False: ಈ ಚಿತ್ರದಲ್ಲಿ ರಾಹುಲ್ ಗಾಂಧಿಯವರ ಜೊತೆಗಿರುವುದು ಬಿಬಿಸಿ ವಾಹಿನಿ ಸಾಕ್ಷ್ಯಚಿತ್ರದ ನಿರ್ಮಾಪಕರಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಫೆಬ್ರವರಿ 1 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
False: ಈ ಚಿತ್ರದಲ್ಲಿ ರಾಹುಲ್ ಗಾಂಧಿಯವರ ಜೊತೆಗಿರುವುದು ಬಿಬಿಸಿ ವಾಹಿನಿ ಸಾಕ್ಷ್ಯಚಿತ್ರದ ನಿರ್ಮಾಪಕರಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಬ್ರಿಟಿಷ್ ರಾಜಕಾರಣಿ ಜೆರೆಮಿ ಕಾರ್ಬಿನ್ ಮತ್ತು ಉದ್ಯಮಿ ಸ್ಯಾಮ್ ಪಿತ್ರೋಡಾ ಅವರೊಂದಿಗೆ ತೆಗೆದ ರಾಹುಲ್ ಗಾಂಧಿಯ ಛಾಯಾ ಚಿತ್ರವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 62b861d5


ಸಂದರ್ಭ 

ಬ್ರಿಟಿಷ್ ರಾಷ್ಟ್ರೀಯ ವಾಹಿನಿಯಾದ ಬಿಬಿಸಿ(BBC) ಸಿದ್ಧಪಡಿಸಿರುವ "ಇಂಡಿಯಾ: ದಿ ಮೋದಿ ಕ್ವೆಷನ್" ಎಂಬ ಶೀರ್ಷಿಕೆಯ ಎರಡು ಭಾಗಗಳ ಸಾಕ್ಷ್ಯಚಿತ್ರವು ಈ ತಿಂಗಳಿನ ಆರಂಭದಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಇದು ದೇಶದಲ್ಲಿ ಅನೇಕ ವಿವಾದಗಳ ಕೇಂದ್ರವಾಗಿದೆ. ೨೦೦೨ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪಾತ್ರವನ್ನು ತನಿಖೆ ಮಾಡುವ ಈ ಸಾಕ್ಷ್ಯಚಿತ್ರದ ಕ್ಲಿಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ಭಾರತ ಸರ್ಕಾರವು ನಿರ್ಬಂಧಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಸಾಕ್ಷ್ಯಚಿತ್ರವನ್ನು, "ಪ್ರಚಾರದ ತುಣುಕು" ಎಂದು ಟೀಕಿಸಿದೆ. ಹಾಗೂ ಇದನ್ನು ಪ್ರದರ್ಶಿಸಲು ಯತ್ನಿಸಿದ ಹಲವಾರು ರಾಜಕೀಯ ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿರೋಧವನ್ನು ಎದುರಿಸಲ್ಪಟ್ಟಿದನ್ನು ವಿರೋಧ ಪಕ್ಷದ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರಾ ಚಳುವಳಿಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಉಲ್ಲೀಖಿಸುತ್ತಾ, "ಮೋದಿ ಸತ್ಯ ಹೊರಬರದಂತೆ ತಡೆಯಲು ಸಾಧ್ಯವಿಲ್ಲ" ಎಂದು ಹೇಳಿದರು.

ಈ ರಾಜಕೀಯ ಬೆಳವಣಿಗೆಗಳ ನಡುವೆ, ಬಿಬಿಸಿ ಸಾಕ್ಷ್ಯಚಿತ್ರವನ್ನು ಕುರಿತು ಹಲವಾರು ತಪ್ಪಾದ ಮಾಹಿತಿಗಳು ಮತ್ತು ನಿರೂಪಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಭಾರತದಲ್ಲಿ "ಗಲಭೆಗಳನ್ನು ಪ್ರಚೋದಿಸುವ" ಉದ್ದೇಶದಿಂದ ಸಾಕ್ಷ್ಯಚಿತ್ರದ ತಯಾರಿಕೆಯ ಹಿಂದೆ ಕಾಂಗ್ರೆಸ್ ಬೆಂಬಲಿತ ಪಿತೂರಿಯ "ಪುರಾವೆ" ಎಂದು ಹೇಳುವ ಛಾಯಾ ಚಿತ್ರ ಒಂದು ವೈರಲ್ ಆಗಿದೆ. ಚಿತ್ರದಲ್ಲಿ ರಾಹುಲ್ ಗಾಂಧಿ ಇಬ್ಬರು ವ್ಯಕ್ತಿಗಳೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವುದನ್ನು ನಾವು ನೋಡಬಹುದು. ಈ ಚಿತ್ರವೂ, ರಾಹುಲ್ ಗಾಂಧಿ ಆರು ತಿಂಗಳ ಹಿಂದೆ ಯುನೈಟೆಡ್ ಕಿಂಗ್‌ಡಮ್‌(U.K) ನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ನಿರ್ಮಾಪಕರನ್ನು ಭೇಟಿಯಾದ ಸಂದರ್ಭವನ್ನು ಬಿಂಬಿಸುತ್ತದೆ ಎಂದು ಹಲವಾರು ಟ್ವಿಟರ್ ಪೋಷ್ಟ್ ಗಳು ನಿರೂಪಿಸುತ್ತವೆ.


