ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಯುಎಸ್‌ನಲ್ಲಿ 'ವಿಶ್ವದ ಅತಿ ದೊಡ್ಡ ಗ್ರಂಥಾಲಯ' ಎಂದು ಚೀನಾದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಡಿಸೆಂಬರ್ 21 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಯುಎಸ್‌ನಲ್ಲಿ 'ವಿಶ್ವದ ಅತಿ ದೊಡ್ಡ ಗ್ರಂಥಾಲಯ' ಎಂದು ಚೀನಾದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ

ಡಾ. ಅಂಬೇಡ್ಕರ್ ಅವರ ಹೆಸರಿನ ಅಮೇರಿಕನ್ ಲೈಬ್ರರಿಯನ್ನು ತೋರಿಸುವ ಚಿತ್ರಗಳು ಎಂದು ಹೇಳಿಕೊಂಡಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ಚಿತ್ರಗಳು ಚೀನಾದ ಗ್ರಂಥಾಲಯವನ್ನು ತೋರಿಸುತ್ತದೆ. ಯುಎಸ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ವ್ಯಾಪಕವಾಗಿ ತಿಳಿದಿರುವ ಯಾವುದೇ ಗ್ರಂಥಾಲಯ ಇಲ್ಲ.

ಕ್ಲೈಮ್ ಐಡಿ d383347d

ಇಲ್ಲಿನ ಹೇಳಿಕೆಯೇನು?

ಅಮೆರಿಕದಲ್ಲಿ ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿ, ಸಮಾಜ ಸುಧಾರಕ ಮತ್ತು ದೇಶದ ಸಂವಿಧಾನದ ಪ್ರಧಾನ ವಾಸ್ತುಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮೀಸಲಾಗಿರುವ ಗ್ರಂಥಾಲಯವನ್ನು ತೋರಿಸುವುದಾಗಿ ಹೇಳಿಕೊಂಡು ಬೃಹತ್ ಗ್ರಂಥಾಲಯವೊಂದರ ನಾಲ್ಕು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೈರಲ್ ಚಿತ್ರಗಳಲ್ಲಿ ಒಂದು ಕಟ್ಟಡದ ಮಧ್ಯಭಾಗದಲ್ಲಿ ದೊಡ್ಡ ಬಿಳಿ ಗೋಳಾಕಾರದ ರಚನೆಯನ್ನು ತೋರಿಸುತ್ತದೆ. ನೆಲದಿಂದ ಚಾವಣಿಯವರೆಗಿನ ಪುಸ್ತಕದ ಕಪಾಟುಗಳು ಎಲ್ಲಾ ಫೋಟೋಗಳಲ್ಲಿ ಬಿಳಿ ಗೋಡೆಗಳನ್ನು ತೋರಿಸುತ್ತದೆ.

ಒಂದು ಫೇಸ್‌ಬುಕ್ ಖಾತೆಯು ಫೋಟೋಗಳ ಸೆಟ್ ಅನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಅದು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ: "ಭಾರತದ ಉದ್ಧಾರಕ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಮೆರಿಕ ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ತೆರೆದಿದೆ! ಜೈ ಭೀಮ್ ಜೈ ಭಾರತ ಜೈ ಸಂವಿಧಾನ." ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಅಂತಹ ಇತರ ಪೋಷ್ಟ್ ಗಳನ್ನ ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೈರಲ್ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ, ಚಿತ್ರಗಳು ಯು.ಎಸ್‌ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರಿನ ಗ್ರಂಥಾಲಯವನ್ನು ತೋರಿಸುವುದಿಲ್ಲ. ಬದಲಿಗೆ, ಚೀನಾದಲ್ಲಿನ ಟಿಯಾಂಜಿನ್ ಬಿನ್ಹೈ ಗ್ರಂಥಾಲಯವನ್ನು ತೋರಿಸುತ್ತದೆ.

ಚಿತ್ರಗಳು ಏನನ್ನು ತೋರಿಸುತ್ತವೆ?

