ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು ಈ ವೀಡಿಯೋ ತೋರಿಸುವುದಿಲ್ಲ

ಮೂಲಕ: ಇಶಿತಾ ಗೋಯಲ್ ಜೆ
ಮೇ 6 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು ಈ ವೀಡಿಯೋ ತೋರಿಸುವುದಿಲ್ಲ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

೨೦೨೨ರಲ್ಲಿ ಕೇರಳದ ಹಿರಿಯ ರಾಜಕಾರಣಿ ಪಿ.ಸಿ. ಜಾರ್ಜ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದಾಗ ತಮ್ಮದೇ ಆದ ಕೇರಳ ಜನಪಕ್ಷಂ (ಜಾತ್ಯತೀತ) ಪಕ್ಷವನ್ನು ನಡೆಸುತ್ತಿದ್ದರು.

ಕ್ಲೈಮ್ ಐಡಿ c9c90c49

ಹೇಳಿಕೆ ಏನು?

ಕೇರಳದ ಹಿರಿಯ ರಾಜಕಾರಣಿ ಪಿ.ಸಿ. ಜಾರ್ಜ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೇರಳ ಕಾಂಗ್ರೆಸ್ ನಾಯಕ ಎಂದು ಭಾವಿಸಲಾದ ಜಾರ್ಜ್ ಅವರು ಮುಸ್ಲಿಮರ ಬಗ್ಗೆ ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. 

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರೊಬ್ಬರು ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ ಹಾಗು ಮುಸ್ಲಿಂ ಸಮುದಾಯದ ಆಪಾದಿತ ಹಾನಿಕಾರಕ ಉದ್ದೇಶಗಳಿಂದಾಗಿ ಅವರು ನಡೆಸುವ ಹೋಟೆಲ್ ಗಳಲ್ಲಿ ಊಟ ಮಾಡಬೇಡಿ ಎಂದು ಜಾರ್ಜ್, ಕ್ರಿಶ್ಚಿಯನ್ನರು ಮತ್ತು ಹಿಂದೂಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆಯು ಸಂದರ್ಭರಹಿತ ಹಂಚಿಕೊಳ್ಳಲಾಗಿದೆ. ಜಾರ್ಜ್ ಅವರು ಈ ಹೇಳಿಕೆಗಳನ್ನು ನೀಡಿದ್ದರೂ, ವೈರಲ್ ವೀಡಿಯೋದಲ್ಲಿನ ಹೇಳಿಕೆ ದಾಖಲಾಗಿದ್ದ ಸಮಯದಲ್ಲಿ ಅವರು ಕೇರಳ ಕಾಂಗ್ರೆಸ್ ನಾಯಕರಾಗಿರಲಿಲ್ಲ. ಅವರು ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾರೆ.

ವಾಸ್ತವಾಂಶಗಳು ಏನು?

ಜಾರ್ಜ್ ಅವರ ಭಾಷಣವನ್ನು ಒಳಗೊಂಡಿರುವ ವೈರಲ್ ವೀಡಿಯೋದ ದೀರ್ಘವಾದ  ಆವೃತ್ತಿಯನ್ನು ಏಪ್ರಿಲ್ ೨೦, ೨೦೨೨ ರಂದು ಯೂಟ್ಯೂಬ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಲಾಗಿದೆ. ವೀಡಿಯೋದ ಶೀರ್ಷಿಕೆ ಹೀಗಿದೆ, "ಪಿಸಿ ಜಾರ್ಜ್ ಅನಂತಪುರಿ ಹಿಂದೂ ಮಹಾ ಸಮ್ಮೇಳನ" ವಿವರಣೆಯ ಪ್ರಕಾರ, ಜಾರ್ಜ್ ಅವರು ದಕ್ಷಿಣ ಭಾರತದ ರಾಜ್ಯವಾದ ಕೇರಳದ ತಿರುವನಂತಪುರಂನಲ್ಲಿ ಅನಂತಪುರಿ ಹಿಂದೂ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದರು.

ಜಾರ್ಜ್ ಅವರ ೨೦೨೨ ರ ಭಾಷಣದ ವೀಡಿಯೋ ಸ್ಕ್ರೀನ್‌ಶಾಟ್.
(ಮೂಲ: ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅದೇ ರೀತಿ, ಏಪ್ರಿಲ್ ೩೦, ೨೦೨೨ ರಂದು, ಕೇರಳದ ಮಲಯಾಳಂ ಭಾಷೆಯ ಪತ್ರಿಕೆಯಾದ ಮಾಧ್ಯಮಮ್ ಅದೇ ಘಟನೆಯಿಂದ ಜಾರ್ಜ್ ಅವರ ಚಿತ್ರವನ್ನು ಪ್ರಕಟಿಸಿತು ಮತ್ತು ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ವರದಿ ಮಾಡಿತ್ತು.

