ಈಜಿಪ್ಟ್‌ನಲ್ಲಿ ಅಪಹರಣಕ್ಕೊಳಗಾದ ಹುಡುಗಿಯರ ವೀಡಿಯೋವನ್ನು ಬೆಂಗಳೂರಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ಜನವರಿ 17 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಈಜಿಪ್ಟ್‌ನಲ್ಲಿ ಅಪಹರಣಕ್ಕೊಳಗಾದ ಹುಡುಗಿಯರ ವೀಡಿಯೋವನ್ನು ಬೆಂಗಳೂರಿನ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಬೆಂಗಳೂರಿನಲ್ಲಿ ಹಿಂದೂ ಹುಡುಗಿಯರನ್ನು ಮುಸ್ಲಿಂ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋ ಮತ್ತು ಶೀರ್ಷಿಕೆಯ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅಪಹರಿಸಿದ ಘಟನೆಯ ವೀಡಿಯೋ ಈಜಿಪ್ಟ್‌ನಲ್ಲಿ ನಡೆದದ್ದು. ಈ ಘಟನೆ ಬೆಂಗಳೂರಿಗೆ ಸಂಬಂಧಿಸಿಲ್ಲ.

ಕ್ಲೈಮ್ ಐಡಿ ca6e0b7b

ಇಲ್ಲಿನ ಹೇಳಿಕೆಯೇನು?

ಇಬ್ಬರು ಪುರುಷರು ಲಿಫ್ಟ್‌ನಲ್ಲಿ ಇಬ್ಬರು ಹುಡುಗಿಯರನ್ನು ಅಪಹರಿಸುತ್ತಿರುವುದನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಲಿಫ್ಟ್‌ನಲ್ಲಿ ಇಬ್ಬರು ಹುಡುಗಿಯರನ್ನು ತೋರಿಸುತ್ತದೆ; ಎಲಿವೇಟರ್ ಸ್ಥಗಿತಗೊಳ್ಳುತ್ತಿದ್ದಂತೆ, ಇಬ್ಬರು ಪುರುಷರು ಹುಡುಗಿಯರನ್ನು ಅಪಹರಿಸುವ ಮೊದಲು ಮಾದಕವಸ್ತುಗಳೊಂದಿಗೆ ಪ್ರಜ್ಞಾಹೀನಗೊಳಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ಕರ್ನಾಟಕದ ಬೆಂಗಳೂರಿನಲ್ಲಿ ಇಬ್ಬರು ಹಿಂದೂ ಹುಡುಗಿಯರನ್ನು ಮುಸ್ಲಿಂ ಪುರುಷರು ಅಪಹರಿಸಿದ್ದಾರೆ ಎಂದು ಆರೋಪಿಸಿ ಈ ವಿಡಿಯೋವನ್ನು ಕೋಮು ಕೋನದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ವೀಡಿಯೋವನ್ನು ಒಳಗೊಂಡಿರುವ ಅಂತಹ ಒಂದು ಪೋಷ್ಟ್ ಅನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: "ಕರ್ನಾಟಕ, ಬೆಂಗಳೂರು - ಕ್ಲೋರೋಫಾರ್ಮ್ ಬಳಸುವ ಮೂಲಕ ಜಿಹಾದಿಗಳು ಹಿಂದೂ ಹುಡುಗಿಯರನ್ನು ಲಿಫ್ಟ್‌ನಿಂದ ಹೇಗೆ ಅಪಹರಿಸುತ್ತಿದ್ದಾರೆ ಎಂಬುದನ್ನು ನೋಡಿ... (ಕನ್ನಡಕ್ಕೆ ಅನುವಾದಿಸಲಾಗಿದೆ)." ಸಮಾನವಾದ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಈ ಹೇಳಿಕೆಗಳಿಗೆ ವಿರುದ್ಧವಾಗಿ, ವೀಡಿಯೋ ಈಜಿಪ್ಟ್‌ ಮೂಲದ್ದಾಗಿದೆ ಮತ್ತು ಡಿಸೆಂಬರ್ ೨೦೨೩ ರಲ್ಲಿ ಒಬ್ಬ ವ್ಯಕ್ತಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅಪಹರಿಸಿದ ಘಟನೆಯನ್ನು ತೋರಿಸುತ್ತದೆ. ಈ ಕೃತ್ಯದ ಹಿಂದಿನ ಪ್ರೇರಣೆಯು ಕೌಟುಂಬಿಕ ವಿವಾದವಾಗಿದ್ದು, ಆ ಸಮಯದಲ್ಲಿ ಹುಡುಗಿಯರು ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಈ ಘಟನೆಗೂ ಬೆಂಗಳೂರಿನ ಯಾವುದೇ ಘಟನೆಗೂ ಸಂಬಂಧವಿಲ್ಲ.

