೪೦ ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರು ಜಿ೨೦ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಿದ್ದರು ಎಂದು ತೋರಿಸಲು ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಸೆಪ್ಟೆಂಬರ್ 25 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೪೦ ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರು ಜಿ೨೦ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಿದ್ದರು ಎಂದು ತೋರಿಸಲು ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಆನ್‌ಲೈನ್‌ನಲ್ಲಿ ಕಂಡುಬಂದ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಫೇಸ್‌ಬುಕ್/ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ಕ್ಲಿಪ್ ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ೧೯೮೩ ರಲ್ಲಿ ನಡೆದ ಅಲಿಪ್ತ ಚಳವಳಿಯ ಶೃಂಗಸಭೆಯದ್ದು.

ಕ್ಲೈಮ್ ಐಡಿ a8f35494

ಇಲ್ಲಿನ ಹೇಳಿಕೆಯೇನು? 
೨೦೨೩ ರ ಜಿ೨೦ ನಾಯಕರ ಹದಿನೆಂಟನೇ ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ ೯ ರಿಂದ ೧೦ ರವರೆಗೆ ಆಯೋಜಿಸಲಾಗಿತ್ತು.

ಶೃಂಗಸಭೆಯು ಮುಕ್ತಾಯಗೊಂಡ ನಂತರ, ಭಾರತದಲ್ಲಿ ೧೯೮೩ ರಲ್ಲಿ ಕೂಡ ಜಿ೨೦ ಶೃಂಗಸಭೆ ನಡೆದಿತ್ತು ಎಂದು ಹೇಳಿಕೊಳ್ಳುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಒಂದು ನಿಮಿಷದ ಮೇಲೆ ಡೈರ್ಘ್ಯವಿರುವ ಈ ವೀಡಿಯೋ, ಹಿಂದಿ ಪಠ್ಯದ ಶೀರ್ಷಿಕೆಯನ್ನು ಒಳಗೊಂಡಿದೆ. ಭಾರತವು ೧೦೦ ಕ್ಕೂ ಹೆಚ್ಚು ರಾಷ್ಟ್ರಗಳ ಭಾಗವಹಿಸುವಿಕೆಯೊಂದಿಗೆ ಭಾರತದ ಜಾಗತಿಕ ಪ್ರತಿಷ್ಠೆಯನ್ನು ಹೆಚ್ಚಿಸುವ, ಮತ್ತು ಜಿ೨೦ ರ ಮಹತ್ವವನ್ನು ಮೀರಿಸುವ ಯಶಸ್ವಿ ಕಾರ್ಯಕ್ರಮವನ್ನು ೧೯೮೩ರಲ್ಲಿ ಆಯೋಜಿಸಿತ್ತು ಎಂದು ಹೇಳುತ್ತದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಮತ್ತು ಇತರ ಪ್ರಮುಖ ವ್ಯಕ್ತಿಗಳು ಒಟ್ಟಿಗೆ ನಿಂತಿರುವ ದೃಶ್ಯಗಳೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ. ಇದು ಗಾಂಧಿಯವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವ ಮತ್ತು ಕ್ಯಾಸ್ಟ್ರೋ ಮತ್ತು ಪ್ಯಾಲೆಸ್ಟೈನ್ ರಾಜ್ಯದ ಮಾಜಿ ಅಧ್ಯಕ್ಷ ಯಾಸರ್ ಅರಾಫತ್ ಅವರೊಂದಿಗೆ ತೊಡಗಿರುವ ಝಲಕ್ಗಳನ್ನು ತೋರಿಸುತ್ತದೆ. ವೀಡಿಯೋದಲ್ಲಿ ತನ್ನ ಭಾಷಣದ ಸಮಯದಲ್ಲಿ, ಗಾಂಧಿಯವರು ಸಾರ್ವಭೌಮ ರಾಷ್ಟ್ರಗಳ ಪ್ರತಿನಿಧಿಗಳ ವೈವಿಧ್ಯಮಯ ಸಭೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಒಬ್ಬ ಫೇಸ್‌ಬುಕ್ ಬಳಕೆದಾರರು ಈ ಕ್ಲಿಪ್ ಅನ್ನು ಹಂಚುಕೊಂಡಿದ್ದು ಅದರ ಶೀರ್ಷಿಕೆಯು  ಹೀಗೆ ಹೇಳುತ್ತದೆ: "ಇತ್ತೀಚೆಗೆ ಭಾರತದಲ್ಲಿ ಮೊದಲ ಬಾರಿಗೆ ಜಿ೨೦ ಶೃಂಗಸಭೆ  ನಡೆದಿದೆ ಎಂದು ಭಾವಿಸುವ ಎಲ್ಲರಿಗೂ ... ೪೦ ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಜಿ೨೦ ಸಭೆಗೆ ೧೦೦ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು ಎಂದು ತಿಳಿಯಿರಿ.'' ಆರ್ಕೈವ್ ಮಾಡಿದ ಇಂತಹ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ನೋಡಬಹುದು. ಅಂತಹ ಒಂದು ಪೋಷ್ಟ್ ೪೩,೦೦೦ ವೀಕ್ಷಣೆಗಳು ಮತ್ತು ೧೫,೦೦೦ ಹಂಚಿಕೆಗಳನ್ನು ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ ಗಳಿಸಿದೆ.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

