ಮುಸ್ಲಿಮರಿಗೆ ವಿಶೇಷ ಮೀಸಲಾತಿ, ಸಂಪತ್ತು ಹಂಚಿಕೆ: ಕರ್ನಾಟಕ ಬಿಜೆಪಿ ಇಂದ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ತಪ್ಪಾದ ಹೇಳಿಕೆಗಳು

ಮೂಲಕ: ಮೊಹಮ್ಮದ್ ಸಲ್ಮಾನ್
ಏಪ್ರಿಲ್ 25 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮುಸ್ಲಿಮರಿಗೆ ವಿಶೇಷ ಮೀಸಲಾತಿ, ಸಂಪತ್ತು ಹಂಚಿಕೆ: ಕರ್ನಾಟಕ ಬಿಜೆಪಿ ಇಂದ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ತಪ್ಪಾದ ಹೇಳಿಕೆಗಳು

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್.(ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕಾಂಗ್ರೆಸ್ ಪ್ರಣಾಳಿಕೆಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡ ಯಾವುದೇ ನಿಬಂಧನೆಗಳು, ಕಾನೂನುಗಳು ಅಥವಾ ಯೋಜನೆಗಳನ್ನು ಉಲ್ಲೇಖಿಸಿಲ್ಲ.

ಕ್ಲೈಮ್ ಐಡಿ f136545c

ಹೇಳಿಕೆ ಏನು?

ಏಪ್ರಿಲ್ ೨೩ ರಂದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಕರ್ನಾಟಕ ಘಟಕವು ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ, ನಡೆಯುತ್ತಿರುವ ಭಾರತೀಯ ಲೋಕಸಭೆ ಚುನಾವಣೆಯ ಬೆಳಕಿನಲ್ಲಿ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವು ಸಂಪತ್ತು ಹಂಚಿಕೆಯ ಭರವಸೆ, ಮುಸ್ಲಿಮರಿಗೆ ವಿಶೇಷ ಮೀಸಲಾತಿಗಳು, ನೀತಿಗಳು ಮತ್ತು ಉದ್ಯೋಗ ನೇಮಕಾತಿಗಳನ್ನು ನೀಡುವ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎಂದು  ಪೋಷ್ಟ್ ಮಾಡಿದೆ. ಹಾಗು, ಕಾಂಗ್ರೆಸ್ ಪ್ರಣಾಳಿಕೆಯು ಇದೇ ರೀತಿಯ ಹಲವಾರು ವಿಭಜಕ ಕಾರ್ಯಸೂಚಿಗಳನ್ನು ಒಳಗೊಂಡಿದೆ ಎಂದು ಕರ್ನಾಟಕ ಬಿಜೆಪಿ ಘಟಕವು ಪೋಷ್ಟ್ ನಲ್ಲಿ ಹೇಳಿದೆ.

ಕಾಂಗ್ರೆಸ್ ಪ್ರಣಾಳಿಕೆಯು ಹೊಂದಿರುವ ಆಪಾದಿತ ಆರು ಅಂಶಗಳನ್ನು ಬಿಜೆಪಿ ಕರ್ನಾಟಕ ಹೈಲೈಟ್ ಮಾಡಿದೆ.

೧. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಜಾರಿಗೊಳಿಸುವುದು

೨. ಮುಸ್ಲಿಮರಿಗೆ ಸಂಪತ್ತು ಹಂಚಿಕೆ

೩. ಮುಸ್ಲಿಮರಿಗೆ ವಿಶೇಷ ಮೀಸಲಾತಿ

೪. ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ

೫. ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಿಸುವುದು

೬. ಮುಸ್ಲಿಮರನ್ನು ನೇಮಿಸಿಕೊಳ್ಳಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಆದೇಶ

