ಈ ಫೋಟ್ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನ್ಯಾಯಾಧೀಶರದ್ದಲ್ಲ

ಮೂಲಕ: ರಾಜೇಶ್ವರಿ ಪರಸ
ಸೆಪ್ಟೆಂಬರ್ 15 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಈ ಫೋಟ್ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನ್ಯಾಯಾಧೀಶರದ್ದಲ್ಲ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳು. (ಮೂಲ: ಸ್ಕ್ರೀನ್ಶಾಟ್/ಎಕ್ಸ್/ಫೇಸ್‌ಬುಕ್)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮಾಜಿ ಆಂಧ್ರ ಸಿಎಂ ಮತ್ತು ಟಿಡಿಪಿ ಮುಖ್ಯಸ್ಥರಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರದ್ದೆಂದು ಬೇರೊಬ್ಬರು ನ್ಯಾಯಾಧೀಶರ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ e05834b6

ಬಹುಕೋಟಿ ರೂಪಾಯಿಗಳ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ ೧೦ ರಂದು ಭಾನುವಾರ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹೩೭೦ ಕೋಟಿ ಮೊತ್ತದ ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇಲ್ಲಿನ ಹೇಳಿಕೆಯೇನು?

ಚಂದ್ರಬಾಬು ನಾಯ್ಡು ಅವರ ಬಂಧನದ ಹಿನ್ನೆಲೆಯಲ್ಲಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನ್ಯಾಯಾಧೀಶರನ್ನು ಈ ಫೋಟೋ ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಎಕ್ಸ್‌ನಲ್ಲಿನ (ಹಿಂದೆ ಟ್ವಿಟರ್) ಕಂಡುಬಂದ ಒಂದು ಪೋಷ್ಟ್ ನ ಶೀರ್ಷಿಕೆ ಹೀಗೆ ಹೇಳುತ್ತದೆ "ಜಸ್ಟೀಸ್ ಹಿಮಾ ಬಿಂದು... ಸೆಲ್ಯೂಟ್ ಮೇಡಂ" ಕಾನೂನಿನ ಮುಂದೆ ಯಾರೂ ಹೊರತಾಗಿಲ್ಲ ಎಂಬುದನ್ನು ನ್ಯಾಯಾಧೀಶರಾಗಿ ನೀವು ಸಾಬೀತುಪಡಿಸಿದ್ದೀರಿ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಾಮಾನ್ಯ ವ್ಯಕ್ತಿಯಲ್ಲಿ ವಿಶ್ವಾಸವನ್ನು ತುಂಬುವಂತಹ ತೀರ್ಪನ್ನು ನೀವು ನೀಡಿದ್ದೀರಿ (ಕನ್ನಡಕ್ಕೆ ಅನುವಾದಿಸಲಾಗಿದೆ)."

ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವಂತೆ ಕಂಡುಬರುವ ‘ವೈಎಸ್‌ಆರ್‌ಸಿಪಿ ಸೋಷಿಯಲ್ ಮೀಡಿಯಾ ವಿಜಯನಗರಂ’ ಎಂಬ ಫೇಸ್‌ಬುಕ್ ಪುಟವು ನಾಯ್ಡು ಅವರ ಬಂಧನಕ್ಕೆ ಆದೇಶ ನೀಡಿದ್ದಕ್ಕಾಗಿ ನ್ಯಾಯಾಧೀಶರನ್ನು ಶ್ಲಾಘಿಸಿ ಅದೇ ಫೋಟೋವನ್ನು ಹಂಚಿಕೊಂಡಿದೆ. ಕೆಲವು ಸ್ಥಳೀಯ ವೆಬ್‌ಸೈಟ್‌ಗಳು ನ್ಯಾಯಾಧೀಶರ ಛಾಯಾಚಿತ್ರವನ್ನು ಅದೇ ಹೇಳಿಕೆಗಳೊಂದಿಗೆ ಹಂಚಿಕೊಂಡಿವೆ. ಆರ್ಕೈವ್ ಮಾಡಿದ ಲಿಂಕ್‌ ಇಲ್ಲಿದೆ .

ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಜಡ್ಜ್ ಹಿಮಬಿಂದು ಅವರನ್ನು ಆಂಧ್ರಪ್ರದೇಶದ ಸಿಎಂ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್‌ ಜಗನ್ ಮೋಹನ್ ರೆಡ್ಡಿ ಅವರು ಕಾನೂನು ಕಾಲೇಜುಗಳ ಡೀನ್ ಆಗಿ ನೇಮಿಸಿದ್ದರು,  ಅದಕ್ಕಾಗಿಯೇ ಅವರು ಪ್ರತಿಪಕ್ಷ ನಾಯಕ ಚಂದ್ರಬಾಬು ನಾಯ್ಡುಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ತೆಲುಗು ಭಾಷೆಯಲ್ಲಿನ ಹೇಳಿಕೆಯೊಂದಿಗೆ ನ್ಯಾಯಾಧೀಶರ ಫೋಟೋ ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿದೆ.

