ಇಲ್ಲ, ವೈರಲ್ ಕ್ಲಿಪ್‌ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊಹರಂ ಆಚರಣೆಗಳಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವುದಿಲ್ಲ

ಮೂಲಕ: ಮೊಹಮ್ಮದ್ ಸಲ್ಮಾನ್
ಅಕ್ಟೋಬರ್ 9 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ವೈರಲ್ ಕ್ಲಿಪ್‌ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊಹರಂ ಆಚರಣೆಗಳಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವುದಿಲ್ಲ

ರಾಹುಲ್ ಗಾಂಧಿಯವರು ಮುಹರಂ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಆನ್‌ಲೈನ್ ಪೋಷ್ಟ್ ಗಳು ಸುಳ್ಳು ಹೇಳುತ್ತಿವೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋವನ್ನು ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿಯವರು ‘ಪೋತರಾಜುಲು’ ಸಾಂಪ್ರದಾಯಕ ಆಚರಣೆಯಲ್ಲಿ ಭಾಗವಹಿಸಿದಾಗ ತೆಗೆಯಲಾಗಿದೆ. ಇದು ಮೊಹರಂಗೆ ಸಂಬಂಧಿಸಿಲ್ಲ

ಕ್ಲೈಮ್ ಐಡಿ c1a872eb

ಇಲ್ಲಿನ ಹೇಳಿಕೆಯೇನು?

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ವತಃ ಚಾಟಿ ಬೀಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಗಾಂಧಿಯವರು ಮೊಹರಂ ಆಚರಿಸುತ್ತಿರುವುದನ್ನು ತೋರಿಸುತ್ತದೆ ಎಂದು ಪೋಷ್ಟ್ ಗಳು ಹೇಳಿಕೊಂಡಿವೆ. ಇಂತಹ ಹೇಳಿಕೆಗಳನ್ನು ಒಳಗೊಂಡಿರುವ ಪೋಷ್ಟ್ ಗಳ ಆರ್ಕೈವ್ ಆವೃತ್ತಿಯನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆನ್‌ಲೈನ್‌ನಲ್ಲಿ ಮಾಡಲಾದ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು)

ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಮೊಹರಂನ ಆಚರಣೆಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು ಎಂದು ಪೋಷ್ಟ್ ಗಳು ಹೇಳುತ್ತವೆ. ಈ ತಿಂಗಳ ಹತ್ತನೇ ದಿನದಂದು (ಕ್ರಿ.ಶ. ೬೮೦), ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಕುಟುಂಬ ಮತ್ತು ಸಹಚರರೊಂದಿಗೆ ಕರ್ಬಲಾದಲ್ಲಿ ಹುತಾತ್ಮರಾದರು. ಈ ದಿನದಂದು, ಮುಸ್ಲಿಮರು, ವಿಶೇಷವಾಗಿ ಶಿಯಾ ಮುಸ್ಲಿಮರು, ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಮತ್ತು ಚಾವಟಿಯಿಂದ ಹೊಡೆಯುವ ಮೂಲಕ ಇಮಾಮ್ ಹುಸೇನ್ ಅವರ ಹುತಾತ್ಮರ ಶೋಕವನ್ನು ವ್ಯಕ್ತಪಡಿಸುತ್ತಾರೆ.

ಆದರೆ, ವೀಡಿಯೋದೊಂದಿಗೆ ಹಂಚಿಕೊಳ್ಳಲಾದ ಹೇಳಿಕೆ ತಪ್ಪು. ಈ ವೀಡಿಯೋವನ್ನು ತೆಲಂಗಾಣದಲ್ಲಿ ೨೦೨೨ ರಲ್ಲಿ ಕಾಂಗ್ರೆಸ್‌ ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತೆಗೆದದ್ದು, ರಾಹುಲ್ ಗಾಂಧಿಯಾರು 'ಪೋತರಾಜುಲು' ಸಂಪ್ರದಾಯದ ಭಾಗವಾಗಿ ಸ್ವತಃ ಚಾವಟಿಯಿಂದ ಹೊಡೆಯುವುದನ್ನು ತೋರಿಸುತ್ತದೆ.

ಇಲ್ಲಿನ ಸತ್ಯಾಂಶವೇನು? 