ಈ ಫ್ಯಾಕ್ಟ್-ಚೆಕ್ ಅನ್ನು ಪ್ರಕಟಿಸುವ ಸಮಯದಲ್ಲಿ ಪೋಷ್ಟ್ ೨೭,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿತ್ತು, ಇದು "ಕಾಂಗ್ರೆಸ್ ಪ್ರಣಾಳಿಕೆಯೇ ಅಥವಾ ಮುಸ್ಲಿಂ ಲೀಗ್‌ನ ಪ್ರಣಾಳಿಕೆಯೇ?" ಎಂದು ಪ್ರಶ್ನಿಸಿದೆ. ಅದರ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ವೈರಲ್  ಪೋಷ್ಟ್ ನ ಸ್ಕ್ರೀನ್‌ಶಾಟ್.(ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)

ಏಪ್ರಿಲ್ ೨೧ ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ  ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರಶ್ನಿಸಿದರು ಹಾಗು ಅದು ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಉಲ್ಲೇಖಿಸುತ್ತದೆ ಎಂದು ಆರೋಪಿಸಿದರು. ಸಂಪತ್ತಿನ ಮರುಹಂಚಿಕೆಯ ಕಾಂಗ್ರೆಸ್‌ನ ಆಪಾದಿತ ಯೋಜನೆ ಕುರಿತು ಅವರ ವಿವಾದಾತ್ಮಕ ಹೇಳಿಕೆಗಳು ವೈರಲ್ ಆದ ನಂತರ  ಅನೇಕ ವಿಭಿನ್ನ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುಕೊಳ್ಳಲಾಗಿದೆ.

ನಾವು ಕಾಂಗ್ರೆಸ್ ನ ಪ್ರಣಾಳಿಕೆಯನ್ನು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಪದದಿಂದ ಪದವನ್ನು ಓದಿದೆವು, ಆದರೆ ಕರ್ನಾಟಕ ಬಿಜೆಪಿ ಹೇಳಿದಂತೆ ಆರು ವಿಭಜಕ ಅಜೆಂಡಾಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಕಂಡುಹಿಡಿಯಲಾಗಲಿಲ್ಲ.

ಸತ್ಯ ಏನು? 

ಕರ್ನಾಟಕ ಬಿಜೆಪಿಯ ಹೇಳಿಕೆಗಳನ್ನು ಪರಿಶೀಲಿಸಲು, ನಾವು ಕಾಂಗ್ರೆಸ್ ಪ್ರಣಾಳಿಕೆಯ ವಿವಿಧ ವಿಭಾಗಗಳನ್ನು ಒಂದೊಂದಾಗಿ ಪರಿಶೀಲಿಸಿದ್ದೇವೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಜಾರಿಗೊಳಿಸಲಾಗುವುದೇ?
'ನ್ಯಾಯ ಪತ್ರ' ಎಂಬ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿನ  'ಶಿಕ್ಷಣ' ವಿಭಾಗದ ಅಡಿಯಲ್ಲಿ ಪಕ್ಷವು ದೇಶದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ನಿರ್ದಿಷ್ಟ ಕ್ರಮದ ಅಂಶಗಳ ಭರವಸೆಯನ್ನು ನೀಡಿದೆ; ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಮುಸುಕಿನ ಹಿಜಾಬ್ ಅನ್ನು ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಈ ವಿಭಾಗದ ೨೫ ಅಂಶಗಳಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ ಪ್ರಣಾಳಿಕೆಯು ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ಮಾತನಾಡಿದೆ. 

