ಇತ್ತೀಚಿನ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದಾಗಿ ಹೇಳಿಕೊಳ್ಳಲು ಭಾರತದ ಕ್ರೀಡಾಪಟು ಜ್ಯೋತಿ ಯಾರಾಜಿ ಅವರ ಹಳೆಯ ವೀಡಿಯೋ ಹಂಚಿಕೊಳ್ಳಲಾಗಿದೆ.

ಮೂಲಕ: ಸೋಹಮ್ ಶಾ
ಅಕ್ಟೋಬರ್ 3 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇತ್ತೀಚಿನ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದಾಗಿ ಹೇಳಿಕೊಳ್ಳಲು ಭಾರತದ ಕ್ರೀಡಾಪಟು ಜ್ಯೋತಿ ಯಾರಾಜಿ ಅವರ ಹಳೆಯ ವೀಡಿಯೋ ಹಂಚಿಕೊಳ್ಳಲಾಗಿದೆ.

ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿದ್ದಕ್ಕೆ ಯಾರಾಜಿ ಅವರನ್ನು ಅಭಿನಂದಿಸುವ ಎಕ್ಸ್ ನಲ್ಲಿನ ಕಂಡುಬಂದ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: @ashabhosle/X/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈಗ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಅಥ್ಲೆಟಿಕ್ಸ್ ಈವೆಂಟ್‌ಗಳು ಪ್ರಾರಂಭವಾಗಿಲ್ಲ. ವೈರಲ್ ವೀಡಿಯೋ ಜುಲೈ ೨೦೨೩ರಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನದ್ದು.

ಕ್ಲೈಮ್ ಐಡಿ 99d87a26

ಇಲ್ಲಿನ ಹೇಳಿಕೆಯೇನು? 

ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸೆಪ್ಟೆಂಬರ್ ೨೬ ರಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಜ್ಯೋತಿ ಯಾರಾಜಿ ಅವರು ಇತ್ತೀಚಿಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ೨೦೨೩ ಏಷ್ಯನ್‌ ಗೇಮ್ಸ್ ನಲ್ಲಿ ೧೦೦ ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ ಎಂದು ಎಂದು ಇಂತಹ ಪೋಷ್ಟ್ ಗಳು ಹೇಳಿಕೊಂಡಿವೆ. ಇಂತಹ ಕೆಲವು ಪೋಷ್ಟ್ ಗಳ ಆರ್ಕೈವ್ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

"ಏಷ್ಯನ್ ಗೇಮ್ಸ್ ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಆಂಧ್ರಪ್ರದೇಶದ ಯರಾಜಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂಬ ಶೀರ್ಷಿಕೆಯೊಂದಿಗೆ ಭೋಸ್ಲೆ ಅವರು ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಎಕ್ಸ್ ಮತ್ತು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್, ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಪ್ರಸ್ತುತವಾಗಿ  ನಡೆಯುತ್ತಿರುವ ಏಷ್ಯನ್ ಗೇಮ್ಸ್ ೨೦೨೩ ರಲ್ಲಿ ಯಾರಾಜಿ ಚಿನ್ನ ಗೆದ್ದಿದ್ದಾರೆ ಎಂದು ಹೇಳಿಕೊಂಡು, ಅವರ ಎಕ್ಸ್ ಪೋಷ್ಟ್ ಅನ್ನು ಸಹ ಸೇರಿಸಿಕೊಂಡು ಪ್ರಾದೇಶಿಕ ಮಾಧ್ಯಮ ಔಟ್ಲೆಟ್ TV9 ಮರಾಠಿ ಕೂಡ ವರದಿಯನ್ನು ಪ್ರಕಟಿಸಿದೆ. ವರದಿಯ ಆರ್ಕೈವ್ ಲಿಂಕ್ ಅನ್ನು ಇಲ್ಲಿ ನೋಡಬಹುದು.

ಟಿವಿ9 ಮರಾಠಿ ಪ್ರಕಟಿಸಿದ ವರದಿಯ ಸ್ಕ್ರೀನ್‌ಶಾಟ್. (ಮೂಲ: TV9 ಮರಾಠಿ/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ಈವೆಂಟ್‌ಗಳು ಇನ್ನೂ ಪ್ರಾರಂಭವಾಗಿಲ್ಲ ಮತ್ತು ಪ್ರಸಾರವಾದ ವೀಡಿಯೋ ಹಳೆಯದು.

ಇದರ ಹಿಂದಿನ ಸತ್ಯಾಂಶವೇನು?

೧೯ನೇ ಏಷ್ಯನ್ ಗೇಮ್ಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಮಹಿಳೆಯರ ೧೦೦ ಮೀ ಹರ್ಡಲ್ಸ್ ಸ್ಪರ್ಧೆಯ ಮೊದಲ ಸುತ್ತನ್ನು ಸೆಪ್ಟೆಂಬರ್ ೩೦ ರಂದು ನಿಗದಿಪಡಿಸಲಾಗಿದೆ, ಅದರ ಫೈನಲ್ ಅಕ್ಟೋಬರ್ ೧ ರಂದು ನಡೆಯಲಿದೆ. ಏಷ್ಯನ್ ಗೇಮ್ಸ್‌ನಲ್ಲಿ ಇನ್ನೂ ಯಾವುದೇ ಅಥ್ಲೆಟಿಕ್ಸ್ ಈವೆಂಟ್ ನಡೆದಿಲ್ಲ, ಮೊದಲನೆಯ ಅಥ್ಲೆಟಿಕ್ಸ್ ಸ್ಪರ್ಧೆಗಳು ಸೆಪ್ಟೆಂಬರ್ ೨೯ ಕ್ಕೆ ಪ್ರಾರಂಭವಾಗಲಿವೆ.

