೨೦೧೬ ರ ವೀಡಿಯೋವನ್ನು ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ಜನಸೇನಾ ಕೌನ್ಸಿಲರ್‌ಗಳ ನಡುವಿನ ಜಗಳವೆಂದು ಹಂಚಿಕೊಳ್ಳಲಾಗಿದೆ

ಮೂಲಕ: ರಾಜೇಶ್ವರಿ ಪರಸ
ಅಕ್ಟೋಬರ್ 12 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೧೬ ರ ವೀಡಿಯೋವನ್ನು ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ಜನಸೇನಾ ಕೌನ್ಸಿಲರ್‌ಗಳ ನಡುವಿನ ಜಗಳವೆಂದು ಹಂಚಿಕೊಳ್ಳಲಾಗಿದೆ

ಇತ್ತೀಚೆಗೆ ಮೈತ್ರಿಯ ಪಾಲುದಾರರಾದ ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಪಕ್ಷದ ನಾಯಕರ ನಡುವೆ ಜಗಳ ನಡೆದಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋವನ್ನು ೨೦೧೬ರಲ್ಲಿ ಸೆರೆಹಿಡಿಯಲಾಗಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದ ಇಬ್ಬರೂ ನಾಯಕರು ಟಿಡಿಪಿಗೆ ಸೇರಿದವರು.

ಕ್ಲೈಮ್ ಐಡಿ 65c610db

ಇಲ್ಲಿನ ಹೇಳಿಕೆ ಏನು?

ಭಾರತೀಯ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರು ಸೆಪ್ಟೆಂಬರ್‌ನಲ್ಲಿ ಜನಸೇನಾ ಪಕ್ಷ (ಜೆಎಸ್‌ಪಿ) ತೆಲುಗು ದೇಶಂ ಪಾರ್ಟಿ (ಟಿಡಿಪಿ) ಯೊಂದಿಗಿನ ಮೈತ್ರಿಯಲ್ಲಿ ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ೨೦೨೪ ರ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲಿದೆ ಎಂದು ಘೋಷಿಸಿದ್ದರು. ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೋವೊಂದರಲ್ಲಿ, ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿರುವುದನ್ನು ಕಾಣಬಹುದು ಮತ್ತು ಅಲ್ಲಿದ್ದ ಇತರರು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ವೀಡಿಯೋವನ್ನು, ಅದು ಇತ್ತೀಚೆಗೆ ಟಿಡಿಪಿ ಮತ್ತು ಜೆಎಸ್‌ಪಿ ನಾಯಕರ ನದುವಿನ ಜಗಳವೆಂದು ಹಂಚಿಕೊಳ್ಳಲಾಗಿದೆ. ಈ ವೀಡಿಯೋವನ್ನು ತೆಲುಗಿನಲ್ಲಿ ಬರೆದ (ಇಲ್ಲಿ ಆರ್ಕೈವ್ ಮಾಡಲಾಗಿದೆ), "ಟಿಡಿಪಿ ಪಕ್ಷದ ಕೌನ್ಸಿಲರ್ ಜನಸೇನಾ ಪಕ್ಷದ ಕೌನ್ಸಿಲರ್‌ನ ಬಟ್ಟೆಯನ್ನು ಹರಿದು ಹೊಡೆದಿದ್ದಾರೆ. (sic)"  ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಶೇರ್ ಮಾಡಲಾಗಿದೆ. 

ಇದೇ ರೀತಿಯ ಹೇಳಿಕೆಗಳು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಹಂಚಿಕೊಳ್ಳಲಾಗಿದೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆನ್‌ಲೈನ್‌ನಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ೨೦೧೬ ರಲ್ಲಿ ಸೆರೆಹಿಡಿಯಲಾಗಿದ್ದು ಪ್ರಸ್ತುತ ಜನಸೇನಾ ಪಕ್ಷದ ಯಾವುದೇ ಸದಸ್ಯರನ್ನು ಒಳಗೊಂಡಿಲ್ಲ.

ವಾಸ್ತವಾಂಶಗಳೇನು?