೪೦ ವರ್ಷಗಳ ಹಿಂದೆ ಭಾರತದಲ್ಲಿ ಜಿ೨೦ ಶೃಂಗಸಭೆಯನ್ನು ಇಂದಿರಾ ಗಾಂಧಿಯವರು ಆಯೋಜಿಸಿದ್ದರು ಎಂದು ಹೇಳಿಕೊಳ್ಳುವ ಅದೇ ರೀತಿಯ ಶೀರ್ಷಿಕೆಗಳೊಂದಿಗೆ ಎಕ್ಸ್ ನಲ್ಲಿ ಹಂಚಿಕೊಂಡಿರುವ ಸಮಾನವಾದ ಪಠ್ಯವನ್ನು ಹೊಂದಿರುವ ಅದೇ ಕ್ಲಿಪ್‌ನ ಚಿಕ್ಕ ಆವೃತ್ತಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ಪೋಷ್ಟ್ ಗಳನ್ನೂ ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಿರುವುದನ್ನು ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಎರಡು ಕಾರಣಗಳಿಗಾಗಿ ಈ ಪೋಷ್ಟ್ ಗಳ ಶೀರ್ಷಿಕೆಗಳು ತಪ್ಪಾಗಿವೆ:

  • ವೀಡಿಯೋ ೧೯೮೩ ರಲ್ಲಿ ದೆಹಲಿಯಲ್ಲಿ ನಡೆದ ಅಲಿಪ್ತ ಚಳವಳಿಯ (ನಾನ್ ಅಲೈನ್ಮೆಂಟ್ ಮೂವ್ಮೆಂಟ್) ಶೃಂಗಸಭೆಯ ತುಣುಕನ್ನು ಒಳಗೊಂಡಿದೆ, ಜಿ೨೦ ಶೃಂಗಸಭೆಯದ್ದಲ್ಲ.
  • ಎರಡನೆಯದಾಗಿ, ಜಿ೨೦ ಅನ್ನು ೧೯೯೯ ರಲ್ಲಿ ಮಾತ್ರ ರಚಿಸಲಾಯಿತು ಮತ್ತು ಅದರ ಮೊದಲ ನಾಯಕರ ಸಭೆಯು ೨೦೦೮ ರಲ್ಲಿ ವಾಷಿಂಗ್ಟನ್, ಡಿ.ಸಿ. ನಲ್ಲಿ ನಡೆಯಿತು.

