ಕರ್ನಾಟಕದ ಫುಟ್ಬಾಲ್ ಆಟಗಾರರು ಮುಖ್ಯಮಂತ್ರಿಯವರ ಮನೆಯ ಹೊರಗೆ ಕಾಯುತ್ತಿರುವ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ
ಜೂನ್ 27 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಫುಟ್ಬಾಲ್ ಆಟಗಾರರು ಮುಖ್ಯಮಂತ್ರಿಯವರ ಮನೆಯ ಹೊರಗೆ ಕಾಯುತ್ತಿರುವ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಹೊರಗೆ ಆಟಗಾರರು ಕಾಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ, ಸಿದ್ದರಾಮಯ್ಯನವರ ನಿವಾಸದ ಮುಂದೆ ಅಲ್ಲ.

ಕ್ಲೈಮ್ ಐಡಿ db3fb9b7

ಸಂದರ್ಭ

ಸಂತೋಷ್ ಟ್ರೋಫಿ ವಿಜೇತರಿಗೆ ತೋರಿದ ಗೌರವದ ಕೊರತೆಯನ್ನು ವ್ಯಕ್ತಿಯೊಬ್ಬರು ಪ್ರಶ್ನಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೂತನವಾಗಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟಗಾರರನ್ನು ಬಿಸಿಲಿನ ತಾಪದಲ್ಲಿ ತಮ್ಮ ನಿವಾಸದ ಹೊರಗೆ ಕಾಯುವಂತೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯದ ಫುಟ್ಬಾಲ್ ಜೆರ್ಸಿಯಲ್ಲಿ ಆಟಗಾರರು ವಿಜೇತರ ಟ್ರೋಫಿಯೊಂದಿಗೆ ಫುಟ್‌ಪಾತ್‌ನಲ್ಲಿ ಕಾಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಈ ಕ್ಲಿಪ್ ಆಟಗಾರರ ಕಡೆಗೆ ತೋರಿದ ಅಗೌರವದ ಬಗ್ಗೆ ವಿಷಾದಿಸುವ ವ್ಯಕ್ತಿಯೊಬ್ಬನ ಹೇಳಿಕೆಯನ್ನು ಸಹ ಒಳಗೊಂಡಿದೆ. "ಅವರು ಶಾಖದಲ್ಲಿ ತಮ್ಮ ಟ್ರೋಫಿಯೊಂದಿಗೆ ಬೀದಿಯಲ್ಲಿ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಯಿತು" ಎಂದು ಆತ ವೀಡಿಯೋದಲ್ಲಿ ಹೇಳಿದ್ದಾನೆ.

ಸಂತೋಷ್ ಟ್ರೋಫಿ ಭಾರತದಲ್ಲಿನ ಫುಟ್ಬಾಲ್ ಪಂದ್ಯಗಳಲ್ಲಿ ಅತಿ ಪ್ರಮುಖವಾದದ್ದು. ೧೯೪೧ ರಲ್ಲಿ ಪ್ರಾರಂಭವಾದ ವಾರ್ಷಿಕ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸರ್ವಿಸಸ್ ಮತ್ತು ರೈಲ್ವೇಗಳಂತಹ ಕೆಲವು ಸರ್ಕಾರಿ ಸಂಸ್ಥೆಗಳ ಭಾಗವಹಿಸುವಿಕೆ ಕಂಡುಬಂದಿದೆ.

ಈ ವರ್ಷ, ಮಾರ್ಚ್ ೪ ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೇಘಾಲಯ ರಾಜ್ಯವನ್ನು ಸೋಲಿಸಿ ಕರ್ನಾಟಕ ತಂಡ ವಿಜೇತರಾಗಿ ಹೊರಹೊಮ್ಮಿತು. ೫೪ ವರ್ಷಗಳ ನಂತರ ವಿಜೇತರ ಪ್ರಶಸ್ತಿಯನ್ನು ಮರಳಿ ಗಳಿಸಿದ ಕರ್ನಾಟಕ ರಾಜ್ಯಕ್ಕೆ ಇದೊಂದು ವಿಶೇಷವಾದ ಗೆಲುವು.

ವಾಸ್ತವವಾಗಿ

ಮುಖ್ಯಮಂತ್ರಿಯನ್ನು ಭೇಟಿಯಾದ ಕರ್ನಾಟಕದ ಆಟಗಾರರ ಕುರಿತು ನಾವು ಕೀವರ್ಡ್ ಸರ್ಚ್ ಮಾಡಿದಾಗ ಸಂತೋಷ್ ಟ್ರೋಫಿ ಫೈನಲ್ ಪಂದ್ಯವನ್ನು ಮಾರ್ಚ್ ೪, ೨೦೨೩ ರಂದು ನಡೆಸಲಾಯಿತು ಎಂಬ ವರದಿಗಳನ್ನು ನೋಡಿದ್ದೇವೆ. ಆಟಗಾರರು ಮಾರ್ಚ್ ೧೭, ೨೦೨೩ ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಇನ್ನೂ ರಾಜ್ಯದಲ್ಲಿ ಅಧಿಕಾರದಲ್ಲಿತ್ತು, ಏಕೆಂದರೆ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಗೆದ್ದು ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತು ಮತ್ತು ಸಿದ್ದರಾಮಯ್ಯ ಅವರು ಮೇ ೨೦, ೨೦೨೩ ರಂದು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದ್ದರಿಂದ ಆಟಗಾರರು ‘ಹೊಸ ಮುಖ್ಯಮಂತ್ರಿ’ಯನ್ನು ಭೇಟಿಯಾಗುತ್ತಿದ್ದಾರೆ ಎಂಬ ಹೇಳಿಕೆ ಸರಿಯಲ್ಲ.