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸುತ್ತಿದ್ದಂತೆ, ಕೆಲವು ಬಳಕೆದಾರರು ಕಾಮೆಂಟ್‌ಗಳಲ್ಲಿ ಅದು ಇತ್ತೀಚಿನದ್ದಲ್ಲ ಆದರೆ ೨೦೧೬ ರದ್ದು ಎಂದು ಗಮನಸೆಳೆದಿದ್ದಾರೆ. ಆಂಧ್ರಪ್ರದೇಶದ ರಾಜಕೀಯ ನಾಯಕರ ನಡುವಿನ ಜಗಳಗಳ ವರದಿಗಳನ್ನು ಹುಡುಕಿದಾಗ, ನಾವು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಅವರ ವೀಡಿಯೋ ವರದಿಯನ್ನು ಕಂಡುಕೊಂಡೆವು, ಅದರ ಶೀರ್ಷಿಕೆ ಹೀಗಿದೆ, "ವೀಡಿಯೋ: ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ಇಬ್ಬರು ಟಿಡಿಪಿ ಕೌನ್ಸಿಲರ್‌ಗಳ ಕೊಳಕು ಹೊಡೆದಾಟ." ಫೆಬ್ರವರಿ ೨೯, ೨೦೧೬ ರಂದು ಹಂಚಿಕೊಂಡ ವರದಿಯಲ್ಲಿ, ಟಿಡಿಪಿ ಕೌನ್ಸಿಲರ್‌ಗಳಾದ ಗುಮ್ಮಡಿ ರಮೇಶ್ ಮತ್ತು ಪಸುಪುಲೇಟಿ ತ್ರಿಮೂರ್ತಿಲು ಅವರು "ಮಿನಿಟ್ಸ್ ಪುಸ್ತಕದ ನಮೂದುಗಳ ಬಗ್ಗೆ ವಾಗ್ವಾದ ನಡೆಸಿದರು, ಅವರಲ್ಲಿ ಒಬ್ಬರು ತಪ್ಪುದಾರಿಗೆಳೆಯುತ್ತಿದ್ದಾರೆಂದು ಆರೋಪಿಸಿದರು" ಎಂದು ಹೇಳಲಾಗಿದೆ. 

ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಸುದ್ದಿ ಸಂಸ್ಥೆ ಎಎನ್‌ಐನ ಎಕ್ಸ್ ಪೋಷ್ಟ್ ಅನ್ನು ಎಂಬೆಡ್ ಮಾಡಿದೆ, ಅದು ವೈರಲ್ ಕ್ಲಿಪ್‌ನಿಂದ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೋವನ್ನು ಪ್ರಕಟಿಸಿದೆ. ಎಎನ್‌ಐ ವೀಡಿಯೋವನ್ನು ವಿಭಿನ್ನ ಕೋನದಿಂದ ತೆಗೆದುಕೊಳ್ಳಲಾಗಿದೆ ಮತ್ತು ಫೆಬ್ರವರಿ ೨೯, ೨೦೧೬ ರಂದು ಎಕ್ಸ್‌ ನಲ್ಲಿ "ವೀಕ್ಷಿಸಿ: ಗುಂಟೂರು ಜಿಲ್ಲೆಯ (ಆಂಧ್ರ ಪ್ರದೇಶ) ತೆನಾಲಿ ಪುರಸಭೆಯಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ೨ ಕೌನ್ಸಿಲರ್‌ಗಳ ನಡುವಿನ ಘರ್ಷಣೆ" ಎಂಬ  ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೀಡಿಯೋ ವೈರಲ್ ಕ್ಲಿಪ್‌ಗಿಂತ ದೀರ್ಘ ಆವೃತ್ತಿಯಲ್ಲಿದೆ ಮತ್ತು ಘಟನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಎನ್‌ಐ ವೀಡಿಯೋ ಮತ್ತು ವೈರಲ್ ಕ್ಲಿಪ್‌ನಲ್ಲಿ, ಹಳದಿ ಶರ್ಟ್‌ನಲ್ಲಿ ಒಬ್ಬರು ಮತ್ತು ಬಿಳಿ ಶರ್ಟ್‌ನಲ್ಲಿ ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನಾವು ನೋಡಬಹುದು. ಹಿನ್ನಲೆಯಲ್ಲಿ ಮರೂನ್ ಬಣ್ಣದ ಪರದೆ ಮತ್ತು ಹತ್ತಿರದಲ್ಲಿ ನಿಂತಿರುವ ಸೀರೆಯುಟ್ಟ ಮಹಿಳೆಯನ್ನು ಎರಡೂ ವೀಡಿಯೋಗಳಲ್ಲಿ ಗುರುತಿಸಬಹುದು.