ವಾಸ್ತವವಾಗಿ

ವೈರಲ್ ಚಿತ್ರದಲ್ಲಿ ಗಾಂಧಿಯೊಂದಿಗೆ ಕಾಣಿಸಿಕೊಂಡಿರುವ ಇಬ್ಬರು ವ್ಯಕ್ತಿಗಳು ಬ್ರಿಟಿಷ್ ರಾಜಕಾರಣಿ ಜೆರೆಮಿ ಕಾರ್ಬಿನ್ (ಮಧ್ಯ) ಮತ್ತು ಉದ್ಯಮಿ ಹಾಗು ಕಾಂಗ್ರೆಸ್ ಸದಸ್ಯ ಸ್ಯಾಮ್ ಪಿತ್ರೋಡಾ (ಬಲ). ರಿವರ್ಸ್ ಇಮೇಜ್ ಸರ್ಚ್ ಮೂಲಕ, ಈ ಚಿತ್ರವು ಮೇ ೨೦೨೨ ರಲ್ಲಿ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮೇ ೨೩, ೨೦೨೨ ರಂದು, ಇಂಡಿಯನ್ ಓವರ್ಸೀಸ್ ಕಾಂಗ್ರೆಸ್(IOC)- ಭಾರತದ ಹೊರಗೆ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷದ ವಿಭಾಗ, ಅದರ ಅಧಿಕೃತ ಟ್ವಿಟರ್ ಖಾತೆಯಿಂದ ವೈರಲ್ ಚಿತ್ರವನ್ನು ಹಂಚಿಕೊಂಡಿದೆ. ಇದರ ಶೀರ್ಷಿಕೆ, "ನಮ್ಮ ಅಧ್ಯಕ್ಷ @ಸಂಪಿತ್ರೋಡಾ ಲಂಡನ್‌ನಲ್ಲಿ @ರಾಹುಲ್ ಗಾಂಧಿ ಅವರೊಂದಿಗೆ." ಎಂದು ಬರೆದಿದೆ. 

ಕಾರ್ಬಿನ್ ಜೊತೆ ಗಾಂಧಿ ಮತ್ತು ಪಿತ್ರೋಡಾ ಭೇಟಿಯ ಬಗ್ಗೆ ಹಲವಾರು ಮಾಧ್ಯಮಗಳೂ ಸಹ ವರದಿ ಮಾಡಿದ್ದವು. ಮೇ ೨೪, ೨೦೨೨ ರಂದು, ಹಿಂದೂಸ್ತಾನ್ ಟೈಮ್ಸ್ ವರದಿಯು ಇದೇ ಚಿತ್ರವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ: " (ಎಡದಿಂದ ಬಲಕ್ಕೆ) ರಾಹುಲ್ ಗಾಂಧಿ ಅವರೊಂದಿಗೆ ಜೆರೆಮಿ ಕಾರ್ಬಿನ್ ಮತ್ತು ಸ್ಯಾಮ್ ಪಿತ್ರೋಡಾ (ಟ್ವಿಟರ್)." ಮೇ ೨೪ ರಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿ.ಟಿ.ಐ) ವನ್ನು ಉಲ್ಲೇಖಿಸಿ ದಿ ಹಿಂದೂ ಪ್ರಕಟಿಸಿದ ವರದಿಯ ಪ್ರಕಾರ, ಗಾಂಧಿ ಅವರು ಮೇ ೨೩ ರಂದು ಲಂಡನ್‌ನಲ್ಲಿ ಕಾರ್ಬಿನ್ ಮತ್ತು ಪಿತ್ರೋಡಾ ಅವರನ್ನು ಭೇಟಿಯಾಗಿದ್ದ ಸಮಯದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ ಎಂದು ವಿವರಿಸುತ್ತದೆ. ಆ ಸಮಯದಲ್ಲಿ, ಈ ಸಭೆಯು ಭಾರತದಲ್ಲಿ ಗಲಭೆಯನ್ನು ಉಂಟುಮಾಡಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಗಾಂಧಿಯವರು "ಭಾರತದ ವಿರುದ್ಧ" ಅಭಿಪ್ರಾಯಗಳನ್ನು ಹೊಂದಿರುವ ನಾಯಕನನ್ನು ಭೇಟಿ ಮಾಡಿದ್ದಕ್ಕಾಗಿ ಟೀಕಿಸಿದ್ದರು. ೨೦೧೫ ರಿಂದ ೨೦೨೦ ರವರೆಗೆ ಲೇಬರ್ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಕಾರ್ಬಿನ್ ಅವರು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಈ ಸಭೆಯ ಚಿತ್ರವನ್ನು ಹಂಚಿಕೊಂಡ ಬಿಜೆಪಿ ನಾಯಕರು, ಕಾರ್ಬಿನ್ ಅವರ ಅಭಿಪ್ರಾಯಗಳನ್ನು ಗಾಂಧಿ ಅನುಮೋದಿಸಿದ್ದಾರೆಯೇ ಎಂದು ನಿಂದಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬ್ರಿಟಿಷ್ ರಾಜಕಾರಣಿಯೊಂದಿಗೆ ಮೋದಿಯ ಚಿತ್ರವನ್ನು ಪೋಷ್ಟ್ ಮಾಡಿ, ಇದೇ ರೀತಿಯ ನಿರೂಪಣೆಯನ್ನು ಪ್ರಧಾನಿಯವರ ಬಗ್ಗೆಯೂ ಸಹ ಹೇಳಬಹುದೇ ಎಂದು ಪ್ರಶ್ನಿಸಿದ್ದರು.

