ಇಲ್ಲ, ವೈರಲ್ ಚಿತ್ರವು ಮಹಾರಾಷ್ಟ್ರದ ಮುಖ್ಯಮಂತ್ರಿ ರಾಮನವಮಿಯಂದು ಮಾಂಸಾಹಾರ ಊಟವನ್ನು ತಿನ್ನುತ್ತಿರುವುದನ್ನು ತೋರಿಸುವುದಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಏಪ್ರಿಲ್ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ವೈರಲ್ ಚಿತ್ರವು ಮಹಾರಾಷ್ಟ್ರದ ಮುಖ್ಯಮಂತ್ರಿ ರಾಮನವಮಿಯಂದು ಮಾಂಸಾಹಾರ ಊಟವನ್ನು ತಿನ್ನುತ್ತಿರುವುದನ್ನು ತೋರಿಸುವುದಿಲ್ಲ

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ವೀಡಿಯೋದಲ್ಲಿ ಏಕನಾಥ್ ಶಿಂಧೆ ಮತ್ತು ಯೂಟ್ಯೂಬರ್ ಕಾಮಿಯಾ ಜಾನಿ ಅವರು ಬದನೆಕಾಯಿಂದ ತಯಾರಿಸಿದ ಸಸ್ಯಾಹಾರಿ ಊಟವನ್ನು ತಿನ್ನುತ್ತಿರುವುದನ್ನು ಚಿತ್ರಿಸಲಾಗಿದೆ.

ಕ್ಲೈಮ್ ಐಡಿ 7aaf1474

ಹೇಳಿಕೆ ಏನು?

ಮಹಾರಾಷ್ಟ್ರ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಮತದಾನದ ಒಂದು ದಿನ ಮೊದಲು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಹಿಳೆಯೊಂದಿಗೆ ಊಟ ಮಾಡುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಅದು ನಾಯಕರು ರಾಮನವಮಿಯಂದು ಕುರಿ ಮಾಂಸವನ್ನು ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. (೧೮ನೇ ಲೋಕಸಭೆಯ ಮತದಾನವು ಏಪ್ರಿಲ್ ೧೯ ರಂದು ಪ್ರಾರಂಭವಾಯಿತು ಮತ್ತು ಜೂನ್ ೪ ರಂದು ಫಲಿತಾಂಶಗಳನ್ನು ಪ್ರಕಟಿಸುವವರೆಗೆ  ಹಂತವಾಗಿ ನಡೆಯಲಿದೆ.)

ಅಂತಹ ಒಂದು ಪೋಷ್ಟ್(ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಈ ಚಿತ್ರವನ್ನು  ಹಂಚಿಕೊಂಡು ಹೀಗೆ ಬರೆದಿದ್ದಾರೆ, "ರಾಮ ರಾಮ !! ಮಹಾರಾಷ್ಟ್ರ ದ ಸಿಎಂ ಶಿಂಧೆ ಅವರು ಮಾತ್ರ #ಬಾಡೇನಮ್ಮಗಾಡು ಅನ್ನುತ್ತಿದ್ದಾರೆ. ನಾಟಕ ಮಾಡುವ ಭಕ್ತರು ಹಾಗೂ ಮೋದಿ ಈಗ ಎರಡೂ ಕೈಯಲ್ಲಿ ಬಾಯಿ ಬಡಿದುಕೊಳ್ಳಬೇಕು." ಇದೇ ಹೇಳಿಕೆಗಳೊಂಗಿದೆ ಹಂಚಿಕೊಂಡ ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಈ ಚಿತ್ರವನ್ನು ಮಹಾರಾಷ್ಟ್ರದ ಕಾಂಗ್ರೆಸ್ ಸದಸ್ಯರಾದ ಮಂಗೇಶ್ ಡುತೊಂಡೆ ಅವರು 

ಮರಾಠಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದರ ಅನುವಾದವು, "ರಾಮ ನವಮಿಯಂದು ಕುರಿ ಮಾಂಸವನ್ನು ಯಾರು ತಿನ್ನುತ್ತಾರೆ?" ಹೀಗಿದೆ. 

ಕಳೆದ ವರ್ಷ ಶ್ರಾವಣ ಮಾಸದಲ್ಲಿ ಹಲವಾರು ವಿರೋಧ ಪಕ್ಷದ ನಾಯಕಾರು ಕುರಿ ಮಾಂಸವನ್ನು ತಿಂದಿದ್ದ ಆರೋಪದ ಮೇಲೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಟೀಕಿಸಿ ಮಾತನಾಡಿದ ಕೆಲವೇ ದಿನಗಳಲ್ಲಿ ಈ ಹೇಳಿಕೆಗಳು ಬಂದಿವೆ.