ನಾವು ಕಂಡುಕೊಂಡಿದ್ದೇನು?
ವೈರಲ್ ವೀಡಿಯೋ ಜಿ೨೦ ಶೃಂಗಸಭೆಯನ್ನು ತೋರಿಸುತ್ತದೆ ಎಂದು ಪೋಷ್ಟ್ ಗಳ ಶೀರ್ಷಿಕೆಗಳು ಸೂಚಿಸಿದರೂ, ವೀಡಿಯೋದ ದೀರ್ಘ ಆವೃತ್ತಿಯ ಆರಂಭದಲ್ಲಿ ಕೇಳಿದ ಹಿಂದಿ ನಿರೂಪಣೆಯು ಏಳನೇ ಅಲಿಪ್ತ ಶೃಂಗಸಭೆಯ ಕುರಿತು ಮಾತನಾಡುವುದನ್ನು ನಾವು ಗಮನಿಸಿದ್ದೇವೆ. "SEVENTH NON-ALIGNED SUMMIT" ಮತ್ತು "New Delhi 1983” ಎಂದು ಬರೆಯುವ ಚಿಹ್ನೆಯ ಮುಂದೆ ಗಾಂಧಿ, ಕ್ಯಾಸ್ಟ್ರೋ ಮತ್ತು ಇತರ ಪ್ರಭಾವಿ ನಾಯಕರನ್ನು ಒಟ್ಟುಗೂಡಿಸಿದ ಚಿತ್ರದೊಂದಿಗೆ ವೀಡಿಯೋ ತೆರೆಯುತ್ತದೆ ಎಂದು ನಾವು ಗಮನಿಸಿದ್ದೇವೆ.

"SEVENTH NON-ALIGNED SUMMIT" ಮತ್ತು "New Delhi 1983" ಎಂಬ ಬರಹವನ್ನು ಹೊಂದಿರುವ ಫಲಕದ ಮುಂದೆ ಇಂದಿರಾ ಗಾಂಧಿ ಮತ್ತು ಇತರ ನಾಯಕರು ಕುಳಿತಿರುವುದನ್ನು ತೋರಿಸುವ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಗೆಟ್ಟಿ ಇಮೇಜಸ್‌ನಲ್ಲಿ ಅದೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ, ಜೊತೆಗೆ "ಇಂದಿರಾ ಗಾಂಧಿ, ಫಿಡೆಲ್ ಕ್ಯಾಸ್ಟ್ರೋ ಮತ್ತು ಹಲವಾರು ರಾಷ್ಟ್ರಗಳ ನಾಯಕರು ಭಾರತದ ನವದೆಹಲಿಯಲ್ಲಿ ನಡೆದ ಏಳನೇ ಅಲಿಪ್ತ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ" ಎಂದು ಆ ಚಿತ್ರದ ವಿವರಣೆಯಲ್ಲಿ ಹೇಳಲಾಗಿದೆ.

ಗೆಟ್ಟಿ ಇಮೇಜಸ್‌ನಲ್ಲಿ ಪೋಸ್ಟ್ ಮಾಡಲಾದ ವೈರಲ್ ಕ್ಲಿಪ್ ಮತ್ತು ಚಿತ್ರದ ದೃಶ್ಯ ಹೋಲಿಕೆ. (ಮೂಲ: ಫೇಸ್‌ಬುಕ್ (ಎಡಕ್ಕೆ)/ಗೆಟ್ಟಿ ಇಮೇಜ್ (ಬಲಕ್ಕೆ)/ಸ್ಕ್ರೀನ್ಶಾಟ್)