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ವೈರಲ್ ಫೋಟೋಗಳು ವಾಸ್ತುಶಿಲ್ಪದ ವಿಷಯದಲ್ಲಿ ವಿಶೇಷವಾದ "ಆರ್ಚ್ ಡೈಲಿ," ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಲೇಖನದ ಪ್ರಕಾರ, ಚಿತ್ರಗಳು ಟಿಯಾಂಜಿನ್‌ನ ಬಿನ್‌ಹೈ ಜಿಲ್ಲೆಯಲ್ಲಿರುವ ಟಿಯಾಂಜಿನ್ ಬಿನ್‌ಹೈ ಗ್ರಂಥಾಲಯವನ್ನು ತೋರಿಸುತ್ತವೆ, ಇದು ಚೀನಾದ ಬೀಜಿಂಗ್‌ನ ಹೊರಗಿನ ಕರಾವಳಿ ಮಹಾನಗರವಾಗಿದೆ. ಡಚ್ ಆರ್ಕಿಟೆಕ್ಚರಲ್ ಕಂಪನಿಯಾದ ಎಂ.ವಿ.ಆರ್.ಡಿ.ವಿ ಮತ್ತು ಟಿಯಾಂಜಿನ್ ಅರ್ಬನ್ ಪ್ಲಾನಿಂಗ್ ಅಂಡ್ ಡಿಸೈನ್ ಇನ್‌ಸ್ಟಿಟ್ಯೂಟ್ (ಟಿ.ಯು.ಪಿ.ಡಿ.ಐ) ಯ ಸ್ಥಳೀಯ ವಾಸ್ತುಶಿಲ್ಪಿಗಳ ನಡುವಿನ ಸಹಯೋಗದ ಮೂಲಕ ಗ್ರಂಥಾಲಯವನ್ನು ಪೂರ್ಣಗೊಳಿಸಲಾಗಿದೆ ಎಂದು ಲೇಖನವು ಹೇಳಿದೆ.

ಎಂ.ವಿ.ಆರ್.ಡಿ.ವಿ ಯ ಅಧಿಕೃತ ವೆಬ್‌ಸೈಟ್ ವೈರಲ್ ಪೋಷ್ಟ್ ನಲ್ಲಿರುವ ಎರಡು ಚಿತ್ರಗಳನ್ನು ಒಳಗೊಂಡಿದ್ದು, ಒಂದು ದೊಡ್ಡ ಗೋಳವನ್ನು ತೋರಿಸುತ್ತದೆ ಮತ್ತು ಕೆಲವು ಕಪಾಟಿನ ಮುಂದೆ ಇಬ್ಬರು ಮಹಿಳೆಯರು ನಿಂತಿರುವುದನ್ನು ತೋರಿಸುತ್ತದೆ. ಟಿಯಾಂಜಿನ್ ಬಿನ್ಹೈ ಗ್ರಂಥಾಲಯವು ೩೩,೭೦೦-ಚದರ-ಮೀಟರ್ ಸೌಲಭ್ಯವಾಗಿದ್ದು, ವಿಕಿರಣ ಗೋಲಾಕಾರದ ಸಭಾಂಗಣ ಮತ್ತು ನೆಲದಿಂದ ಚಾವಣಿಯ ಕ್ಯಾಸ್ಕೇಡಿಂಗ್ ಬುಕ್‌ಕೇಸ್‌ಗಳನ್ನು ಹೊಂದಿದೆ ಎಂದು ವೆಬ್‌ಸೈಟ್ ಗಮನಿಸಿದೆ. ಈ ಕಟ್ಟಡದ ನಿರ್ಮಾಣವು ೨೦೧೭ ರಲ್ಲಿ ಪೂರ್ಣಗೊಂಡಿದೆ ಎಂದು ವೆಬ್‌ಸೈಟ್ ಸೂಚಿಸುತ್ತದೆ.

ನವೆಂಬರ್ ೨೦೧೭ ರಲ್ಲಿ, ಸಿಎನ್ಎನ್ ಟಿಯಾಂಜಿನ್ ಬಿನ್ಹೈ ಸಾರ್ವಜನಿಕ ಗ್ರಂಥಾಲಯದ ಕಿರುನೋಟವನ್ನು ಒದಗಿಸುವ ಲೇಖನವನ್ನು ಸಹ ಪ್ರಕಟಿಸಿತು. ವರದಿಯು ಮೇಲೆ ತಿಳಿಸಿದ ಎರಡು ಫೋಟೋಗಳನ್ನು ಒಳಗೊಂಡಿತ್ತು.
 
ನವೆಂಬರ್ ೨೯, ೨೦೧೭ ರಂದು, ಟೈಮ್ ಮ್ಯಾಗಜೀನ್ "ಚೀನಾದ ಫ್ಯೂಚರಿಸ್ಟಿಕ್-ಮತ್ತು ವಿವಾದಾತ್ಮಕ-ಹೊಸ ೧.೨ ಮಿಲಿಯನ್-ಪುಸ್ತಕ ಲೈಬ್ರರಿಗೆ ಒಮ್ಮೆ ಇಣುಕಿ ನೋಡಿ| ಟೈಮ್ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯ ವೀಡಿಯೋವನ್ನು ಬಿಡುಗಡೆ ಮಾಡಿತು. ಅಕ್ಟೋಬರ್ ೧, ೨೦೧೭ ರಂದು ಸಾರ್ವಜನಿಕರಿಗೆ ಅಧಿಕೃತವಾಗಿ ತೆರೆಯಲಾದ ಟಿಯಾಂಜಿನ್ ಬಿನ್ಹೈ ಗ್ರಂಥಾಲಯದ ದೃಶ್ಯಗಳನ್ನು ವೀಡಿಯೋ ಪ್ರದರ್ಶಿಸಿದೆ. ಈ ದೃಶ್ಯಾವಳಿಯು ವೈರಲ್ ಚಿತ್ರಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳಿಗೆ ಹೊಂದಿಕೆಯಾಗಿದೆ. ಕೆಲವು ಕಪಾಟಿನಲ್ಲಿ ಪುಸ್ತಕಗಳನ್ನು ಅನುಕರಿಸುವ ಮುದ್ರಿತ ಅಲ್ಯೂಮಿನಿಯಂ ಪ್ಲೇಟ್‌ಗಳನ್ನು ಜೋಡಿಸಲಾಗಿದೆ ಎಂದು ಟೈಮ್ಸ್ ಪ್ರಕಟಿಸಿದ ವೀಡಿಯೋ ವರದಿ ಹೇಳಿದ್ದು, ಇದನ್ನು ಕೆಲವರು ಟೀಕಿಸಿದ್ದಾರೆ.

ಅಮೇರಿಕಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮೀಸಲಾದ ಗ್ರಂಥಾಲಯವಿದೆಯೇ?

ಲಾಜಿಕಲಿ ಫ್ಯಾಕ್ಟ್ಸ್ ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನ ಯುಎಸ್‌ನಲ್ಲಿ ವ್ಯಾಪಕವಾಗಿ ತಿಳಿದಿರುವ ಅಥವಾ ಗುರುತಿಸಲ್ಪಟ್ಟ ಯಾವುದೇ ಗ್ರಂಥಾಲಯದ  ಉಲ್ಲೇಖವನ್ನು ಕಾಣಲಿಲ್ಲ.

ಆದರೆ, ಭಾರತದ ಹೊರಗೆ ಅಕ್ಟೋಬರ್ ೨೦೨೩ ರಲ್ಲಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆ ಮೇರಿಲ್ಯಾಂಡ್ ಉಪನಗರದಲ್ಲಿ ಅನಾವರಣಗೊಂಡಿತು. ಈ ಪ್ರತಿಮೆಯು ಶ್ವೇತಭವನದ ದಕ್ಷಿಣಕ್ಕೆ ಸುಮಾರು ೨೨ ಮೈಲುಗಳಷ್ಟು ದೂರದಲ್ಲಿರುವ ಅಕೋಕೀಕ್ ಟೌನ್‌ಶಿಪ್‌ನಲ್ಲಿರುವ ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ (ಎಐಸಿ) ನೆಲೆಗೊಂಡಿದೆ. ಎಐಸಿ, ಮುಂಬರುವ ಯೋಜನೆಯಾಗಿದ್ದು, ಗ್ರಂಥಾಲಯ, ಕನ್ವೆನ್ಷನ್ ಸೆಂಟರ್ ಮತ್ತು ಬುದ್ಧ ಉದ್ಯಾನದಂತಹ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.

ವೈರಲ್ ಚಿತ್ರಗಳ ಜೊತೆಗಿನ ಶೀರ್ಷಿಕೆಗಳಿಗೆ ವ್ಯತಿರಿಕ್ತವಾಗಿ, ಲೈಬ್ರರಿ ಆಫ್ ಕಾಂಗ್ರೆಸ್, ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದಂತೆ, ವಿಶ್ವದ ಅತಿದೊಡ್ಡ ಗ್ರಂಥಾಲಯವೆಂದು ಗುರುತಿಸಲ್ಪಟ್ಟಿದೆ ಎಂಬುದನ್ನು ಸಹ ಗಮನಿಸಬೇಕು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಮಾಹಿತಿಯ ಪ್ರಕಾರ, ನವೆಂಬರ್ ೨೦೨೧ ರ ಹೊತ್ತಿಗೆ, ಯುಎಸ್ ಲೈಬ್ರರಿ ಆಫ್ ಕಾಂಗ್ರೆಸ್ ವಿಶ್ವದ ಅತಿದೊಡ್ಡ ಗ್ರಂಥಾಲಯದ ಗುರುತಿಸುವಿಕೆಯನ್ನು ಹೊಂದಿದೆ. ಅಲ್ಲಿನ ಕ್ಯಾಟಲಾಗ್   ೧೭೩,೭೩೧,೪೬೩ ಐಟಂಗಳನ್ನು ಹೊಂದಿದೆ.

ತೀರ್ಪು 

ವೈರಲ್ ಚಿತ್ರಗಳನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರಿನ ಯುಎಸ್ ಲೈಬ್ರರಿಯನ್ನು ಪ್ರತಿನಿಧಿಸುವಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ೨೦೧೭ ರಲ್ಲಿ ಸಾರ್ವಜನಿಕರಿಗೆ ತೆರೆಯಲಾದ ಚೀನಾದ ಒಂದು ಗ್ರಂಥಾಲಯವನ್ನು ಚಿತ್ರಗಳು ತೋರಿಸುತ್ತವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ವಿವೇಕ್.ಜೆ)

Read the English version of this fact-check here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.