುವುದರೊಂದಿಗೆ ವೀಡಿಯೋ ಕೊನೆಗೊಳ್ಳುತ್ತದೆ.

ವಿರಾಟ್ ಕೊಹ್ಲಿ ಮತ್ತು ಜಿಯಾ ಶರ್ಮಾ ಅವರು ‘ಏವಿಯೇಟರ್’ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುತ್ತಿರುವುದನ್ನು ತೋರಿಸುವ ಫೇಸ್‌ಬುಕ್ ವೀಡಿಯೋ. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸತ್ಯ ಏನು?
ವೀಡಿಯೋ  ಡೀಪ್‌ಫೇಕ್ ಎಂದು ನಾವು ಕಂಡುಕೊಂಡೆವು ಹಾಗು ಕೊಹ್ಲಿ ಮತ್ತು ಶರ್ಮಾ ಅವರ ಮೂಲ ಕ್ಲಿಪ್‌ಗಳಲ್ಲಿ ಅವರು ಯಾವುದೇ ಬೆಟ್ಟಿಂಗ್ ಅಪ್ಲಿಕೇಶನ್ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಪ್ರಚಾರ ಮಾಡುತ್ತಿಲ್ಲ ಎಂದು ತೋರಿಸುತ್ತದೆ.

ಜಿಯಾ ಶರ್ಮಾ ವೀಡಿಯೋ
ತುಣುಕಿನ ಮೇಲಿನ ಬಲ ಮೂಲೆಯಲ್ಲಿ ಜೀ ನ್ಯೂಸ್ ನ ವಾಟರ್‌ಮಾರ್ಕ್ ಇರುವುದನ್ನು ನಾವು ಗಮನಿಸಿದ್ದೇವೆ, ಪತ್ರಕರ್ತೆ ಜಿಯಾ ಶರ್ಮಾ ಅವರು ಸುದ್ದಿ ಕಾರ್ಯಕ್ರಮವನ್ನು ಆಂಕರ್ ಮಾಡುತ್ತಿರುವ ವೀಡಿಯೋ ದಿಂದ ವೈರಲ್ ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಬಳಸಿಕೊಂಡು, ನಾವು ಜೀ ನ್ಯೂಸ್ ನ ಮೂಲ ವರದಿಯನ್ನು ಕಂಡುಹಿಡಿದೆವು ಮತ್ತು ಅದರ ಶೀರ್ಷಿಕೆ "ಸಂದೇಶ್‌ಖಾಲಿ ಕೇಸ್ ನ್ಯೂಸ್ | ಪಶ್ಚಿಮ ಬಂಗಾಳದ ಅಧ್ಯಕ್ಷರ ಆಳ್ವಿಕೆ ಲೈವ್ ಅಪ್‌ಡೇಟ್‌ಗಳು: ಬಿಜೆಪಿ ನೇ ಮಮತಾ ಕೋ ಫಂಸಾಯಾ! | ಬ್ರೇಕಿಂಗ್" ಎಂದು ಬರೆಯಲಾಗಿದೆ ಹಾಗು ಇದು ಜೀ ನ್ಯೂಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ  ನೋಡಬಹುದು . ಈ ವೀಡಿಯೋವನ್ನು ಫೆಬ್ರವರಿ ೨೨ ರಂದು ಪ್ಲಾಟ್‌ಫಾರ್ಮ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ವೈರಲ್  ವೀಡಿಯೋದಲ್ಲಿ ೧:೦೫:೧೦ ಟೈಮ್‌ಸ್ಟ್ಯಾಂಪ್‌ನಲ್ಲಿ ಬಳಸಲಾದ ನಿಖರವಾದ ದೃಶ್ಯವನ್ನು ನಾವು ಗುರುತಿಸಿದ್ದೇವೆ. ವೈರಲ್ ಕ್ಲಿಪ್‌ನಲ್ಲಿರುವಂತೆ ಶರ್ಮಾ ಮೇಜಿನ ಮೇಲೆ ಇರಿಸಲಾದ ವಸ್ತುವನ್ನು ಎತ್ತಿಕೊಳ್ಳುವುದನ್ನು ಇದು ತೋರಿಸುತ್ತದೆ. ಮೂಲ ವೀಡಿಯೋದಲ್ಲಿ, ಅವರು ಪಶ್ಚಿಮ ಬಂಗಾಳದ ಸಂದೇಶಖಾಲಿ ಗ್ರಾಮದಲ್ಲಿ ನಡೆದ ಇತ್ತೀಚಿನ ಘಟನೆಗಳ ಬಗ್ಗೆ ಮಾತನಾಡುತ್ತಾರೆ ಮತ್ತು 'ಏವಿಯೇಟರ್' ಅಪ್ಲಿಕೇಶನ್ ಬಗ್ಗೆ ಏನನ್ನೂ ಹೇಳುವುದಿಲ್ಲ. (ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಾಜಹಾನ್ ಶೇಖ್ ಮಾಡಿದ ದೌರ್ಜನ್ಯದ ವಿರುದ್ಧ ಇತ್ತೀಚೆಗೆ ಸಂದೇಶಖಾಲಿಯಲ್ಲಿ ಮಹಿಳೆಯರು ವಾರಗಟ್ಟಲೆ ಪ್ರತಿಭಟನೆ ನಡೆಸಿದರು.