ಇದಲ್ಲದೆ, ಯೂಟ್ಯೂಬ್ ನಲ್ಲಿ ಅಸೋಸಿಯೇಟೆಡ್ ಪ್ರೆಸ್ (ಏಪಿ) ಆರ್ಕೈವ್ ಚಾನಲ್ ಪೋಷ್ಟ್ ಮಾಡಿದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. "GS 07 03 1983 ಅಲಿಪ್ತ ರಾಷ್ಟ್ರಗಳ ಸಮ್ಮೇಳನ ನವದೆಹಲಿಯಲ್ಲಿ ಆರಂಭವಾಗಿದೆ (ಕನ್ನಡಕ್ಕೆ ನೌವಾದಿಸಲಾಗಿದೆ)" ಎಂಬ ಶೀರ್ಷಿಕೆಯ ಈ ವೀಡಿಯೋವನ್ನು ಮಾರ್ಚ್ ೧೪, ೨೦೨೨ ರಂದು ಪ್ರಕಟಿಸಲಾಗಿದೆ. ಈ ವೀಡಿಯೋದ ಕೀಫ್ರೇಮ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ನಾವು ವೈರಲ್ ವೀಡಿಯೋಗೆ ಗಮನಾರ್ಹವಾದ ಹೋಲಿಕೆಗಳನ್ನು ಗಮನಿಸಿದ್ದೇವೆ. ವಾಯ್ಸ್‌ಓವರ್‌ನ ನಿರೂಪಣೆಗೆ ಅನುಗುಣವಾಗಿ ೧೯೮೩ ರಲ್ಲಿ ನವದೆಹಲಿಯಲ್ಲಿ ಏಳನೇ ಅಲಿಪ್ತ ರಾಷ್ಟ್ರಗಳ ಶೃಂಗಸಭೆಯನ್ನು ವೀಡಿಯೋ ತೋರಿಸುತ್ತದೆ ಎಂದು ಇದು ಸಾಬೀತುಪಡಿಸುತ್ತದೆ.

ವೈರಲ್ ಕ್ಲಿಪ್ ಮತ್ತು ಏಪಿ ಆರ್ಕೈವ್ ಯೂಟ್ಯೂಬ್ ವೀಡಿಯೋಗಳ ದೃಶ್ಯ ಹೋಲಿಕೆ. (ಮೂಲ: ಎಕ್ಸ್ (ಎಡ)/ಯೂಟ್ಯೂಬ್ (ಬಲ)/ಸ್ಕ್ರೀನ್‌ಶಾಟ್‌ಗಳು)

ಏಳನೇ ಅಲಿಪ್ತ ಶೃಂಗಸಭೆ ೧೯೮೩ 

ಡಿ-ಕಾಲೋನಿಯಾಲಿಸಂ ಅವಧಿ ಮತ್ತು ಶೀತಲ ಸಮರದ ಸಮಯದಲ್ಲಿ ಅಲಿಪ್ತ ಚಳವಳಿಯನ್ನು ರಚಿಸಲಾಗಿದ್ದು, ರಾಷ್ಟ್ರಗಳ ಸ್ವಾತಂತ್ರ್ಯವನ್ನು ಬೆಂಬಲಿಸುವಲ್ಲಿ ಮತ್ತು ಜಾಗತಿಕ ಶಾಂತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ಇದು ವಹಿಸಿಕೊಂಡಿತು. ಔಪಚಾರಿಕವಾಗಿ ೧೯೬೧ ರಲ್ಲಿ ಸ್ಥಾಪಿಸಲಾದ ಈ ಚಳುವಳಿಯು ೧೨೦ ಸದಸ್ಯ ರಾಷ್ಟ್ರಗಳನ್ನು ಸೇರಿಸಿಕೊಂಡಿದೆ.

