ಮುಖಪುಟ ಇಲ್ಲ, ಕರ್ನಾಟಕ ಸರ್ಕಾರ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಾಗಿ ವಾಣಿಜ್ಯ ವಾಹನಗಳಿಗೆ ಸಬ್ಸಿಡಿ ನೀಡಿಲ್ಲ

ಇಲ್ಲ, ಕರ್ನಾಟಕ ಸರ್ಕಾರ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಾಗಿ ವಾಣಿಜ್ಯ ವಾಹನಗಳಿಗೆ ಸಬ್ಸಿಡಿ ನೀಡಿಲ್ಲ

ಸೆಪ್ಟೆಂಬರ್ 8 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಕರ್ನಾಟಕ ಸರ್ಕಾರ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಾಗಿ ವಾಣಿಜ್ಯ ವಾಹನಗಳಿಗೆ ಸಬ್ಸಿಡಿ ನೀಡಿಲ್ಲ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. ಮೂಲ: (ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಕರ್ನಾಟಕ ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಈ ಯೋಜನೆ ಸಬ್ಸಿಡಿ ನೀಡುತ್ತದೆ.

ಇಲ್ಲಿ ನೀಡಲಾದ ಹೇಳಿಕೆಯೇನು?
ಕರ್ನಾಟಕ ರಾಜ್ಯ ಸರ್ಕಾರವು ಮುಸ್ಲಿಮರಿಗೆ "ಉಡುಗೊರೆ"ಯಾಗಿ ಸಬ್ಸಿಡಿ ಯೋಜನೆಯನ್ನು ಘೋಷಿಸಿದೆ ಎಂದು ಹೇಳುವ ಪೋಷ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರತಿ ಫಲಾನುಭವಿಗೆ ಆಟೋಗಳು, ಟ್ಯಾಕ್ಸಿಗಳು ಮತ್ತು ಸರಕು ವಾಹನಗಳನ್ನು ಖರೀದಿಸಲು ₹೩ ಲಕ್ಷದವರೆಗೆ ಸಬ್ಸಿಡಿ ನೀಡಲಾಗುವುದು ಎಂದು ಈ ಪೋಷ್ಟ್ ಹೇಳುತ್ತದೆ. ಈ ಪೋಷ್ಟ್ ಯೋಜನೆಯ ವಿವರಗಳನ್ನು ಪ್ರಕಟಿಸುವ ಪೋಸ್ಟರ್‌ನ ಫೋಟೋವನ್ನು ಒಳಗೊಂಡಿದ್ದು ಹಲವಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ ಮತ್ತು ಹಿಂದೂಗಳನ್ನು ಒಗ್ಗೂಡಿಸಲು ಒತ್ತಾಯಿಸಿದ್ದಾರೆ.

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಷ್ಟ್ ಅನ್ನು ಹಂಚಿಕೊಂಡ ಬಳಕೆದಾರರು ಹೀಗೆ ಬರೆದಿದ್ದಾರೆ, "ಕರ್ನಾಟಕ ಸರ್ಕಾರದ ಮುಸ್ಲಿಮರಿಗೆ ಹೊಸ ಉಡುಗೊರೆ. ಹಿಂದೂವನ್ನು ೨೦೦-೩೦೦ ರೂ.ಗೆ ಮಾರಾಟ ಮಾಡಲಾಗಿದೆ, ಈಗ ಹಿಂದೂಗಳ ಸ್ಥಿತಿಯನ್ನು ನೋಡಿ ಮತ್ತು ಮುಸ್ಲಿಮರ ಸ್ಥಿತಿಯನ್ನು ನೋಡಿ (ಹಿಂದಿಯಿಂದ ಅನುವಾದಿಸಲಾಗಿದೆ)."

ಈ ಪೋಷ್ಟ್ ಅನ್ನು ಅದೇ ಕೋಮು ನಿರೂಪಣೆಯೊಂದಿಗೆ ಫೇಸ್‌ಬುಕ್‌ನಲ್ಲಿ ಕೂಡ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ, "..ಮೋದಿಜೀ ಕೆಳಗಿಳಿದರೆ ಇಂದು ಕರ್ನಾಟಕದಲ್ಲಿ ಏನಾಗುತ್ತಿದೆಯೋ ಅದೇ ಇಲ್ಲಿಯೂ ನಡೆಯುತ್ತದೆ ಮತ್ತು ಭಾರತವು ಇಸ್ಲಾಮಿಕ್ ದೇಶವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" (ಕನ್ನಡದಕ್ಕೆ ಅನುವಾದಿಸಲಾಗಿದೆ).

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್, ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲ್ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಹೇಳಿಕೆಯು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಪ್ರಶ್ನೆಯಲ್ಲಿರುವ ಯೋಜನೆಯು ಕರ್ನಾಟಕದ ಮುಸ್ಲಿಮರಿಗೆ ಮಾತ್ರವಲ್ಲ, ಕ್ರಿಶ್ಚಿಯನ್ನರು, ಜೈನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಒಳಗೊಂಡಿರುವ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲಾ ಸದಸ್ಯರಿಗೆ ಲಭ್ಯವಾಗುತ್ತದೆ.

