ಬೆಂಗಳೂರಿನ ಮಸೀದಿ ಒಂದರ ನಾಪಫಲಕದಲ್ಲಿ ಕನ್ನಡ ಪಠ್ಯವನ್ನು ಅಳವಡಿಸಲಾಗಿಲ್ಲ ಎಂದು ತಪ್ಪಾಗಿ ಹೇಳಲು ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜನವರಿ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬೆಂಗಳೂರಿನ ಮಸೀದಿ ಒಂದರ ನಾಪಫಲಕದಲ್ಲಿ ಕನ್ನಡ ಪಠ್ಯವನ್ನು ಅಳವಡಿಸಲಾಗಿಲ್ಲ ಎಂದು ತಪ್ಪಾಗಿ ಹೇಳಲು ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಲಾಜಿಕಲಿ ಫ್ಯಾಕ್ಟ್ಸ್ ಮಸೀದಿಗೆ ಭೇಟಿ ನೀಡಿದಾಗ ಅದರ ನಾಮಫಲಕದಲ್ಲಿ ಕನ್ನಡ ಪಠ್ಯವಿದೆ ಎಂದು ಕಂಡುಬಂದಿದೆ.

ಕ್ಲೈಮ್ ಐಡಿ 39a90c4f

ಹೇಳಿಕೆ ಏನು?

ಭಾರತದ ಅತಿದೊಡ್ಡ ಟೆಕ್ ಹಬ್ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಮಸೀದಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಈ ಧಾರ್ಮಿಕ ಸಂಸ್ಥೆಯ  ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲಾಗಿಲ್ಲ ಎಂಬ ಹೇಳಿಕೆಯೊಂದಿಗೆ ಶೇರ್ ಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಾದ, "Mr Sinha " ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಇತಿಹಾಸವನ್ನು ಹೊಂದಿದ್ದು, ಈ ಚಿತ್ರವನ್ನು ಎಕ್ಸ್ ನಲ್ಲಿ " "ಜಾಮಿಯಾ ಮಸೀದಿ, ಬೆಂಗಳೂರು ಸೈನ್‌ಬೋರ್ಡ್‌ನಲ್ಲಿ ಇಂಗ್ಲಿಷ್ ಮತ್ತು ಹಿಂದೂ ಪಠ್ಯಗಳಿವೆ, ಅಲ್ಲಿ #ಕನ್ನಡ ಪಠ್ಯವಿಲ್ಲ. "ನಮ್ಮ ಭಾಷೆ/ಸಂಸ್ಕೃತಿಯ ಯೋಧರನ್ನು ಉಳಿಸಿ" ಇದರ ವಿರುದ್ಧ ಪ್ರತಿಭಟಿಸುತ್ತಾರೋ ಇಲ್ಲವೋ ನೋಡೋಣ." ಎಂಬ ಶೀರ್ಷಿಕೆಯೊಂದಿಗೆ  ಹಂಚಿಕೊಂಡಿದ್ದಾರೆ. ಈ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸುವ ಸಮಯದಲ್ಲಿ ಪೋಷ್ಟ್ ೫,೯೯,೦೦೦ ಬಾರಿ ವೀಕ್ಷಿಸಲಾಗಿದೆ ಮಟ್ಟ ಅದರ ಆರ್ಕೈವ್ ಲಿಂಕ್ ಅನ್ನು ಇಲ್ಲಿ ನೋಡಬಹುದು. 

