ಗುಜರಾತ್‌ನ ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 5 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗುಜರಾತ್‌ನ ಹಳೆಯ, ಸಂಬಂಧವಿಲ್ಲದ ವೀಡಿಯೋವನ್ನು ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಈ ವೀಡಿಯೋ ಸೆಪ್ಟೆಂಬರ್ ೨೦೨೨ ರಿಂದ ಇಂಟರ್ನೆಟ್‌ನಲ್ಲಿ ಲಭ್ಯವಿದೆ ಮತ್ತು ಸೂರತ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋಗೆ ಸಂಬಂಧಿಸಿದ್ದು.

ಕ್ಲೈಮ್ ಐಡಿ b4630a8f

ಸಂದರ್ಭ

ಏಪ್ರಿಲ್ ೨೦೨೩ರಿಂದ, ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪದ ಮೇಲೆ ರೆಸಲಿಂಗ್ ಫೆಡರೇಶನ್ ಆಫ್ ಇಂಡಿಯಾದ (WFI) ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಭಾರತೀಯ ಕುಸ್ತಿಪಟುಗಳು ಪ್ರತಿಭಟಿಸುತ್ತಿದ್ದಾರೆ. ಮೇ ೨೧ರೊಳಗೆ ಸಿಂಗ್ ಅವರ ಬಂಧನದ ಬೇಡಿಕೆಯನ್ನು ಈಡೇರಿಸದಿದ್ದರೆ "ದೊಡ್ಡ ನಿರ್ಧಾರ" ತೆಗೆದುಕೊಳ್ಳುವುದಾಗಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಎಚ್ಚರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಕುಸ್ತಿಪಟುಗಳು ತಮ್ಮ ಬೆಂಬಲಕ್ಕಾಗಿ ತಮ್ಮ ಅಂತರಾಷ್ಟ್ರೀಯ ಕೌಂಟರ್ಪಾರ್ಟ್ಸ್ ಅನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ನಡುವೆ, ಚಾಲನೆಯಲ್ಲಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕೆಲವು ಸಂಬಂಧವಿಲ್ಲದ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೋವನ್ನು, ಇದು ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸುವ ಸಾರ್ವಜನಿಕ ರ‍್ಯಾಲಿಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಈ ವೀಡಿಯೋ ಪಕ್ಷಿ ನೋಟದಿಂದ ಕಾಣುವ ಜನಸಾಗರವನ್ನು ತೋರುತ್ತದೆ. ಟ್ವಿಟ್ಟರ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಬಳಕೆದಾರರೊಬ್ಬರು, "ಭಾರತದಾದ್ಯಂತ ಬೆಂಬಲ" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, "ದೇಶದ ಮಾನ ಮರ್ಯಾದೆ ರಸ್ತೆಮೇಲಿದ್ದಾರೆ ಬೆಂಬಲ ನೀಡಲೇಬೇಕು.ಕುಸ್ತಿಪಟುಗಳಿಗೆ ಭಾರತದಾದ್ಯಂತ ಬೆಂಬಲ ಸಿಕ್ಕಿತು." ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಿದ್ದಾರೆ. ಭಾರತೀಯ ಕುಸ್ತಿಪಟು ಸಾಕ್ಷಿ ಮಲಿಕ್ ಇದೇ ರೀತಿಯ ಹೇಳಿಕೆಯೊಂದಿಗೆ ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ಭಾರತದಾದ್ಯಂತ ಬೆಂಬಲ #wrestlersprotest #istandwithmychampions," ಎಂದು ಅವರು ವೈರಲ್ ಟ್ವೀಟ್‌ನಲ್ಲಿ ಬರೆದಿದ್ದಾರೆ. ಆದರೆ ನಂತರ ಟ್ವೀಟ್ ಡಿಲೀಟ್ ಮಾಡಲಾಗಿದೆ. 

ವೀಡಿಯೋ ಹಳೆಯದು ಮತ್ತು ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. 