ವಿರಾಟ್ ಕೊಹ್ಲಿ ವೀಡಿಯೋ
ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿಕೊಂಡು, ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ವೀಡಿಯೋದಲ್ಲಿ ಬಳಸಲಾದ ಕೊಹ್ಲಿಯ ಮೂಲ ಕ್ಲಿಪ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಮೇ ೬, ೨೦೨೨ ರಂದು ಪೋಷ್ಟ್ ಮಾಡಲಾದ ಈ ವೀಡಿಯೋ ಲಗೇಜ್ ಬ್ರ್ಯಾಂಡ್ ಅಮೇರಿಕನ್ ಟೂರಿಸ್ಟರ್‌ನ ಜಾಹೀರಾತಾಗಿದೆ. ಮೂಲ ವೀಡಿಯೋದಲ್ಲಿ ಕೊಹ್ಲಿ ಯಾವುದೇ ಬೆಟ್ಟಿಂಗ್ ಆಪ್ ಬಗ್ಗೆ ಪ್ರಸ್ತಾಪಿಸುವುದಿಲ್ಲ ಅಥವಾ ಪ್ರಚಾರ ಮಾಡಿಲ್ಲ.

ಇಂಡಿಯಾ ಟಿವಿ ವಾಟರ್‌ಮಾರ್ಕ್
ವೈರಲ್ ವೀಡಿಯೋ ಎಡ ಮೂಲೆಯ ಕಡೆಗೆ ಇಂಡಿಯಾ ಟಿವಿಯ ವಾಟರ್‌ಮಾರ್ಕ್ ಅನ್ನು ಸಹ ಹೊಂದಿದೆ, ಕ್ಲಿಪ್ ಟಿವಿಯಲ್ಲಿ ಹಂಚಿಕೊಳ್ಳಲಾದ ಅಧಿಕೃತ ಕ್ಲಿಪ್ ಎಂದು ವೀಕ್ಷಕರಿಗೆ ಮನವರಿಕೆ ಮಾಡಲು ಇದನ್ನು ಹೆಚ್ಚಾಗಿ ಸೇರಿಸಲಾಗಿದೆ. ಆದರೆ ಶರ್ಮಾ ಅಥವಾ ಕೊಹ್ಲಿ ಅವರ ಕ್ಲಿಪ್‌ಗಳು ಇಂಡಿಯಾ ಟಿವಿಯಿಂದ ಬಂದಿಲ್ಲ, ಇದು ಸುದ್ದಿ ಚಾನೆಲ್‌ನ ವಾಟರ್‌ಮಾರ್ಕ್ ಅನ್ನು ನಂತರ ಸೇರಿಸಲಾಗಿದೆ ಎಂದು ಸೂಚಿಸುತ್ತದೆ. ಶರ್ಮಾ ಅವರ ಕ್ಲಿಪ್ ಜೀ ನ್ಯೂಸ್ ವೀಡಿಯೋದಿಂದ ಬಂದಿದೆ ಎಂಬುದು ಈಗ ಸ್ಪಷ್ಟವಾಗಿದೆ ಮತ್ತು ವೈರಲ್ ವೀಡಿಯೋದ ಮೇಲಿನ ಬಲ ಮೂಲೆಯಲ್ಲಿ ನಾವು ಚಾನಲ್‌ನ ಲೋಗೋದ ಒಂದು ಭಾಗವನ್ನು ನೋಡಬಹುದು.

