ಕಾಂಗ್ರೆಸ್ ಸಮಾರಂಭದಲ್ಲಿ ನಡೆದ ಜಗಳವನ್ನು ಅದು ವೈಎಸ್‌ಆರ್‌ಸಿಪಿ ನಾಯಕರ ನಡುವಿನ ಜಟಾಪಟಿ ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ನವೆಂಬರ್ 10 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕಾಂಗ್ರೆಸ್ ಸಮಾರಂಭದಲ್ಲಿ ನಡೆದ ಜಗಳವನ್ನು ಅದು ವೈಎಸ್‌ಆರ್‌ಸಿಪಿ ನಾಯಕರ ನಡುವಿನ ಜಟಾಪಟಿ ಎಂದು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ತೆಲಂಗಾಣದ ಹೈದ್ರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ಮುಂಬರುವ ಚುನಾವಣೆಗೆ ಮುನ್ನ ನಡೆದ ಪಕ್ಷದ ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಜಗಳವನ್ನು ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ 1c3293fa

ಇಲ್ಲಿನ ಹೇಳಿಕೆ ಏನು?
ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಬ್ಲಾಕ್ ಅಂಡ್ ವೈಟ್ ವೀಡಿಯೋವನ್ನು ಹಂಚಿಕೊಂಡು, ಅದು ಆಂಧ್ರಪ್ರದೇಶದ ಆಡಳಿತ ಪಕ್ಷವಾದ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಸದಸ್ಯರು ಸಾಮಾಜಿಕ ಸಾಧಿಕಾರ ಯಾತ್ರೆಯ ಸಮಯದಲ್ಲಿ ಆಹಾರ ಮತ್ತು ಮದ್ಯಪಾನದ ಬಗ್ಗೆ ತಮ್ಮೊಳಗೆ ಜಗಳವಾಡುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಯಾತ್ರೆಯು ಪಕ್ಷದ ಸಾಮಾಜಿಕ ನ್ಯಾಯದ ಕೆಲಸದ ಬಗ್ಗೆ ಮಾತನಾಡಲು ತೆಗೆದುಕೊಳ್ಳಲಾಗಿತ್ತು. 

೧:೪೨-ಸೆಕೆಂಡ್‌ಗಳ ಈ ವೀಡಿಯೋದಲ್ಲಿ ದೊಡ್ಡ ಊಟದ ಕೋಣೆಯಂತೆ ಕಂಡುಬರುವ ಸ್ಥಳದಲ್ಲಿ ಜನರ ದೊಡ್ಡ ಗುಂಪಿನ ನಡುವೆ ಜಗಳ ನಡೆಯುತ್ತಿರುವುದನ್ನು ನೋಡಬಹುದು. ನವೆಂಬರ್ ೬, ೨೦೨೩ ರಂದು ಹಂಚಿಕೊಳ್ಳಲಾದ ವೀಡಿಯೋ ಶೀರ್ಷಿಕೆಯು ಹೀಗಿದೆ, "ಕಾಕಿನಾಡದಲ್ಲಿ ಸಾಮಾಜಿಕ ಸಾಧಿಕಾರ ಯಾತ್ರೆಯಲ್ಲಿ ವೈಎಸ್‌ಆರ್‌ಸಿಪಿ ಸದಸ್ಯರು ಆಹಾರ ಮತ್ತು ಮದ್ಯಪಾನಕ್ಕಾಗಿ ಜಗಳವಾಡುತ್ತಿದ್ದಾರೆ. ಮದ್ಯಪಾನವನ್ನು ಧಾರಾಳವಾಗಿ ಸರಬರಾಜು ಮಾಡಲಾಗಿದೆ ಎಂದು ಹೇಳಲಾಗುತ್ತದೆ. (ತೆಲುಗಿನಿಂದ ಅನುವಾದಿಸಲಾಗಿದೆ)" ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಹೈದರಾಬಾದ್‌ನಲ್ಲಿ ಸೆರೆಹಿಡಿಯಲಾಗಿದ್ದು, ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ನ ಒಳಜಗಳವನ್ನು ತೋರಿಸುತ್ತದೆ. 

ನಾವು ಕಂಡುಹಿಡಿದದ್ದು ಏನು?
ನಾವು ವೀಡಿಯೋದಲ್ಲಿನ ಫ್ರೇಮ್‌ಗಳನ್ನು ನಿಕಟವಾಗಿ ಗಮನಿಸಿದಾಗ ೧.೪೦ -೧.೪೨  ಟೈಮ್‌ಸ್ಟ್ಯಾಂಪ್‌ನಲ್ಲಿ ಕಂಡ ವ್ಯಕ್ತಿಯೊಬ್ಬರು ಧರಿಸಿರುವ ಸ್ಕಾರ್ಫ್‌ಗಳ ಮೇಲೆ ಕೈಯನ್ನು ಅಸ್ಪಷ್ಟವಾಗಿ ಹೋಲುವ ಸಣ್ಣ ಚಿತ್ರವನ್ನು ನೋಡಬಹುದು. ಅದಲ್ಲದೆ, ವೀಡಿಯೋವನ್ನು ಹಂಚಿಕೊಂಡ ವೈರಲ್ ಪೋಷ್ಟ್ ಗೆ ಕಾಮೆಂಟ್‌ನಲ್ಲಿ ಘಟನೆಯು ಕುಕಟ್‌ಪಲ್ಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಂಭವಿಸಿದೆ ಎಂದು ಸೂಚಿಸಿದೆ, ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸಭೆಯಲ್ಲ ಅಲ್ಲ. 