ಬೆಂಗಳೂರಿನ ಜಾಮಿಯಾ ಮಸೀದಿ (ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಮಸ್ಜಿದ್  ಎಂದು ಕರೆಯಲಾಗುತ್ತದೆ) ಎಂದು ಗುರುತಿಸಲಾಗಿರುವ ವೈರಲ್ ಪೋಷ್ಟ್ ನ ಚಿತ್ರವನ್ನು ಇಂತಹ ಹೇಳಿಕೆಗಳೊಂದಿಗೆ ನಗರದ ನಾಗರಿಕ ಸಂಸ್ಥೆಯ ಡಿಸೆಂಬರ್ ೨೦೨೩ ರ ನಿರ್ದೇಶನದ ಬೆಳಕಿನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆಗಳು  ತಮ್ಮ ಅಂಗಡಿಯ ನಾಮಫಲಕಗಲ್ಲಿ ಇಂಗ್ಲಿಷ್ ಅಥವಾ ಹಿಂದಿ ಜೊತೆಗೆ ಕನಿಷ್ಠ ೬೦ ಪ್ರತಿಶತದಷ್ಟು ಕನ್ನಡದಲ್ಲಿ ಪಠ್ಯವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯಗೊಳಿಸಿದೆ. ಈ ನಿರ್ದೇಶನವನ್ನು ಜಾರಿಗೊಳಿಸಲು ವ್ಯಾಪಾರ ಮಾಲೀಕರಿಗೆ ಬಿಬಿಎಂಪಿ ಫೆಬ್ರವರಿ ೨೮ ರ ವರೆಗು ಸಮಯವನ್ನು ನೀಡಿದ್ದು, ಇಲ್ಲದಿದ್ದರೆ ಅಂಗಡಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. 

ಈ ಘೋಷಣೆಯ ನಂತರ, ಬೆಂಗಳೂರಿನ ಹಲವಾರು ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಪಠ್ಯವನ್ನು ಹೊಂದಿಲ್ಲದ ಕಾರಣಕ್ಕಾಗಿ ಕನ್ನಡ ಪರ ಸಂಘಟನೆಗಳಿಂದ  ಅವಗಳ ಮೇಲೆ ಧಾಳಿ ಮಾಡಲಾಗಿತ್ತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮಸೀದಿಯ ವೈರಲ್ ಚಿತ್ರವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದರ ನಾಮಫಲಕದಲ್ಲಿ ಕನ್ನಡವಿಲ್ಲ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ, ಮತ್ತು ಅದರ ವಿರುದ್ಧ  ಕ್ರಮಕ್ಕೆ ಕರೆ ನೀಡುತ್ತಿದ್ದಾರೆ. ಅದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡ ಪೋಷ್ಟ್ ನ  ಆರ್ಕೈವ್ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಪೋಷ್ಟ್ ಗಳಲ್ಲಿ ಮಾಡಿದ ಹೇಳಿಕೆಗಳು ಸಂದರ್ಭದಿಂದ ಹೊರಗಿಡಳಾಗಿವೆ. ವೈರಲ್ ಪೋಷ್ಟ್ ಗಳಲ್ಲಿ ಹಂಚಿಕೊಳ್ಳಲಾದ  ಚಿತ್ರದಲ್ಲಿ ಕಾಣುವ ಮಸೀದಿಯನ್ನು  ಮೊದಲು ಸಂಗೀನ್ ಮಸೀದಿ ಎಂದು ಕರೆಯಲಾಗುತ್ತಿತ್ತು (ಸ್ಥಳೀಯವಾಗಿ ಜುಮ್ಮಾ ಮಸೀದಿ ಎಂದು ಕರೆಯಲಾಗುತ್ತದೆ) ಎಂದು ನಾವು ಕಂಡುಕೊಂಡೆವು. ಕನ್ನಡದಲ್ಲಿ ಪಠ್ಯವನ್ನು ಸೇರಿಸಲು ನಾಮಫಲಕವನ್ನು ಅನ್ನು ೨೦೧೨ ರಲ್ಲಿ ಮಾರ್ಪಡಿಸಲಾಗಿತ್ತು. 

