ಕರ್ನಾಟಕ ದ್ವಿತೀಯ ಹಂತದ ಪರೀಕ್ಷೆಯ ವೇಳಾಪಟ್ಟಿಯನ್ನು ತಪ್ಪು ಕೋಮು ತಿರುವುಗಳೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಫೆಬ್ರವರಿ 7 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕ ದ್ವಿತೀಯ ಹಂತದ ಪರೀಕ್ಷೆಯ ವೇಳಾಪಟ್ಟಿಯನ್ನು ತಪ್ಪು ಕೋಮು ತಿರುವುಗಳೊಂದಿಗೆ ಹಂಚಿಕೊಳ್ಳಲಾಗಿದೆ

ಮುಸ್ಲಿಂ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಕರ್ನಾಟಕ ಸರ್ಕಾರವು ಎಸ್‌ಎಸ್‌ಎಲ್‌ಸಿ ೧೦ ನೇ ತರಗತಿ ಪರೀಕ್ಷೆಯ ಸಮಯವನ್ನು ಬದಲಾಯಿಸಿದೆ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳು ಹೇಳುತ್ತವೆ. (ಮೂಲ: ಎಕ್ಸ್‌ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮಾರ್ಚ್ ೧ ರಂದು ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ೧೦ನೇ ತರಗತಿ ಪರೀಕ್ಷೆಯು ಪಿಯುಸಿ ಪರೀಕ್ಷೆಯ ಸಮಯದ ಕ್ಲ್ಯಾಶ್ ಯಿಂದಾಗಿ ಬೆಳಗಿನ ಬದಲು ಮಧ್ಯಾಹ್ನ ನಡೆಯಲಿದೆ.

ಕ್ಲೈಮ್ ಐಡಿ 91a499e5

ನಿರೂಪಣೆ ಏನು?

ದಕ್ಷಿಣ ಭಾರತದ ಕರ್ನಾಟಕ ರಾಜ್ಯವು ದ್ವಿತೀಯ ಹಂತದ ಪರೀಕ್ಷೆಯ ಸಮಯವನ್ನು ಬದಲಾಯಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ, ಇದರಿಂದಾಗಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಮಧ್ಯಾಹ್ನ ಶುಕ್ರವಾರದ ಪ್ರಾರ್ಥನೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳ್ಳಾಗುತ್ತಿದೆ.

ಕನ್ನಡದಲ್ಲಿ ಬರೆಯಲಾದ ಪರೀಕ್ಷಾ ವೇಳಾಪಟ್ಟಿಯ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ಎಸ್‌ಎಸ್‌ಎಲ್‌ಸಿ(SSLC) ವಿಜ್ಞಾನ ಪರೀಕ್ಷೆಯನ್ನು ಮಾರ್ಚ್ ೧, ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ನಿಗದಿಪಡಿಸಿದೆ ಮತ್ತು ಉಳಿದ ಮೌಲ್ಯಮಾಪನಗಳನ್ನು ಬೆಳಿಗ್ಗೆ ೧೦ ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. 

ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿಯನ್ನು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹಂಚಿಕೊಂಡ ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ: “ಕರ್ನಾಟಕ ರಾಜ್ಯ ೧೦ ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬೆಳಗಿನ ಅವಧಿಯಲ್ಲಿ ಎಲ್ಲಾ ಪರೀಕ್ಷೆಗಳು ಆದರೆ ಶುಕ್ರವಾರ. ಏಕೆ? ಓಹ್.. ನಮಾಜ್‌ಗೆ ಸಮಯ (sic)?” ಈ ಪೋಷ್ಟ್ ಪ್ರಕಟಿಸುವ ಸಮಯದಲ್ಲಿ ೩,೧೪,೦೦೦ ವೀಕ್ಷಣೆಗಳು ಮತ್ತು ೪,೫೦೦ ಲೈಕ್ ಗಳನ್ನು ಗಳಿಸಿದೆ. ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ - ಕರ್ನಾಟಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿಕಾರದಲ್ಲಿರುವ ಪ್ರಮುಖ ವಿರೋಧ ಪಕ್ಷ - ಶುಕ್ರವಾರ, ಮಾರ್ಚ್ ೧ ರಂದು ನಿಗದಿಪಡಿಸಲಾದ ಪರೀಕ್ಷೆ ಮತ್ತು ಇತರ ದಿನಾಂಕಗಳ ನಡುವಿನ ಸಮಯದ ವ್ಯತ್ಯಾಸದ ಬಗ್ಗೆ ಎಕ್ಸ್‌ ಪೋಷ್ಟ್ ಅನ್ನು ಹಂಚಿಕೊಂಡಿದೆ. ವಿಷಯವನ್ನು ಕೋಮು ತಿರುವು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ ಎಂದು ಪೋಷ್ಟ್‌ನಲ್ಲಿ ಆರೋಪಿಸಿದ್ದಾರೆ, ಎರಡನೆಯದನ್ನು ತಾಲಿಬಾನ್ ಮತ್ತು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಗೆ ಹೋಲಿಸಿದ್ದಾರೆ. ಈಗ ಅಳಿಸಲಾದ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಕರ್ನಾಟಕ ಬಿಜೆಪಿ ಎಕ್ಸ್ ಖಾತೆಯು ಕನ್ನಡ ಸುದ್ದಿವಾಹಿನಿ ವಿಸ್ತಾರಾ ನ್ಯೂಸ್‌ನ ಎಕ್ಸ್ ಪೋಷ್ಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮರುಹಂಚಿಕೊಂಡಿದೆ. “ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪರೀಕ್ಷೆಯಲ್ಲಿ ಮುಸಲ್ಮಾನರ ಒಲವು; ಬದಲಾಗಿ ನಮಾಝಿನ ಸಮಯ! (ಕನ್ನಡದಿಂದ ಅನುವಾದಿಸಲಾಗಿದೆ)” ಎಂಬ ಶೀರ್ಷಿಕೆಯೊಂದಿಗೆ ಔಟ್ಲೆಟ್ ಸುದ್ದಿ ಲೇಖನವನ್ನು ಪೋಷ್ಟ್ ಮಾಡಿದೆ. ಜೊತೆಗಿರುವ ಸುದ್ದಿ ಲೇಖನ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದೇ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ವೈರಲ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿದೆ. ಮಾರ್ಚ್ ೧ ರಂದು ನಡೆಯಲಿರುವ ಪರೀಕ್ಷೆಯ ಸಮಯ ಬದಲಾವಣೆಯು ರಾಜ್ಯದ ಮುಸ್ಲಿಮರನ್ನು ಓಲೈಸುವ ಪ್ರಯತ್ನದ ಭಾಗವಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ ಎಂದು ವಿಸ್ತಾರಾ ನ್ಯೂಸ್ ಹೇಳಿದೆ. 

ಎಕ್ಸ್‌ ನಲ್ಲಿ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಅದೇ ದಿನ ನಡೆಯಲಿರುವ ಕರ್ನಾಟಕ ಪ್ರಿ-ಯೂನಿವರ್ಸಿಟಿ ಕೋರ್ಸ್ (ಪಿಯುಸಿ) ಪರೀಕ್ಷೆಯ ಸಮಯದಲ್ಲಿ ಕ್ಲ್ಯಾಶ್ ಆಗುವುದರಿಂದ ಕಾರಣ ಮಾರ್ಚ್ ೧, ಶುಕ್ರವಾರದಂದು ನಿಗದಿಪಡಿಸಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ. ಈ ವಿಚಾರದಲ್ಲಿ ಯಾವುದೇ ಕೋಮು ಕೋನವಿಲ್ಲ.

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ಪೋಷ್ಟ್‌ನಲ್ಲಿನ ವೇಳಾಪಟ್ಟಿಯು ೨೦೨೩-೨೦೨೪ ರ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಅನುರೂಪವಾಗಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಧೃಡಪಡಿಸಿದೆ, ಇದು ಫೆಬ್ರವರಿ ೨೬ ರಂದು ಪ್ರಾರಂಭವಾಗಿ ಮಾರ್ಚ್ ೨ ರಂದು ಮುಕ್ತಾಯಗೊಳ್ಳಲಿದೆ. ಕ್ಲೈಮ್‌ನಲ್ಲಿ ಸೂಚಿಸಿದಂತೆ, ಮಾರ್ಚ್ ೧ ರಂದು ಶುಕ್ರವಾರ ವಿಜ್ಞಾನ ಪರೀಕ್ಷೆಯನ್ನು ಹೊರತುಪಡಿಸಿ, ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ ೧೦:೧೫ ಕ್ಕೆ ಪ್ರಾರಂಭವಾಗುತ್ತವೆ, ವಿಜ್ಞಾನ ಪರೀಕ್ಷೆ ಮಧ್ಯಾಹ್ನ ೨:೦೦ ಗಂಟೆಗೆ ಪ್ರಾರಂಭವಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.