ವೀಡಿಯೋವಿನ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಡೆಸಿದ ರಿವರ್ಸ್ ಇಮೇಜ್ ಹುಡುಕಾಟವು ನಮ್ಮನ್ನು ನವೆಂಬರ್ ೩, ೨೦೨೨ ರಂದು ಇಂಗ್ಲಿಷ್ ಸುದ್ದಿ ಮಾಧ್ಯಮ ದಿ ಹಿಂದೂ ಪ್ರಕಟಿಸಿದ ವರದಿಗೆ ಕರೆದೊಯ್ಯಿತು. ವೈರಲ್ ಕ್ಲಿಪ್‌ನಲ್ಲಿರುವಂತೆಯೇ ರಾಹುಲ್ ಗಾಂಧಿ ಸ್ವತಃ ಚಾವಟಿಯಿಂದ ಹೊಡೆಯುತ್ತಿರುವ ಫೋಟೋವನ್ನು ವರದಿಯು ಹೊಂದಿದೆ. ತೆಲಂಗಾಣದ ಶ್ಲಾಘಿತ ಬೋನಾಲು ಹಬ್ಬದ ಅವಿಭಾಜ್ಯ ಅಂಗವಾದ 'ಪೋತರಾಜುಲು' ಸಂಪ್ರದಾಯದ ಭಾಗವಾಗಿ ಕಾಂಗ್ರೆಸ್ ನಾಯಕ ತನ್ನನ್ನು ತಾನೇ ಚಾವಟಿಯಿಂದ ಹೊಡೆದುಕೊಂಡಿದ್ದಾರೆ ಎಂದು ದಿ ಹಿಂದೂ ವರದಿ ಹೇಳಿದೆ. ಬುಡಗ ಜಂಗಲು ಸಮುದಾಯವು "ಗ್ರಾಮಗಳಿಗೆ ಭೇಟಿ ನೀಡಿ ಜೀವನೋಪಾಯಕ್ಕಾಗಿ ಚಾಟಿ ಬೀಸುತ್ತಾ ಹಣ ಸಂಗ್ರಹಿಸುವ" ಪದ್ಧತಿಯನ್ನು ಆಚರಿಸುತ್ತದೆ ಎಂದು ವರದಿಯಲ್ಲಿ ಸೇರಿಸಲಾಗಿದೆ. ಸಮುದಾಯದವರು ತಮ್ಮ ಮುಂದೆ ಅದೇ ರೀತಿ ಮಾಡಿದಾಗ ಗಾಂಧಿಯವರು ಸ್ವತಃ ಚಾವಟಿ ಮಾಡಲು ಬಯಸಿದ್ದರು ಎಂದು ವರದಿ ಹೇಳಿದೆ.

೨೦೨೨ ರ ನವೆಂಬರ್‌ ನಲ್ಲಿ ರಾಹುಲ್ ಗಾಂಧಿಯವರು ಬೋನಾಲು ಆಚರಣೆಯಲ್ಲಿ ಪಾಲ್ಗೊಂಡರು ಎಂಬ ದಿ ಹಿಂದೂ ವರದಿಯ  ಸ್ಕ್ರೀನ್‌ಶಾಟ್. (ಮೂಲ: ದಿ ಹಿಂದೂ/ಸ್ಕ್ರೀನ್‌ಶಾಟ್)

ಅದರ ಅಧಿಕೃತ ಎಕ್ಸ್  ಖಾತೆಯಲ್ಲಿ, ತೆಲಂಗಾಣದಿಂದ ಪ್ರಸಾರವನ್ನು ಕೇಂದ್ರೀಕರಿಸುವ ಹಿಂದೂ-ಹೈದರಾಬಾದ್- ವೈರಲ್ ಆವೃತ್ತಿಯ ದೀರ್ಘ ವೀಡಿಯೋವನ್ನು ಹಂಚಿಕೊಂಡಿದೆ. ಈ ಪೋಷ್ಟ್ ನ ಶೀರ್ಷಿಕೆಯು, "ರಾಹುಲ್ ಗಾಂಧಿ ತೆಲಂಗಾಣದಲ್ಲಿ #ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಬೋನಾಲು ಹಬ್ಬದ ಭಾಗವಾಗಿರುವ ಪೋತರಾಜುಗಳಂತೆಯೇ ಸ್ವತಃ ಚಾಟಿಯೇಟು ಹೊಡೆದುಕೊಂಡಿದ್ದಾರೆ. ಸಂಗಾರೆಡ್ಡಿ ಶಾಸಕ ಟಿ ಜಯಪ್ರಕಾಶ್ ರೆಡ್ಡಿ ಅವರು ತನಗೆ ಹಾನಿಯಾಗದಂತೆ ಚಾಟಿಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ತೋರಿಸಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)," ಎಂದು ಹೇಳಿಕೊಂಡಿದೆ.

ಎಕ್ಸ್ ನಲ್ಲಿ ದಿ ಹಿಂದೂ-ಹೈದರಾಬಾದ್ ಹಂಚಿಕೊಂಡ ವೀಡಿಯೋ ಮತ್ತು ವೈರಲ್ ವೀಡಿಯೋ ನಡುವಿನ ಹೋಲಿಕೆ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು)

ದಿ ಎಕನಾಮಿಕ್ ಟೈಮ್ಸ್ ಮತ್ತು ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಹಲವಾರು 
 ಸುದ್ದಿ ಮಾಧ್ಯಮಗಳು ನವೆಂಬರ್ ೨೦೨೨ ರಲ್ಲಿ 'ಪೋತರಾಜುಲು' ಸಂಪ್ರದಾಯದ ಭಾಗವಾಗಿ ರಾಹುಲ್ ಗಾಂಧಿಯವರು ಸ್ವತಃ ಚಾಟಿಯಿಂದ ಹೊಡೆದುಕೊಂಡಿರುವ ಬಗ್ಗೆ ವರದಿಗಳನ್ನು ಪ್ರಕಟಿಸಿದ್ದವು. ಈ ವೀಡಿಯೋವನ್ನು ನವೆಂಬರ್ ೩, ೨೦೨೨ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಖಾತೆಯಿಂದಲೂ ಹಂಚಿಕೊಳ್ಳಲಾಗಿದೆ.