ಇಲ್ಲಿನ ವಾಸ್ತವಾಂಶಗಳೇನು?
ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನೀಡುವ ಸಾಲಗಳ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿಯನ್ನು ನಾವು ನೋಡಿದ್ದೇವೆ. ಆಗಸ್ಟ್ ೨೩ ರಂದು ಪ್ರಕಟವಾದ ಈ ವರದಿಯು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಿರುದ್ಯೋಗಿಗಳಿಗೆ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಲು ₹೩ ಲಕ್ಷಗಳ ಸಹಾಯಧನ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.

ನಂತರ ನಾವು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ (ಕೆಎಂಡಿಸಿಎಲ್) ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ "ಟ್ಯಾಕ್ಸಿ/ಸರಕು ವಾಹನ/ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಗೆ ಸಬ್ಸಿಡಿ ಯೋಜನೆ" ಎಂಬ ಶೀರ್ಷಿಕೆಯನ್ನು ಹೊಂದಿರಿವ ಅಧಿಕೃತ ಹೇಳಿಕೆಯನ್ನು ಕಂಡುಕೊಂಡಿದ್ದೇವೆ.

ಯೋಜನೆಯ ನಿಬಂಧನೆಗಳ ಪ್ರಕಾರ, ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ, ಪ್ರಯಾಣಿಕರ ಆಟೋರಿಕ್ಷಾಗಳು/ಸರಕು ವಾಹನಗಳು/ಟ್ಯಾಕ್ಸಿಗಳನ್ನು ಖರೀದಿಸಲು ಬ್ಯಾಂಕ್‌ಗಳಿಂದ ಸಾಲವನ್ನು ಮಂಜೂರು ಮಾಡಿದವರಿಗೆ ವಾಹನದ ವೆಚ್ಚದ ಶೇಕಡಾ ೫೦ ರಷ್ಟು ಅಥವಾ ಗರಿಷ್ಠ ₹೩ ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲಾಗುತ್ತದೆ. ಮಹಿಳಾ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು ಎಂದು ಯೋಜನೆಯ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿದಾರರು ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂದು ಕೆಎಂಡಿಸಿಎಲ್ ಉಲ್ಲೇಖಿಸುತ್ತದೆ. (ಮೂಲ: ಕೆಎಂಡಿಸಿಎಲ್ /ಸ್ಕ್ರೀನ್‌ಶಾಟ್)

ಈ ಸಬ್ಸಿಡಿಯನ್ನು ಪಡೆಯಲು ಪ್ರಧಾನ ಅರ್ಹತೆಯ ಮಾನದಂಡವೆಂದರೆ, ಅರ್ಜಿದಾರರು ಮಾನ್ಯತೆ ಪಡೆದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಮತ್ತು ಅವರ ವಾರ್ಷಿಕ ಆದಾಯ ₹೪.೫ ಲಕ್ಷಕ್ಕಿಂತ ಕಡಿಮೆ ಇರಬೇಕು. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿದಾರರು ಹಲವಾರು ದಾಖಲೆಗಳನ್ನು ಕೂಡ ಸಲ್ಲಿಸಬೇಕಾಗುತ್ತದೆ.

ಫಲಾನುಭವಿಗಳು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೇರಿರಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಸಬ್ಸಿಡಿಯ ಲಾಭವನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ನೀಡಲಾಗುವುದು ಎಂದು ಮಾತ್ರ ವೆಬ್‌ಸೈಟ್‌ ಹೇಳುತ್ತದೆ.

ನಾವು ನಂತರ ವೆಬ್‌ಸೈಟ್‌ನ 'ಅಬೌಟ್ ಅಸ್' ವಿಭಾಗವನ್ನು ಪರಿಶೀಲಿಸಿದಾಗ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು ಪಾರ್ಸಿ ಸಮುದಾಯಗಳ ಜನರನ್ನು ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿದೆ ಎಂದು ಕಂಡುಬಂದಿದೆ.

ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು ಪಾರ್ಸಿ ಸಮುದಾಯಗಳ ಜನರು ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೆಂದು ಗುರುತಿಸಲ್ಪಟ್ಟಿದ್ದಾರೆ. (ಮೂಲ: ಕೆಎಂಡಿಸಿಎಲ್/ಸ್ಕ್ರೀನ್‌ಶಾಟ್)

ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಂತಹ ಸಬ್ಸಿಡಿಗಳು ಹೊಸದೇನಲ್ಲ - ರಾಜ್ಯದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಡಿಯಲ್ಲಿ ಈ ಸಬ್ಸಿಡಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೂಡ ಅಸ್ತಿತ್ವದಲ್ಲಿತ್ತು. ೨೦೨೧-೨೨ರ ಆರ್ಥಿಕ ವರ್ಷಕ್ಕೆ ನಿರೀಕ್ಷಿತ ಗುರಿ ಮತ್ತು ಸಾಧಿಸಿದ ಫಲಿತಾಂಶಗಳ ಕುರಿತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ದಾಖಲೆಯು ‘ಟ್ಯಾಕ್ಸಿ/ಗೂಡ್ಸ್/ಪ್ಯಾಸೆಂಜರ್ ಆಟೋ ವೆಹಿಕಲ್ ಖರೀದಿ ಸಬ್ಸಿಡಿ ಯೋಜನೆ’ ಅಡಿಯಲ್ಲಿ ವೆಚ್ಚಗಳನ್ನು ತೋರಿಸುತ್ತದೆ.