ವಾಟ್ಸಪ್ಪ್ ನಲ್ಲಿ ಹಂಚಿಕೊಳ್ಳಲಾದ ಹೇಳಿಕೆಯ ಸ್ಕ್ರೀನ್‌ಶಾಟ್ (ಮೂಲ: ವಾಟ್ಸಪ್ಪ್/ಸ್ಕ್ರೀನ್‌ಶಾಟ್)

ಆದರೆ, ಈ ಎರಡೂ ಹೇಳಿಕೆಗಳೂ ತಪ್ಪು. ಫೋಟೋದಲ್ಲಿ ಕಾಣುತ್ತಿರುವ ಮಹಿಳೆ, ನಾಯ್ಡು ಅವರ ವಿರುದ್ಧ ಆದೇಶವನ್ನು ಪ್ರಕಟಿಸಿದ ನ್ಯಾಯಾಧೀಶರಲ್ಲ.

ಇದರಲ್ಲಿನ ಸತ್ಯ ಏನು?

ಸೆಪ್ಟೆಂಬರ್ ೧೧ ರಂದು ಡೆಕ್ಕನ್ ಕ್ರಾನಿಕಲ್ ಪ್ರಕಟಿಸಿದ ವರದಿಯ ಪ್ರಕಾರ, ನಾಯ್ಡು ಪ್ರಕರಣದ ನ್ಯಾಯಾಲಯದ ಆದೇಶವನ್ನು ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ನ್ಯಾಯಾಲಯದ ಮೂರನೇ ಹೆಚ್ಚುವರಿ ನ್ಯಾಯಾಧೀಶ ಬಿ. ಸತ್ಯ ವೆಂಕಟ ಹಿಮ ಬಿಂದು ಅವರು ಹೊರಡಿಸಿದರು. ಕೃಷ್ಣಾ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್ ಪ್ರಕಾರ, ನ್ಯಾಯಾಧೀಶೆ ಹಿಮಬಿಂದು ಅವರು ಮೇ ೧ ರಂದು ವಿಜಯವಾಡದ ಎಸಿಬಿ ನ್ಯಾಯಾಲಯಕ್ಕೆ ಸೇರಿದ್ದಾರೆ. ಅವರ ಫೋಟೋ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ ಮತ್ತು ವೈರಲ್ ಪೋಷ್ಟ್ ಗಳಲ್ಲಿ ಕಂಡುಬರುವ ಮಹಿಳೆ ಅವರು ಅಲ್ಲ.

ಆಂಧ್ರಪ್ರದೇಶ ಹೈಕೋರ್ಟ್ ವೆಬ್‌ಸೈಟ್ ಪ್ರಕಾರ, ವಿಜಯವಾಡಕ್ಕೆ ವರ್ಗಾವಣೆಯಾಗುವ ಮೊದಲು, ನ್ಯಾಯಾಧೀಶೆ ಹಿಮಬಿಂದು ಅವರು ಎಸ್‌ಪಿಇ (ವಿಶೇಷ ಪೊಲೀಸ್ ಸ್ಥಾಪನೆ) ಮತ್ತು ಎಸಿಬಿ ಪ್ರಕರಣಗಳಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿದ್ದರು.

ನ್ಯಾಯಾಧೀಶ ಬಿ ಸತ್ಯ ವೆಂಕಟ ಹಿಮ ಬಿಂದು ಅವರ ಫೋಟೋ. (ಮೂಲ: ಸ್ಕ್ರೀನ್ಶಾಟ್/ krishna.dcourts.gov.in)

ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ,  ಪೋಷ್ಟ್ ನಲ್ಲಿ ಕಂಡುಬರುವ ಮಹಿಳೆ ಇನ್ನೊಬ್ಬ ನ್ಯಾಯಾಧೀಶರು ಎಂದು ತಿಳಿದುಬಂದಿದೆ. ಅದು ಶ್ರೀಕಾಕುಳಂ ಜಿಲ್ಲಾ ನ್ಯಾಯಾಲಯದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ ಶ್ರೀದೇವಿ ಅವರ ಫೋಟೋ. ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದ ವಿಚಾರಣೆಗೂ ಆಕೆಗೂ ಯಾವುದೇ ಸಂಬಂಧವಿಲ್ಲ.