ಕಾಂಗ್ರೆಸ್ ಪ್ರಣಾಳಿಕೆಯ 'ಶಿಕ್ಷಣ' ವಿಭಾಗದಿಂದ ಸ್ಕ್ರೀನ್‌ಶಾಟ್. (ಮೂಲ: ಕಾಂಗ್ರೆಸ್)

ಮುಸ್ಲಿಮರಿಗೆ ಸಂಪತ್ತು ಹಂಚಿಕೆ?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ 'ಸಂಪತ್ತಿನ ಮರುಹಂಚಿಕೆ' ಕುರಿತು ಯಾವುದೇ ನಿರ್ದಿಷ್ಟ ಉಲ್ಲೇಖವನ್ನು ನಾವು ಕಂಡುಕೊಂಡಿಲ್ಲ. 'ಸಾಮಾಜಿಕ ನ್ಯಾಯ' ವಿಭಾಗದ ಅಡಿಯಲ್ಲಿ, ಜಾತಿಗಳು ಮತ್ತು ಉಪಜಾತಿಗಳ ಸ್ಥಿತಿಯನ್ನು ನಿರ್ಣಯಿಸಲು ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಗಣತಿಯನ್ನು ನಡೆಸುವುದಾಗಿ ಪಕ್ಷವು ಹೇಳಿದೆ ಮತ್ತು ಅದಕ್ಕೆ ಅನುಗುಣವಾಗಿ ಅವುಗಳ ಸುಧಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತದೆ. 

ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣ ಅತ್ಯಗತ್ಯ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರಣಾಳಿಕೆಯಲ್ಲಿ ಪಕ್ಷವು ಅವರಿಗೆ ಸುಲಭವಾಗಿ ಸಾಲ ನೀಡಲು ನೀತಿಯನ್ನು ರೂಪಿಸುವುದಾಗಿ ಸೂಚಿಸಿದೆ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯೋಗ, ಸಾರ್ವಜನಿಕ ಗುತ್ತಿಗೆಗಳು, ಕೌಶಲ್ಯಾಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾರತಮ್ಯವಿಲ್ಲದೆ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶಗಳನ್ನು ಪಡೆಯುವುದನ್ನು ಪಕ್ಷವು ಖಚಿತಪಡಿಸುತ್ತದೆ ಎಂದು ಪ್ರಣಾಳಿಕೆಯ ಮುಂದಿನ ಅಂಶವು ಹೇಳುತ್ತದೆ. ಆದರೆ, ಮುಸ್ಲಿಮರಿಗೆ ಆಸ್ತಿ ಹಂಚುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಏಪ್ರಿಲ್ ೬ ರಂದು ತೆಲಂಗಾಣದಲ್ಲಿ ತಮ್ಮ ಪ್ರಣಾಳಿಕೆ ಬಿಡುಗಡೆ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯು ಹಿಂದುಳಿದ ವರ್ಗಗಳ, ದಲಿತರ, ಬುಡಕಟ್ಟುಗಳ, ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ಮತ್ತು ಅಲ್ಪಸಂಖ್ಯಾತರ, ದೇಶದ ಸಂಪತ್ತಿನಲ್ಲಿ ಅವರ ಪಾಲನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಹಾಗು ಅದೇ ಆಧಾರದ ಮೇಲೆ ಅವರ ಹಕ್ಕುಗಳನ್ನು ಖಚಿತಪಡಿಸಲು ನೆರವಾಗುತ್ತದೆ ಎಂಬುದರ ಕುರಿತು ಮಾತನಾಡಿದ್ದಾರೆ. ಆದರೆ, ಅವರೂ ಕೂಡ ಮುಸ್ಲಿಮರಿಗೆ ಆಸ್ತಿ ಹಂಚಿಕೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ.

ಮುಸ್ಲಿಮರಿಗೆ ವಿಶೇಷ ಮೀಸಲಾತಿ?
ಪ್ರಣಾಳಿಕೆಯಲ್ಲಿನ 'ಸಾಮಾಜಿಕ ನ್ಯಾಯ' ವಿಭಾಗದ ಅಡಿಯಲ್ಲಿ, ಸಂವಿಧಾನದ ತಿದ್ದುಪಡಿಯ ಮೂಲಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಮೇಲಿನ ೫೦ ಪ್ರತಿಶತ ಮಿತಿಯನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

"ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ೧೦ ರಷ್ಟು ಮೀಸಲಾತಿಯನ್ನು ಎಲ್ಲಾ ಜಾತಿಗಳು ಮತ್ತು ಸಮುದಾಯಗಳಿಗೆ ತಾರತಮ್ಯವಿಲ್ಲದೆ ಜಾರಿಗೊಳಿಸಲಾಗುವುದು" ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರಣಾಳಿಕೆಯು ಮುಸ್ಲಿಮರಿಗೆ ನಿರ್ದಿಷ್ಟವಾಗಿ ಯಾವುದೇ ಪ್ರತ್ಯೇಕ ಮೀಸಲಾತಿಯನ್ನು ಭರವಸೆ ನೀಡಿಲ್ಲ.

ಪ್ರಣಾಳಿಕೆಯ 'ಸಾಮಾಜಿಕ ನ್ಯಾಯ' ವಿಭಾಗದಿಂದ ಸ್ಕ್ರೀನ್‌ಶಾಟ್. (ಮೂಲ: ಕಾಂಗ್ರೆಸ್ ಪ್ರಣಾಳಿಕೆ)

ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ?
'ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ' ವಿಭಾಗದ ಅಡಿಯಲ್ಲಿ, ಭಾರತೀಯ ಸಂವಿಧಾನದಲ್ಲಿ "ಒಬ್ಬರ ನಂಬಿಕೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳನ್ನು ಆಚರಿಸುವ ಮೂಲಭೂತ ಹಕ್ಕನ್ನು ಗೌರವಿಸಲು ಮತ್ತು ಎತ್ತಿಹಿಡಿಯಲು" ಕಾಂಗ್ರೆಸ್ ಭರವಸೆ ನೀಡುತ್ತದೆ. ವಿಭಾಗದ ಏಳನೇ ಅಂಶವು "ಪ್ರತಿಯೊಬ್ಬ ನಾಗರಿಕರಂತೆ, ಅಲ್ಪಸಂಖ್ಯಾತರಿಗೂ ಉಡುಗೆ, ಆಹಾರ, ಭಾಷೆ ಮತ್ತು ವೈಯಕ್ತಿಕ ಕಾನೂನುಗಳ ಆಯ್ಕೆಯ ಸ್ವಾತಂತ್ರ್ಯವಿದೆ" ಎಂದು ಪಕ್ಷವು ಖಚಿತಪಡಿಸುತ್ತದೆ ಎಂದು ಹೇಳಿದೆ. ಮುಂದಿನ ಅಂಶವು "ವೈಯಕ್ತಿಕ ಕಾನೂನುಗಳಲ್ಲಿನ ಸುಧಾರಣೆಗಳ" ಬಗ್ಗೆ ಮಾತನಾಡುತ್ತದೆ, ಆದರೆ ಸಂಬಂಧಿಸಿದ ಸಮುದಾಯಗಳ ಒಪ್ಪಿಗೆ ಮತ್ತು ಭಾಗವಹಿಸುವಿಕೆಯೊಂದಿಗೆ ಮಾತ್ರ. ಮುಸ್ಲಿಮರು ಅನುಸರಿಸುವ ವೈಯಕ್ತಿಕ ಕಾನೂನುಗಳ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖವಿಲ್ಲ.

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು' ವಿಭಾಗದಿಂದ ಸ್ಕ್ರೀನ್‌ಶಾಟ್. (ಮೂಲ: ಕಾಂಗ್ರೆಸ್ ಪಾಣಾಳಿಕೆ)

ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಿಸಲಾಗುವುದೇ?
ವೈರಲ್ ಪೋಷ್ಟ್ ನಲ್ಲಿನ ಈ ಹೇಳಿಕೆಯೂ ಕೂಡ ತಪ್ಪು. ಕಾಂಗ್ರೆಸ್ ಪ್ರಣಾಳಿಕೆಯ 'ನ್ಯಾಯಾಂಗ' ವಿಭಾಗದ ಅಡಿಯಲ್ಲಿ ಐದನೇ ಅಂಶವು ಹೇಳುತ್ತದೆ, "ಹೆಚ್ಚು ಮಹಿಳೆಯರು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳುತ್ತಾರೆ." ಪ್ರಣಾಳಿಕೆಯ ಈ ವಿಭಾಗವು ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಿಸುವ ಬಗ್ಗೆ ಮಾತನಾಡುವುದಿಲ್ಲ. ನಾವು ಇಲ್ಲಿ ಅದೇ ಹೇಳಿಕೆಯನ್ನು ಫ್ಯಾಕ್ಟ್-ಚೆಕ್ ಮಾಡಿದ್ದೇವೆ.

ಪ್ರಣಾಳಿಕೆಯ 'ನ್ಯಾಯಾಂಗ' ವಿಭಾಗದಿಂದ ಸ್ಕ್ರೀನ್‌ಶಾಟ್. (ಮೂಲ: ಕಾಂಗ್ರೆಸ್ ಪಾಣಾಳಿಕೆ)

ಮುಸ್ಲಿಮರನ್ನು ನೇಮಿಸಿಕೊಳ್ಳಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ 'ಆದೇಶ'?
ಕಾಂಗ್ರೆಸ್ ತನ್ನ ಪ್ರಣಾಳಿಕೆಯ 'ಯೂಥ್' ವಿಭಾಗದ ಅಡಿಯಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ. ಮೊದಲ ಅಂಶವು ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಯಲ್ಲಿ '೨೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಹೊಂದಿರುವವರು ಅಥವಾ ಕಾಲೇಜು ಪದವೀಧರರಿಗೆ' ಒಂದು ವರ್ಷದ ಅಪ್ಪರೆಂಟಿಸೆಶಿಪ್ ನೀಡಲು ಖಾತರಿಪಡಿಸುತ್ತದೆ. ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಖಾಲಿ ಇರುವ ಸುಮಾರು ೩೦ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಅದರಲ್ಲಿ ಯಾವುದೇ ನಿರ್ದಿಷ್ಟ ಸಮುದಾಯಕ್ಕೆ  ಅಪ್ಪರೆಂಟಿಸೆಶಿಪ್ ಪಾವತಿಸಿವ ಆದ್ಯತೆ ನೀಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಕಾಂಗ್ರೆಸ್ ಪ್ರಣಾಳಿಕೆಯ 'ಸೋಶಿಯಲ್ ಯೂಥ್' ವಿಭಾಗದಿಂದ ಸ್ಕ್ರೀನ್‌ಶಾಟ್.
(ಮೂಲ: ಕಾಂಗ್ರೆಸ್ ಪಾಣಾಳಿಕೆ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗ ಹಾಗು ಶಿಕ್ಷಣದಲ್ಲಿ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಉತ್ತೇಜಿಸಲು 'ವೈವಿಧ್ಯತೆ ಆಯೋಗ'ವನ್ನು ಸ್ಥಾಪಿಸಲು ಕಾಂಗ್ರೆಸ್ ಕರೆ ನೀಡಿದೆ. ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಮುಸ್ಲಿಮರಿಗೆ ಉದ್ಯೋಗ ನೀಡುವಂತೆ ಆದೇಶ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

ತೀರ್ಪು

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಮತ್ತು ನಿಬಂಧನೆಗಳು, ಸಂಪತ್ತು ಹಂಚಿಕೆ, ಕಾನೂನುಗಳು ಅಥವಾ ಯೋಜನೆಗಳನ್ನು ಉಲ್ಲೇಖಿಸಿಲ್ಲ ಎಂಬುದು ನಮ್ಮ ಸಂಶೋಧನೆಯಿಂದ ಸ್ಪಷ್ಟವಾಗಿದೆ. ಹಾಗಾಗಿ ಬಿಜೆಪಿ ಕರ್ನಾಟಕ ಮಾಡಿರುವ ಆರೋಪಗಳು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.