ಆದರೆ, ವೈರಲ್ ಚಿತ್ರವನ್ನು ಭಾರತೀಯ ಯೂಟ್ಯೂಬರ್ ಕಮಿಯಾ ಜಾನಿಯ ಸಂದರ್ಶನದಲ್ಲಿ ತೆಗೆದುಕೊಳ್ಳಲಾಗಿದೆ, ಅದು ಶಿಂಧೆ ಅವರು ಸಸ್ಯಾಹಾರಿ ಊಟವನ್ನು ಸೇವಿಸುವುದನ್ನು ತೋರಿಸುತ್ತದೆ. ಚಿತ್ರವು ಜಾನಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ 'ಕರ್ಲಿ ಟೇಲ್ಸ್' ನಲ್ಲಿ ಅಪ್‌ಲೋಡ್ ಮಾಡಿದ ತುಣುಕಿನ ಭಾಗವಾಗಿದೆ. 

ನಾವು ಕಂಡುಹಿಡಿದದ್ದು ಏನು?

ವೈರಲ್ ಚಿತ್ರದಲ್ಲಿರುವ ಮಹಿಳೆ ಕಾಮಿಯಾ ಜಾನಿ, ಜನಪ್ರಿಯ ಚಾನೆಲ್ 'ಕರ್ಲಿ ಟೇಲ್ಸ್' ಅನ್ನು ನಡೆಸುತ್ತಿರುವ ಭಾರತೀಯ ಯೂಟ್ಯೂಬರ್.  ಈ ಚಾನೆಲ್ ಆಹಾರ ಮತ್ತು ಪ್ರಯಾಣದ ವಿಷಯಕ್ಕೆ ಸಂಬಂಧಪಟ್ಟಂತೆ ವೀಡಿಯೋಗಳನ್ನು ಹೊಂದಿದೆ ಹಾಗು ಆಕೆಯ ವೀಡಿಯೋಗಳಲ್ಲಿ ರಾಜಕಾರಣಿಗಳು, ನಟರು ಮತ್ತು ಪ್ರಖ್ಯಾತ ವ್ಯಕ್ತಿಗಳು ಅತಿಥಿಗಳಾಗಿದ್ದಾರೆ. ನಾವು ನಂತರ ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದೆವು  ಮತ್ತು ಏಪ್ರಿಲ್ ೧೮ ರಂದು ಅಪ್‌ಲೋಡ್ ಮಾಡಿದ ವೀಡಿಯೋದಲ್ಲಿ ಏಕನಾಥ್ ಶಿಂಧೆಯವರನ್ನು ಒಳಗೊಂಡಿರುವುದು ಕಂಡುಬಂದಿದೆ. "ರಾಮ ನವಮಿಯ ಮಂಗಳಕರ ದಿನದಂದು, ನಾನು ಮಹಾರಾಷ್ಟ್ರದ ಸಿಎಂ ಶ್ರೀ ಏಕನಾಥ್ ಶಿಂಧೆ ಅವರೊಂದಿಗೆ ಅತ್ಯಂತ ಹೃತ್ಪೂರ್ವಕ ವೆಜ್ ಸಾವೋಜಿ ಊಟವನ್ನು ಆನಂದಿಸಿದೆ" ಎಂದು ವೀಡಿಯೋ ಶೀರ್ಷಿಕೆ ಹೇಳಿದೆ. ವೀಡಿಯೋವನ್ನು ಚಿತ್ರೀಕರಿಸಲಾದ ಸ್ಥಳವನ್ನು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಉಮ್ರೆಡ್ ಪಟ್ಟಣ ಎಂದು ಉಲ್ಲೇಖಿಸಲಾಗಿದೆ.