ವಾಸ್ತವಾಂಶಗಳು

ಜಾಮಿಯಾ ಮಸೀದಿ ಬೆಂಗಳೂರು’ ಎಂಬ ಕೀವರ್ಡ್‌ನೊಂದಿಗೆ ಗೂಗಲ್ ಸರ್ಚ್ ಮಾಡಿದಾಗ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪುಟಕ್ಕೆ ನಮ್ಮನ್ನು ಕರೆದೊಯ್ಯಿತು, ಅದು ಜಾಮಿಯಾ ಮಸೀದಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿದೆ ಎಂದು ಹೇಳಿತ್ತದೆ. ವೆಬ್‌ಸೈಟ್‌ನಲ್ಲಿನ ಮಸೀದಿಯ ಫೋಟೋಗಳು ವೈರಲ್ ಚಿತ್ರದಲ್ಲಿ ಕಂಡುಬರುವ ಕಟ್ಟಡಕ್ಕಿಂತ ವಿಭಿನ್ನವಾದ ರಚನೆಯನ್ನು ಹೊಂದಿರುವುದನ್ನು ತೋರಿಸುತ್ತದೆ. ಬೆಂಗಳೂರಿನ ಜಾಮಿಯಾ ಮಸೀದಿಯ ಕುರಿತು ಹಲವಾರು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಮತ್ತು ಗೂಗಲ್ ಸ್ಟ್ರೀಟ್ ವ್ಯೂ ಸೆರೆಹಿಡಿಯಲಾದ ಕಟ್ಟಡದ ದೃಶ್ಯಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಅದೇ ಕಟ್ಟಡವನ್ನು ಚಿತ್ರಿಸಲಾಗಿದೆ ಮತ್ತು ವೈರಲ್ ಚಿತ್ರಕ್ಕೆ ಹೊಂದಿಕೆಯಾಗಲಿಲ್ಲ. 

ಆದರೆ, ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಿರುವ ಈ ಜಾಮಿಯಾ ಮಸೀದಿಯ ಹಲವಾರು ದೃಶ್ಯಗಳು ಮಸೀದಿಯ ನಾಮಫಲಕದಲ್ಲಿ ಇಂಗ್ಲಿಷ್ ಮತ್ತು ಉರ್ದು ಪಠ್ಯವನ್ನು ಹೊರತುಪಡಿಸಿ ಕನ್ನಡದಲ್ಲಿ ಪಠ್ಯವನ್ನು  ಒಳಗೊಂಡಿದೆ ಎಂಬುದನ್ನು ಗಮನಿಸಬೇಕು.

ಬೆಂಗಳೂರಿನ ಜಾಮಿಯಾ ಮಸೀದಿ ಮತ್ತು ವೈರಲ್ ಚಿತ್ರದ ನಡುವಿನ ಹೋಲಿಕೆ. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್)

ನಾವು ನಂತರ ವೈರಲ್ ಚಿತ್ರದ ಮೇಲೆ  ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಸ್ಥಳೀಯ ಮಾಧ್ಯವಾದ ಬೆಂಗಳೂರು ಮಿರರ್ ಜನವರಿ ೨೮, ೨೦೧೧ ರಂದು ಪ್ರಕಟಿಸಿದ ವರದಿಗೆ ನಿರ್ದೇಶಿಸಿತು. ಇದು ಮಸೀದಿಯ ಚಿತ್ರವನ್ನು ಒಳಗೊಂಡಿತ್ತು ಮತ್ತು  ವೈರಲ್ ಪೋಷ್ಟ್ ನಲ್ಲಿ ಕಂಡುಬರುವ ಕಟ್ಟಡಕ್ಕೆ ಹೊಂದಿಕೆಯಾಗುತ್ತದೆ.

ಬೆಂಗಳೂರಿನ ಶಿವಾಜಿನಗರ ಎಂಬ ಪ್ರದೇಶದಲ್ಲಿ ಓ ಪಿ ಹೆಚ್ ರಸ್ತೆ ಎಂದೂ ಸಹ ಕರೆಯಲ್ಪಡುವ ಜಾಮಿಯಾ ಮಸೀದಿ ರಸ್ತೆಯಲ್ಲಿ  ಈ ಮಸೀದಿಯು ಇದೆ ಎಂದು ವರದಿಯು ಗಮನಿಸಿದೆ. ಈ ಮಸೀದಿಯನ್ನು ಹಿಂದೆ ಸಂಗೀನ್ ಮಸೀದಿ ಎಂದು ಕರೆಯಲಾಗುತ್ತಿತ್ತು ಮತ್ತು ಕೆಲವು ಸ್ಥಳೀಯ ನಿವಾಸಿಗಳು ಇದನ್ನು ಜುಮ್ಮಾ ಮಸೀದಿ ಎಂದು ಕರೆಯುತ್ತಾರೆ. ಸ್ಟಾಕ್ ಫೋಟೋಗ್ರಫಿ ಏಜೆನ್ಸಿಯಾದ ಅಲಾಮಿ ವೆಬ್‌ಸೈಟ್‌ನಲ್ಲಿ ಮಸೀದಿಯ ಸಂಪೂರ್ಣ ಚಿತ್ರವನ್ನು ನಾವು ಕಂಡುಕೊಂಡೆವು, ಈ ಚಿತ್ರವನ್ನು ೨೦೦೯ ರಲ್ಲಿ ಸೆರೆಹಿಡಿಯಲಾಗಿದೆ ಎಂದು ಅದು ತಿಳಿಸುತ್ತದೆ.