ವೈರಲ್ ಜಾಹೀರಾತಿನಲ್ಲಿ ಜೀ ನ್ಯೂಸ್ ಲೋಗೋ ಗೋಚರಿಸುತ್ತದೆ.
(ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅಸ್ವಾಭಾವಿಕ, ಯಾಂತ್ರಿಕ ಧ್ವನಿ ಮತ್ತು ತುಟಿ ಚಲನೆಗಳು
ವೀಡಿಯೋದಲ್ಲಿನ ಶರ್ಮಾ ಅವರ ಧ್ವನಿಯು ವರದಿಗಾರನ ನೈಜ ಧ್ವನಿಯಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ, ಆದರೆ ಅವು ಒಂದೇ ಆಗಿಲ್ಲ. ಅವರ ತುಟಿಗಳ ಚಲನೆಯು ಅವರು ಜಾಹೀರಾತಿನಲ್ಲಿ ಹೇಳುತ್ತಿರುವುದಕ್ಕೆ ಹೊಂದಿಕೆಯಾಗುವುದಿಲ್ಲ. ಕೊಹ್ಲಿಯ ಧ್ವನಿಯು ಅವರ ಸಹಜ ಧ್ವನಿಯಂತೆಯೇ ಇದೆ, ಆದರೆ ಇಲ್ಲಿಯೂ ಸಹ, ಅವರು ಹೇಳುತ್ತಿರುವಂತೆ ಲಿಪ್ ಮೂಮೆಂಟ್‌ಗಳು ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ.

ಎರಡೂ ಸಂದರ್ಭಗಳಲ್ಲಿ ಲಿಪ್ ಸಿಂಕ್ ಅಸ್ವಾಭಾವಿಕವಾಗಿ ಕಂಡುಬರುತ್ತದೆ, ಇದು ಎಐ ಕುಶಲತೆಯ ಸೂಚಕವಾಗಿದೆ. ವೀಡಿಯೋದಲ್ಲಿ ಸಂದರ್ಶಿಸಲಾದ ಯಾದೃಚ್ಛಿಕ ಜನರ ಧ್ವನಿಗಳು ಯಾಂತ್ರಿಕವಾಗಿ ಮತ್ತು ಅಸ್ವಾಭಾವಿಕವಾಗಿ ಕಂಡುಬರುತ್ತವೆ.

ತಜ್ಞರ ವಿಶ್ಲೇಷಣೆ ಏನು ಹೇಳುತ್ತದೆ?
ಐಐಟಿ ಜೋಧ್‌ಪುರದ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾದ ಮಯಾಂಕ್ ವತ್ಸಾ ನೇತೃತ್ವದ ತಜ್ಞರ ತಂಡವು ಅಭಿವೃದ್ಧಿಪಡಿಸಿದ 'ಇತಿಸಾರ್' ಎಂಬ ಡೀಪ್‌ಫೇಕ್ ಪತ್ತೆ ಸಾಧನವನ್ನು ಲಾಜಿಕಲಿ ಫ್ಯಾಕ್ಟ್ಸ್ ಬಳಸಿದೆ. ೦.೯೭೨ (ಗರಿಷ್ಠ ೧ ರೊಂದಿಗೆ) ವಿಶ್ವಾಸಾರ್ಹ ಮಟ್ಟದೊಂದಿಗೆ ವೀಡಿಯೋ ನಕಲಿಯಾಗಿದೆ ಎಂದು ಉಪಕರಣವು ತೀರ್ಮಾನಿಸಿದೆ, ಇದು ನಿಜವಾದ ವೀಡಿಯೋ ಅಲ್ಲ ಎಂದು ಮತ್ತಷ್ಟು ದೃಢೀಕರಣವನ್ನು ಒದಗಿಸುತ್ತದೆ.

'ಏವಿಯೇಟರ್ ಅಪ್ಲಿಕೇಶನ್' ಗಾಗಿ ಗೂಗಲ್ ಹುಡುಕಾಟವು ನಮಗೆ ಆಂಡ್ರಾಯ್ಡ್  ಅಥವಾ ಐಫೋನ್ ಎಪಿಕೆ ಅನ್ನು ಡೌನ್‌ಲೋಡ್ ಮಾಡಲು ಅನುಮತಿಸುವ ವೆಬ್‌ಸೈಟ್‌ಗೆ ಕಾರಣವಾಗುತ್ತದೆ. ಅಜ್ಞಾತ ಮೂಲಗಳಿಂದ ಅಂತಹ ಎಪಿಕೆ ಗಳನ್ನು ಡೌನ್‌ಲೋಡ್ ಮಾಡುವುದು ಹಾನಿಕಾರಕವಾಗಬಹುದು ಏಕೆಂದರೆ ಆ ವೈರಸ್‌ಗಳು ನಮ್ಮ ಫೋನ್ ಅನ್ನು ಹಾಳು ಮಾಡಬಹುದು. 

ತೀರ್ಪು
ವಿರಾಟ್ ಕೊಹ್ಲಿ ಮತ್ತು ಜಿಯಾ ಶರ್ಮಾ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವನ್ನು ನೀಡುವುದಾಗಿ ಹೇಳುವ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ದಾರೆ ಎಂದು ತೋರಿಸಲು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಲಾದ ಈ ವೀಡಿಯೋವನ್ನು ನಾವು ಫೇಕ್ ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.