ಮೂಲತಃ ಮಾರ್ಚ್ ೩೧, ೧೯೮೩ ರಂದು ಪ್ರಕಟವಾದ ಇಂಡಿಯಾ ಟುಡೇ ವರದಿಯು ದೆಹಲಿಯಲ್ಲಿ ನಡೆದ ಏಳನೇ ಶೃಂಗಸಭೆಯಲ್ಲಿ ೧೦೧ ದೇಶಗಳನ್ನು ಪ್ರತಿನಿಧಿಸಲಾಗಿತ್ತು ಎಂದು ಹೇಳುತ್ತದೆ. ಈ ಐತಿಹಾಸಿಕ ಘಟನೆಯು ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಪ್ರತಿನಿಧಿಸುತ್ತದೆ. ಇದು ಇತಿಹಾಸದಲ್ಲೇ ಈ ರೀತಿಯ ಅತಿದೊಡ್ಡ ಸಭೆಯಾಗಿದೆ. ಸಭೆಯು ಮಾರ್ಚ್ ೭ ರಿಂದ ಮಾರ್ಚ್ ೧೨, ೧೯೮೩ ರವರೆಗೆ ನಡೆಯಿತು. ಈ ಶೃಂಗಸಭೆಯಲ್ಲಿ ಇಂದಿರಾ ಗಾಂಧಿಯವರು ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯು ಹೇಳುತ್ತದೆ.

ಹಾಗಾದರೆ ಜಿ೨೦ ಶೃಂಗಸಭೆ?

ಭಾರತವು ೧೯೮೩ ರಲ್ಲಿ ಜಿ೨೦ ಸಭೆಯನ್ನು ಆಯೋಜಿಸಿತ್ತು ಎಂಬ ಹೇಳಿಕೆಗಳಿಗೆ ವಿರುದ್ಧವಾಗಿ, ಏಷ್ಯಾದ ಆರ್ಥಿಕ ಬಿಕ್ಕಟ್ಟಿನ ನಂತರ ಜಿ೨೦ ಅನ್ನು ೧೯೯೯ ರಲ್ಲಿ ಸ್ಥಾಪಿಸಲಾಯಿತು. ಆರಂಭದಲ್ಲಿ, ಇದು ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳಿಗೆ ಜಾಗತಿಕ ಆರ್ಥಿಕ ಮತ್ತು ಆರ್ಥಿಕ ವಿಷಯಗಳನ್ನು ಚರ್ಚಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಿದ್ದು, ೨೦೦೭ ರಲ್ಲಿ ಜಾಗತಿಕ ಆರ್ಥಿಕ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಜಿ೨೦ ಅನ್ನು ದೇಶ/ಸರ್ಕಾರದ ಮುಖ್ಯಸ್ಥರ ಮಟ್ಟಕ್ಕೆ ಏರಿಸಲಾಯಿತು. ಅಧಿಕೃತವಾಗಿ ೨೦೦೯ ರಲ್ಲಿ "ಅಂತರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆ" ಆಯಿತು. ೨೦೦೮ ರಲ್ಲಿ, ಜಿ೨೦ ವಾಷಿಂಗ್ಟನ್‌ ಡಿ.ಸಿ. ನಲ್ಲಿ ತಮ್ಮ ಮೊದಲ ಸಭೆಯನ್ನು ನಡೆಸಿತು.

ಜಿ೨೦ ಶೃಂಗಸಭೆಯು ಈಗ ಪ್ರತಿ ವರ್ಷ ಬದಲಾಗುವ ಅಧ್ಯಕ್ಷರ ನೇತೃತ್ವದಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ನಡೆಯುತ್ತಿದ್ದು, ಭಾರತವು ಶೃಂಗಸಭೆಯ ನೇತೃತ್ವದ ಪಾತ್ರವನ್ನು ಡಿಸೆಂಬರ್ ೧, ೨೦೨೨ ರಿಂದ ಪ್ರಾರಂಭಿಸಿದೆ ಮತ್ತು ೨೦೨೩ ಸೆಪ್ಟೆಂಬರ್ ೯ ಮತ್ತು ೧೦ ರಂದು ನವದೆಹಲಿಯಲ್ಲಿ ಶೃಂಗಸಭೆಯನ್ನು ಆಯೋಜಿಸಿದೆ.

