ಭಾರತೀಯ ಮಹಿಳಾ ಹಾಕಿ ತಂಡದ ಹಳೆಯ ವೀಡಿಯೋವನ್ನು 'ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಹಾಕಿ ವಿಶ್ವ ಚಾಂಪಿಯನ್‌ಶಿಪ್' ನಲ್ಲಿ ತಂಡದ ಗೆಲುವು ಎಂದು ವೈರಲ್ ಮಾಡಲಾಗಿದೆ

ಮೂಲಕ: ಚಂದನ್ ಬೋರ್ಗೊಹೈನ್
ಡಿಸೆಂಬರ್ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತೀಯ ಮಹಿಳಾ ಹಾಕಿ ತಂಡದ ಹಳೆಯ ವೀಡಿಯೋವನ್ನು 'ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಹಾಕಿ ವಿಶ್ವ ಚಾಂಪಿಯನ್‌ಶಿಪ್' ನಲ್ಲಿ ತಂಡದ ಗೆಲುವು ಎಂದು ವೈರಲ್ ಮಾಡಲಾಗಿದೆ

ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧದ ಗೆಲುವನ್ನು ಆಚರಿಸುತ್ತಿರುವುದಾಗಿ ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಇಂಡಿಯಾ ಸೋತಿದ್ದಕ್ಕೆ ಭಾರತದ "ಸೇಡು" ಎಂದು ಸಂಬಂಧವಿಲ್ಲದ ಮಹಿಳಾ ಹಾಕಿ ತಂಡದ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 8a9ca820

ಇಲ್ಲಿನ ಹೇಳಿಕೆ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ೨೬ ಸೆಕೆಂಡ್‌ಗಳ ವೀಡಿಯೋದಲ್ಲಿ ನೀಲಿ ಬಣ್ಣದ ಸಮವಸ್ತ್ರದಲ್ಲಿರುವ ಮಹಿಳಾ ಹಾಕಿ ಆಟಗಾರರ ಗುಂಪು ಟ್ರೋಫಿಯನ್ನು ಎತ್ತುವುದನ್ನು ತೋರುತ್ತದೆ. ಹಾಗು ಇತರ ಪೋಷ್ಟ್ ಗಳು ಭಾರತೀಯ ಮಹಿಳಾ ಹಾಕಿ ಆಟಗಾರರು ಮೈದಾನದಲ್ಲಿ ಸಂಭ್ರಮಿಸುತ್ತಿರುವ ಫೋಟೋಗಳ ಕೊಲಾಜ್ ಅನ್ನು ಒಳಗೊಂಡಿವೆ. "ಮಹಿಳಾ ಹಾಕಿ ವಿಶ್ವ ಚಾಂಪಿಯನ್‌ಶಿಪ್" ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ವಿಜಯವನ್ನು ಈ ವೀಡಿಯೋ ತೋರಿಸುತ್ತದೆ ಎಂದು ಕೆಲವು ಬಳಕೆದಾರರು ಶೇರ್ ಮಾಡಿಕೊಂಡಿದ್ದಾರೆ. ನವೆಂಬರ್ ೧೯, ೨೦೨೩ ರಂದು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತಿದ್ದಕ್ಕಾಗಿ ಇದು "ಸೇಡಿನ ಪ್ರತೀಕವೆಂದು"  ಫೇಸ್‌ಬುಕ್‌ನಲ್ಲಿ ಹಲವಾರು ಬಳಕೆದಾರರಿಂದ ಈ ವೀಡಿಯೋವನ್ನು ಪ್ರಶಂಸಿಸಲಾಗುತ್ತಿದೆ. 

