ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿಯಲಾದ ಹಳೆಯ ದೃಶ್ಯಗಳನ್ನು ಚಂದ್ರಯಾನ-೩ರ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ
ಆಗಸ್ಟ್ 22 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿಯಲಾದ ಹಳೆಯ ದೃಶ್ಯಗಳನ್ನು ಚಂದ್ರಯಾನ-೩ರ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ಇತ್ತೀಚಿನದಲ್ಲ - ಇದು ೨೦೨೨ರ ದ್ದು ಮತ್ತು ಚಂದ್ರಯಾನ-೩ ರಿಂದ ಸೆರೆಹಿಡಿಯಲಾಗಿಲ್ಲ.

ಕ್ಲೈಮ್ ಐಡಿ 17bdcf7c

ಸಂದರ್ಭ 

ಚಂದ್ರನತ್ತ ಭಾರತದ ಮೂರನೇ ಮಿಷನ್, ಚಂದ್ರಯಾನ-೩, ಜುಲೈ ೧೪, ೨೦೨೩ ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು. ಈ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯಲ್ಲಿದೆ ಮತ್ತು ಈ ಫ್ಯಾಕ್ಟ್ ಚೆಕ್ ಬರೆಯುವ ಸಮಯದಲ್ಲಿ ವಿಕ್ರಮ್ ಲ್ಯಾಂಡರ್, ಚಂದ್ರಯಾನ-೩ರ ಆರ್ಬಿಟರ್  ನಿಂದ ಬೇರೆಯಾಗಿ ಚಂದ್ರನ ಕಕ್ಷೆಯಲ್ಲಿ ಸುತ್ತುತಿದೆ. ಆಗಸ್ಟ್ ೨೩, ೨೦೨೩ ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದೆ.

ಉಡಾವಣೆಯ ನಂತರ, ಬಾಹ್ಯಾಕಾಶದಿಂದ ಭೂಮಿಯ ವೀಡಿಯೋವನ್ನು ಚಂದ್ರಯಾನ-೩  ಸೆರೆಹಿಡಿದಿದೆ ಎಂದು ಹೇಳಿಕೊಳ್ಳುವ ಪೋಷ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.  ಎಕ್ಸ್‌(X) ನಲ್ಲಿನ (ಈ ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗಿತ್ತು) ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “ಅದ್ಭುತ ನೋಟ #Chandrayan3 #ISRO # isroindia #MOONLANDING #VikramLander @isro. [sic]” ಇದು ಚಂದ್ರಯಾನ-೩ರ ಮೂಲಕ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ಸೂಚಿಸುತ್ತದೆ.

ಆದರೆ, ಈ ವೀಡಿಯೋ ಹಳೆಯದಾಗಿದ್ದು, ಚಂದ್ರಯಾನ-೩ರ  ಉಡಾವಣೆಗೂ ಮುನ್ನ ಕೆಲವು ತಿಂಗಳುಗಳ ಹಿಂದೆಯಿಂದಲೇ ಆನ್‌ಲೈನ್‌ನಲ್ಲಿದೆ.

ವಾಸ್ತವವಾಗಿ 

ಸುಮಾರು ೨೩ ಸೆಕೆಂಡುಗಳಲ್ಲಿ ವೈರಲ್ ವೀಡಿಯೋದ ಕೊನೆಯಲ್ಲಿ ಕಾಣಿಸಿಕೊಳ್ಳುವ ಪಠ್ಯವು ಅಯೋವಾ ವಿಶ್ವವಿದ್ಯಾಲಯಕ್ಕೆ ದೃಶ್ಯಗಳ ಕ್ರೆಡಿಟ್ ನೀಡಲಾಗಿದೆ. ವೀಡಿಯೋದ ಕ್ರೆಡಿಟ್‌ ಗಳ ಪೂರ್ಣರೂಪವು ಕನ್ನಡಕ್ಕೆ ಅನುವಾದಿಸಿದಾಗ ಹೀಗಿದೆ: "ಸೋಮ್ ಇಟಿ - ಕ್ರೆಡಿಟ್: ಅಯೋವಾ ವಿಶ್ವವಿದ್ಯಾಲಯ, ಭೂ ವಿಜ್ಞಾನ ಮತ್ತು ರಿಮೋಟ್ ಸೆನ್ಸಿಂಗ್ ಘಟಕದ ಚಿತ್ರ ಕೃಪೆ, ನಾಸಾ ಜಾನ್ಸನ್ ಬಾಹ್ಯಾಕಾಶ ಕೇಂದ್ರ (ISS067-E-357091-357756)."

ವೀಡಿಯೋದ ಕೊನೆಯಲ್ಲಿ ತೋರಿಸಿರುವ ಕ್ರೆಡಿಟ್‌ಗಳ ಸ್ಕ್ರೀನ್‌ಗ್ರಾಬ್. (ಮೂಲ: ಎಕ್ಸ್/@Badalka24453653)