ವೀಡಿಯೋದಲ್ಲಿ, ಕಾಮಿಯಾ ಮತ್ತು ಶಿಂಧೆ ವೈರಲ್ ಚಿತ್ರದಲ್ಲಿರುವಂತೆಯೇ ಅದೇ ಉಡುಪನ್ನು ಧರಿಸಿರುವುದನ್ನು ಕಾಣಬಹುದು, ಇದು ವೈರಲ್ ಚಿತ್ರವನ್ನು ಇದೇ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಥಾಪಿಸುತ್ತದೆ. ವೀಡಿಯೋದಲ್ಲಿ, ಭೋಜನವು- ಬದನೆಕಾಯಿ ಭರ್ತಾ, ಬದನೆಕಾಯಿ ಪಲ್ಯ, ಮತ್ತು 'ಪಟೋಡಿ'- ಬೇಳೆ ಹಿಟ್ಟಿನಿಂದ ಮಾಡಿದ ಸಸ್ಯಾಹಾರಿ ಆಹಾರದಂತಹ ಪದಾರ್ಥಗಳನ್ನು ಒಳಗೊಂಡಿದೆ ಎಂದು ಶಿಂಧೆ ವಿವರಿಸುತ್ತಾರೆ. ಅವರು ಯಾವುದೇ ಮಾಂಸ ಆಧಾರಿತ ಖಾದ್ಯವನ್ನು ಉಲ್ಲೇಖಿಸಲಿಲ್ಲ. ಜಾನಿ ಕೂಡ ಮಟನ್ ಅಥವಾ ಇತರ ಯಾವುದೇ ಮಾಂಸದ ಖಾದ್ಯವನ್ನು ತಿನ್ನುವ ಅಥವಾ ಆನಂದಿಸುವ ಬಗ್ಗೆ ಏನನ್ನೂ ಹೇಳಲಿಲ್ಲ.

ನಂತರ  ಅವರಿಬ್ಬರೂ ತಿನ್ನುವ ಊಟವನ್ನು ತಯಾರಿಸಲು ಬಳಸಿದ  ಬದನೆಕಾಯಿ ಮತ್ತು ಇತರ ತರಕಾರಿಗಳನ್ನು ಮಹಿಳೆಯರು ಬೇಯಿಸುವುದು ಮತ್ತು ಸಿಪ್ಪೆ ತೆಗೆಯುವುದನ್ನು ವೀಡಿಯೋ ತೋರಿಸುತ್ತದೆ. ಯಾವುದೇ ಸಮಯದಲ್ಲಿ ಅವರು ಯಾವುದೇ ಮಾಂಸವನ್ನು ತಯಾರಿಸುವುದನ್ನು ತೋರಿಸಿಲ್ಲ.

ಅದೇ ವೀಡಿಯೋವನ್ನು ಕರ್ಲಿ ಟೇಲ್ಸ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ  ಅಪ್‌ಲೋಡ್ ಮಾಡಲಾಗಿದೆ. ಇಲ್ಲೂ ಕೂಡ ಶಿಂಧೆ ಮತ್ತು ಜಾನಿ ಸಸ್ಯಾಹಾರಿ ಊಟವನ್ನು ಸೇವಿಸಿದ್ದಾರೆ ಎಂದು ವೀಡಿಯೋ ಶೀರ್ಷಿಕೆಯಲ್ಲಿ ಹೇಳಲಾಗಿದೆ.

ಸುದ್ದಿ ವರದಿಗಳ ಪ್ರಕಾರ, ರಾಮ್‌ಟೆಕ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಪರ್ವೆ ಪರ ಪ್ರಚಾರದ ಕೊನೆಯ ಹಂತದಲ್ಲಿ ಏಕನಾಥ್ ಶಿಂಧೆ ಅವರು ಏಪ್ರಿಲ್ ೧೭ ಮತ್ತು ೧೮ ರಂದು ನಾಗ್ಪುರದಲ್ಲಿ ರ‍್ಯಾಲಿಗಳನ್ನು ನಡೆಸಿದರು. ಕರ್ಲಿ ಟೇಲ್ಸ್‌ನ ವೀಡಿಯೋ ವಿವರಣೆಯಲ್ಲಿ ಸ್ಥಳವೆಂದು ಉಲ್ಲೇಖಿಸಲಾದ ಅದೇ ಪಟ್ಟಣವಾದ ನಾಗ್ಪುರಕ್ಕೆ ಅವರ ಇತ್ತೀಚಿನ ಭೇಟಿಯ ಸಮಯದಲ್ಲಿ ಪ್ರಶ್ನೆಯಲ್ಲಿರುವ ಕ್ಲಿಪ್ ಅನ್ನು ಚಿತ್ರೀಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ.

ತೀರ್ಪು

ಯೂಟ್ಯೂಬರ್ ಕಾಮಿಯಾ ಜಾನಿ ಅಪ್‌ಲೋಡ್ ಮಾಡಿದ ವೀಡಿಯೋದಿಂದ ವೈರಲ್ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿ ಬದನೆಕಾಯಿಂದ  ತಯಾರಿಸಿದ ವಿವಿಧ ಪದಾರ್ಥಗಳನ್ನು ಏಕನಾಥ್ ಶಿಂಧೆ ಅವರು ಸಸ್ಯಾಹಾರಿ ಊಟವನ್ನು ಮಾಡುತ್ತಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.