ಕರ್ನಾಟಕದ ಜೋಗ್ ಫಾಲ್ಸ್‌ ನ ವೀಡಿಯೋವನ್ನು ಕೇರಳದಲ್ಲಿನ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ
ಜುಲೈ 14 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಜೋಗ್ ಫಾಲ್ಸ್‌ ನ ವೀಡಿಯೋವನ್ನು ಕೇರಳದಲ್ಲಿನ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ಭಾರೀ ಮಳೆಯಾದ ಹಿನ್ನಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಜೋಗ್ ಫಾಲ್ಸ್ ನ ದೃಶ್ಯವನ್ನು ತೋರಿಸುತ್ತದೆ. ಕೇರಳದ ಅತಿರಪ್ಪಿಲ್ಲಿ ಜಲಪಾತವನ್ನಲ್ಲ.

ಕ್ಲೈಮ್ ಐಡಿ e0a14d50

ಸಂದರ್ಭ

ಕೇರಳದಲ್ಲಿ ಭಾರೀ ಮಳೆಯಾದ ನಂತರ ತುಂಬಿಹರಿಯುತ್ತಿರುವ ಜಲಪಾತವನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಬೃಹತ್ ಜಲಪಾತವೊಂದರ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೇರಳದ ಅತಿ ದೊಡ್ಡ ಜಲಪಾತವಾದ ಅತಿರಪ್ಪಿಲ್ಲಿ ಜಲಪಾತದ ವೀಡಿಯೋ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಒಂದು ಪೋಷ್ಟ್ ಇಂತಹ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, “#ಕೇರಳದ ಚಾಲಕುಡಿಯಲ್ಲಿರುವ ಅತಿರಪ್ಪಿಲ್ಲಿ ಜಲಪಾತ. ಮಳೆಯ ನಂತರ ನಯಾಗ್ರ ಜಲಪಾತದಂತೆ ಕಾಣುತ್ತದೆ. #IncredibleIndia #nature pc: ನನ್ನಿಂದ ಚಿತ್ರೀಕರಿಸಲಾಗಿಲ್ಲ, ಸ್ನೇಹಿತರಿಂದ ಸ್ವೀಕರಿಸಲಾಗಿದೆ," ಮತ್ತು ಪ್ರಕಟಿಸುವ ಸಮಯದಲ್ಲಿ ೨೦೦,೦೦೦ ವೀಕ್ಷಣೆಗಳನ್ನು ಗಳಿಸಿದೆ. ಅಂತಹ ಮತ್ತೊಂದು ಟ್ವೀಟ್ ಹೀಗಿದೆ, “ಇದು ನಯಾಗರಾ ಜಲಪಾತವಲ್ಲ. ಇದು ಕೇರಳದ ಚಾಲಕುಡಿಯಲ್ಲಿರುವ ಅತಿರಪ್ಪಿಲ್ಲಿ ಜಲಪಾತವಾಗಿದೆ. @ tourismgoi ಮತ್ತು @KeralaTourism ಕೆಟ್ಟದಾಗಿದೆ ಮತ್ತು ತಮ್ಮ ಆಸ್ತಿಗಳನ್ನು ಹೇಗೆ ಮಾರ್ಕೆಟ್ ಮಾಡಬೇಕೆಂದು ಗೊತ್ತಿಲ್ಲ.#IncredibleIndia #nature.”

ಮುಂಗಾರು ಮಳೆಯ ಅಬ್ಬರಕ್ಕೆ ಕೇರಳ ತತ್ತರಿಸುತ್ತಿರುವಾಗಲೇ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜುಲೈ ೯ ರವರೆಗೆ, ದಕ್ಷಿಣ ರಾಜ್ಯದಲ್ಲಿ ಮಳೆಯಿಂದಾಗಿ ಕನಿಷ್ಠ ೧೯ ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಗುರುವಾರ ಆರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಾಸ್ತವವಾಗಿ 

ವೀಡಿಯೋದ ಕೀಫ್ರೇಮ್‌ಗಳಲ್ಲಿ ಒಂದರ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಅದೇ ವೀಡಿಯೋವನ್ನು ಗ್ರೀನ್ ಬೆಲ್ಟ್ ಮತ್ತು ರೋಡ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಎರಿಕ್ ಸೋಲ್ಹೀಮ್ ಅವರು ಜುಲೈ ೧೦, ೨೦೨೨ ರಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಇ ಜೊತೆಗಿರುವ ಶೀರ್ಷಿಕೆ, "ಇದು ನಯಾಗರ ಜಲಪಾತವಲ್ಲ... ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ್ ಜಲಪಾತ." ಹಿಂದೂಸ್ತಾನ್ ಟೈಮ್ಸ್ ಜುಲೈ ೧೧, ೨೦೨೨ ರಂದು ಲೇಖನವೊಂದರಲ್ಲಿ ಅವರ ಟ್ವೀಟ್ ಮತ್ತು ವೀಡಿಯೋದ ಸ್ಕ್ರೀನ್‌ಗ್ರಾಬ್ ಅನ್ನು ಸೇರಿಸಿದೆ. ಲೇಖನವು ಕರ್ನಾಟಕದ ಜೋಗ್ ಫಾಲ್ಸ್‌ನ ಇತರ ದೃಶ್ಯಗಳನ್ನೂ ಸಹ ಹಂಚಿಕೊಂಡಿದೆ.