ನ್ಯಾಯಾಧೀಶೆ ಶ್ರೀದೇವಿ ಅವರ ಫೋಟೋವನ್ನು ನ್ಯಾಯಾಧೀಶೆ ಹಿಮಬಿಂದು ಅವರ ಫೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಪೋಷ್ಟ್ ನಲ್ಲಿ ಕಾಣಿಸಿಕೊಳ್ಳುವ ಮಹಿಳಾ ನ್ಯಾಯಾಧೀಶರ ಹೆಸರು, ಫೋಟೋ ಮತ್ತು ಹುದ್ದೆ. (ಮೂಲ: ಸ್ಕ್ರೀನ್ಶಾಟ್ districts.ecourts.gov.in)

ಅದಲ್ಲದೆ, ಜಗನ್ ಮೋಹನ್ ರೆಡ್ಡಿ ಅವರು ನ್ಯಾಯಾಧೀಶರಾದ ಹಿಮಬಿಂದು ಅವರನ್ನು ಆಂಧ್ರಪ್ರದೇಶದ ಕಾನೂನು ಕಾಲೇಜುಗಳ ಡೀನ್ ಆಗಿ ನೇಮಿಸಿದ್ದಾರೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ. ಒಂದು ಪ್ರತ್ಯೇಕ ಕಾನೂನು ಕಾಲೇಜು ಅದರ ಮುಖ್ಯಸ್ಥರಾಗಿ ಪ್ರಾಂಶುಪಾಲರನ್ನು ಹೊಂದಿದ್ದರೆ, ಡೀನ್ ವಿಶ್ವವಿದ್ಯಾನಿಲಯದಲ್ಲಿ ಸಂಪೂರ್ಣ ವಿಭಾಗ ಅಥವಾ ವಿಭಾಗಕ್ಕೆ ಮುಖ್ಯಸ್ಥರಾಗಿರುತ್ತಾರೆ. ಉದಾಹರಣೆಗೆ, ಅದರ ವೆಬ್‌ಸೈಟ್‌ನ ಪ್ರಕಾರ, ವಿಶಾಕಪಟ್ಟಣಂನಲ್ಲಿರುವ ಆಂಧ್ರ ವಿಶ್ವವಿದ್ಯಾಲಯವು ಪದವಿಪೂರ್ವ ಪರೀಕ್ಷೆಗಳು ಮತ್ತು ಸ್ನಾತಕೋತ್ತರ ಪರೀಕ್ಷೆಗಳಂತಹ ವಿವಿಧ ವಿಭಾಗಗಳನ್ನು ನೋಡಿಕೊಳ್ಳುವ ಒಂಬತ್ತು ಡೀನ್‌ಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಆಂಧ್ರ ವಿಶ್ವವಿದ್ಯಾಲಯದ ಕಾನೂನು ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜು, ಇದರ ಮುಖ್ಯಸ್ಥರಾಗಿ ಪ್ರಾಂಶುಪಾಲರು ಇದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿರುವ ಮಾಹಿತಿಯು ಆಂಧ್ರದಲ್ಲಿ ಒಟ್ಟು ೩೯ ಸರ್ಕಾರಿ ಮತ್ತು ಖಾಸಗಿ ಕಾನೂನು ಕಾಲೇಜುಗಳಿವೆ ಎಂದು ತೋರಿಸುತ್ತದೆ. ಅವುಗಳಲ್ಲಿ ಆರು ಸರ್ಕಾರಿ ಕಾಲೇಜುಗಳಾಗಿದ್ದರೆ, ಉಳಿದವು ಖಾಸಗಿ ಕಾಲೇಜುಗಳಾಗಿವೆ. ಪ್ರತಿಯೊಂದು ಕಾಲೇಜಿಗೂ ಅದರ ಪ್ರಾಂಶುಪಾಲರಿದ್ದಾರೆಯೇ ಹೊರತು ಡೀನ್ ಅಲ್ಲ.

ತೀರ್ಪು 

ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನ್ಯಾಯಾಧೀಶೆ ಹಿಮಬಿಂದು ಎಂದು ಮತ್ತೊಬ್ಬ ನ್ಯಾಯಾಧೀಶರ ಫೋಟೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಫೋಟೋ ಶ್ರೀಕಾಕುಳಂ ನ್ಯಾಯಾಧೀಶೆ ಕೆ.ಶ್ರೀದೇವಿ ಅವರದ್ದು, ಅವರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ನಾವು ಈ ಹೇಳಿಕೆ ತಪ್ಪು ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ವಿವೇಕ್.ಜೆ

ಈ ವಾಸ್ತವಾಂಶವನ್ನು ಪರಿಶೀಲಿಸಿ

తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.