ವೈರಲ್  ವೀಡಿಯೋದ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್‌)

ನಾವು ನಂತರ ಕುಕಟ್‌ಪಲ್ಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಆದ ಗಲಾಟೆಯನ್ನು ಕುರಿತು ಸುದ್ದಿ ವರದಿಗಳಿಗಾಗಿ ಹುಡುಕಿದೆವು ಮತ್ತು ಈಗ ವೈರಲ್ ಆಗಿರುವ ಬ್ಲಾಕ್ ಅಂಡ್ ವೈಟ್ ವೀಡಿಯೋದ ಮೂಲ ಆವೃತ್ತಿ ಕಂಡುಬಂದಿದೆ. ನವೆಂಬರ್ ೬, ೨೦೨೩ ರಂದು ‘ತೆಲುಗು ಸ್ಕ್ರೈಬ್' ಎಂಬ ಹೆಸರಿನ ಎಕ್ಸ್‌ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ, “ಕುಕಟ್‌ಪಲ್ಲಿಯಲ್ಲಿ ಊಟಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮೊಳಗೆ ಜಗಳ ಮಾಡಿಕೊಂಡಿದ್ದಾರೆ,” ಹೀಗೆ ಹೇಳುತ್ತದೆ. 

ಸ್ಥಳೀಯ ಸುದ್ದಿ ವಾಹಿನಿಗಳಾದ ಈಟಿವಿ ಭಾರತ ತೆಲುಗು ಮತ್ತು ಟಿ ನ್ಯೂಸ್‌ನಿಂದ ಘಟನೆಯ ಕುರಿತು ಸುದ್ದಿ ವರದಿಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಹೈದರಾಬಾದ್‌ನ ಕುಕಟ್‌ಪಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಪಕ್ಷದ ಸದಸ್ಯರೊಂದಿಗೆ ಮಾತನಾಡುತ್ತಿರುವಾಗ, ಊಟದ ಸರತಿ ಸಾಲಿನಲ್ಲಿ ಜಗಳ ಉಂಟಾಯಿತು, ಇದು ನಂತರ ಸದಸ್ಯರ ನಡುವೆ ಪೂರ್ಣ ಪ್ರಮಾಣದ ಹೊಡೆದಾಟಕ್ಕೆ ಕಾರಣವಾಯಿತು ಎಂದು ಈಟಿವಿ ಭಾರತ ತೆಲುಗು ವರದಿ ಮಾಡಿದೆ. 

ಈ ಸುದ್ದಿ ವರದಿಯು ಈಗ ವೈರಲ್ ವೀಡಿಯೋದ ಮೂಲ ಆವೃತ್ತಿಯನ್ನು ಸಹ ಹೊಂದಿದೆ. ಟಿ ನ್ಯೂಸ್ ತೆಲುಗು ನವೆಂಬರ್ ೬ ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಭಿನ್ನ ಕೋನದಿಂದ ಸೆರೆಹಿಡಿಯಲಾದ ಘಟನೆಯ ವೀಡಿಯೋವನ್ನು  ಪ್ರಕಟಿಸಿದೆ, ಅಲ್ಲಿ ಸುದ್ದಿ ಬುಲೆಟಿನ್ ಆಂಕರ್ ಹೀಗೆ ಹೇಳುವುದನ್ನು ಕೇಳಬಹುದು: “ಕುಕಟ್‌ಪಲ್ಲಿಯಲ್ಲಿ ಕಾಂಗ್ರೆಸ್ ಸದಸ್ಯರೊಂದಿಗೆ ಸಭೆ ನಡೆಯುತ್ತಿದ್ದಾಗ, ಎರಡು ವಿಭಿನ್ನ ಬಣಗಳ ಸದಸ್ಯರ ನಡುವೆ ವಿವಾದ ನಡೆಯಿತು ಮತ್ತು ಇದು ಅವರ ನಡುವೆ ಜಗಳಕ್ಕೆ ಕಾರಣವಾಯಿತು."

ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ನಡೆದ ಗಲಾಟೆಯ ವೈರಲ್ ವೀಡಿಯೋ  ಮತ್ತು ಈಟಿವಿ ಭಾರತ ವೀಡಿಯೋ ವರದಿಯ ನಡುವಿನ ಹೋಲಿಕೆ (ಮೂಲ: ಎಕ್ಸ್‌/ಯೂಟ್ಯೂಬ್ /ಈಟಿವಿ ಭಾರತ/ಸ್ಕ್ರೀನ್‌ಶಾಟ್)

ತೀರ್ಪು
ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಸದಸ್ಯರ ನಡುವಿನ ಮಾರಾಮಾರಿಯ ವೀಡಿಯೋವನ್ನು ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಸದಸ್ಯರು ಆಹಾರ ಮತ್ತು ಮದ್ಯಪಾನದ ಸಲುವಾಗಿ ನಡೆದ ಗಲಾಟೆ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. 

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.