ಆದರೆ, ಶುಕ್ರವಾರದ ವಿಜ್ಞಾನ ಪರೀಕ್ಷೆಯ ಸಮಯ ಮತ್ತು ಇತರ ಮೌಲ್ಯಮಾಪನಗಳಲ್ಲಿನ ವ್ಯತ್ಯಾಸದ ಕಾರಣವನ್ನು ವೇಳಾಪಟ್ಟಿಯ ಕೊನೆಯಲ್ಲಿ ವಿವರಿಸಲಾಗಿದೆ. ಟಿಪ್ಪಣಿಯಲ್ಲಿ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಹಲವಾರು ಶಾಲೆಗಳಲ್ಲಿ ಪಿಯುಸಿ ಪರೀಕ್ಷೆಯನ್ನು ಅದೇ ಸಮಯದಲ್ಲಿ ನಿಗದಿಪಡಿಸಲಾಗಿದೆ ಎಂದು ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಟಿಪ್ಪಣಿಯಲ್ಲಿ, “೨ನೇ ಪಿಯುಸಿ ಪರೀಕ್ಷೆ-೧ ೦೧.೦೩.೨೦೨೪ ರಂದು ನಡೆಯಲಿದೆ, ಕೆಲವು ಸಂಯೋಜಿತ ಪಿಯು ಕಾಲೇಜುಗಳು ಮತ್ತು ಕರ್ನಾಟಕ ಸಾರ್ವಜನಿಕ ಶಾಲೆಗಳು ಪಿಯುಸಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳಾಗಿವೆ. ಆದ್ದರಿಂದ SSLC ಯ ವಿಜ್ಞಾನ ವಿಷಯದ ಪೂರ್ವಸಿದ್ಧತಾ ಪರೀಕ್ಷೆಯನ್ನು ೦೧.೦೩.೨೦೨೪ ಮಧ್ಯಾಹ್ನದ ಅಧಿವೇಶನದಲ್ಲಿ ನಿಗದಿಪಡಿಸಲಾಗಿದೆ.” ವೇಳಾಪಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ನಮೂದಿಸಲಾದ ಟಿಪ್ಪಣಿಯ ಸ್ಕ್ರೀನ್‌ಶಾಟ್. (ಮೂಲ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ)

ವಿಸ್ತಾರಾ ನ್ಯೂಸ್ ತನ್ನ ವರದಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯ ಸ್ಪಷ್ಟೀಕರಣವನ್ನೂ ಉಲ್ಲೇಖಿಸಿದೆ.

ಲಾಜಿಕಲಿ ಫ್ಯಾಕ್ಟ್ಸ್ ಮಂಡಳಿಯ ವೆಬ್‌ಸೈಟ್‌ನಲ್ಲಿ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಸಹ ಕಂಡುಕೊಂಡಿದೆ ಮತ್ತು ಪಿಯುಸಿ ಪರೀಕ್ಷೆಗಳು ಮಾರ್ಚ್ ೧ ರಂದು ಪ್ರಾರಂಭವಾಗುತ್ತವೆ ಮತ್ತು ಮಾರ್ಚ್ ೨೨ ರಂದು ಮುಕ್ತಾಯಗೊಳ್ಳುತ್ತವೆ ಎಂದು ದೃಢಪಡಿಸಿದೆ, ಶುಕ್ರವಾರದಂದು ನಿಗದಿಯಾಗಿದ್ದವು ಸೇರಿದಂತೆ ಎಲ್ಲಾ ಪತ್ರಿಕೆಗಳು ಬೆಳಿಗ್ಗೆ ೧೦:೧೫ ಕ್ಕೆ ಪ್ರಾರಂಭವಾಗಲಿದೆ. ಮಾರ್ಚ್ ೧ ಸೇರಿದಂತೆ ಸತತ ಮೂರು ಶುಕ್ರವಾರಗಳು ಬೆಳಿಗ್ಗೆ ೧೦:೧೫ ಕ್ಕೆ ಪರೀಕ್ಷೆಗಳು ಪ್ರಾರಂಭವಾಗುತ್ತವೆ ಆದ್ದರಿಂದ, ಒಂದು ಪೂರ್ವಸಿದ್ಧತಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಒಂದು ಪಿಯುಸಿ ಪರೀಕ್ಷೆಯನ್ನು (ಕನ್ನಡ/ಅರೇಬಿಕ್) ಒಂದೇ ದಿನಕ್ಕೆ ನಿಗದಿಪಡಿಸಲಾಗಿದೆ.

ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯ ಸ್ಕ್ರೀನ್‌ಶಾಟ್. (ಮೂಲ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ)

ಕರ್ನಾಟಕ ಕಾಂಗ್ರೆಸ್ ಘಟಕವು ಎಕ್ಸ್‌ನಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ಪೋಷ್ಟ್ ಮಾಡಿದ್ದು, ಮಾರ್ಚ್ ೧ ರಂದು ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ, ಅದಕ್ಕಾಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅಂದು ಮಧ್ಯಾಹ್ನ ನಡೆಸಲಾಗುವುದು ಎಂದು ಹೇಳಿದೆ. ಮರುದಿನ ಪಿಯುಸಿ ಪರೀಕ್ಷೆ ಇಲ್ಲದ ಕಾರಣ ಮಾರ್ಚ್ ೨ ರ ಶನಿವಾರದಂದು ಎಸ್ಎಸ್ಎಲ್ ಸಿ ಪರೀಕ್ಷೆ ಬೆಳಗ್ಗೆಯೇ ನಡೆಯಲಿದೆ. ಈ ನಿರ್ಧಾರವು ಪರೀಕ್ಷಾ ಕೇಂದ್ರಗಳ ಕೊರತೆಯನ್ನು ನಿವಾರಿಸಲು ಮತ್ತು ಯಾವುದೇ ಗೊಂದಲವನ್ನು ತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ಕನ್ನಡದಲ್ಲಿ ಸ್ಪಷ್ಟಪಡಿಸಲಾಗಿದೆ.

ಇಂಗ್ಲಿಷಿಗೆ ಅನುವಾದಿಸಲಾಗಿರುವ ಕರ್ನಾಟಕ ಕಾಂಗ್ರೆಸ್‌ನ ಎಕ್ಸ್ ಪೋಸ್ಟ್‌ನಲ್ಲಿ, " ಶುಕ್ರವಾರ ಮಧ್ಯಾಹ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಾಗಿದ್ದು ನಮಾಜ್‌ (ಮುಸ್ಲಿಮರು ಮಾಡುವ ಪ್ರಾರ್ಥನೆ) ಎಂದು ಹೇಳುತ್ತಿರುವ ಬಿಜೆಪಿ ಗಂಪೂರ್, ಅದೇ ದಿನ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೂ ನಮಾಜ್ ಮಾಡುವ ಅಗತ್ಯವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ಬರೆಯಲಾಗಿದೆ. ಪೂರ್ವಭಾವಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಪೋಷ್ಟ್‌ನಲ್ಲಿ ಸೇರಿಸಲಾಗಿದೆ. 

ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ. ವರದಿಯ ಪ್ರಕಾರ, ಪಿಯುಸಿ ಪರೀಕ್ಷೆಗಳಿಗೆ ವೇಳಾಪಟ್ಟಿ ಕ್ಲ್ಯಾಶ್ ಆಗುವುದರಿಂದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆಯನ್ನು ಮಾರ್ಚ್ ೧ ರಂದು ಮಧ್ಯಾಹ್ನ ನಡೆಸಲಾಗುವುದು ಎಂದು ಬಂಗಾರಪ್ಪ ಕೂಡ ಸ್ಪಷ್ಟಪಡಿಸಿದ್ದಾರೆ. ಸರ್ಕಾರವು ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಬದಲಾವಣೆಗಳನ್ನು ಮಾಡಿದೆ ಮತ್ತು ಒಂದು ಧರ್ಮದ ಪರವಾಗಿ ಅಲ್ಲ ಎಂದು ಸಚಿವರು ಹೇಳಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತೀರ್ಪು

ಮಾರ್ಚ್ ೧ ರಂದು ಶುಕ್ರವಾರ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯು ಮಧ್ಯಾಹ್ನ ೨ ಗಂಟೆಗೆ ನಡೆಯಲಿದೆ, ಪಿಯುಸಿ ಪರೀಕ್ಷೆಯು ಅದೇ ದಿನ ಬೆಳಿಗ್ಗೆ ೧೦:೧೫ ಕ್ಕೆ ನಿಗದಿಯಾಗಿದೆ. ಶುಕ್ರವಾರದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಇತರ ಪರೀಕ್ಷೆಗಳ ನಡುವಿನ ಸಮಯದ ವ್ಯತ್ಯಾಸವು ಯಾವುದೇ ಕೋಮು ಕೋನಗಳನ್ನು ಹೊಂದಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.