ನವೆಂಬರ್ ೨೩ ರಂದು ಫೇಸ್‌ಬುಕ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಬಳಕೆದಾರರು ಹೀಗೆ ಬರೆದಿದ್ದಾರೆ, "ಕ್ರಿಕೆಟ್ ನಲ್ಲಿ ಹೋಯ್ತು...ಆದ್ರೆ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ  ಹಾಕಿ #ವಿಶ್ವ ಚಾಂಪಿಯನ್ ಶಿಪ್ #ಫೈನಲ್ ನಲ್ಲಿ ಅದೇ ಆಸ್ಟ್ರೇಲಿಯಾ ತಂಡದ ವಿರುದ್ಧ ಮಹಿಳಾ ಭಾರತೀಯ ತಂಡ ಜಯಭೇರಿ ಬಾರಿಸಿದೆ.." ಆರ್ಕೈವ್ ಮಾಡಿದ ಪೋಷ್ಟ್ ನ ಲಿಂಕ್ ಅನ್ನು ಇಲ್ಲಿ ನೋಡಬಹುದು.

ಆರ್ಕೈವ್ ಮಾಡಿದ ಇತರ ಪೋಷ್ಟ್ ಗಳ ಲಿಂಕ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. 

ವೈರಲ್ ಕ್ಲಿಪ್ ಅನ್ನು ಹಂಚಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ತಪ್ಪಾಗಿದೆ. ವೀಡಿಯೋ ಮತ್ತು ಫೋಟೋಗಳು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗಿಂತ ಹಿಂದಿನದ್ದು ಮತ್ತು ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ವಿಜಯವನ್ನುತೋರಿಸುವುದಿಲ್ಲ. ಭಾರತೀಯ ಮಹಿಳಾ ಹಾಕಿ ತಂಡವು ಇತ್ತೀಚೆಗೆ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಪಾನ್ ಅನ್ನು ೪-೦ ಗೋಲುಗಳಿಂದ ಸೋಲಿಸಿ ವಿಜಯವನ್ನು ಪ್ರಾಪ್ತಿಸಿತು, ಆಸ್ಟ್ರೇಲಿಯಾ ವಿರುದ್ಧ ಅಲ್ಲ. 

ವೀಡಿಯೋ ಏನನ್ನು ತೋರಿಸುತ್ತದೆ?

ವೈರಲ್ ವೀಡಿಯೋದ ೦:೧೨ ಮಾರ್ಕ್‌ನಲ್ಲಿ, ಆಟಗಾರರ ಹಿಂದೆ "ಜಾರ್ಖಂಡ್ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ" ಎಂಬ ಪದಗಳು ಕಾಣಬಹುದು. ಇದರ ಆಧಾರದ ಮೇಲೆ, ನಾವು ನವೆಂಬರ್ ೫, ೨೦೨೩ ರಂದು ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ಗೆಲುವಿನ ಕುರಿತು ಹಿಂದೂಸ್ತಾನ್ ಟೈಮ್ಸ್  ಪ್ರಕಟಿಸಿದ ಲೇಖನವನ್ನು ಕಂಡುಕೊಂಡೆವು. ಭಾರತವು ಜಪಾನ್ ಅನ್ನು ೪-೦ ಅಂತರದಿಂದ ಸೋಲಿಸುವ ಮೂಲಕ ಚಿನ್ನವನ್ನು ತನ್ನದಾಗಿಸಿಕೊಂಡಿತು.

ನವೆಂಬರ್ ೬ ರಂದು ಪ್ರಕಟವಾದ ದಿ ಎಕನಾಮಿಕ್ ಟೈಮ್ಸ್‌ನ ಸಂಬಂಧಿತ ಯೂಟ್ಯೂಬ್ ಶಾರ್ಟ್ಸ್ ಭಾರತೀಯ ತಂಡವು ವೇದಿಕೆಯಲ್ಲಿ ಸಂಭ್ರಮಿಸುತ್ತಿರುವುದನ್ನು ತೋರಿಸುತ್ತದೆ. “ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತೀಯ ಮಹಿಳಾ ಹಾಕಿ ತಂಡವು ಜಪಾನ್ ಅನ್ನು ೪-೦ ಅಂತರದಿಂದ ಸೋಲಿಸಿದ ನಂತರ ಸಂಭ್ರಮಿಸುತ್ತದೆ” ಎಂಬ ಶೀರ್ಷಿಕೆಯ ವೀಡಿಯೋ ವೈರಲ್ ವೀಡಿಯೋಗೆ ೦:೦೧ ರಿಂದ ೦:೧೯ ರವರೆಗೆ ಹೊಂದಿಕೆಯಾಗುತ್ತದೆ.