ತಿರುವನಂತಪುರಂನಲ್ಲಿ ಹಿಂದೂ ಮಹಾ ಪರಿಷತ್ ಆಯೋಜಿಸಿದ್ದ ಅನಂತಪುರಿ ಹಿಂದೂ ಮಹಾ ಸಮ್ಮೇಳನದಲ್ಲಿ ಜಾರ್ಜ್ ಅವರು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿತ್ತು. ಮುಸ್ಲಿಂ  ವ್ಯಾಪಾರಸ್ಥರು ಇತರ ಧರ್ಮದ ಜನರನ್ನು "ಶಕ್ತಿಹೀನ" ಮಾಡಲು ಕಲಬೆರಕೆ ಚಹಾವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ತಪ್ಪಾದ ಆರೋಪ ಮಾಡಿದ್ದರು ಮತ್ತು ಮುಸ್ಲಿಂ ಹೋಟೆಲ್ ಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. 

ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರ ನಿರ್ದೇಶನದ ಮೇರೆಗೆ ತಿರುವನಂತಪುರಂನ ಫೋರ್ಟ್ ಪೊಲೀಸ್ ಠಾಣೆಯು ಮಾಜಿ ಶಾಸಕರ (ಎಂಎಲ್‌ಎ) ವಿರುದ್ಧ ಸ್ವಯಂ ಪ್ರೇರಿತ ಕ್ರಮವನ್ನು ಪ್ರಾರಂಭಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಘಟನೆಯ ಬಗ್ಗೆ ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ ಜಾರ್ಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153-A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆ ಸಮಯದಲ್ಲಿ ಜಾರ್ಜ್ ಕೇರಳ ಕಾಂಗ್ರೆಸ್ ನಾಯಕರಾಗಿದ್ದರೇ?

ದಿ ಎಕನಾಮಿಕ್ ಟೈಮ್ಸ್ ಮತ್ತು ದಿ ನ್ಯೂಸ್ ಮಿನಿಟ್ ಎರಡೂ ಜಾರ್ಜ್ ಅವರನ್ನು ಮಾಜಿ ಕೇರಳ ಕಾಂಗ್ರೆಸ್ ರಾಜಕಾರಣಿ ಎಂದು ಗುರುತಿಸಿವೆ. ಈ ವಿವಾದಾತ್ಮಕ ಭಾಷಣದ ಸಮಯದಲ್ಲಿ ಅವರು ಕೇರಳ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿರಲಿಲ್ಲ ಎಂದು ಘಟನೆಯ ಕುರಿತು ಹಲವಾರು ಇತರ ವರದಿಗಳು ದೃಢಪಡಿಸಿವೆ.

ಮೇ ೧, ೨೦೨೨ ರಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಅನುಸಾರ, ಕೇರಳದ ಹಿರಿಯ ರಾಜಕಾರಣಿ ಅವರ ವಿವಾದಾತ್ಮಕ ಕಾಮೆಂಟ್‌ಗಳ ನಂತರ ದ್ವೇಷ ಭಾಷಣದ ಆರೋಪ ಹೊರಿಸಲಾಗಿದೆ ಎಂದು ಹೇಳಿದೆ. ವರದಿಯು ಅವರನ್ನು ಕೇರಳ ಕಾಂಗ್ರೆಸ್ (ಎಂ) ನ 'ಮಾಜಿ' ನಾಯಕ ಎಂದು ಸ್ಪಷ್ಟವಾಗಿ ಗುರುತಿಸಿದೆ.

ಅದೇ ವಿವಾದದ ಕುರಿತು ಸ್ಕ್ರಾಲ್‌ನ ಮತ್ತೊಂದು ವರದಿಯು ಅವರನ್ನು ‘ಕೇರಳ ಜನಪಕ್ಷಂ (ಜಾತ್ಯತೀತ) ನಾಯಕ ಪಿಸಿ ಜಾರ್ಜ್ ಎಂದು ಉಲ್ಲೇಖಿಸಿದತ್ತು.