ಕ್ರೀಡಾ ಪತ್ರಕರ್ತ ಜೊನಾಥನ್ ಸೆಲ್ವರಾಜ್ ಅವರು ಎಕ್ಸ್ ನಲ್ಲಿ ಭೋಸ್ಲೆ ಅವರ ಪೋಷ್ಟ್ ಅನ್ನು ಮರು ಪೋಷ್ಟ್ ಮಾಡಿಕೊಂಡು, ಯಾರಾಜಿ ಅವರ ಈವೆಂಟ್ (೧೦೦ ಮೀ ಹರ್ಡಲ್ಸ್ ಈವೆಂಟ್) ಇನ್ನೂ ಪ್ರಾರಂಭವಾಗಿಲ್ಲ ಎಂದು ಸೂಚಿಸಿದರು.

ಜುಲೈ ೧೩, ೨೦೨೩ ರಂದು  ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪೋಷ್ಟ್ ಮಾಡಿದ ವೀಡಿಯೋವಿನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/@Media_SAI/ಸ್ಕ್ರೀನ್‌ಶಾಟ್)

ಇದಲ್ಲದೆ, ವೈರಲ್ ವೀಡಿಯೋದ ಒಂದು ಭಾಗವನ್ನು ಜುಲೈ ೧೩ ರಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಷ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅದು ಹೀಗೆ ಹೇಳುತ್ತದೆ, "@ಜ್ಯೋತಿ ಯರಾಜಿ ಅವರು ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೨೩ ರಲ್ಲಿ ಫಸ್ಟ್🥇for 🇮🇳 #TOPSchemeAthlete ಮಹಿಳೆಯರ ೧೦೦ ಮೀ. ಹರ್ಡಲ್ಸ್ ಈವೆಂಟ್‌ನಲ್ಲಿ ೧೩.೦೯ ಸೆಕೆಂಡ್‌ಗಳನ್ನು ಗಳಿಸಿದರು. ಏತನ್ಮಧ್ಯೆ, ಅವರ ಸಹ ಅಥ್ಲೀಟ್ ನಿತ್ಯಾ ರಾಮರಾಜ್ ೧೩.೫೫ ಸೆಕೆಂಡ್‌ಗಳನ್ನು ಗಳಿಸಿದರು ಮತ್ತು ಈವೆಂಟ್‌ನಲ್ಲಿ ೪ ನೇ ಸ್ಥಾನ ಪಡೆದರು (ಕನ್ನಡಕ್ಕೆ ಅನುವಾದಿಸಲಾಗಿದೆ)."

ವೈರಲ್ ವೀಡಿಯೋದ ೦:೧೫ ಟೈಮ್‌ಸ್ಟ್ಯಾಂಪ್‌ನಲ್ಲಿ ಗೋಚರಿಸುವ ಅಥ್ಲೀಟ್‌ಗಳ ಹಿಂದಿನ ಬೋರ್ಡ್ 'ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೨೩' ಎಂಬ ಪಠ್ಯವನ್ನು ಹೊಂದಿದೆ ಮತ್ತು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ವೆಬ್‌ಸೈಟ್‌ನಲ್ಲಿನ ಲೋಗೋಗೆ ಹೊಂದಿಕೆಯಾಗುವ ಲೋಗೋವನ್ನು ಹೊಂದಿದೆ ಎಂದು ನಾವು ಕಂಡುಕೊಂಡಿದ್ದೇವೆ.

ವೈರಲ್ ವೀಡಿಯೋ ಮತ್ತು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೨೩ ರ ವೆಬ್‌ಸೈಟ್‌ನಲ್ಲಿ ಕಂಡುಬಂದ ಲೋಗೋಗಳ ಹೋಲಿಕೆ. (ಮೂಲ: ಏಕ್ಸ್/ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ವೆಬ್‌ಸೈಟ್/ಸ್ಕ್ರೀನ್‌ಶಾಟ್‌ಗಳು)

ರಿಲಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವೈರಲ್ ವೀಡಿಯೋದೊಂದಿಗಿನ ಹೇಳಿಕೆಯನ್ನು ತಳ್ಳಿಹಾಕಿದೆ. ಥೈಲ್ಯಾಂಡ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಯಾರಾಜಿ ಅವರ ವೀಡಿಯೋ ಜೂಲೈನದ್ದು ಎಂದು ಅದು ತೋರಿಸಿಕೊಂಡಿದೆ.

ಜುಲೈ ೧೩ ರಂದು, ಭಾರತದ ಆಂಧ್ರಪ್ರದೇಶದವರಾದ ಯಾರಾಜಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ೧೩.೦೯ ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಯರ್ರಾಜಿ ೧೨.೮೨ ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆಯನ್ನೂ ಕೂಡ ಹೊಂದಿದ್ದಾರೆ.

ತೀರ್ಪು 

ವೈರಲ್ ವೀಡಿಯೋ ಹಳೆಯದಾಗಿದೆ ಮತ್ತು ಇತ್ತೀಚಿಗೆ ಚೀನಾದಲ್ಲಿ ನಡೆಯುತ್ತಿರುವ ೨೦೨೩ ರ ಏಷ್ಯನ್ ಗೇಮ್ಸ್‌ನಿಂದಲ್ಲದ, ಕಾರಣ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಅನುವಾದಿಸಿದವರು: ವಿವೇಕ್.ಜೆ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.