ಇದು ವೀಡಿಯೋವನ್ನು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ಅಥವಾ (ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ) ದಿಂದ ರೆಕಾರ್ಡ್ ಮಾಡಲಾಗಿದೆ ಎಂದು ಸೂಚಿಸುತ್ತದೆ. ಈ ಅನುಕ್ರಮವನ್ನು ಹುಡುಕುವ ಮೂಲಕ, ಯೂಟ್ಯೂಬ್, ಫೇಸ್‌ಬುಕ್‌, ಇನ್ಸ್ಟಾಗ್ರಾಮ್ ಮತ್ತು ರೆಡ್ಡಿಟ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ "Som ET" ನಿಂದ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಫೇಸ್‌ಬುಕ್‌ನಲ್ಲಿನ ವೆಬ್‌ಸೈಟ್‌ನ “ಅಬೌಟ್” ಪುಟವು “ಕಲಾವಿದ · ಹಾಡು · ವಿಜ್ಞಾನ ಮತ್ತು ತಂತ್ರಜ್ಞಾನ” ಎಂದು ಹೇಳುತ್ತದೆ ಮತ್ತು ಅದರ ಯೂಟ್ಯೂಬ್ ಚಾನಲ್‌ನ ವಿವರಗಳು ಸ್ಥಳವನ್ನು ಬ್ರೆಜಿಲ್ ಎಂದು ತೋರಿಸುತ್ತದೆ.

‘ಸೋಮ್ ಈಟಿ’ ಯ ಫೇಸ್‌ಬುಕ್‌ ಮತ್ತು ಯೂಟ್ಯೂಬ್ ನ "ಅಬೌಟ್" ಪುಟಗಳ ಸ್ಕ್ರೀನ್‌ಗ್ರಾಬ್‌ಗಳು. (ಮೂಲ: ಯೂಟ್ಯೂಬ್/@Som ET, ಫೇಸ್‌ಬುಕ್‌/Som ET)

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಅಕ್ಟೋಬರ್ ೧೩, ೨೦೨೨ ರಂದು ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಈಎಸ್ಎ) ವೆಬ್‌ಸೈಟ್‌ನಲ್ಲಿನ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋದ ವಿವರಣೆಯು ಹೀಗೆ ಹೇಳುತ್ತದೆ, “ಇಎಸ್‌ಎ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರ ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಎರಡನೇ ಕಾರ್ಯಾಚರಣೆಯ ("ಮಿನರ್ವಾ" ) ಸಮಯದಲ್ಲಿ ಮಾಡಿದ ಟೈಮ್‌ಲ್ಯಾಪ್ಸ್ ವೀಡಿಯೋ. ಸಮಂತಾ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಕೊನೆಯ ಬಾರಿ, ನನ್ನೊಂದಿಗೆ ಹಾರಿ! ವಿದಾಯ ಮತ್ತು ಯಾವಾಗಲೂ, ಎಲ್ಲಾ ಮೀನುಗಳಿಗೆ ಧನ್ಯವಾದಗಳು! ” ಸಮಂತಾ ಕ್ರಿಸ್ಟೋಫೊರೆಟ್ಟಿ ಅವರ ಖಾತೆಯಲ್ಲಿ ನಾವು ಅದೇ ಎಕ್ಸ್ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ.

ಹೀಗಾಗಿ, ಈ ವೀಡಿಯೋವನ್ನು ಐಎಸ್ಎಸ್ ನಿಂದ ಸೆರೆಹಿಡಿಯಲಾಗಿದೆ ಮತ್ತು ೨೦೨೨ ರ ಅಕ್ಟೋಬರ್‌ನಲ್ಲಿ ಆನ್‌ಲೈನ್‌ನಲ್ಲಿ ಮೊದಲ ಬಾರಿಗೆ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ವೀಡಿಯೋ ಚಂದ್ರಯಾನ-೩ರ ಉಡಾವಣೆಗೆ ತಿಂಗಳುಗಳ ಮುನ್ನವೇ ಆನ್‌ಲೈನ್‌ನಲ್ಲಿದೆ ಮತ್ತು ಚಂದ್ರಯಾನ-೩ರ ದೃಶ್ಯಗಳಿಗೆ ಸಂಬಂಧಿಸಿಲ್ಲ. ಆಗಸ್ಟ್ ೧೦, ೨೦೨೩ ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಐ ಎಸ್ ಆರ್ ಓ) ಕ್ರಮವಾಗಿ ಲ್ಯಾಂಡರ್ ಇಮೇಜರ್ (ಎಲ್ ಐ) ಕ್ಯಾಮೆರಾ ಮತ್ತು ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (ಎಲ್ ಎಚ್ ವಿ ಸಿ) ಮೂಲಕ ಸೆರೆಹಿಡಿಯಲಾದ ಎರಡು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇಸ್ರೋ ಅಧಿಕೃತವಾಗಿ ಬಿಡುಗಡೆ ಮಾಡಿರುವ ಈ ಚಿತ್ರಗಳು ವೈರಲ್ ವೀಡಿಯೋಗಿಂತ ದೃಷ್ಟಿ ಭಿನ್ನವಾಗಿವೆ.

ತೀರ್ಪು 

ವೈರಲ್ ವೀಡಿಯೋವನ್ನು ೨೦೨೨ ರಲ್ಲಿ ಐಎಸ್‌ಎಸ್‌ನಲ್ಲಿರುವ ಗಗನಯಾತ್ರಿಗಳು ಸೆರೆಹಿಡಿದಿದ್ದಾರೆ ಮತ್ತು ದೃಶ್ಯಗಳನ್ನು ಮೊದಲು ಅದೇ ವರ್ಷದ ಅಕ್ಟೋಬರ್‌ನಲ್ಲಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಯಿತು. ಚಂದ್ರಯಾನ-೩ ಸೆರೆಹಿಡಿದ ಭೂಮಿಯ ಚಿತ್ರವು ದೃಷ್ಟಿಗೋಚರವಾಗಿ ವಿಭಿನ್ನವಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Translated by Vivek J

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.