ನವೆಂಬರ್ ೨೦೨೨ ರ  ಕಾಂಗ್ರೆಸ್‌ ಪಕ್ಷದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ:ಎಕ್ಸ್/ಸ್ಕ್ರೀನ್‌ಶಾಟ್)

ಏನು ಈ ಬೋನಾಲು ಹಬ್ಬ?

ಹೈದರಾಬಾದ್ ಜಿಲ್ಲೆಯ ಅಧಿಕೃತ ಸರ್ಕಾರಿ ವೆಬ್‌ಸೈಟ್ ಪ್ರಕಾರ, ಬೋನಾಲು, ಮಹಾಕಾಳಿ ದೇವಿಯನ್ನು ಪೂಜಿಸಲು ಆಚರಿಸಲಾಗುವ ಹಿಂದೂ ಹಬ್ಬವಾಗಿದೆ. "ಇದು ಅವಳಿ ನಗರಗಳಾದ ಹೈದರಾಬಾದ್ ಮತ್ತು ಸಿಕಂದರಾಬಾದ್ ಮತ್ತು ಭಾರತದ ತೆಲಂಗಾಣ ರಾಜ್ಯದ ಇತರ ಭಾಗಗಳಲ್ಲಿ ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದೆ. ಬೋನಾಲುವನ್ನು ಸಾಮಾನ್ಯವಾಗಿ ಜುಲೈ/ಆಗಸ್ಟ್‌ನಲ್ಲಿ ಬರುವ ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ" ಎಂದು ಕೂಡ ವೆಬ್‌ಸೈಟ್ ಹೇಳುತ್ತದೆ.

ಪೋತರಾಜುಲು, ಅಥವಾ ಪೋತುರಾಜು, ಹಳ್ಳಿಗಳಲ್ಲಿ ಪೂಜಿಸುವ ವಿವಿಧ ದೇವರು ಮತ್ತು ದೇವತೆಗಳ ರಕ್ಷಕ ದೇವತೆ ಎಂದು ಪರಿಗಣಿಸಲಾಗಿದೆ. "ಮಾತೆ ದೇವಿಯ ಸಹೋದರನೆಂದು ಪರಿಗಣಿಸಲ್ಪಟ್ಟ ಪೋತುರಾಜು, ಬರಿಯ ದೇಹ ಮತ್ತು ಉತ್ತಮ ದೇಹದಿಂದ ಪ್ರತಿನಿಧಿಸಲ್ಪಟ್ಟಿದ್ದಾನೆ, ಆತನು ಸಣ್ಣ, ಬಿಗಿಯಾಗಿ ಸುತ್ತುವ ಕೆಂಪು ಪಂಚೆ ಮತ್ತು ಕಣಕಾಲುಗಳ ಬಳಿ ಗಂಟೆಗಳನ್ನು ಧರಿಸುತ್ತಾನೆ ಮತ್ತು ಆತನ ಮೈಮೇಲೆ ಸಿಂಧೂರ ಸೇರಿದಂತೆ ಅವನ ದೇಹದ ಮೇಲೆ ಅರಿಶಿನವನ್ನು ಹಚ್ಚಿಕೊಂಡಿರುತ್ತಾನೆ (ಕನ್ನಡಕ್ಕೆ ಅನುವಾದಿಸಲಾಗಿದೆ), " ಎಂದು ವೆಬ್‌ಸೈಟ್ ನಲ್ಲಿ ಹೇಳಲಾಗಿದೆ. ಚಾವಟಿಯನ್ನು ಮಹಾಕಾಳಿ ದೇವಿಗೆ ಅರ್ಪಣೆ ಎಂದು ಪರಿಗಣಿಸಲಾಗುತ್ತದೆ.

ತೀರ್ಪು 

ಮೊಹರಂ ಮೆರವಣಿಗೆ ವೇಳೆ ರಾಹುಲ್ ಗಾಂಧಿ ಚಾಟಿ ಬೀಸುತ್ತಿರುವುದಾಗಿ ತೋರಿಸುವ ವೈರಲ್ ವೀಡಿಯೋಗಳ ಹೇಳಿಕೆ ತಪ್ಪು. ತೆಲಂಗಾಣದಲ್ಲಿ ಹಿಂದೂ ಹಬ್ಬವಾದ ಬೋನಾಲುವಿನ ಅವಿಭಾಜ್ಯ ಅಂಗವಾದ 'ಪೋತರಾಜುಲು' ಸಂಪ್ರದಾಯದ ಭಾಗವಾಗಿ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿಯವರು ಸ್ವತಃ ಚಾವಟಿಯಿಂದ ಹೊಡೆಯುವುದನ್ನು ಈ ವೀಡಿಯೋ ತೋರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯಾನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.