ಇಲ್ಲ, ವೈರಲ್ ವೀಡಿಯೋದಲ್ಲಿ ಕೈಯಿಂದ ನಡೆಯುತ್ತಿರುವ ವ್ಯಕ್ತಿ ಅಯೋಧ್ಯೆ ರಾಮಮಂದಿರಕ್ಕೆ ಹೋಗುತ್ತಿಲ್ಲ

ಮೂಲಕ: ಚಂದನ್ ಬೋರ್ಗೊಹೈನ್
ಜನವರಿ 29 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ವೈರಲ್ ವೀಡಿಯೋದಲ್ಲಿ ಕೈಯಿಂದ ನಡೆಯುತ್ತಿರುವ ವ್ಯಕ್ತಿ ಅಯೋಧ್ಯೆ ರಾಮಮಂದಿರಕ್ಕೆ ಹೋಗುತ್ತಿಲ್ಲ

ವೈರಲ್ ವೀಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋದಲ್ಲಿರುವ ವ್ಯಕ್ತಿ ನಿಹಾಲ್ ಕುಮಾರ್ ಸಿಂಗ್ ಅವರು ಜಾರ್ಖಂಡ್‌ನ ಬಸುಕಿನಾಥ್ ಧಾಮ್ ದೇವಸ್ಥಾನದ ಕಡೆಗೆ ಹೋಗುತ್ತಿದ್ದರು ಎಂದು ಲಾಜಿಕಲಿ ಫ್ಯಾಕ್ಟ್ಸ್ ಗೆ ಸ್ಪಷ್ಟಪಡಿಸಿದ್ದಾರೆ.

ಕ್ಲೈಮ್ ಐಡಿ 947b788c

ಹೇಳಿಕೆ ಏನು?

ವ್ಯಕ್ತಿಯೊಬ್ಬ ಕೇಸರಿ ಧೋತಿ ಧರಿಸಿ ಕೈಗಳ ಮೇಲೆ ನಡೆಯುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಉತ್ತರ ಭಾರತದ ನಗರವಾದ ಅಯೋಧ್ಯೆಯ ಕಡೆಗೆ ಭಕ್ತರೊಬ್ಬರು ಹೋಗುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಜನವರಿ ೨೨ ರಂದು ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಈ ವ್ಯಕ್ತಿ ಈ ವಿಶಿಷ್ಟ ಪ್ರಯಾಣವನ್ನು ಕೈಗೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ.

ಎಕ್ಸ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಅದರ ಶೀರ್ಷಿಕೆ ಹೀಗಿದೆ, "ವೀಡಿಯೋ ವಿಶೇಷವಾದ ಶ್ರೀ ರಾಮನ ಭಕ್ತನನ್ನು ತೋರಿಸುತ್ತದೆ, ಅವರು ಸ್ವತಃ 'ಚೇಳು' ಆಗಿ ರೂಪಾಂತರಗೊಂಡಿದ್ದಾರೆ ಮತ್ತು ಅಯೋಧ್ಯೆಯ ಶಂಕುಸ್ಥಾಪನೆಯ ಸಮಾರಂಭಕ್ಕೆ ತೆರೆಳಿದ್ದಾರೆ." ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.


ವೈರಲ್ ವೀಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ನ  ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋ ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ (ಪ್ರಾಣ ಪ್ರತಿಷ್ಠಾ) ಸಂಬಂಧವಿಲ್ಲ.

ಸತ್ಯ ಏನು?

ನಾವು ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆವು ಮತ್ತು ಜನವರಿ ೧೧ ರಂದು ಹಂಚಿಕೊಂಡ ಯೂಟ್ಯೂಬ್ ಚಾನೆಲ್ 'SPG BHARAT' ನಲ್ಲಿ ವೀಡಿಯೋ  ವರದಿಯನ್ನು ನಾವು ಕಂಡುಕೊಂಡೆವು. ವೈರಲ್ ವೀಡಿಯೋದಲ್ಲಿ ಕಂಡುಬರುವಂತೆ ಯೂಟ್ಯೂಬ್  ವೀಡಿಯೋದಲ್ಲಿಯೂ ಅದೇ ವ್ಯಕ್ತಿ ತನ್ನ ಕೈಯಲ್ಲಿ ನಡೆಯುವುದನ್ನು ತೋರಿಸುತ್ತದೆ.