೨೦೧೧ ರ ಬೆಂಗಳೂರು ಮಿರರ್ ವರದಿಯಲ್ಲಿ ಒಳಗೊಂಡಿರುವ  ಚಿತ್ರ ಮತ್ತು ವೈರಲ್ ಚಿತ್ರದ ನಡುವಿನ ಹೋಲಿಕೆ.
(ಮೂಲ: ಎಕ್ಸ್/ಬೆಂಗಳೂರು ಮಿರರ್ ವರದಿ/ಸ್ಕ್ರೀನ್‌ಶಾಟ್)

ನಾವು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ‘ಶಿವಾಜಿನಗರದಲ್ಲಿರುವ ಜುಮ್ಮಾ ಮಸೀದಿ’ ಎಂದು ಹುಡುಕಿದಾಗ ಅದು ವೈರಲ್ ಚಿತ್ರದಲ್ಲಿರುವಂತೆ ಮಸೀದಿಯ ನಿಖರವಾದ ಕಟ್ಟಡವನ್ನು ತೋರಿಸುತ್ತದೆ. ಮಸೀದಿಯ ಮೇಲಿನ ಫಲಕದಲ್ಲಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ‘ಜುಮ್ಮಾ ಮಸೀದಿ’ ಎಂಬ ಪಠ್ಯವನ್ನು ನಮೂದಿಸಲಾಗಿದೆ. ಹಾಗೂ ಏಪ್ರಿಲ್ ೧೬, ೨೦೨೨ ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಸ್ಥಳೀಯ ಮಾಧ್ಯಮ ಸಂಸ್ಥೆ ನ್ಯೂಸ್ ೪ ನಿಂದ ಮಸೀದಿಯ ಕುರಿತಾದ ವೀಡಿಯೋ ವರದಿಯನ್ನು ನಾವು ಕಂಡುಕೊಂಡೆವು. ವೀಡಿಯೋ ವರದಿಯು ಮಸೀದಿಯ ನಾಮಫಲಕವನ್ನು ಇಂಗ್ಲಿಷ್ ಮತ್ತು ಕನ್ನಡ ಎರಡೂ ಪಠ್ಯದೊಂದಿಗೆ ತೋರಿಸಿದೆ.

ಲಾಜಿಕಲಿ ಫ್ಯಾಕ್ಟ್ಸ್ ಧಾರ್ಮಿಕ ರಚನೆಗೆ ಭೇಟಿ ನೀಡಿತು ಮತ್ತು ಅದರ ನಾಮಫಲಕದಲ್ಲಿ ಮಸೀದಿಯ ಹೆಸರನ್ನು ಉರ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರುವುದನ್ನು ಕಂಡುಕೊಂಡಿತು. 

ಬೆಂಗಳೂರಿನ ಶಿವಾಜಿನಗರದ ಜುಮ್ಮಾ ಮಸೀದಿಯ ಚಿತ್ರವು ವೈರಲ್ ಫೋಟೋಗಳಲ್ಲಿ ಸೆರೆಹಿಡಿಯಲಾಗಿದ್ದು, ಕಟ್ಟಡವನ್ನು ಜಾಮಿಯಾ ಮಸೀದಿ ಎಂದು ತಪ್ಪಾಗಿ ಗುರುತಿಸಲಾಗಿದೆ. (ಲಾಜಿಕಲಿ ಫ್ಯಾಕ್ಟ್ಸ್ ಇಂದ ಸೆರೆಹಿಡಿಯಲಾದ ಚಿತ್ರ)

ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ (ಮಸೀದಿಯ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆ) ಕಾರ್ಯದರ್ಶಿ ಉಸ್ಮಾನ್ ಶರೀಫ್ ನಮಗೆ ಹೀಗೆ ತಿಳಿಸಿದರು, ೨೦೧೨ ರಲ್ಲಿ ಕಟ್ಟಡವನ್ನು ನವೀಕರಿಸಿದಾಗ ಮಸೀದಿಯ ಫಲಕವನ್ನು ಬದಲಾಯಿಸಲಾಯಿತು. ೨೦೧೨ ರ ಮೊದಲು ತೆಗೆದ ಫೋಟೋಗಳು - ೨೦೧೧ ರ ಬೆಂಗಳೂರು ಮಿರರ್ ಫೋಟೋ ಮತ್ತು ೨೦೦೯ ರ ಅಲಾಮಿ ಚಿತ್ರ - ಮಸೀದಿಯ ನಾಮಫಲಕದಲ್ಲಿ ಕನ್ನಡ ಪಠ್ಯವನ್ನು ತೋರಿಸುವುದಿಲ್ಲ ಎಂಬುದನ್ನು ಇದು ವಿವರಿಸುತ್ತದೆ.

"೨೦೧೨ ರಿಂದ, ಮಸೀದಿಯ ನಾಮಫಲಕದಲ್ಲಿ ಕನ್ನಡ ಪಠ್ಯವಿದೆ" ಎಂದು ಶರೀಫ್ ಹೇಳಿದರು.  ಮಸೀದಿಯ ಟ್ರಸ್ಟ್ ಬೋರ್ಡ್‌ನಲ್ಲಿಯೂ ಸಹ ಕನ್ನಡ ಪಠ್ಯವನ್ನು ಹೊಂದಿರುವ ಫಲಕದ ಚಿತ್ರವನ್ನೂ ಸಹ ಅವರು ನಮ್ಮಜೊತೆಗೆ ಹಂಚಿಕೊಂಡಿದ್ದಾರೆ. ಹಾಗು ಅದೇ ಸಮಯದಲ್ಲಿ ಮಸೀದಿಯನ್ನು ಜಾಮಿಯಾ ಮಸೀದಿಯಿಂದ ಜುಮ್ಮಾ ಮಸೀದಿ ಎಂದು ಮರುನಾಮಕರಣ ಮಾಡಲಾಯಿತು ಎಂದು ಅವರು ಹೇಳಿದರು.

ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ಕಛೇರಿಯ ಹೊರಗಿರುವ ಮಾರ್ಗಸೂಚಿ ಫಲಕವು ಕನ್ನಡ ಪಠ್ಯವನ್ನು ಒಳಗೊಂಡಿದೆ. (ಮೂಲ: ಸಂಸ್ಥೆಯ ಕಾರ್ಯದರ್ಶಿ ಹಂಚಿಕೊಂಡ ಚಿತ್ರಗಳು.)

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವು ಹಳೆಯದು ಎಂದು ಈ ಮೇಲಿನ ಪುರಾವೆಗಳು ಖಚಿತಪಡಿಸುತ್ತವೆ. ಮಸೀದಿಯ  ನಾಮಫಲಕವು ಇತರ ಭಾಷೆಗಳನ್ನು ಹೊರೆತುಪಡಿಸಿ ಕನ್ನಡದಲ್ಲಿ ಪಠ್ಯವನ್ನು ಒಳಗೊಂಡಿದೆ.

ತೀರ್ಪು

ವೈರಲ್ ಚಿತ್ರದಲ್ಲಿ ಕಂಡುಬರುವ ಮಸೀದಿಯು ೨೦೧೨ ರಿಂದ ಕನ್ನಡ ಪಠ್ಯದೊಂದಿಗೆ ಸೈನ್ ಬೋರ್ಡ್ ಅನ್ನು ಹೊಂದಿದೆ. ೨೦೧೨ ಕ್ಕಿಂತ ಮೊದಲು ತೆಗೆದ ಚಿತ್ರವನ್ನು ತಪ್ಪಾದ ನಿರೂಪಣೆಯೊಂದಿಗೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.