ವೈರಲ್ ವೀಡಿಯೋದ ಮೂಲ ಮತ್ತು ಸಂದರ್ಭ

ವೈರಲ್ ವಿಡಿಯೋ "ಹರ್ ಹಾಥ್ ಶಕ್ತಿ" ಎಂದು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾದ ಲೋಗೋವನ್ನು ಒಳಗೊಂಡಿತ್ತು. "ಹರ್ ಹಾಥ್ ಶಕ್ತಿ" ಶೀರ್ಷಿಕೆಯ ಫೇಸ್‌ಬುಕ್ ಪುಟವು ಈ ವೈರಲ್ ವೀಡಿಯೋವನ್ನು ಸೆಪ್ಟೆಂಬರ್ ೭ ರಂದು ಪೋಷ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೋದ ಹಿಂದಿಯಲ್ಲಿರುವ ಶೀರ್ಷಿಕೆಯು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ: ''ಜಿ೨೦ ಶೃಂಗಸಭೆಗಿಂತ ದೊಡ್ಡ ಸಮ್ಮೇಳನವನ್ನು ೧೯೮೩ ರಲ್ಲಿ ನಡೆಸಲಾಯಿತು.'' ಆರ್ಕೈವ್ ಪೋಷ್ಟ್ ಅನ್ನು ಇಲ್ಲಿ ನೋಡಬಹುದು.

"ಹರ್ ಹಾಥ್ ಶಕ್ತಿ" ಲೋಗೋವನ್ನು ಒಳಗೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

೧೯೮೩ ರಲ್ಲಿ ನಡೆದಿದೆ ಎಂದು ಹೇಳಲಾದ ಜಿ೨೦ ಶೃಂಗಸಭೆಯ ಕುರಿತು ಈ ಮೂಲ ವೀಡಿಯೋ ಹಂಚಿಕೊಂಡವರು ಯಾವುದೇ ಪ್ರತಿಪಾದನೆಯನ್ನು ಮಾಡಲಿಲ್ಲ, ಏಕೆಂದರೆ ವೀಡಿಯೋದ ವಾಯ್ಸ್‌ಓವರ್ ಸ್ಪಷ್ಟವಾಗಿ ಅಲಿಪ್ತ ಶೃಂಗಸಭೆಯನ್ನು ಉಲ್ಲೇಖಿಸುತ್ತದೆ.

ತೀರ್ಪು

೪೦ ವರ್ಷಗಳ ಹಿಂದೆ ಭಾರತದಲ್ಲಿ ಇಂದಿರಾ ಗಾಂಧಿ ಆಯೋಜಿಸಿದ್ದ ಜಿ೨೦ ಶೃಂಗಸಭೆಯನ್ನು ವೀಡಿಯೋ ತೋರಿಸುತ್ತಿಲ್ಲ; ಬದಲಿಗೆ, ಇದು ಸರಿಸುಮಾರು ನಾಲ್ಕು ದಶಕಗಳ ಹಿಂದೆ ದೆಹಲಿಯಲ್ಲಿ ನಡೆದ ಏಳನೇ ಅಲಿಪ್ತ ಚಳವಳಿಯ ಶೃಂಗಸಭೆಯ ದೃಶ್ಯಗಳನ್ನು ತೋರಿಸುತ್ತದೆ. ಜಿ೨೦ ಫೋರಮ್ ಅನ್ನು ೧೯೯೯ ರಲ್ಲಿ ಸ್ಥಾಪಿಸಲಾಗಿದ್ದು, ಅದರ ಮೊದಲ ನಾಯಕರ ಸಭೆಯು ೨೦೦೮ ರಲ್ಲಿ ವಾಷಿಂಗ್ಟನ್, ಡಿ.ಸಿ, ನಲ್ಲಿ ನಡೆಯಿತು.

ಅನುವಾದಿಸಿದವರು: ವಿವೇಕ್.ಜೆ

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.