 ವೈರಲ್ ಕ್ಲಿಪ್ ಮತ್ತು ಯುಟ್ಯೂಬ್ ವೀಡಿಯೋದ ಹೋಲಿಕೆ. (ಮೂಲ: ಎಕ್ಸ್ /ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೀಡಿಯೋ ನಿರೂಪಣೆಯ ಪ್ರಕಾರ, ಬಿಹಾರದ ಸಹರ್ಸಾ ಜಿಲ್ಲೆಯ ಬಿಚೂ ಬಾಬಾ ಎಂದು ಕರೆಯಲ್ಪಡುವ ನಿಹಾಲ್ ಕುಮಾರ್ ಸಿಂಗ್ ಅವರು ಜುಲೈ ೨೦೨೩ ರಲ್ಲಿ ಜಾರ್ಖಂಡ್‌ನ ದಿಯೋಘರ್ ಮತ್ತು ಬಸುಕಿನಾಥ್ ಕಡೆಗೆ ತಮ್ಮ ಕೈಗಳನ್ನು ಹಿಡಿದು ನಡೆಯಲು ಪ್ರಾರಂಭಿಸಿದರು. ವೀಡಿಯೋದಲ್ಲಿ, ವರದಿಗಾರರೊಂದಿಗೆ ಮಾತನಾಡುವಾಗ, ಸಿಂಗ್ ಅವರು ಉಲ್ಲೇಖಿಸಿದ್ದಾರೆ. ಜುಲೈ ೪, ೨೦೨೩ ರಂದು ಬಿಹಾರದ ಸುಲ್ತಂಗಂಜ್‌ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಹಿಂದೂ ದೇವರಾದ ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಬಸುಕಿನಾಥ್ ಧಾಮ್ (ದಿಯೋಘರ್‌ನಲ್ಲಿ) ತಲುಪಿದ ನಂತರ ಅದನ್ನು ಪೂರ್ಣಗೊಳಿಸುತ್ತಾರೆ. ಭಗವಾನ್ ಶಿವನ ಆಶೀರ್ವಾದದಿಂದಾಗಿ ಅನಾರೋಗ್ಯದ ತಂದೆಯ ಆರೋಗ್ಯ ಸುಧಾರಿಸಿದ ನಂತರ ಅವರು ಈ ಪ್ರಯಾಣವನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ. 

ಇದರಿಂದ ಸುಳಿವನ್ನು ತೆಗೆದುಕೊಂಡು, ಹಿಂದಿ ದಿನಪತ್ರಿಕೆ ಅಮರ್ ಉಜಾಲಾ ಮತ್ತು ಪ್ರಾದೇಶಿಕ ಸುದ್ದಿವಾಹಿನಿ ಈಟಿವಿ ಭಾರತ್ ಬಿಹಾರ್ ಅವರು ಜುಲೈ ೨೦೨೩ ರಲ್ಲಿ ಸಿಂಗ್ ಅವರ ಪ್ರಯಾಣವನ್ನು ಪ್ರಾರಂಭಿಸಿದಾಗ ಅವರ ಪ್ರಯಾಣದ ಬಗ್ಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು. 

ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಸಿಂಗ್ ಅವರ ಸಂಪರ್ಕ ಸಂಖ್ಯೆಯೊಂದಿಗಿನ ಪೋಷ್ಟರ್ ಕೂಡ ನಮಗೆ ಕಂಡುಬಂದಿದೆ.

ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡುತ್ತಾ, ಸಿಂಗ್ ವೈರಲ್ ಹೇಳಿಕೆಯನ್ನು ನಿರಾಕರಿಸಿದರು ಮತ್ತು ವೈರಲ್ ವೀಡಿಯೋವನ್ನು ಜನವರಿ ೧೦ ಮತ್ತು ೧೨ ರ ನಡುವೆ ತೆಗೆದಿರಬಹುದು ಮತ್ತು ಅವರು ದಿಯೋಘರ್ ನಗರವನ್ನು ದಾಟಿದ ನಂತರ ಬಸುಕಿನಾಥ್ ಧಾಮಕ್ಕೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದರು. "ನಾನು ಇನ್ನೂ ಬಸುಕಿನಾಥ್ ಧಾಮ್‌ಗೆ ನನ್ನ ಯಾತ್ರೆಯಲ್ಲಿದ್ದೇನೆ ಮತ್ತು ಅಲ್ಲಿಗೆ ತಲುಪಲು ನನಗೆ ಇನ್ನೂ ೨೫ ರಿಂದ ೩೦ ದಿನಗಳು ಬೇಕಾಗಬಹುದು" ಎಂದು ಅವರು ಹೇಳಿದರು.

ತೀರ್ಪು

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತನೊಬ್ಬ ತನ್ನ ಕೈ ಇಂದ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೋ ತೋರಿಸುತ್ತಿಲ್ಲ. ವೀಡಿಯೋದಲ್ಲಿರುವ ವ್ಯಕ್ತಿ ಸಿಂಗ್ ಅವರು ಜಾರ್ಖಂಡ್‌ನ ಬಸುಕಿನಾಥ್ ಧಾಮ್‌ಗೆ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.