ಇಲ್ಲ, ಕರ್ನಾಟಕದ ಹೊಸ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟಕ್ಕೆ ಮೊಟ್ಟೆಯನ್ನು ಹೊಸದಾಗಿ ಸೇರಿಸಿಲ್ಲ

ಮೂಲಕ: ರಜಿನಿ ಕೆ.ಜಿ
ಜುಲೈ 3 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಕರ್ನಾಟಕದ ಹೊಸ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟಕ್ಕೆ ಮೊಟ್ಟೆಯನ್ನು ಹೊಸದಾಗಿ ಸೇರಿಸಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನು ೨೦೨೧ ರಲ್ಲಿ ಪ್ರಾರಂಭಿಸಲಾಯಿತು, ೨೦೨೨ ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಯಿತು.

ಕ್ಲೈಮ್ ಐಡಿ 7b97bae3

ಸಂದರ್ಭ
ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯ ಭಾಗವಾಗಿ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ಪರಿಚಯಿಸಿದೆ ಎಂದು ಹೇಳುವ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. 

ಮೇ ತಿಂಗಳಲ್ಲಿ ನಡೆದ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ದೊಡ್ಡ ಗೆಲುವಿನ ನಂತರ ಸರ್ಕಾರವನ್ನು ರಚಿಸಿದ ನಂತರ ಇದು ಶುರುವಾಗಿದೆ. ಪೋಷ್ಟ್ ನಲ್ಲಿ, “ಕರ್ನಾಟಕದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ಮತ್ತು ಬಾಳೆಹಣ್ಣು ಸೇರಿಸಲಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಾಗಾಗುವುದಿಲ್ಲ. ಕಾಂಗ್ರೆಸ್ ಎಂದರೆ ಜನ ಕಲ್ಯಾಣ. ಬಿಜೆಪಿ ಜನರನ್ನು ಲೂಟಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದೆ. ವ್ಯತ್ಯಾಸ (sic)” ಎಂದು ಬರೆಯಲಾಗಿದೆ.

ಈ ಟ್ವೀಟ್‌ನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮನ್ನಣೆ ನೀಡಲಾಗಿದೆ ಮತ್ತು ರಾಜ್ಯದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಕೊಡದಿರುವುದಕ್ಕೆ ಹಿಂದಿನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರವನ್ನು ಟ್ವೀಟ್ ಖಂಡಿಸುತ್ತದೆ.

ಆದರೆ, ಈ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ. ೨೦೨೧ ರಲ್ಲಿ ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಪರಿಚಯಿಸಲಾಯಿತು, ೨೦೨೩ ರಲ್ಲಿ ಅಲ್ಲ.

ವಾಸ್ತವವಾಗಿ

ಡಿಸೆಂಬರ್ ೨೦೨೧ ರಲ್ಲಿ, ಬಿಜೆಪಿ-ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಕರ್ನಾಟಕ ಸರ್ಕಾರವು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಏಳು ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಸೇರಿಸಲು ಪ್ರಾಯೋಗಿಕ ಕಾರ್ಯಕ್ರಮವನ್ನು ಆದೇಶಿಸಿತು. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ೧ ರಿಂದ ೮ ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ೪೬ ದಿನಗಳ ಕಾಲ ಬೇಯಿಸಿದ ಮೊಟ್ಟೆಗಳನ್ನು ಊಟದ ಜೊತೆ ನೀಡುವಂತೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಬಿ.ಸಿ.ನಾಗೇಶ್ ಅವರು ಡಿಸೆಂಬರ್ ೬, ೨೦೨೧ ರಂದು "ಈ ಮಕ್ಕಳಿಗೆ ಕೆಲವು ವಿಶೇಷ ಪ್ರೊಟೀನ್ ಯುಕ್ತ ಆಹಾರವನ್ನು ನೀಡುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಹೆಚ್ಚುವರಿ ಹಣವನ್ನು ನೀಡಿದೆ" ಎಂದು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ದಿ ನ್ಯೂಸ್ ಮಿನಿಟ್ ಪ್ರಕಾರ, ಜುಲೈ ೨೦, ೨೦೨೨ ರಂದು, ಮೊಟ್ಟೆಗಳನ್ನು ಸೇರಿಸುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಿದೆ ಎಂದು ಅಧ್ಯಯನವು ಬಹಿರಂಗಪಡಿಸಿದ ನಂತರ, ಬಿಜೆಪಿ ಸರ್ಕಾರವು ರಾಜ್ಯಾದ್ಯಂತ ೪೬ ದಿನಗಳ ಕಾಲ ೧ ರಿಂದ ೮ ನೇ ತರಗತಿಯವರೆಗೆ ಓದುತ್ತಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ (ಶೇಂಗಾ ಚಿಕ್ಕಿ) ನೀಡುವ ಪ್ರಾಯೋಗಿಕ ಕಾರ್ಯಕ್ರಮವನ್ನು ಜಾರಿಗೆ ತರಲು ಆದೇಶಿಸಿತು.

ಶಾಲೆಗಳಿಗೆ ಉತ್ತಮ ಗುಣಮಟ್ಟದ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ಮಾತ್ರ ಪೂರೈಸಲು ಸರ್ಕಾರ ಆದೇಶಿಸಿದೆ ಎಂದು ವರದಿಯಲ್ಲಿ ಸೇರಿಸಲಾಗಿದೆ, ಖರೀದಿ ನಿರ್ಧಾರವನ್ನು ಶಾಲೆಗೆ ಬಿಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ವೆಚ್ಚವನ್ನು ೬೦:೪೦ ರ ಅನುಪಾತದಲ್ಲಿ ವಿಂಗಡಿಸಿದೆ. ವಾರಕ್ಕೆ ಎರಡು ಬಾರಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿತ್ತು ಎಂದು ದಿ ಹಿಂದೂ ವರದಿ ಮಾಡಿದೆ.