ಹೆಚ್ಚುವರಿಯಾಗಿ, ಕೆಂಪು ಜರ್ಸಿಯಲ್ಲಿರುವ ವ್ಯಕ್ತಿ ಕ್ಯಾಮೆರಾದೊಂದಿಗೆ ಮಾತನಾಡುವ ವೀಡಿಯೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜೂನ್ ೮, ೨೦೨೩ ರಂದು ಧನರಾಜ್ ಧುರ್ವೆ ಎಂಬ ಯೂಟ್ಯೂಬರ್ ತನ್ನ ಚಾನೆಲ್‌ನಲ್ಲಿ ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಧುರ್ವೆ ಅವರು "ಭಾರತ ಮತ್ತು ವಿದೇಶದಲ್ಲಿ ಆಡಿರುವ ಅರೆ-ವೃತ್ತಿಪರ ಫುಟ್ಬಾಲ್ ಆಟಗಾರ ಮತ್ತು ಪರವಾನಗಿ ಪಡೆದ ಕೋಚ್ " ಎಂದು ವಿವರಿಸುತ್ತಾರೆ ಮತ್ತು ಅವರು ಫುಟ್‌ಬಾಲ್‌ ಬಗ್ಗೆ ವೀಡಿಯೋಗಳನ್ನು ಮಾಡುತ್ತಾರೆ.

ನಾವು ಪ್ರತಿಕ್ರಿಯೆಗಾಗಿ ಧುರ್ವೆ ಅವರನ್ನು ಸಂಪರ್ಕಿಸಿದೆವು. ಅವರು ಹೇಳಿದ್ದು, "ಇದು ಸಂಪೂರ್ಣವಾಗಿ ತಪ್ಪಾಗಿ ತೆಗೆದುಕೊಳ್ಳಲಾಗಿದೆ. ಆಟಗಾರರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಮತ್ತು ಈ ನಡುವೆ ಜನರು ಬಿಜೆಪಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ಅರಿವಿಗಾಗಿ ನಾನು ಇದನ್ನು ಮಾತನಾಡಿದ್ದೇನೆ (sic).”

ಕಳೆದ ವಾರ ಈ ಘಟನೆಯ ಬಗ್ಗೆ ತನಗೆ ಮಾಹಿತಿ ನೀಡಿದ ಕರ್ನಾಟಕ ಫುಟ್ಬಾಲ್ ತಂಡದ ಆಟಗಾರ ತಮ್ಮ ವೀಡಿಯೋಗೆ ಮೂಲ ಎಂದು ಅವರು ಹೇಳಿದರು. "ಈ ಘಟನೆ ಮಾರ್ಚ್‌ನಲ್ಲಿ, ಸೌದಿ ಅರೇಬಿಯಾದಲ್ಲಿ ಕರ್ನಾಟಕ ತಂಡ ಸಂತೋಷ್ ಟ್ರೋಫಿ ಗೆದ್ದ ಹಿನ್ನಲೆಯಲ್ಲಿ ಬಿಜೆಪಿ ಸಿಎಂ ತಂಡವನ್ನು ತಮ್ಮ ಮನೆಗೆ ಆಹ್ವಾನಿಸಿದಾಗ ನಡೆದದ್ದು" ಎಂದು ಅವರು ಹೇಳಿದರು.

ಜೂನ್ ೧೨ ರಂದು ಟ್ವೀಟ್ ಮಾಡಿದ ಧುರ್ವೆ, “ರಾಜಕೀಯ ಪಕ್ಷಗಳು ತಮ್ಮ ಸ್ವಂತ ಕಾರ್ಯಸೂಚಿಗಾಗಿ ನನ್ನ ವೀಡಿಯೋವನ್ನು ಬಳಸುತ್ತಿವೆ. ಅದು ಸರಿಯಲ್ಲ. ನಾನು ಫುಟ್ಬಾಲ್ ಆಟಗಾರರ ಪರವಾಗಿ ಮಾತನಾಡಿದ್ದು ಯಾವುದೇ ರಾಜಕೀಯಕ್ಕಾಗಿ ಅಲ್ಲ" ಎಂದು ಹೇಳಿದರು. 