ವಾಸ್ತವವಾಗಿ

ಸಾಕ್ಷಿ ಮಲಿಕ್ ಅವರ ಆರ್ಕೈವ್ ಮಾಡಿದ ಟ್ವೀಟ್ ನಲ್ಲಿ ಹಲವಾರು ಬಳಕೆದಾರರು ಅದು ಹಳೆಯ ವೀಡಿಯೋ ಎಂದು ಕಾಮೆಂಟ್ ಮಾಡಿರುವುದನ್ನು ನಾವು ನೋಡಿದೆವು. ಇಂತಹ ಕಾಮೆಂಟ್ ಒಂದರಲ್ಲಿ ಅದೇ ವೀಡಿಯೋದ ಅಲ್ಪ ದೀರ್ಘ ಆವೃತ್ತಿಯ ವೀಡಿಯೋವೊಂದನ್ನು ನಾವು ಕಂಡುಕೊಂಡೆವು. ಟ್ವೀಟ್ ನಲ್ಲೆ ಈ ವೀಡಿಯೋ ರಾಜಸ್ಥಾನದ ಜೈಪುರದಲ್ಲಿ ಒಬಿಸಿ ರ‍್ಯಾಲಿಯನ್ನು ತೋರಿಸುತ್ತದೆ ಎಂದು ಹೇಳುತ್ತದೆ. ಆದರೆ ಹಲವಾರು ಕಾಮೆಂಟ್ಸ್ ಗಳು ವೀಡಿಯೋ ರಾಜಸ್ಥಾನದಿಂದಲ್ಲ, ಸೂರತ್‌ ನಲ್ಲಿ ಚಿತ್ರೀಕರಿಸಿದ್ದು ಎಂದು ಹೇಳಿದ್ದಾರೆ. 

ಇದರಿಂದ ಸೂಚನೆಯನ್ನು ತೆಗೆದುಕೊಂಡು ವೀಡಿಯೋದ ಒಂದರ ಸ್ಕ್ರೀನ್‌ಶಾಟ್ ಮೇಲೆ ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಅದರಿಂದ ನಾವು ಸೆಪ್ಟೆಂಬರ್ ೩೦, ೨೦೨೨ ರಂದು ಅಪ್‌ಲೋಡ್ ಮಾಡಿದ ಯೂಟ್ಯೂಬ್ ಶಾರ್ಟ್ಸ್ ಅನ್ನು ಕಂಡುಕೊಂಡೆವು. ವೀಡಿಯೋದಲ್ಲಿ ಬರೆದ ಶೀರ್ಷಿಕೆಯು ಅದನ್ನು ಸೂರತ್‌ನಲ್ಲಿ ಪ್ರಧಾನಿ ಮೋದಿಯವರ ರೋಡ್‌ಶೋ ಸಂದರ್ಭದಲ್ಲಿ ನೀಲಗಿರಿ ವೃತ್ತದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳುತ್ತದೆ.

ದೊಡ್ಡ ಜನಸಮೂಹ ನೆರೆದಿದ್ದ ಪ್ರದೇಶದ ಮಧ್ಯದಲ್ಲಿ ಕುದುರೆಯ ಮೇಲಿರುವ ಆಕೃತಿಯ ಪ್ರತಿಮೆಯನ್ನು ನಾವು ಗಮನಿಸಿದೆವು. ಗೂಗಲ್ ಸ್ಟ್ರೀಟ್ ವ್ಯೂ ಬಳಸಿದಾಗ ನಮಗೆ, ವೈರಲ್ ವೀಡಿಯೋದಲ್ಲಿ ಕಂಡುಬಂದ ಜಾಗವು ಸೂರತ್‌ನ ರುಸ್ತಮ್ ಬಾಗ್ ಪ್ರದೇಶದಲ್ಲಿ, ನೀಲಗಿರಿ ವೃತ್ತಕ್ಕೆ ಪರಿಪೂರ್ಣ ಹೊಂದಾಣಿಕೆಯನ್ನು ತೋರುತ್ತದೆ. ವೃತ್ತದ ಮಧ್ಯದಲ್ಲಿ ನಾವು ಅದೇ ಪ್ರತಿಮೆಯನ್ನು ಗಮನಿಸಿದ್ದೇವೆ, ಮತ್ತು ಅದು ರಾಣಿ ಲಕ್ಷ್ಮೀಬಾಯಿಯವರದ್ದು ಎಂದು ಸ್ಪಷ್ಟವಾಗಿದೆ.