ಇದರಂತೆ, BBC iPLAYER ವೆಬ್‌ಸೈಟ್ ನಲ್ಲಿ, ಪ್ರಧಾನಿ ಮೋದಿಯವರ ಸಾಕ್ಷ್ಯಚಿತ್ರಕ್ಕೆ ರಿಚರ್ಡ್ ಕುಕ್ಸನ್ ಮತ್ತು ಮೈಕ್ ರಾಡ್‌ಫೋರ್ಡ್ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸುತ್ತದೆ. ಕಾರ್ಬಿನ್ ಬಿಬಿಸಿ ಚಲನಚಿತ್ರದ ನಿರ್ಮಾಪಕ ಅಥವಾ ಬೇರೆ ಯಾವುದೇ ಸಾಮರ್ಥ್ಯದಲ್ಲಿ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಯಾವುದೇ ಉಲ್ಲಾಖನೆಗಳು ಕಂಡುಬಂದಿಲ್ಲ.

ವೈರಲ್ ಚಿತ್ರವು ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ನಿರ್ಮಾಪಕರೊಂದಿಗೆ ಗಾಂಧಿಯನ್ನು ತೋರಿಸುತ್ತಿಲ್ಲ. ಛಾಯಾಚಿತ್ರದಲ್ಲಿರುವುದು ಬ್ರಿಟಿಷ್ ರಾಜಕಾರಣಿ ಜೆರೆಮಿ ಕಾರ್ಬಿನ್ ಎಂದು ಸ್ಪಷ್ಟಾಗಿ ತಿಳಿದು ಬರುತ್ತದೆ .  

ಬಿಬಿಸಿ ಸಾಕ್ಷ್ಯಚಿತ್ರ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸಂಬಂಧವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಯಾವುದೇ ಮಾಧ್ಯಮ ವರದಿಗಳಲ್ಲಿ ಗಾಂಧಿಯವರು ದೇಶದಲ್ಲಿ ಗಲಭೆಗಳನ್ನು ಯೋಜಿಸುವ ಅಥವಾ ಪ್ರಚೋದಿಸುವ ಬಗ್ಗೆ ಮಾತನಾಡಿರುವುದು ಉಲ್ಲೇಖಿಸಲಾಗಿಲ್ಲ.


ತೀರ್ಪು

ಚಿತ್ರವು ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಬ್ರಿಟಿಷ್ ರಾಜಕಾರಣಿ ಜೆರೆಮಿ ಕಾರ್ಬಿನ್ ಅವರು ರಾಹುಲ್ ಗಾಂಧಿಯೊಂದಿಗೆ ನಿಂತಿರುವುದನ್ನು ತೋರಿಸುತ್ತದೆ. ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ನಿರ್ಮಾಪಕರನ್ನು ಗಾಂಧಿ ಭೇಟಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಛಾಯಾಚಿತ್ರ ಸಾಕ್ಷಿಗಳಿಲ್ಲ. ಅದ್ದರಿಂದ ನಾವು ಈ ಹೇಳಿಕೆ ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.