ಜಾರ್ಜ್ ಅವರ ವರ್ಣರಂಜಿತ ರಾಜಕೀಯ ಜೀವನ

ಕೇರಳದ ಕೊಟ್ಟಾಯಂ ಜಿಲ್ಲೆಯ ಪೂಂಜಾರ್ ಕ್ಷೇತ್ರದ ಏಳು ಬಾರಿ ಶಾಸಕರಾಗಿದ್ದ ಜಾರ್ಜ್ ಅವರು ತಮ್ಮ ರಾಜಕೀಯ ಜೀವನವನ್ನು ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ನಂತರ ಕೇರಳ ಕಾಂಗ್ರೆಸ್ (ಮಣಿ) ನೊಂದಿಗೆ ಪ್ರಾರಂಭಿಸಿದರು. ೨೦೦೬ ರಲ್ಲಿ, ಅವರು ತಮ್ಮ ಸ್ವಂತ ಪಕ್ಷವಾದ ಕೇರಳ ಕಾಂಗ್ರೆಸ್ (ಸೆಕ್ಯುಲರ್) ಅನ್ನು ಸ್ಥಾಪಿಸಿದರು, ಅದು ಅಂತಿಮವಾಗಿ ಕೇರಳ ಕಾಂಗ್ರೆಸ್ (ಎಂ) ನೊಂದಿಗೆ ವಿಲೀನಗೊಂಡಿತು. ಇವು ಕೇರಳ ಕಾಂಗ್ರೆಸ್‌ನ ವಿಭಜಿತ ಗುಂಪುಗಳಾಗಿವೆ, ಇದು ೧೯೬೪ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಬೇರ್ಪಟ್ಟ ಬಣವಾಗಿ ಸ್ಥಾಪಿಸಲಾಯಿತು, ಕೆ.ಎಂ. ಜಾರ್ಜ್ ಸ್ಥಾಪಕ ಅಧ್ಯಕ್ಷರಾಗಿದ್ದರು.

ಈ ಹಿಂದೆ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮತ್ತು ವಿರೋಧ ಪಕ್ಷವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಎರಡಕ್ಕೂ ಸಂಬಂಧ ಹೊಂದಿದ್ದ ಜಾರ್ಜ್ ನಂತರ ೨೦೧೭ ರಲ್ಲಿ ರಚನೆಯಾದ ಕೇರಳ ಕಾಂಗ್ರೆಸ್ (ಸೆಕ್ಯುಲರ್) ನ ವಿಭಜನೆಯಾದ ಕೇರಳ ಜನಪಕ್ಷಂ (ಜಾತ್ಯತೀತ) ನಲ್ಲಿ ನೇತೃತ್ವ ವಹಿಸಿದ್ದರು. ಈ ಪಕ್ಷವು ೨೦೧೯ ರಲ್ಲಿ ಏನ್ ಡಿಎ ಮಿತ್ರ ಪಕ್ಷವಾಯಿತು. ಆ ವರ್ಷದಲ್ಲಿ ನಂತರ, ಏನ್ ಡಿಎ ಯನ್ನು ತೊರೆದು ಅವರು ೨೦೨೧ ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರು ಆದರೆ ಯಶಸ್ವಿಯಾಗಲಿಲ್ಲ.

ಹಾಗೂ, ಜನವರಿ ೩೧, ೨೦೨೪ ರಂದು ಬಿಜೆಪಿಗೆ ಸೇರಿದರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಅಲಯನ್ಸ್ ನ ಅಭ್ಯರ್ಥಿಯಾಗಿ ಪಥನಂತಿಟ್ಟದಿಂದ ಅವರ ಉಮೇದುವಾರಿಕೆಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದರು. ಆದರೆ, ನಂತರ ಅವರಿಗೆ ಸೀಟು ಅನ್ನು ನಿರಾಕರಿಸಲಾಗಿತ್ತು. ಹಿರಿಯ ರಾಜಕಾರಣಿ ತನ್ನ ವಿವಾದಾತ್ಮಕ ಹೇಳಿಕೆಗಳಿಗೆ, ವಿಶೇಷವಾಗಿ ಕೋಮು ಸ್ವಭಾವದ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ.

ತೀರ್ಪು

ಪಿ.ಸಿ. ಜಾರ್ಜ್ ಅವರು ಈ ಕೋಮುವಾದಿ ಹೇಳಿಕೆಗಳನ್ನು ನೀಡಿದಾಗ ಕೇರಳ ಕಾಂಗ್ರೆಸ್‌ನ ಸದಸ್ಯರಾಗಿರಲಿಲ್ಲ. ೨೦೨೨ ರಲ್ಲಿ, ಅವರ ವಿವಾದಾತ್ಮಕ ಹೇಳಿಕೆಗಳು ವ್ಯಾಪಕವಾಗಿ ವರದಿಯಾದಾಗ ಅವರು ತಮ್ಮದೇ ಆದ ಪಕ್ಷವಾದ ಕೇರಳ ಜನಪಕ್ಷಂ (ಜಾತ್ಯತೀತ) ಅನ್ನು ಮುನ್ನಡೆಸುತ್ತಿದ್ದರು. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.