ಶಾಲಾ ಶಿಕ್ಷಣ ಇಲಾಖೆಯ ಪ್ರಕಾರ, "ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್" ಯೋಜನೆ (ಪಿಎಂ ಪೋಶನ್ ಯೋಜನೆ) ಅಡಿಯಲ್ಲಿ ಆಹಾರವನ್ನು ಒದಗಿಸಲಾಗಿದೆ - "ಮಧ್ಯಾಹ್ನ ಊಟ (ಮಿಡ್-ಡೇ ಮೀಲ್)" ಎಂಬ ಶತಮಾನದ ಹಳೆಯ ಶಾಲಾ ಉಪಹಾರ ಉಪಕ್ರಮವನ್ನು ತಮಿಳುನಾಡಿನಲ್ಲಿ ಮೊದಲು ಪರಿಚಯಿಸಲಾಯಿತು, ಇದನ್ನು ೨೦೨೧ ರಲ್ಲಿ ಮರುನಾಮಕರಣ ಮಾಡಲಾಯಿತು.

ಜೂನ್ ೨೦, ೨೦೨೩ ರಂದು, ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಜುಲೈ ೧೫ ರವರೆಗೆ ಎಲ್ಲಾ ಸಾರ್ವಜನಿಕ ಮತ್ತು ಸಾರ್ವಜನಿಕ ಅನುದಾನಿತ ಶಾಲೆಗಳಲ್ಲಿ ವಾರಕ್ಕೊಮ್ಮೆ ಮಾತ್ರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ನೀಡಬೇಕೆಂದು ಆದೇಶಿಸಿತು. ಲಾಜಿಕಲಿ ಫ್ಯಾಕ್ಟ್ಸ್ ಸರ್ಕಾರದ ಆದೇಶದ ಪ್ರತಿಯನ್ನು ನೋಡಿದೆವು, ಅದರಲ್ಲಿ "ಇದು ತಾತ್ಕಾಲಿಕ ಕ್ರಮವಾಗಿದೆ ಏಕೆಂದರೆ ನಾವು ಕಾಲ್ಪನಿಕ ಬಜೆಟ್‌ನಲ್ಲಿ ನಡೆಸುತ್ತಿದ್ದೇವೆ. ಒಮ್ಮೆ ಪೂರ್ಣ ಬಜೆಟ್ ಮಂಡಿಸಿದ ನಂತರ, ಮಧ್ಯಾಹ್ನದ ಊಟಕ್ಕೆ ಹಣವನ್ನು ನಿಗದಿಪಡಿಸಲಾಗುತ್ತದೆ ಮತ್ತು ಮೊಟ್ಟೆಗಳ ವಿತರಣೆಯು ವಾರಕ್ಕೆ ಎರಡು ಬಾರಿಯಂತೆ ಹಿಂತಿರುಗುತ್ತದೆ" ಎಂದು ಉಲ್ಲೇಖಿಸಲಾಗಿದೆ.

ಲಾಜಿಕಲಿ ಫ್ಯಾಕ್ಟ್ಸ್ ಕೂಡ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್ ಅವರನ್ನು ಸಂಪರ್ಕಿಸಿದ್ದು, "ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ಸೇರಿಸುವಿಕೆ ೨೦೨೧ ರಲ್ಲಿ ಏಳು ಜಿಲ್ಲೆಗಳಲ್ಲಿ ಪ್ರಾರಂಭವಾಯಿತು. ೨೦೨೨ ರಲ್ಲಿ, ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ೧ ರಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಮೊಟ್ಟೆಗಳಿಗೆ ಬದಲಾಯಿಸಲಾಯಿತು. ಈಗ ಅದನ್ನು ೧ ರಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಎಂದು ಬದಲಾಯಿಸಲಾಗಿದೆ." ಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಜೆಟ್ ಘೋಷಣೆಯಾದ ನಂತರ ಯೋಜನೆಯನ್ನು ಪರಿಷ್ಕರಿಸಲಾಗುವುದು ಎಂದು ಅವರು ಹೇಳಿದರು.

೨೦೦೭ ರಲ್ಲಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಅಂಗವಾಗಿ ಮೊಟ್ಟೆ ವಿತರಿಸಲು ಯೋಜಿಸಿತ್ತು, ಆದರೆ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಪ್ರಸ್ತಾವನೆಯನ್ನು ಹಿಂಪಡೆಯಲಾಯಿತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಆದರೆ, ೨೦೨೧ ರಲ್ಲಿ, ಬಿಜೆಪಿ ಸರ್ಕಾರವು ಅದನ್ನು ಮತ್ತೊಮ್ಮೆ ಜಾರಿಗೆ ತರುವ ಯೋಜನೆಗಳನ್ನು ಘೋಷಿಸಿತು.

ತೀರ್ಪು

ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ಸೇರಿಸುವ ಕಾರ್ಯಕ್ರಮವನ್ನು ೨೦೨೧ ರಲ್ಲಿ ಬಿಜೆಪಿ ಸರ್ಕಾರದಲ್ಲಿ ಪರಿಚಯಿಸಲಾಯಿತು, ಮತ್ತು ೨೦೨೩ ರಲ್ಲಿ ಅದನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.