ವೈರಲ್ ವೀಡಿಯೋ ಮತ್ತು ೨೦೧೬ರ ಸುದ್ದಿ ವೀಡಿಯೋ  ನಡುವಿನ ಹೋಲಿಕೆಯು ಅನೇಕ ಸಾಮ್ಯತೆಗಳನ್ನು ತೋರಿಸುತ್ತದೆ. (ಮೂಲ: ಎಕ್ಸ್‌/ಎಎನ್‌ಐ/ಸ್ಕ್ರೀನ್‌ಶಾಟ್‌ಗಳು)

ಮಾರ್ಚ್ ೧, ೨೦೧೬ ರಂದು ಪ್ರಕಟವಾದ ದಿ ಹಿಂದೂ ಲೇಖನದಲ್ಲಿ ಈ ಘಟನೆಯ ಬಗ್ಗೆ ವರದಿ ಮಾಡಲಾಗಿದೆ. "ನಗರಸಭೆಯ ಸಭೆಯಲ್ಲಿ ಅಂದಿನ ಟಿಡಿಪಿ ಕೌನ್ಸಿಲರ್‌ಗಳ ಹೊಡೆತಗಳ ಕೊಳಕು ದೃಶ್ಯಗಳು ಕಂಡುಬಂದವು" ಎಂದು ವರದಿ ಹೇಳಿದೆ. ಆ ಸಮಯದಲ್ಲಿ ಟಿಡಿಪಿ ಆಂಧ್ರಪ್ರದೇಶದಲ್ಲಿ ಆಡಳಿತ ಪಕ್ಷವಾಗಿತ್ತು. ಈ ಹೋರಾಟದಲ್ಲಿ ಕೌನ್ಸಿಲರ್ ಪಿ ತ್ರಿಮೂರ್ತಿಲು ಅವರ ಅಂಗಿಯೂ ಹರಿದಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ವೀಡಿಯೋದಲ್ಲಿ ಜಗಳವಾಡುತ್ತಿರುವ ಜನರಲ್ಲಿ ಒಬ್ಬರು ಹಳದಿ ಶರ್ಟ್ ಧರಿಸಿದ್ದ ಅಂದಿನ ಕೌನ್ಸಿಲರ್ ಗುಮ್ಮಡಿ ರಮೇಶ್ ಅವರನ್ನು ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿತು. ಈ ವೀಡಿಯೋ ಇತ್ತೀಚಿನದ್ದಲ್ಲ, ೨೦೧೬ರದ್ದು ಎಂದು ಅವರು ಖಚಿತಪಡಿಸಿದ್ದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಈ ಘಟನೆ ನಡೆದಿದೆ. "ನಾವಿಬ್ಬರೂ ಟಿಡಿಪಿ ಪಕ್ಷಕ್ಕೆ ಸೇರಿದ್ದೇವೆ ಮತ್ತು ನಾವು ಕೌನ್ಸಿಲರ್ ಆಗಿದ್ದೇವೆ. ಕ್ಷಣಾರ್ಧದಲ್ಲಿ ಜಗಳ ನಡೆದಿದೆ" ಎಂದು ಅವರು ಹೇಳಿದರು, ಇಬ್ಬರೂ ಇನ್ನೂ ಟಿಡಿಪಿಯಲ್ಲಿದ್ದಾರೆ ಮತ್ತು ಜನಸೇನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ದೃಢಪಡಿಸಿದರು. 

ತೀರ್ಪು

ಹೊಸದಾಗಿ ಮಿತ್ರ ಪಕ್ಷವಾದ ಟಿಡಿಪಿ ಮತ್ತು ಜನಸೇನಾ ಪಕ್ಷದ ಸದಸ್ಯರು ಜಗಳವಾಡಿದರು ಎಂಬ ಹೇಳಿಕೆಯೊಂದಿಗೆ ೨೦೧೬ ರ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರೂ ಕೌನ್ಸಿಲರ್‌ಗಳು ತೆಲುಗು ದೇಶಂ ಪಕ್ಷದವರು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.