ವೈರಲ್ ವೀಡಿಯೋ  ಮತ್ತು ಎಕನಾಮಿಕ್ ಟೈಮ್ಸ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳ ಹೋಲಿಕೆ.
(ಮೂಲ: ಫೇಸ್‌ಬುಕ್‌/ಯೂಟ್ಯೂಬ್ /ಸ್ಕ್ರೀನ್‌ಶಾಟ್‌ಗಳು)

ಆಸ್ಟ್ರೇಲಿಯಾ ವಿರುದ್ಧ ಅಲ್ಲ ಜಪಾನ್ ವಿರುದ್ಧ ಭಾರತ ತಂಡದ ಗೆಲುವನ್ನು ವೀಡಿಯೋ ತೋರಿಸುತ್ತದೆ ಎಂಬುದು ಇದರಿಂದ ದೃಢಪಟ್ಟಿದೆ. ಹಾಗು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೂ ಮೊದಲೇ ಈ ಘಟನೆ ನಡೆದಿರುವುದು ಎಂದು ಸ್ಪಷ್ಟವಾಗುತ್ತದೆ.

ಫೋಟೋಗಳ ಬಗ್ಗೆ ಏನು?

ಹಲವು ಬಳಕೆದಾರರು ಶೇರ್ ಮಾಡಿದ ಫೋಟೋಗಳ ಕೊಲಾಜ್ ಅನ್ನು ನಾವು ಪರಿಶೀಲಿಸಿದೆವು ಮತ್ತು ಅದು ಇತ್ತೀಚಿನದ್ದಲ್ಲ ಎಂದು ಕಂಡುಕೊಂಡೆವು. ರಿವರ್ಸ್ ಇಮೇಜ್ ಸರ್ಚ್ ಮೂಲಕ ಈ ಎರಡೂ ಚಿತ್ರಗಳು  ಆಗಸ್ಟ್ ೨೦೨೧ ರಲ್ಲಿ ಸೆರೆಹಿಡಿಯಲಾಗಿತ್ತು ಎಂದು ತಿಳಿದುಬಂದಿದೆ.

ಆಗಸ್ಟ್ ೨, ೨೦೨೧ ರಂದು ದಿ ಗಾರ್ಡಿಯನ್ ವರದಿಯನ್ನು ನಾವು ಕಂಡುಕೊಂಡಿದ್ದೇವೆ, ಅದು ಚಿತ್ರಗಳಲ್ಲಿ ಒಂದನ್ನು ಒಳಗೊಂಡಿದೆ ಮತ್ತು ಅದು ಭಾರತೀಯ ರಾಷ್ಟ್ರೀಯ ಆಟಗಾರರಾದ ನವನೀತ್ ಕೌರ್ ಮತ್ತು ನೇಹಾ ಗೋಯಲ್ ಅವರನ್ನು ತೋರಿಸುತ್ತದೆ ಎಂದು ಹೇಳುತ್ತದೆ. ಫೋಟೋದ ಶೀರ್ಷಿಕೆಯ ಪ್ರಕಾರ, ಆಗಸ್ಟ್ ೨, ೨೦೨೧ ರಂದು ಆಸ್ಟ್ರೇಲಿಯಾ ವಿರುದ್ಧದ ಭಾರತೀಯ ಮಹಿಳಾ ಹಾಕಿ ತಂಡದ ಒಲಿಂಪಿಕ್ ಕ್ವಾರ್ಟರ್‌ಫೈನಲ್ ವಿಜಯದ ಸಂದರ್ಭದಲ್ಲಿ ಎ ಎಫ್ ಪಿ /ಗೆಟ್ಟಿ ಇಮೇಜಸ್‌ಗಾಗಿ ಇದನ್ನು ಚಾರ್ಲಿ ಟ್ರಿಬಲೆಯು ಅವರು ಸೆರೆಹಿಡಿದಿದ್ದಾರೆ ಎಂದು ವಿವರಿಸಲಾಗಿದೆ. ಓಯಿ ಹಾಕಿ ಸ್ಟೇಡಿಯಂನಲ್ಲಿ ಭಾರತ ತಂಡವು ೧-೦ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. 

