ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ವೀಡಿಯೋವನ್ನು ಕರ್ನಾಟಕದ ಉಚಿತ ಬಸ್ ಪ್ರಯಾಣ ಯೋಜನೆಗೆ ತಪ್ಪಾಗಿ ಹೋಲಿಸಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜೂನ್ 27 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ವೀಡಿಯೋವನ್ನು ಕರ್ನಾಟಕದ ಉಚಿತ ಬಸ್ ಪ್ರಯಾಣ ಯೋಜನೆಗೆ ತಪ್ಪಾಗಿ ಹೋಲಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮಹಿಳೆಯು ಅಪಘಾತದಲ್ಲಿ ತನ್ನ ಕೈಯನ್ನು ಕಳೆದುಕೊಂಡಿದ್ದು, ಇದು ಉಚಿತ ಸವಾರಿ ಪಡೆಯಲು ಕಿಟಕಿಯ ಮೂಲಕ ಬಸ್ ಹತ್ತಲು ಹೋದಾಗ ನಡೆದ ಘಟನೆಯಲ್ಲ ಎಂದು ಪೊಲೀಸರ ಎಫ್‌ಐಆರ್ ಹೇಳುತ್ತದೆ.

ಕ್ಲೈಮ್ ಐಡಿ 553fbd61

ಸಂದರ್ಭ

ಕರ್ನಾಟಕವು ಹೊಸದಾಗಿ ಪ್ರಾರಂಭಿಸಿರುವ ‘ಶಕ್ತಿ’ ಯೋಜನೆಯು ಮಹಿಳೆಯರಿಗೆ ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ನೀಡುತ್ತದೆ, ಇದು ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗಳಿಗೆ ಒಳಗಾಗಿದೆ. ಈ ಕ್ರಮವು-ಹೊಸದಾಗಿ ರಚನೆಯಾದ ಕಾಂಗ್ರೆಸ್ ರಾಜ್ಯ ಸರ್ಕಾರವು ಚುನಾವಣೆಯ ಮುನ್ನ ನೀಡಿದ ಖಾತರಿಗಳಲ್ಲಿ ಒಂದಾಗಿದೆ. ಈ ಸರ್ಕಾರವು ಅನೇಕರಿಂದ ಮಹಿಳಾ ಪರ ಎಂದು ಪ್ರಶಂಸಿಸಲ್ಪಟ್ಟಿದೆ, ಕೆಲವರು ಇದು ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯನ್ನು ಹಾಕುತ್ತದೆ ಮತ್ತು 'ಉಚಿತ ಸಂಸ್ಕೃತಿಯನ್ನು' ಉತ್ತೇಜಿಸುತ್ತದೆ ಎಂದು ವಿವಾದಿಸಿದ್ದಾರೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅನೇಕ ವೀಡಿಯೋಗಳು ಮಹಿಳೆಯರು ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಮುಗಿ ಬೀಳುತ್ತಿರುವದನ್ನು ತೋರುತ್ತವೆ. 

ಈ ಹಿನ್ನಲೆಯಲ್ಲಿ ಟ್ವಿಟ್ಟರ್ ನಲ್ಲಿ ವೈರಲ್ ಆದ ವೀಡಿಯೋವೊಂದು, ಮಹಿಳೆಯೊಬ್ಬರು ಉಚಿತ ಪ್ರಯಾಣವನ್ನು ಪಡೆಯಲು ಕಿಟಕಿಯ ಮೂಲಕ ಬಸ್‌ ಹತ್ತಲು ಹೋಗಿ ಅವರ ಬಲಗೈಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತದೆ. ಈ ವೀಡಿಯೋದಲ್ಲಿ ನೋವಿನಿಂದ ಬಳಲುತ್ತಿರುವ ಮಹಿಳೆಯನ್ನು ಕಾಣಬಹುದು, ಮತ್ತು ಅವರ ಕೈ ತುಂಡಾಗಿರುವುದನ್ನು ನೋಡಬಹುದು. ಆ ಮಹಿಳೆಯ ಸುತ್ತ ಜನರು ನಿಂತಿದ್ದು, ಕೆಎಸ್‌ಆರ್‌ಟಿಸಿ (ಕರ್ನಾಟಕದ ರಸ್ತೆ ಸಾರಿಗೆ ನಿಗಮಗಳಲ್ಲಿ ಒಂದಾದ) ಬಸ್‌ ಅನ್ನು ನಾವು ಕಾಣಬಹುದು. ಈ ವೀಡಿಯೋವನ್ನು ಶೇರ್ ಮಾಡಿದ ಪೋಷ್ಟ್ ವೊಂದರ ಶೀರ್ಷಿಕೆ ಹೀಗಿದೆ, "ಕರ್ನಾಟಕದ ಹುಲಿನಹಳ್ಳಿಯಲ್ಲಿ, ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆಯ ತೋಳು ಕತ್ತರಿಸಲ್ಪಟ್ಟಿದೆ. ಉಚಿತ ಬಸ್ ಪ್ರಯಾಣದ ಬೆಲೆ ನಿಮ್ಮ ತೋಳು #Karnataka #FreeBusRide #Congress."

ಆದರೆ, ಉಚಿತ ಬಸ್ ಪ್ರಯಾಣ ಯೋಜನೆಗೆ ವೀಡಿಯೋವನ್ನು ತಪ್ಪಾಗಿ ಲಿಂಕ್ ಮಾಡಲಾಗಿದೆ.