ನಾವು ಇದನ್ನು ಹೇಗೆ ಪರಿಶೀಲಿಸಿದ್ದೇವೆ?

ವೈರಲ್ ಕ್ಲಿಪ್‌ನಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಡಿಸೆಂಬರ್ ೨೧, ೨೦೨೩ ರಂದು ಅಲ್ ಅರೇಬಿಯಾ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಷ್ಟ್ ಮಾಡಿದ ವೀಡಿಯೋಗೇ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋ ವೈರಲ್ ಕ್ಲಿಪ್‌ನ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ.

ಅಲ್ ಅರೇಬಿಯಾ ನ್ಯೂಸ್ ವರದಿಯ ಪ್ರಕಾರ, ಈಜಿಪ್ಟ್‌ನಲ್ಲಿ ಹುಡುಗಿಯರನ್ನು ಅಮಲು ಪದಾರ್ಥಗಳನ್ನು ಬಳಸಿ ಅಪಹರಿಸುತ್ತಿರುವ ಈ ವೀಡಿಯೋ ವೈರಲ್ ಆಗಿತ್ತು. ಅವರ ತಂದೆಯೇ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂಬುದು ನಂತರ ತಿಳಿದುಬಂದಿದೆ.

ಈಜಿಪ್ಟಿನ ಸುದ್ದಿ ಸಂಸ್ಥೆಯ ವೆಬ್ಸೈಟ್ ಅಲ್-ಮಸ್ರಿ ಅಲ್-ಯೌಮ್, ಪೊಲೀಸ್ ಮೂಲವನ್ನು ಉಲ್ಲೇಖಿಸಿ ಈ ಘಟನೆಯು ಡಿಸೆಂಬರ್ ೧೩, ೨೦೨೩ ರಂದು ಪೂರ್ವ ಕೈರೋದಲ್ಲಿ ಸಂಭವಿಸಿದೆ ಮತ್ತು ಹೆಣ್ಣುಮಕ್ಕಳ ತಂದೆ, ಒಬ್ಬ ಹೆಣ್ಣುಮಗಳೊಂದಿಗೆ ಮತ್ತೊಂದು ಅರಬ್ ದೇಶಕ್ಕೆ ಓಡಿಹೋಗಿದ್ದಾರೆ ಎಂದು ವರದಿ ಮಾಡಿದೆ.

ಡಿಸೆಂಬರ್ ೨೦, ೨೦೨೩ ರಂದು ಎಕ್ಸ್ ನಲ್ಲಿ ಪ್ರಕಟವಾದ ಈಜಿಪ್ಟ್ ಆಂತರಿಕ ಸಚಿವಾಲಯದ ಹೇಳಿಕೆಯಿಂದ ಹೆಚ್ಚಿನ ಪುರಾವೆಗಳು ಬಂದವು. ತಂದೆ, ಇಬ್ಬರು ಸಹಚರರ ಸಹಾಯದಿಂದ, ವೀಡಿಯೋದಲ್ಲಿ ನೋಡಿದಂತೆ ಅಪಹರಣವನ್ನು ಕಾರ್ಯಗತಗೊಳಿಸಿದರು ಮತ್ತು ಅದೇ ದಿನ ಈಜಿಪ್ಟ್ ತೊರೆದರು ಎಂದು ಅದು ಸ್ಪಷ್ಟಪಡಿಸಿದೆ. ಕೈರೋದ ನಸ್ರ್ ಸಿಟಿಯಲ್ಲಿ ನೆಲೆಸಿರುವ ಬಾಲಕಿಯರ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಮಾಜಿ ಪತಿ ಅಕೌಂಟೆಂಟ್ ತನ್ನ ಒಪ್ಪಿಗೆಯಿಲ್ಲದೆ ಒಬ್ಬ ಮಗಳನ್ನು ಕರೆದೊಯ್ದಿದ್ದಾನೆ ಎಂದು ತಿಳಿಸಿದ್ದಾರೆ. ನಡೆಯುತ್ತಿರುವ ವಿವಾದಗಳ ನಡುವೆ ೨೦೨೨ ರಲ್ಲಿ ದಂಪತಿಗಳು ಬೇರ್ಪಟ್ಟಿದ್ದರು.