ಸೆಪ್ಟೆಂಬರ್ ೨೮, ೨೦೨೨ರಂದು ಅಪ್‌ಲೋಡ್ ಮಾಡಲಾದ 'ಸೂರತ್ ಇಂಡಿಯನ್ ವ್ಲಾಗರ್ ರೀತೀಶ್ರಾಜ್' ಎಂಬ ಯೂಟ್ಯೂಬ್ ಖಾತೆಯ ವೀಡಿಯೊವನ್ನು ನಾವು ನೋಡಿದೆವು. ಈ ವೀಡಿಯೋ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿಯವರ ರ‍್ಯಾಲಿಯ ಮುನ್ನ ಸೂರತ್‌ನಲ್ಲಿ ನಡೆದ ಸಿದ್ಧತೆಯನ್ನು ಸೆರೆಹಿಡಿಯುತ್ತದೆ ಮತ್ತು ಅಲಂಕೃತವಾದ ನೀಲಗಿರಿ ವೃತ್ತದ ದೃಶ್ಯಗಳನ್ನು ತೋರಿಸುತ್ತದೆ. ೨:೨೮ ನಿಮಿಷಗಳಲ್ಲಿ, ವೈರಲ್ ವೀಡಿಯೋದಲ್ಲಿ ಕಂಡುಬರುವ ರಾಣಿ ಲಕ್ಷ್ಮೀಬಾಯಿಯವರ ಅದೇ ಪ್ರತಿಮೆ, ಕೇಸರಿ ಧ್ವಜಗಳು ಮತ್ತು ಬಿಜೆಪಿಯ ಧ್ವಜಗಳನ್ನು ನಾವು ನೋಡಬಹುದು. ೨:೪೦ ನಿಮಿಷಗಳಿಂದ ಆರಂಭವಾಗಿ, ವೃತ್ತದಿಂದ ಹೊರಡುವ ರಸ್ತೆಯ ಸೈಟ್‌ನಲ್ಲಿ ಎತ್ತರದ ಕೇಸರಿ ಧ್ವಜಗಳನ್ನು ಹಾರಿಸಿರುವುದನ್ನು ನಾವು ನೋಡಬಹುದು. ವೈರಲ್ ವೀಡಿಯೋದಲ್ಲಿಯೂ ಕೂಡ ನಾವು ಈ ಧ್ವಜಗಳ ಸಾಲನ್ನು ೦:೧೪ ನಿಮಿಷಗಳ ಮಾರ್ಕ್ ನಲ್ಲಿ ಪ್ರತಿಮೆಯ ಎಡಭಾಗದಿಂದ ಪ್ರಾರಂಭವಾಗುದನ್ನು ನಾವು ಕಾಣಬಹುದು.

