ಕೋಮುವಾದಿ ಪೋಷ್ಟ್ ಗಳು ಉದಯಪುರ ಕೊಲೆ ಸಂತ್ರಸ್ತರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ ಕೇವಲ ರೂ. ೫ ಲಕ್ಷ ನೀಡಿತು ಎಂದು ತಪ್ಪಾಗಿ ಹೇಳಿಕೊಂಡಿವೆ

ಮೂಲಕ: ಮೊಹಮ್ಮದ್ ಸಲ್ಮಾನ್
ಅಕ್ಟೋಬರ್ 11 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೋಮುವಾದಿ ಪೋಷ್ಟ್ ಗಳು ಉದಯಪುರ ಕೊಲೆ ಸಂತ್ರಸ್ತರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ ಕೇವಲ ರೂ. ೫ ಲಕ್ಷ ನೀಡಿತು ಎಂದು ತಪ್ಪಾಗಿ ಹೇಳಿಕೊಂಡಿವೆ

ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಎರಡು ಸರ್ಕಾರಿ ಉದ್ಯೋಗಗಳು ಸೇರಿದಂತೆ ರಾಜಸ್ಥಾನ ಸರ್ಕಾರವು ಕುಟುಂಬಕ್ಕೆ ರೂ. ೫೦ ಲಕ್ಷ ಪರಿಹಾರವನ್ನು ನೀಡಿದೆ ಎಂದು ಉದಯಪುರ ಹತ್ಯೆಯ ಸಂತ್ರಸ್ತರ ಮಗ ನಮಗೆ ತಿಳಿಸಿದ್ದಾರೆ.

ಕ್ಲೈಮ್ ಐಡಿ 150f5e47

ಉತ್ತರ ಭಾರತದ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಸೆಪ್ಟೆಂಬರ್ ೨೯ ರಂದು ೧೭ ವರ್ಷದ ಇಕ್ಬಾಲ್ ಎಂಬ ಮುಸ್ಲಿಂ ಯುವಕನನ್ನು ದೊಣ್ಣೆಯಿಂದ ಹೊಡೆದು ಕೊಂದ ನಂತರ ಉದ್ವಿಗ್ನತೆ ಉಂಟಾಗಿದೆ. ರಸ್ತೆ ಆಕ್ರೋಶ ಘಟನೆಯೊಂದರ ನಂತರ ಉಂಟಾದ ತಪ್ಪು ತಿಳುವಳಿಕೆಯಿಂದ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೊಂದು ಸಮುದಾಯದ ಜನರ ಕೈಯಿಂದ ಆದ ಇಕ್ಬಾಲ್ ಅವರ ಸಾವಿನ ನಂತರ, ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ ರೂ. ೫೦ ಲಕ್ಷ ಪರಿಹಾರವನ್ನು ಘೋಷಿಸಿತು. ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಗುತ್ತಿಗೆ ಕೆಲಸ ಹಾಗೂ ಡೇರಿ ಬೂತ್ ಕೂಡ ಮಂಜೂರು ಮಾಡಲಾಗಿದೆ.

ಇಲ್ಲಿನ ಹೇಳಿಕೆಯೇನು? 

ಇಕ್ಬಾಲ್‌ನ ಮರಣ ಸಂಭವಿಸಿ, ರಾಜ್ಯ ಸರ್ಕಾರದಿಂದ ಪರಿಹಾರದ ನೀಡಲಾದ ನಂತರ, ಸಾಮಾಜಿಕ ಮಾಧ್ಯಮದಲ್ಲಿ (ಆರ್ಕೈವ್ ಆವೃತ್ತಿಯನ್ನು ನೋಡಿ) ರಾಜ್ಯ ಸರ್ಕಾರವು ಇಕ್ಬಾಲ್‌ನ ಕುಟುಂಬಕ್ಕೆ ರೂ. ೫೦ ಲಕ್ಷ ಪರಿಹಾರವನ್ನು ಘೋಷಿಸಿದಾಗ ಉದಯಪುರದಲ್ಲಿ ಕನ್ಹಯ್ಯಾಲಾಲ್ ಹತ್ಯೆಯ ನಂತರ ಕಳೆದ ವರ್ಷ ಕೇವಲ ರೂ. ೫ ಲಕ್ಷ ಪರಿಹಾರವನ್ನು ಘೋಷಿಸಲಾಗಿದೆ ಎಂದು ಹೇಳಿಕೊಂಡು ಬ್ಯಾಂಕ್ ಚೆಕ್‌ನ ಚಿತ್ರವಿರುವ ಪೋಷ್ಟ್ ಪ್ರಸಾರ ಮಾಡಲಾಯಿತು. ಜೂನ್ ೨೦೨೨ ರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಮಾಜಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ನೂಪುರ್ ಶರ್ಮಾ ಅವರು ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಬೆಂಬಲಿಸುವ ಪೋಷ್ಟ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಆರೋಪದ ಮೇಲೆ ಉದಯಪುರದಲ್ಲಿ ಕನ್ಹಯ್ಯಾಲಾಲ್ ಎಂಬ ಟೈಲರ್ ಅನ್ನು ಇಬ್ಬರು ಮುಸ್ಲಿಂ ಯುವಕರು ಕೊಂದಿದ್ದರು.

ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಕೋಮು ಕೋನದಿಂದ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ತಾರತಮ್ಯ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿವೆ. ಅದೇ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾದ ಇತರ ಪೋಸ್ಟ್‌ಗಳ ಆರ್ಕೈವ್ ಆವೃತ್ತಿಯನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿ.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಆದರೆ ಈ ವೈರಲ್ ಹೇಳಿಕೆಗಳು ತಪ್ಪು ಏಕೆಂದರೆ ರಾಜಸ್ಥಾನ ಸರ್ಕಾರವು ಕನ್ಹಯ್ಯಾಲಾಲ್ ಅವರ ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗವನ್ನು ನೀಡುವುದರ ಜೊತೆಗೆ ಅವರ ಕುಟುಂಬಕ್ಕೆ ರೂ. ೫೦ ಲಕ್ಷ ಪರಿಹಾರವನ್ನು ಕೂಡ ಘೋಷಿಸಿದೆ.

ಇಲ್ಲಿನ ವಾಸ್ತವಾಂಶಗಳೇನು?

ನಾವು ಇಕ್ಬಾಲ್ ಸಾವಿನ ಕುರಿತು ಮಾಧ್ಯಮ ವರದಿಗಳನ್ನು ಪರಿಶೀಲಿಸಿದ್ದೇವೆ ಮತ್ತು ಅಕ್ಟೋಬರ್ ೧ ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ನೋಡಿದ್ದೇವೆ. ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಅವರು ಹೀಗೆ ಹೇಳಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ, “ಎರಡು ಮೋಟಾರ್ ಸೈಕಲ್‌ಗಳು ಡಿಕ್ಕಿ ಹೊಡೆದಿದ್ದು ಅದನ್ನು ನೋಡಲು ಅಲ್ಲಿ ಗಾಡಿ ನಿಲ್ಲಿಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಯಾವುದೇ ತಪ್ಪು ಉದ್ದೇಶ ಇರಲಿಲ್ಲ, ಇದು ಕೇವಲ ತಪ್ಪು ತಿಳುವಳಿಕೆಯಿಂದ ಉಂಟಾಗಿದೆ." ಪೊಲೀಸರ ಪ್ರಕಾರ, ಬೈಕ್ ಸವಾರರು ಬಿದ್ದ ನಂತರ ಅವರಿಗೆ ಸಹಾಯ ಮಾಡಲು ಇಕ್ಬಾಲ್ ನಿಲ್ಲಿಸಿದ್ದರು.

ಇನ್ನೊಂದು ಸಮುದಾಯದ ಸ್ಥಳೀಯ ನಿವಾಸಿಯೊಂದಿಗೆ ಇಕ್ಬಾಲ್ ವಾಗ್ವಾದಕ್ಕೆ ನಡೆಸಿದ ಎಂದು ವರದಿ ತಿಳಿಸಿದೆ. ಇದಾದ ಬಳಿಕ ಕೆಲ ಸ್ಥಳೀಯರು ಇಕ್ಬಾಲ್ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಇಕ್ಬಾಲ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಎಸ್‌ಎಂಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಶುಕ್ರವಾರ ರಾತ್ರಿ ಚಿಕಿತ್ಸೆಯಲ್ಲಿದ್ದಾಗ ನಿಧನರಾದರು ಎಂದು ವರದಿಯಲ್ಲಿ ಸೇರಿಸಲಾಗಿದೆ. ಆರೋಪಿಗಳು ಹಾಗೂ ಮೃತರು ಬೇರೆ ಸಮುದಾಯಕ್ಕೆ ಸೇರಿದವರಾದ್ದರಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸುಮಾರು ೧೫ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ.

ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಘಟನೆಯ ಸ್ವಲ್ಪ ಸಮಯದ ನಂತರ, ಜೈಪುರದ ಜಿಲ್ಲಾಡಳಿತವು ಮೃತನ ಕುಟುಂಬಕ್ಕೆ ರೂ. ೫೦ ಲಕ್ಷ ಆರ್ಥಿಕ ನೆರವು ಘೋಷಿಸಿತು ಮತ್ತು ರಾಜ್ಯ ಸರ್ಕಾರವು ಅವರ ಕುಟುಂಬದ ಸದಸ್ಯರೊಬ್ಬರಿಗೆ ಗುತ್ತಿಗೆ ಉದ್ಯೋಗದ ಭರವಸೆ ನೀಡಿತು. ಇದನ್ನು ಸ್ಥಳೀಯ ಶಾಸಕ ಅಮೀನ್ ಕಗ್ಜಿ ಅವರು ಫೇಸ್‌ಬುಕ್ ಪೋಷ್ಟ್ ನಲ್ಲಿ ಖಚಿತಪಡಿಸಿದ್ದಾರೆ. ವೈರಲ್ ಪೋಷ್ಟ್ ನಲ್ಲಿ ಹಂಚಿಕೊಂಡಿರುವ ಬ್ಯಾಂಕ್ ಚೆಕ್‌ನ ಅದೇ ಚಿತ್ರವನ್ನು ಕಾಗ್ಜಿಯ ಪೋಷ್ಟ್ ಒಳಗೊಂಡಿದೆ. ಚೆಕ್‌ನಲ್ಲಿ ಹೆಸರು ನಮೂದಿಸಿರುವ ನಯಿಮಾ ಪರ್ವೀನ್ ಮೃತ ಯುವಕನ ತಾಯಿ.

ಶಾಸಕ ಅಮೀನ್ ಕಗ್ಜಿ ಅವರ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)

ಕನ್ಹಯ್ಯಾಲಾಲ್ ಕುಟುಂಬಕ್ಕೆ ರೂ.೫೦ ಲಕ್ಷ ಪರಿಹಾರ ಸಿಕ್ಕಿದೆ

ಕಳೆದ ವರ್ಷ ಜೂನ್ ೨೦೨೨ ರಲ್ಲಿ, ಉದಯಪುರದ ಟೈಲರ್ ಕನ್ಹಯ್ಯಾಲಾಲ್ ಅವರು ಪ್ರವಾದಿ ಮುಹಮ್ಮದ್ ಕುರಿತು ನೂಪುರ್ ಶರ್ಮಾ ಅವರು ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಷ್ಟ್ ಅನ್ನು ಹಂಚಿಕೊಂಡಿದ್ದು,  ಅವರನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ಕೊಂದಿದ್ದರು. ಘಟನೆಯ ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕನ್ಹಯ್ಯಾಲಾಲ್ ಅವರ ಕುಟುಂಬವನ್ನು ಭೇಟಿ ಮಾಡಿ, ಅವರ ಇಬ್ಬರು ಪುತ್ರರಿಗೆ ರೂ. ೫೦ ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗಗಳನ್ನು ಘೋಷಿಸಿದರು. ಗೆಹ್ಲೋಟ್ ಅವರು ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಈ ಘೋಷಣೆ ಮಾಡಿದ್ದರು.

ಜುಲೈ ೨೦೨೨ ರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಜೂನ್ ೩೦, ೨೦೨೨ ರಂದು ರಾಜಸ್ಥಾನ ಸರ್ಕಾರವು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಕನ್ಹಯ್ಯಾಲಾಲ್ ಕುಟುಂಬಕ್ಕೆ ರೂ. ೫೦ ಲಕ್ಷ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿದೆ.