ವಾಸ್ತವವಾಗಿ

ಲಾಜಿಕಲಿ ಫ್ಯಾಕ್ಟ್ಸ್ ನಡೆಸಿದೆ ಸಂಶೋಧನೆಯ ಅನುಸಾರ, ವೀಡಿಯೋದಲ್ಲಿ ಕಂಡುಬರುವ ಗಾಯಾಳು ಮಹಿಳೆ ಬಸ್ ಅಪಘಾತದಲ್ಲಿ ತನ್ನ ಕೈಯನ್ನು ಕಳೆದುಕೊಂಡಿದ್ದಾಳೆ ಮತ್ತು ಕಿಟಕಿಯ ಮೂಲಕ ಬಸ್ ಹತ್ತಲು ಪ್ರಯತ್ನಿಸುತ್ತಿರುವಾಗ ಅಲ್ಲ ಎಂದು ಕಂಡುಬಂದಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ೨೦೨೩ರ ಜೂನ್ ೧೮ ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಳಿ ನಡೆದ ಅಪಘಾತದ ನಂತರದ ಪರಿಣಾಮಗಳನ್ನು ಈ ವೀಡಿಯೋ ತೋರುತ್ತದೆ. ಬಸ್‌ಗೆ ಲಾರಿ ಡಿಕ್ಕಿ ಹೊಡೆದ ನಂತರ, ಇಬ್ಬರು ಮಹಿಳಾ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳುತ್ತದೆ. ಟ್ವೀಟ್ ಪ್ರಕಾರ, ಅಪಘಾತದಲ್ಲಿ ೩೧ ವರ್ಷದ ಶಾಂತಾ ಕುಮಾರಿ ಅವರ ಬಲಗೈ ಕತ್ತರಿಸಲ್ಪಟ್ಟಿದೆ ಮತ್ತು ೫೦ ವರ್ಷದ ರಾಜಮ್ಮ ಅವರ ಬಲಗೈಗೆ ತೀವ್ರ ಗಾಯವಾಗಿದೆ. ಸಂತ್ರಸ್ತರನ್ನು ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಲಾರಿ ಚಾಲಕನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ವೈರಲ್ ವೀಡಿಯೋ ಶಕ್ತಿ ಯೋಜನೆಗೆ ಸಂಬಂಧಿಸಿಲ್ಲ ಎಂದು ಬಿಳಿಗೆರೆ ಪೊಲೀಸರು ಲಾಜಿಕಲಿ ಫ್ಯಾಕ್ಟ್ಸ್‌ಗೆ ಖಚಿತಪಡಿಸಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕರಿಬಸಪ್ಪ ಮಾತನಾಡುತ್ತ, "ಈ ವೀಡಿಯೋ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ, ಕೆಎಸ್‌ಆರ್‌ಟಿಸಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ ಮಹಿಳೆ ಕೈ ಕಳೆದುಕೊಂಡಿದ್ದಾಳೆ ಹೊರತು ಕಿಟಕಿ ಮೂಲಕ ಹತ್ತಿದ ಕಾರಣ ಅಲ್ಲ. "

ಕರ್ನಾಟಕ ರಾಜ್ಯ ಪೊಲೀಸರ ವೆಬ್‌ಸೈಟ್‌ನಲ್ಲಿ ನಾವು ಈ ಘಟನೆಯ ಮೇಲೆ ದಾಖಲಿಸಲಾದ ಎಫ್‌ಐಆರ್ ಅನ್ನು ಕಂಡುಕೊಂಡೆವು. ಗಾಯಾಳು ಮಹಿಳೆ ರಾಜಮ್ಮ ಎಂಬುವವರ ಪತಿ ನಾಗರಾಜ್ ನಾಯ್ಕ ನೀಡಿದ ದೂರಿನ ಮೇರೆಗೆ ಬಿಳಿಗೆರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ ನಲ್ಲಿ ಉಲ್ಲೇಖನೆಯ ಪ್ರಕಾರ, ಲಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳಾ ಪ್ರಯಾಣಿಕರಾದ ಶಾಂತಾ ಕುಮಾರಿ ಮತ್ತು ರಾಜಮ್ಮ ಇಬ್ಬರೂ ತಮ್ಮ ಕೈಗಳನ್ನು ಕಳೆದುಕೊಂಡಿದ್ದಾರೆ. 

ನಾವು ಮಂಡ್ಯ ಸಂಚಾರಿ ಪೊಲೀಸ್ ಠಾಣೆಯನ್ನು ಕೂಡ ಸಂಪರ್ಕಿಸಿದ್ದೇವೆ - ಹುಲ್ಲೇನಹಳ್ಳಿ ಗ್ರಾಮವು ಅವರ ವ್ಯಾಪ್ತಿಗೆ ಬರುತ್ತದೆ. ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳು ವೈರಲ್ ವೀಡಿಯೋ ಈ ಗ್ರಾಮದದ್ದು ಎಂದು ಹೇಳಿಕೊಂಡಿದೆ. ಆದರೆ, ಮಂಡ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಲ್ಲೇನಹಳ್ಳಿ ಅಥವಾ ಇನ್ನಾವುದೇ ಪ್ರದೇಶದಲ್ಲಿ ಇಂತಹ ಘಟನೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ನಮಗೆ ತಿಳಿಸಿದ್ದಾರೆ.

ವೈರಲ್ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಕರ್ನಾಟಕದ ಉಚಿತ ಬಸ್ ಪ್ರಯಾಣ ಯೋಜನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಮೇಲೆ ತಿಳಿಸಿದ ಪುರಾವೆಗಳು ಸ್ಪಷ್ಟಪಡಿಸುತ್ತವೆ.

ತೀರ್ಪು

ರಸ್ತೆ ಅಪಘಾತದಲ್ಲಿ ಕೈ ಕಳೆದುಕೊಂಡ ಮಹಿಳೆಯ ವೀಡಿಯೋವನ್ನು ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.  

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.