ನಟ ಅಮೀರ್ ಖಾನ್ ಬಿಜೆಪಿಯನ್ನು ಟೀಕಿಸಿ, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿರುವ ವೀಡಿಯೋದಲ್ಲಿ ಡೀಪ್‌ಫೇಕ್ ಆಡಿಯೋ ಬಳಸಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಏಪ್ರಿಲ್ 17 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಟ ಅಮೀರ್ ಖಾನ್ ಬಿಜೆಪಿಯನ್ನು ಟೀಕಿಸಿ, ಕಾಂಗ್ರೆಸ್ ಪರವಾಗಿ ಪ್ರಚಾರ  ಮಾಡುತ್ತಿರುವ ವೀಡಿಯೋದಲ್ಲಿ ಡೀಪ್‌ಫೇಕ್ ಆಡಿಯೋ ಬಳಸಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಖಾನ್ ಬಿಜೆಪಿಯ ವಿರುದ್ಧವಾಗಲಿ ಅಥವಾ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಿಲ್ಲ. ವೈರಲ್ ಕ್ಲಿಪ್ ನಟನ ಕಾರ್ಯಕ್ರಮವಾದ ಸತ್ಯಮೇವ ಜಯತೆಯಿಂದ ತೆಗೆದುಕೊಂಡು ಎಡಿಟ್ ಮಾಡಲಾಗಿದೆ.

ಕ್ಲೈಮ್ ಐಡಿ b19ee516

ಹೇಳಿಕೆ ಏನು?

ಭಾರತದಲ್ಲಿ ೨೦೨೪ ರ ಲೋಕಸಭೆ ಚುನಾವಣೆಗೆ ಕೇವಲ ಒಂದು ವಾರ ಬಾಕಿ ಇರುವಾಗ, ಬಾಲಿವುಡ್ ನಟ ಅಮೀರ್ ಖಾನ್ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಟೀಕಿಸುವ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಬೆಂಬಲಿಸುವ ವೀಡಿಯೋ ವೈರಲ್ ಆಗಿದೆ.

೩೧ ಸೆಕೆಂಡ್‌ಗಳ ವೀಡಿಯೋದಲ್ಲಿ ಖಾನ್ ಹೀಗೆ ಹೇಳುತ್ತಾರೆ, “ಸ್ನೇಹಿತರೇ, ಭಾರತವು ಬಡ ದೇಶ ಎಂದು ನೀವು ನಂಬಿದ್ದರೆ, ನೀವು ಸಂಪೂರ್ಣವಾಗಿ ತಪ್ಪಾಗಿ ಭಾವಿಸಿದ್ದೀರಿ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಲಕ್ಷಪತಿ (ಮಿಲಿಯನೇರ್). ಪ್ರತಿಯೊಬ್ಬರ ಬಳಿ ಕನಿಷ್ಠ ೧೫ ಲಕ್ಷ ರೂಪಾಯಿ ಇರಬೇಕು... ಅದೇನು? ನಿಮ್ಮ ಬಳಿ ಹಣವಿಲ್ಲವೇ? ಹಾಗಾದರೆ, ನಿಮ್ಮ ೧೫ ಲಕ್ಷ ರೂಪಾಯಿ ಎಲ್ಲಿ ಹೋಯಿತು? ಜುಮ್ಲಾ (ಸುಳ್ಳು) ಭರವಸೆಗಳ ಬಗ್ಗೆ ಎಚ್ಚರದಿಂದಿರಿ. "ನ್ಯಾಯಕ್ಕಾಗಿ ಮತ ಚಲಾಯಿಸಿ, ಕಾಂಗ್ರೆಸ್‌ಗೆ ಮತ ಚಲಾಯಿಸಿ" ಎಂಬ ಸಂದೇಶದೊಂದಿಗೆ ವೀಡಿಯೋ ಮುಕ್ತಾಯಗೊಳ್ಳುತ್ತದೆ. 