ಕೊಲಾಜ್ ನಲ್ಲಿರುವ ಇತರ ಚಿತ್ರವು ಅದೇ ಘಟನೆಯಿಂದ ಕೂಡಿದೆ ಮತ್ತು ಅದನ್ನು ಗೆಟ್ಟಿ ಇಮೇಜಸ್ ವೆಬ್‌ಸೈಟ್‌ನಲ್ಲಿ ಕಾಣಬಹುದು. ಬುಡಾ ಮೆಂಡೆಸ್ ತೆಗೆದ ಛಾಯಾಚಿತ್ರದ ಶೀರ್ಷಿಕೆ ಹೀಗಿದೆ, “ಟೀಮ್ ಇಂಡಿಯಾದ ನವನೀತ್ ಕೌರ್, ನೇಹಾ ನೇಹಾ ಮತ್ತು ಲಾಲ್ರೆಮ್ಸಿಯಾಮಿ ತಮ್ಮ ೧-೦ ಗೆಲುವನ್ನು ತಂಡದ ಸಹ ಆಟಗಾರರೊಂದಿಗೆ ಆಚರಿಸಿದರು, ಟೋಕಿಯೊ ೨೦೨೦ ರ ಹತ್ತನೇ ದಿನದಂದು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮಹಿಳಾ ಕ್ವಾರ್ಟರ್‌ಫೈನಲ್ ಪಂದ್ಯದ ನಂತರ ಕರ್ರಿ ಸೊಮರ್ವಿಲ್ಲೆ ಪ್ರತಿಕ್ರಿಯಿಸಿದ್ದಾರೆ. ಜಪಾನ್‌ನ ಟೋಕಿಯೊದಲ್ಲಿ ಆಗಸ್ಟ್ ೦೨, ೨೦೨೧ ರಂದು ಓಯಿ ಹಾಕಿ ಸ್ಟೇಡಿಯಂನಲ್ಲಿ ಒಲಿಂಪಿಕ್ ಕ್ರೀಡಾಕೂಟಗಳು."

ಆಗಸ್ಟ್ ೨೦೨೧ರಲ್ಲಿ ನಡೆದ ಒಲಿಂಪಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಮಹಿಳಾ ಹಾಕಿ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಗೆಲುವನ್ನು ಆಚರಿಸುತ್ತಿರುವುದನ್ನು ತೋರಿಸುವ ಛಾಯಾಚಿತ್ರದ ಸ್ಕ್ರೀನ್‌ಶಾಟ್.
(ಮೂಲ: ಗೆಟ್ಟಿ ಇಮೇಜಸ್/ಸ್ಕ್ರೀನ್‌ಶಾಟ್)

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಇತ್ತೀಚಿನ ಮಹಿಳಾ ಹಾಕಿ ಪಂದ್ಯವು ಮೇ ೨೦೨೩ ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆಯಿತು.

ತೀರ್ಪು

ಭಾರತೀಯ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧದ ಗೆಲುವನ್ನು ಸಂಭ್ರಮಿಸುತ್ತಿರುವುದನ್ನು ತೋರಿಸುತ್ತದೆ ಎಂದು ವೈರಲ್ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಇದು ನವೆಂಬರ್ ೬, ೨೦೨೩ ರಂದು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಜಪಾನ್ ಅನ್ನು ಸೋಲಿಸಿದ ನಂತರ ತಂಡದ ಸಂಭ್ರಮವನ್ನು ಚಿತ್ರಿಸುತ್ತದೆ. ಮತ್ತು ಫೋಟೋಗಳು ಆಗಸ್ಟ್ ೨೦೨೧ ರದ್ದಾಗಿದ್ದು, ಒಲಿಂಪಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಗೆಲುವನ್ನು ತೋರಿಸುತ್ತದೆ. ಆದ್ದರಿಂದ, ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.