ಕನ್ಹಯ್ಯಾಲಾಲ್ ಸಾವಿನ ಕುರಿತು ೨೦೨೨ ರಲ್ಲಿ ಮುಖ್ಯಮಂತ್ರಿಗಳ ಕಾರ್ಯಾಲಯವು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತು. (ಮೂಲ: ಸಿಎಂಓ ಆಫೀಸ್/ಸ್ಕ್ರೀನ್‌ಶಾಟ್)

ಲಾಜಿಕಲಿ ಫ್ಯಾಕ್ಟ್ಸ್ ಕೂಡ ಕನ್ಹಯ್ಯಾಲಾಲ್ ಅವರ ಕುಟುಂಬವನ್ನು ಸಂಪರ್ಕಿಸಿದಾಗ ಅವರ ಮಗ ಯಶ್ ವೈರಲ್ ಹೇಳಿಕೆಯನ್ನು ನಿರಾಕರಿಸಿದರು ಮತ್ತು ಅವರು ಸರ್ಕಾರದಿಂದ ರೂ. ೫೦ ಲಕ್ಷದ ಚೆಕ್ ಪಡೆದಿದ್ದಾರೆ ಎಂದು ನಮಗೆ ದೃಢಪಡಿಸಿದರು. “ಘೋಷಣೆಯಾದ ಎರಡು-ಮೂರು ದಿನಗಳಲ್ಲಿ ನಮಗೆ ರೂ.೫೦ ಲಕ್ಷ ಬಂದಿದೆ. ನನಗೂ ನನ್ನ ಅಣ್ಣನಿಗೂ ಸರ್ಕಾರಿ ನೌಕರಿ ನೀಡಲಾಗಿದೆ. ನಾವು ಪ್ರಸ್ತುತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಯಶ್ ಲಾಜಿಕಲ್ ಫ್ಯಾಕ್ಟ್ಸ್‌ಗೆ ತಿಳಿಸಿದರು. ಕಳೆದ ವರ್ಷ ರಾಜಸ್ಥಾನ ಸರ್ಕಾರ ನೀಡಿದ ರೂ. ೫೦ ಲಕ್ಷ ಚೆಕ್‌ನ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

ಈ ವೈರಲ್ ಹೇಳಿಕೆಯನ್ನು ರಾಜಸ್ಥಾನದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸತ್ಯ-ಪರಿಶೀಲನಾ ವಿಭಾಗವು ನಿರಾಕರಿಸಿದೆ. ಅದು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹೇಳಿಕೆಯನ್ನು ಹಂಚಿಕೊಂಡು, ಇದು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ಸ್ಪಷ್ಟಪಡಿಸಿದೆ.

ರಾಜಸ್ಥಾನದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಡಿಐಪಿಆರ್/ಸ್ಕ್ರೀನ್‌ಶಾಟ್)

ತೀರ್ಪು
 
ಜೈಪುರದಲ್ಲಿ ಹತ್ಯೆಗೀಡಾದ ಇಕ್ಬಾಲ್‌ಗೆ ರಾಜಸ್ಥಾನ ಸರ್ಕಾರ ರೂ. ೫೦ ಲಕ್ಷ ಪರಿಹಾರ ನೀಡಿತು ಆದರೆ ಉದಯಪುರದಲ್ಲಿ ಕನ್ಹಯ್ಯಾಲಾಲ್ ಕುಟುಂಬಕ್ಕೆ ರೂ. ೫ ಲಕ್ಷ ಪರಿಹಾರ ಮಾತ್ರ ನೀಡಿದೆ ಎಂಬ ಹೇಳಿಕೆಗಳು ತಪ್ಪು. ೨೦೨೨ ರಲ್ಲಿ ಕನ್ಹಯ್ಯಾಲಾಲ್ ಅವರ ಕುಟುಂಬಕ್ಕೆ ರೂ. ೫೦ ಲಕ್ಷ ಚೆಕ್ ಹಸ್ತಾಂತರಿಸಲಾಯಿತು ಮತ್ತು ಅವರ ಇಬ್ಬರು ಪುತ್ರರಿಗೂ ಸರ್ಕಾರಿ ಉದ್ಯೋಗವನ್ನು ನೀಡಲಾಯಿತು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.