ರಾಜಸ್ಥಾನದ ಕಾಂಗ್ರೆಸ್ ಶಾಸಕರಾದ ಹರೀಶ್ ಮೀನಾ ಅವರ ಒಂದು ಪೋಷ್ಟ್, ಪ್ರತಿ ಭಾರತೀಯ ನಾಗರಿಕರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂಪಾಯಿಗಳನ್ನು ಠೇವಣಿ ಮಾಡದಿರುವ 'ಅತೃಪ್ತ ಭರವಸೆ'ಗಾಗಿ ಖಾನ್ ಬಿಜೆಪಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

೨೦೧೪ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಆಗಿನ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ಚುನಾವಣಾ ರ‍್ಯಾಲಿ ಭಾಷಣದಲ್ಲಿ ಈ 'ಭರವಸೆಯನ್ನು' ಗುರುತಿಸಬಹುದು. ಸಾಗರೋತ್ತರ ಖಾತೆಗಳಲ್ಲಿ ಸಂಗ್ರಹವಾಗಿರುವ ಕಪ್ಪುಹಣವನ್ನು ಮರಳಿ ಪಡೆಯುವ ಬದ್ಧತೆಯ ಭಾಗವಾಗಿ ಬಿಜೆಪಿ ನೀಡಿದ ಚುನಾವಣಾ ಭರವಸೆ ಎಂದು ಇದನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ತಪ್ಪಾಗಿದೆ. ಬಿಜೆಪಿಯು ಅದರ 'ಭರವಸೆಯನ್ನು ಈಡೇರಿಸದ' ಬಗ್ಗೆ  ಖಾನ್ ಅವರು ಅಪಹಾಸ್ಯ ಮಾಡುತ್ತಿರುವ ಈ ವೀಡಿಯೋದಲ್ಲಿ ಡೀಪ್‌ಫೇಕ್ ಆಡಿಯೋ ಬಳಸಲಾಗಿದೆ. ನಟ ಹೋಸ್ಟ್ ಮಾಡಿದ ಹಳೆಯ ಟಿವಿ ಕಾರ್ಯಕ್ರಮದಿಂದ ತುಣುಕನ್ನು ತೆಗೆದುಕೊಳ್ಳಲಾಗಿದೆ.

ಸತ್ಯಾಂಶಗಳು

ವೀಡಿಯೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಆಡಿಯೋದ ಕೆಲವು ಭಾಗಗಳು ಖಾನ್ ಅವರ ತುಟಿ ಚಲನೆಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ. ವೀಡಿಯೋದ ಕೊನೆಯಲ್ಲಿ ಹಿನ್ನೆಲೆ ಸಂಗೀತದ ಮೂಲಕ "ಸತ್ಯಮೇವ ಜಯತೆ" ಎಂಬ ವಾಕ್ಯವನ್ನು ಹಲವಾರು ಬಾರಿ ಪುನರಾವರ್ತಿಸುವುದನ್ನು ನಾವು ಕೇಳಬಹುದು. ಇದು ನಮ್ಮನ್ನು ಟಿವಿ ಶೋ  ಸತ್ಯಮೇವ ಜಯತೆಗೆ ಕರೆದೊಯ್ಯಿತು, ಇದನ್ನು ಖಾನ್ ಅವರು ಹೋಸ್ಟ್ ಮಾಡುತ್ತಿದ್ದರು, ಹಾಗು ಮೇ ೬, ೨೦೧೨ ರಂದು ಇದರ ಮೊದಲ ಸೀಸನ್ ಪ್ರದರ್ಶಿಸಲಾಗಿತ್ತು.