ವೃತ್ತದ ಬಲಕ್ಕೆ ಗೋಚರಿಸುವ ಮೋದಿಯ ಪೋಸ್ಟರ್ ಅನ್ನು ನಾವು ಗಮನಿಸಿದ್ದೇವೆ, ಇಂತಹ ದೃಶ್ಯಗಳು ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಕಂಡುಬಂದಿಲ್ಲ. ಪ್ರಧಾನಿ ಮೋದಿಯವರ ಸೂರತ್ ಭೇಟಿ ಮತ್ತು ಅವರ ರೋಡ್‌ಶೋನ ವೀಡಿಯೋ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ಸೆಪ್ಟೆಂಬರ್ ೨೯ರಂದು ಸೂರತ್‌ನಲ್ಲಿ ಸಾರ್ವಜನಿಕ ರ‍್ಯಾಲಿ ಇತ್ತು ಮತ್ತು ಬೀದಿಗಳಲ್ಲಿ ಭಾರಿ ಜನರು ಸೇರಿದ್ದರು ಎಂಬುದನ್ನು ಇದು ಮತ್ತಷ್ಟು ಸಾಬೀತುಪಡಿಸುತ್ತದೆ. ಈ ವೀಡಿಯೋದಲ್ಲಿ ಕೇಸರಿ ಧ್ವಜಗಳು, ಪ್ರಧಾನಿ ಮೋದಿಯವರ ಪೋಸ್ಟರ್‌ಗಳು ಮತ್ತು ಬಿಜೆಪಿ ಧ್ವಜಗಳನ್ನು ಸಹ ನಾವು ನೋಡಬಹುದು.

೨೦೨೨ರ ಸೆಪ್ಟೆಂಬರ್ ೨೯ ರಂದು ನೀಲಗಿರಿ ಗ್ರೌಂಡ್ ಲಿಂಬಯಾಟ್‌ನಲ್ಲಿ ಪ್ರಧಾನಿ ಮೋದಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ ಎಂದು ಹೇಳುವ "ಮೈ ಸೂರತ್" ಎಂಬ ಯೂಟ್ಯೂಬ್ ಚಾನೆಲ್‌ನಿಂದ ಅಪ್‌ಲೋಡ್ ಮಾಡಲಾದ ಮತ್ತೊಂದು ವೀಡಿಯೋವನ್ನೂ ಸಹ ನಾವು ಕಂಡುಕೊಂಡಿದ್ದೇವೆ. ಇಂಡಿಯನ್ ಎಕ್ಸ್‌ಪ್ರೆಸ್ ನ ಸೆಪ್ಟೆಂಬರ್ ೨೪, ೨೦೨೨ ವರದಿಯ ಪ್ರಕಾರ ಪ್ರಧಾನ ಮಂತ್ರಿಯವರು ಸೂರತ್ ನಲ್ಲಿ ೩,೪೦೦ ಕೋಟಿ ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಸೆಪ್ಟೆಂಬರ್ ೨೯ ರಂದು ಶಂಕುಸ್ಥಾಪನೆ ಮಾಡಲಿದ್ದರು ಎಂದು ಹೇಳುತ್ತದೆ. ಅದಲ್ಲದೆ ವರದಿಯು, ಸೂರತ್‌ನ ಲಿಂಬಾಯತ್ ಪ್ರದೇಶದ ನೀಲಗಿರಿ ಮೈದಾನದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಪ್ರಧಾನಿಯವರ ಭೇಟಿಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ವಿವರಿಸಿದೆ. 

ತೀರ್ಪು

ವೈರಲ್ ವೀಡಿಯೋ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಾಲು ಏರ್ಪಡಿಸಲಾದ ಸಾರ್ವಜನಿಕ ರ‍್ಯಾಲಿಯನ್ನು ತೋರಿಸುವುದಿಲ್ಲ. ಈ ವೀಡಿಯೋ ೨೦೨೨ ರಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ ಮತ್ತು ಸೆಪ್ಟೆಂಬರ್ ೨೯, ೨೦೨೨ ರಂದು ಸೂರತ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್‌ ಶೋ ಅನ್ನು ತೋರಿಸುತ್ತದೆ. ವೀಡಿಯೋದ ಸ್ಥಳವು ಸೂರತ್‌ನ ನೀಲಗಿರಿ ಸರ್ಕಲ್ ಎಂದು ಗೂಗಲ್ ಸ್ಟ್ರೀಟ್ ವ್ಯೂ ದೃಢೀಕರಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.