ಐಬಿ ಟೈಮ್ಸ್ ಮತ್ತು ಏಷ್ಯಾನೆಟ್ ನ್ಯೂಸ್‌ನಲ್ಲಿನ ಎರಡು ವರದಿಗಳ ಪ್ರಕಾರ, ಫುಟ್‌ಬಾಲ್ ತಂಡದ ಆಟಗಾರರು ಬೊಮ್ಮಾಯಿ ಅವರೊಂದಿಗಿನ ಸಭೆ ತಡವಾದ ಕಾರಣ ಅವರ ಮನೆಯ ಹೊರಗೆ ಕಾಯಬೇಕಾಯಿತು ಎಂದು ಹೇಳುತ್ತವೆ. "ಟ್ರೋಫಿ ಗೆದ್ದು ಒಂದು ವಾರದ ನಂತರ ಸಿಎಂ ಅಂತಿಮವಾಗಿ ಶುಕ್ರವಾರ ತಂಡವನ್ನು ಭೇಟಿಯಾಗಲು ತಯಾರಾದರು, ಆದರೆ ಅವರ ಅಧಿಕೃತ ನಿವಾಸದ ಒಳಗೆ ಒಂದು ಕಪ್ ಚಹಾದ ಮೇಲೆ ಅಲ್ಲ ಆದರೆ ಅವರ ಮನೆಯ ಹೊರಗಿನ ಫುಟ್‌ಪಾತ್‌ನಲ್ಲಿ" ಎಂದು ಮಾರ್ಚ್ ೧೮, ೨೦೨೩ರ ದಿನಾಂಕದ ಐಬಿ ಟೈಮ್ಸ್ ವರದಿಯು ಹೇಳಿದೆ.

ಆಟಗಾರರು ಬೊಮ್ಮಾಯಿ ಅವರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡುತ್ತಿರುವ ಚಿತ್ರವೂ ವರದಿಯಲ್ಲಿತ್ತು. ಈ ಛಾಯಾಚಿತ್ರದ ಮೂಲಕ ವೀಡಿಯೋದಲ್ಲಿದ್ದ ಕೆಲವರನ್ನು ನಾವು ಗುರುತಿಸಬಹುದು. ಗೂಗಲ್ ಸ್ಟ್ರೀಟ್ ವ್ಯೂನಲ್ಲಿ, ಆಟಗಾರರು ಬೊಮ್ಮಾಯಿ ಅವರ ನಿವಾಸದ ಹೊರಗೆ ಕಾಯುತ್ತಿದ್ದಾರೆಯೇ ಎಂದು ನಾವು ಪರಿಶೀಲಿಸಿದಾಗ ಬೊಮ್ಮಾಯಿ ಅವರ ಮನೆ ವೈರಲ್ ವೀಡಿಯೋದಲ್ಲಿ ಕಂಡುಬರುವ ನಿವಾಸವನ್ನು ಹೋಲುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.

ಮಾರ್ಚ್ ೧೭, ೨೦೨೩ ರಂದು ಐಬಿ ಟೈಮ್ಸ್ ವರದಿಯನ್ನು ಬರೆದ ಪತ್ರಕರ್ತ ಮನುಜಾ ವೀರಪ್ಪ ಅವರು ಕ್ರೀಡಾಪಟುಗಳು ಬೊಮ್ಮಾಯಿ ಅವರ ನಿವಾಸದ ಹೊರಗೆ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ಹೇಳಿ ಹಂಚಿಕೊಂಡ ಟ್ವಿಟರ್ ಥ್ರೆಡ್ ಅನ್ನು ನಾವು ಕಂಡಿದ್ದೇವೆ.

"15 ನಿಮಿಷಗಳ ಸ್ಲಾಟ್ ನೀಡಲಾಗಿದ್ದು, ಚಾಂಪಿಯನ್ ತಂಡವು ಫುಟ್‌ಪಾತ್‌ನಲ್ಲಿ ವಿಜೇತರ ಟ್ರೋಫಿಯೊಂದಿಗೆ ಸಿಎಂ ಮನೆಯ ಹೊರಗೆ ಒಂದು ಗಂಟೆಗೂ ಹೆಚ್ಚು ಕಾಲ ನಿಂತಿತ್ತು" ಎಂದು ಮನುಜಾ ಥ್ರೆಡ್‌ನಲ್ಲಿ ಬರೆದಿದ್ದಾರೆ. ನಾವು ವೈರಲ್ ವೀಡಿಯೋದೊಂದಿಗೆ ಮನುಜಾ ಅವರನ್ನು ಸಂಪರ್ಕಿಸಿದಾಗ ಅದು ಬೊಮ್ಮಾಯಿ ಅವರ ಆಡಳಿತದ ಸಮಯದಲ್ಲಿ ನಡೆದದ್ದು ಎಂದು ಅವರು ಸ್ಪಷ್ಟಪಡಿಸಿದರು.

ತೀರ್ಪು

ಕರ್ನಾಟಕ ಫುಟ್ಬಾಲ್ ಆಟಗಾರರು ಮಾರ್ಚ್ ೨೦೨೩ ರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಹೊರಗೆ ಕಾಯುತ್ತಿರುವ ಹಳೆಯ ವೀಡಿಯೋವನ್ನು ಸಿದ್ದರಾಮಯ್ಯ ಅವರ ನಿವಾಸದ ಹೊರಗೆ ಕಾಯುತ್ತಿರುವಂತೆ ತೋರಿಸಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.