ವೈರಲ್ ಕ್ಲಿಪ್ ಆಗಸ್ಟ್  ೩೦, ೨೦೧೬ ರಂದು ಅಧಿಕೃತ ಸತ್ಯಮೇವ ಜಯತೆ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಲಾದ ಶೋ ನ ನಾಲ್ಕನೇ ಸಂಚಿಕೆಯ ಪ್ರೋಮೋ ಎಂದು ನಾವು ಕಂಡುಕೊಂಡೆವು. ಈ ವೀಡಿಯೋದಲ್ಲಿ ಖಾನ್  ಅವರು ಹೀಗೆ ಹೇಳಿದ್ದಾರೆ, “ಸ್ನೇಹಿತರೇ, ನೀವು ಭಾರತವು ಬಡ ದೇಶ ಎಂದು ಭಾವಿಸಿದ್ದರೆ, ನೀವು ಸಂಪೂರ್ಣವಾಗಿ ತಪ್ಪು. ಏಕೆಂದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕೋಟ್ಯಾಧಿಪತಿ. ಪ್ರತಿಯೊಬ್ಬರ ಬಳಿ ಕನಿಷ್ಠ ೧ ಕೋಟಿ ಇರಲೇಬೇಕು... ಏನ್ ಹೇಳ್ತಿದ್ದಿರಿ? ನಿಮ್ಮ ಬಳಿ ಹಣವಿಲ್ಲವೇ? ಹಾಗಾದರೆ, ನಿಮ್ಮ ೧ ಕೋಟಿ ರೂಪಾಯಿ ಎಲ್ಲಿ ಹೋಯಿತು? ಈ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ತಿಳಿಯಿರಿ."

ಹೇಳಲಾದ ಸಂಚಿಕೆಯಲ್ಲಿ, ಖಾನ್ ಪ್ರತಿಯೊಬ್ಬ ಭಾರತೀಯನು ಕೋಟ್ಯಾಧಿಪತಿ ಎಂದು ಹೇಳಿಕೊಳ್ಳುತ್ತಾರೆ ಮತ್ತು ಭಾರತದ ಸಂಪತ್ತಿನ ಬಗ್ಗೆ ಚರ್ಚಿಸುತ್ತಾರೆ. ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಭಾರತದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ ಎಂದು ಈ ಸಂಚಿಕೆಯು ಆರೋಪಿಸುತ್ತದೆ ಮತ್ತು ದೇಶದ ನೈಸರ್ಗಿಕ ಸಂಪನ್ಮೂಲಗಳು, ಭೂಮಿ ಮತ್ತು ಮೂಲಸೌಕರ್ಯಗಳ ಮೌಲ್ಯವನ್ನು ಸಮವಾಗಿ ಹಂಚಿದರೆ ಪ್ರತಿಯೊಬ್ಬ ಭಾರತೀಯನು ಕೋಟಿಗಳ ಮೌಲ್ಯವನ್ನು ಹೊಂದಬಹುದು ಎಂದು ಸೂಚಿಸುತ್ತದೆ.

ವೈರಲ್ ವೀಡಿಯೋವನ್ನು ಹೇಗೆ ರಚಿಸಲಾಗಿದೆ?

ವೀಡಿಯೋಗಳನ್ನು ಹೋಲಿಸಿದಾಗ, ವೈರಲ್ ವೀಡಿಯೋದಲ್ಲಿ ಕೆಲವು ನುಡಿಗಟ್ಟುಗಳನ್ನು ಬದಲಾಯಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. “೧ ಕೋಟಿ” ಪದವನ್ನು “೧೫ ಲಕ್ಷ” ಎಂದು ಬದಲಿಸಲಾಗಿದೆ ಮತ್ತು “ಈ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಕಂಡುಹಿಡಿಯಿರಿ” ಎಂಬ ವಾಕ್ಯವನ್ನು “ಜುಮ್ಲಾ ಭರವಸೆಗಳ ಬಗ್ಗೆ ಎಚ್ಚರದಿಂದಿರಿ” ಎಂದು ಬದಲಾಯಿಸಲಾಗಿದೆ. ಎಡಿಟ್ ಮಾಡಿದ ಆಡಿಯೋ ಖಾನ್ ಅವರ ಧ್ವನಿಯನ್ನು ಹೋಲುತ್ತದೆ, ಇದು ಡೀಪ್‌ಫೇಕ್ ತಂತ್ರಜ್ಞಾನದ ಬಳಕೆಯನ್ನು ಸೂಚಿಸುತ್ತದೆ.