ಅಲ್-ಖಲೀಜ್, ಡಿಸೆಂಬರ್ ೨೩, ೨೦೨೩ ರ ವರದಿಯಲ್ಲಿ, ಕಟ್ಟಡದ ಭದ್ರತಾ ಸಿಬ್ಬಂದಿ ಈ ಹಿಂದೆ ತನ್ನ ಹೆಣ್ಣು ಮಕ್ಕಳನ್ನು ಅವರ ತಾಯಿಯಿಂದ ಅಪಹರಿಸುವ ತಂದೆಯ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು ಎಂದು ಹೇಳಿಕೊಂಡಿದೆ.

ವರದಿಯು ಹುಡುಗಿಯರಲ್ಲಿ ಒಬ್ಬರ ಹೇಳಿಕೆಯನ್ನು ಸಹ ಒಳಗೊಂಡಿದೆ, ಆಕೆಯ ತಂದೆ ಮತ್ತು ಆತನ ಸ್ನೇಹಿತ ಲಿಫ್ಟ್ ಬಳಿ ಅವರನ್ನು ಸಂಪರ್ಕಿಸಿದರು ಎಂದು ವಿವರಿಸಿದರು. 
ಅವರ ಪ್ರತಿರೋಧದ ಹೊರತಾಗಿಯೂ ಇಬ್ಬರೂ ಸಹೋದರಿಯರ ಮೇಲೆ ಮಾದಕವಸ್ತುವನ್ನು ಸಿಂಪಡಿಸಲಾಯಿತು.  ಸೆಕ್ಯೂರಿಟಿ ಸಿಬ್ಬಂದಿಯ ಮಧ್ಯಸ್ಥಿಕೆಯಿಂದ ಒಬ್ಬರನ್ನು ಮಾತ್ರ ಉಳಿಸಲಾಗಿದ್ದು, ಅವರ ತಂದೆ ಇನ್ನೊಬ್ಬ ಸಹೋದರಿಯೊಂದಿಗೆ ಟ್ಯಾಕ್ಸಿಯಲ್ಲಿ ಪರಾರಿಯಾಗಿದ್ದಾರೆ.


ತೀರ್ಪು 

ಕರ್ನಾಟಕದ ಬೆಂಗಳೂರಿನಲ್ಲಿ ಹಿಂದೂ ಹುಡುಗಿಯರನ್ನು ಮುಸ್ಲಿಂ ಪುರುಷರು ಅಪಹರಿಸಿದ್ದಾರೆ ಎಂಬ ತಪ್ಪು ಹೇಳಿಕೆಗಳೊಂದಿಗೆ  ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಾಸ್ತವವಾಗಿ ಈಜಿಪ್ಟ್‌ನ ಕೈರೋದಲ್ಲಿ ನಡೆದ ಘಟನೆಯನ್ನು ಈ ವೀಡಿಯೋ ದಾಖಲಿಸುತ್ತದೆ ಎಂದು ನಮ್ಮ ತನಿಖೆಯು ಬಹಿರಂಗಪಡಿಸುತ್ತದೆ. ಒಬ್ಬ ತಂದೆ ತನ್ನ ಹೆಣ್ಣು ಮಕ್ಕಳನ್ನು ಇತರ ಇಬ್ಬರ ಸಹಾಯದಿಂದ ಅಪಹರಿಸುತ್ತಿರುವ ದೃಶ್ಯಗಳು ಈ ವೀಡಿಯೋದಲ್ಲಿ ಕಂಡುಬಂದಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.