ಮೂಲಕ: ರಜಿನಿ ಕೆ.ಜಿ
ಆಗಸ್ಟ್ 4 2023
ಭೂಕುಸಿತದ ನಂತರ ರಸ್ತೆಯ ಮೇಲೆ ನೀರು ಹರಿಯುತ್ತಿರುವುದನ್ನು ತೋರಿಸುವ ಕ್ಲಿಪ್ ೨೦೨೧ ರದ್ದು. ಇದನ್ನು ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ತೆಗೆಯಲಾಗಿದೆ.
ಸಂದರ್ಭ
ಜುಲೈ ೨೪ ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕರ್ನಾಟಕ ಘಟಕದ ಕಾರ್ಯಕಾರಿ ಸಮಿತಿ ಸದಸ್ಯೆ ಕಂಠಿ ಶೆಟ್ಟಿ ಅವರು '#ಚಾರ್ಮಾಡಿಘಾಟ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜಲಾವೃತವಾಗಿರುವ ರಸ್ತೆಯ ಮೇಲೆ ಹೆಚ್ಚಿನ ನೀರು ಹರಿಯುವುದನ್ನು ವೀಡಿಯೋ ತೋರಿಸುತ್ತದೆ. ಭೂಕುಸಿತದಿಂದ ನೀರು ರಸ್ತೆಗೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಫ್ಯಾಕ್ಟ್ ಚೆಕ್ ಪ್ರಕಟಿಸುವ ಸಮಯದಲ್ಲಿ ೫೧,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದ ಶೆಟ್ಟಿ ಅವರ ಟ್ವೀಟ್, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣವಾದ ಚಾರ್ಮಾಡಿ ಘಾಟ್‌ನಲ್ಲಿ ಎಲ್ಲೋ ಪ್ರವಾಹದಂತಹ ಪರಿಸ್ಥಿತಿಯನ್ನು ಹೊಂದಿದೆ ಎಂದು ವೀಡಿಯೋ ತೋರಿಸುತ್ತದೆ ಎಂದು ಸೂಚಿಸುತ್ತದೆ. ಸುದ್ದಿ ಕಿರಣ ಟಿವಿಯಂತಹ ಸ್ಥಳೀಯ ಸುದ್ದಿ ಚಾನೆಲ್‌ಗಳು ಕೂಡ ಇದೇ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿವೆ.
ಆದರೆ, ವೀಡಿಯೋ ಹಳೆಯದಾಗಿದ್ದು, ಕರ್ನಾಟಕದದ್ದಲ್ಲ.
ವಾಸ್ತವವಾಗಿ
ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ಯೂಟ್ಯೂಬ್ (YouTube) ಗೆ ಕರೆದೊಯ್ಯಿತು, ಅಲ್ಲಿ 'ನಮ್ಮ ಕನ್ನಡ ಚಾನೆಲ್ (Namma Kannada Channel)' ಜುಲೈ ೨೪, ೨೦೨೧ ರಂದು ಅದೇ ಕ್ಲಿಪ್ ಅನ್ನು ಹಂಚಿಕೊಂಡಿದೆ. "ಅಂಬೋಲಿ ಘಾಟ್ ರಸ್ತೆಯಲ್ಲಿ ಭಾರೀ ಮಳೆಗೆ ಭೂಕುಸಿತ ಉಂಟಾಗಿದೆ ದಯವಿಟ್ಟು | ಎಚ್ಚರಿಕೆ ವಹಿಸಿ | ಪ್ರಯಾಣವನ್ನು ತಪ್ಪಿಸಿ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿಯ ಯೂಟ್ಯೂಬ್ ಖಾತೆಯಲ್ಲೂ ನಾವು ಅದೇ ವೀಡಿಯೋವನ್ನು ಕಂಡುಕೊಂಡಿದ್ದೇವೆ. ವರದಿಯು ಜುಲೈ ೨೩, ೨೦೨೧ ರಂದು ವೀಡಿಯೋವನ್ನು ಹಂಚಿಕೊಂಡಿದೆ ಮತ್ತು ೧:೩೬ ಸಮಯದಲ್ಲಿ, ನಾವು ವೈರಲ್ ಕ್ಲಿಪ್ ಅನ್ನು ಗುರುತಿಸಬಹುದು. ವೀಡಿಯೋ ವರದಿ ಪ್ರಕಾರ, ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಅಂಬೋಲಿ ಘಾಟ್‌ನಲ್ಲಿ ಭೂಕುಸಿತ ಉಂಟಾಗಿದೆ.
ಗೋವಾ ಫಸ್ಟ್ ನ್ಯೂಸ್ ನಂತಹ ಇತರ ಪ್ರಾದೇಶಿಕ ಸುದ್ದಿ ವಾಹಿನಿಗಳು ಜುಲೈ ೨೦೨೧ ರಲ್ಲಿ ಅದೇ ಮಾಹಿತಿಯೊಂದಿಗೆ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದವು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಜುಲೈ ೨೫ ರಂದು ಟ್ವೀಟ್‌ನಲ್ಲಿ ಈಗ ವೈರಲ್ ಆಗಿರುವ ವೀಡಿಯೋ ಅಂಬೋಲಿ ಘಾಟ್ ನಲ್ಲಿ ನಡೆದ ಘಟನೆಯದ್ದು ಮತ್ತು ಎರಡು ವರ್ಷಗಳ ಹಿಂದೆ ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸಹಜವಾಗಿದೆ ಎಂದು ತಿಳಿಸಿದರು.
ತೀರ್ಪು
ಮಹಾರಾಷ್ಟ್ರದ ಭೂಕುಸಿತದ ಎರಡು ವರ್ಷಗಳ ಹಳೆಯ ವೀಡಿಯೋವನ್ನು ಕರ್ನಾಟಕದ ಚಾರ್ಮಾಡಿ ಘಾಟ್‌ನ ಇತ್ತೀಚಿನ ಕ್ಲಿಪ್ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.