ಕಿಂಗ್ಸ್ ಎವರಿ ಡೇ ಎಂಬ ಶೋ ನ ನಾಲ್ಕನೇ ಸಂಚಿಕೆಯ ಪ್ರೋಮೋವನ್ನು ಸತ್ಯಮೇವ ಜಯತೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಂಚಿಕೆಯನ್ನು ಮಾರ್ಚ್ ೨೩, ೨೦೧೪ ರಂದು ಅವರ ಯೂಟ್ಯೂಬ್ ಚಾನಲ್‌ಗೆ ಅಪ್‌ಲೋಡ್ ಮಾಡಲಾಗಿದೆ. ಈ ಸಂಚಿಕೆಯು ಮಹತ್ವದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮತ್ತು ಚರ್ಚೆಗಳನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿತ್ತು. ವೀಡಿಯೋ ವಿವರಣೆಯ ಪ್ರಕಾರ, ಈ ಸಂಚಿಕೆಯು ಮತದಾನದ ಹಕ್ಕುಗಳು ಮತ್ತು ಸರ್ಕಾರದ ಭಾಗವಹಿಸುವಿಕೆಯ ಮೇಲೆ ಕೇಂದ್ರೀಕರಿಸಿತ್ತು. 

ವೀಡಿಯೋ 'ಸಂಪೂರ್ಣವಾಗಿ ಸುಳ್ಳು'ಎಂದ: ಖಾನ್

ಖಾನ್ ಅವರು ತಮ್ಮ ಅಧಿಕೃತ ವಕ್ತಾರರ ಮೂಲಕ ಏಪ್ರಿಲ್ ೧೬, ಮಂಗಳವಾರ, ವೈರಲ್ ವೀಡಿಯೋ ಕುರಿತು ಸ್ಪಷ್ಟೀಕರಣವನ್ನು ನೀಡಿದರು. ವೈರಲ್ ವೀಡಿಯೋವನ್ನು "ನಕಲಿ ಮತ್ತು ಸಂಪೂರ್ಣವಾಗಿ ಸುಳ್ಳು" ಎಂದು ನಟ ಹೇಳಿದ್ದಾರೆ.  "ಶ್ರೀ ಅಮೀರ್ ಖಾನ್ ಅವರ ೩೫ ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಎಂದಿಗೂ ಅನುಮೋದಿಸಿಲ್ಲ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ," ಎಂದು ಹೇಳಿಕೆಯು  ಸ್ಪಷ್ಟಪಡಿಸಿದೆ.  ವರದಿಗಳ ಪ್ರಕಾರ, ಖಾನ್ ಅವರು ವೀಡಿಯೋಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಸೈಬರ್ ಕ್ರೈಮ್ ಸೆಲ್‌ನಲ್ಲಿ ಎಫ್‌ಐಆರ್ ಸಹ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. 

ತೀರ್ಪು

ಬಾಲಿವುಡ್ ನಟ ಅಮೀರ್ ಖಾನ್ ಬಿಜೆಪಿಯನ್ನು ಟೀಕಿಸುತ್ತಿರುವುದು ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋ ಆಡಿಯೋ ಡೀಪ್‌ಫೇಕ್ ಆಗಿದೆ. ಖಾನ್ ನಡೆಸಿಕೊಟ್ಟ ಸತ್ಯಮೇವ ಜಯತೆ ಟಿವಿ ಶೋ ನ ಸಂಚಿಕೆಯಿಂದ ಹಳೆಯ ತುಣುಕುಗಳನ್ನು ಬಳಸಿ ಇದನ್ನು ರಚಿಸಲಾಗಿದೆ. ಪರಿಣಾಮವಾಗಿ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.