 "ಜೋಗ್ ಫಾಲ್ಸ್ |ಕರ್ನಾಟಕ" ಶೀರ್ಷಿಕೆಯೊಂದಿಗೆ ಭಾರತೀಯ ಪ್ರವಾಸೋದ್ಯಮ ಸಚಿವಾಲಯದ ಅಂತರಾಷ್ಟ್ರೀಯ ಪ್ರವಾಸೋದ್ಯಮ ಅಭಿಯಾನವಾದ ಇನ್‌ಕ್ರೆಡಿಬಲ್ ಇಂಡಿಯಾದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನಾವು ಇದೇ ರೀತಿಯ ವೀಡಿಯೋವನ್ನು ನೋಡಿದ್ದೇವೆ. ಈ ವೀಡಿಯೋದಲ್ಲಿನ ಜಲಪಾತದ ದೃಶ್ಯವು ವೈರಲ್ ವೀಡಿಯೋದಲ್ಲಿನ ಜಲಪಾತದ ದೃಶ್ಯಕ್ಕೆ ಹೊಂದಿಕೆಯಾಗುತ್ತದೆ. ಈ ಎರಡೂ ವೀಡಿಯೋಗಳು ಜಲಪಾತವನ್ನು ಎರಡು ಭಾಗಗಳಾಗಿ ವಿಭಜಿಸುವ ಪರ್ವತದಂತಹ ರಚನೆಯನ್ನು ತೋರಿಸುತ್ತವೆ. ಇದಲ್ಲದೆ, ಯುಟ್ಯೂಬ್‌ನಲ್ಲಿನ ವ್ಲಾಗರ್‌ಗಳು ಹಂಚಿಕೊಂಡಿರುವ ಇತರ ವಿಡಿಯೋಗಳನ್ನು ಪರಿಶೀಲಿಸಿದಾಗ, ಈ ವೀಡಿಯೋ ಜೋಗ್ ಜಲಪಾತದ್ದೇ ಎಂದು ಖಚಿತವಾಗಿದೆ.

ಕೇರಳ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅತಿರಪ್ಪಿಲ್ಲಿ ಜಲಪಾತದ ದೃಶ್ಯಗಳು ಮತ್ತು ವಿವಿಧ ಟ್ರಾವೆಲ್ ವೆಬ್‌ಸೈಟ್‌ಗಳು ವೈರಲ್ ಕ್ಲಿಪ್‌ನಲ್ಲಿ ಸೆರೆಹಿಡಿಯಲಾದ ದೃಶ್ಯಗಳಿಗಿಂತ ವಿಭಿನ್ನವಾಗಿವೆ. ಈ ಜಲಪಾತವು ಎತ್ತರದಲ್ಲಿ ಚಿಕ್ಕದಾಗಿ ಕಾಣುತ್ತದೆ. ವೈರಲ್ ಕ್ಲಿಪ್‌ ನಲ್ಲಿರುವ ಜಲಪಾತದ ಸುತ್ತಲಿನ ಮೂಲಸೌಕರ್ಯವು ಅತಿರಪಿಲ್ಲಿ ಜಲಪಾತದ ಸುತ್ತಲೂ ಲಭ್ಯವಿರುವುದಕ್ಕಿಂತ ಭಿನ್ನವಾಗಿದೆ. ಉದಾಹರಣೆಗೆ, ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಸಂದರ್ಶಕರ ಪ್ರದೇಶದ ಸುತ್ತಲೂ ಮೆಟ್ಟಿಲುಗಳು ಮತ್ತು ಲೋಹದ ರೇಲಿಂಗ್‌ಗಳು ಇಲ್ಲಿ ಕಾಣೆಯಾಗಿವೆ. ಬದಲಾಗಿ, ಅತಿರಪ್ಪಿಲ್ಲಿಯತ್ತ ಮರದ ಬಾರ್‌ಗಳನ್ನು ನೋಡಬಹುದು.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವು ೨೫೩ ಮೀಟರ್ ಎತ್ತರದಿಂದ ಬೀಳುವ ದೇಶದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಹೋಲಿಸಿದರೆ, ಕೇರಳದ ಚಾಲಕುಡಿಯಲ್ಲಿರುವ ಅತಿರಪ್ಪಿಲ್ಲಿ ಜಲಪಾತವು ಚಿಕ್ಕದಾಗಿದೆ ಮತ್ತು ಅದು ೮೦ ಮೀಟರ್ ಎತ್ತರದಿಂದ ಬೀಳುತ್ತದೆ.

"Tourist Places" ಎಂಬ ಫೇಸ್‌ಬುಕ್ ಪುಟದಲ್ಲಿ ಪೋಷ್ಟ್ ಮಾಡಿದ ನಂತರ ಕನಿಷ್ಠ ಅಕ್ಟೋಬರ್ ೨೦೧೯ ರಿಂದ ವೈರಲ್ ಕ್ಲಿಪ್ ಇಂಟರ್ನೆಟ್‌ನಲ್ಲಿ ಲಭ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋ ಈ ಹಿಂದೆಯೂ ವೈರಲ್ ಆಗಿದೆ ಮತ್ತು ದೇಶಾದ್ಯಂತ ಇರುವ ವಿವಿಧ ಜಲಪಾತಗಳಿಗೆ ತಪ್ಪಾಗಿ ಹೋಲಿಸಲಾಗಿದೆ.

ತೀರ್ಪು

ಈ ವೀಡಿಯೋ ಕೇರಳದ ಅತಿರಪ್ಪಿಲ್ಲಿ ಜಲಪಾತದ್ದಲ್ಲ ಬದಲಿಗೆ ಕರ್ನಾಟಕದ ಜೋಗ ಜಲಪಾತದ್ದು. ಇದು ಕನಿಷ್ಠ ಅಕ್ಟೋಬರ್ ೨೦೧೯ ರಿಂದ ಆನ್‌ಲೈನ್‌ನಲ್ಲಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.