(ಮೂಲ: www.kmdc.karnataka.gov.in)

ಹೆಚ್ಚುವರಿಯಾಗಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು "ಟ್ಯಾಕ್ಸಿಗಳು/ಸರಕು ವಾಹನಗಳ ಆಟೋ ರಿಕ್ಷಾ (೨೦೨೧-೨೨) ಖರೀದಿಗೆ ಸಬ್ಸಿಡಿ" ಎಂಬ ಯೋಜನೆಗೆ ಮೀಸಲಾದ ವೆಬ್ಸೈಟ್ ಅನ್ನು ಸಹ ಹೊಂದಿತ್ತು. ಕರ್ನಾಟಕದಲ್ಲಿ ೨೦೨೧-೨೨ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ರೂ. ೭೫,೦೦೦ ಸಾಲವನ್ನೂ ನೀಡುತ್ತಿತ್ತು. 

(ಮೂಲ: www.karmin.in)

೨೦೨೩ ರಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ೨೦೨೩ ರಲ್ಲಿ ಬಜೆಟ್ ಮಂಡಿಸುವಾಗ, ರಾಜ್ಯದ ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿ ಯುವಕರಿಗೆ ರೂ. ೪ ಲಕ್ಷದವರೆಗೆ ಸಹಾಯಧನ ನೀಡುವ ಉದ್ದೇಶದಿಂದ “ಸ್ವಾವಲಂಬಿ ಸಾರಥಿ” ಎಂಬ ಹೊಸ ಯೋಜನೆಯನ್ನು ಪರಿಚಯಿಸಿದರು. 

ಕರ್ನಾಟಕ ಸರ್ಕಾರದ ವೆಬ್‌ಸೈಟ್‌ನಲ್ಲಿ ಕಂಡುಬರುವ ಬಜೆಟ್ ದಾಖಲೆಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳ ನಿರುದ್ಯೋಗಿ ಯುವಕರಿಗೆ ಶೇಕಡಾ ೫೦ ರವರೆಗೆ (ಗರಿಷ್ಠ ಮೊತ್ತ ರೂ ೩ ಲಕ್ಷಗಳು) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ಯುವಕರು ಸಹಾಯಧನಕ್ಕೆ ಅರ್ಹರಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. (SC/ST) ಸಮುದಾಯಗಳು "ಸ್ವಾವಲಂಬಿ ಸಾರಥಿ" ಯೋಜನೆಯಡಿಯಲ್ಲಿ ೭೫ ಪ್ರತಿಶತದವರೆಗೆ (ಗರಿಷ್ಠ ಮೊತ್ತ ರೂ. ೪ ಲಕ್ಷಗಳು) ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.

ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಲು "ಹಿಂದುಳಿದ ವರ್ಗಗಳ" ನಿರುದ್ಯೋಗಿ ಯುವಕರಿಗೆ ಶೇಕಡಾ ೫೦ ರಷ್ಟು (ಗರಿಷ್ಠ ಮೊತ್ತ ರೂ. ೩ ಲಕ್ಷಗಳು) ಸಹಾಯಧನವನ್ನು ನೀಡಲಾಗುವುದು ಎಂದು ಕೂಡಾ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆಯನ್ನು ಉಲ್ಲೇಖಿಸುವ ಬಜೆಟ್ ದಾಖಲೆಯ ಆಯ್ದ ಭಾಗಗಳು. (ಮೂಲ: ಸ್ಕ್ರೀನ್ಶಾಟ್/finance.karnataka.gov.in)

ತೀರ್ಪು 

ನಮ್ಮ ತನಿಖೆಯು ಕರ್ನಾಟಕ ಸರ್ಕಾರವು ವಾಣಿಜ್ಯ ವಾಹನಗಳನ್ನು ಖರೀದಿಸಲು ಮುಸ್ಲಿಮರಿಗೆ ಪ್ರತ್ಯೇಕವಾಗಿ ಸಬ್ಸಿಡಿಗಳನ್ನು ನೀಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ರಿಶ್ಚಿಯನ್ನರು, ಮುಸ್ಲಿಮರು, ಜೈನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಒಳಗೊಂಡಿರುವ ಅಲ್ಪಸಂಖ್ಯಾತ ಸಮುದಾಯಗಳಿಗಾಗಿ ಈ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದ್ದರಿಂದ, ನಾವು ಈ ಮೇಲಿನ ವೈರಲ್ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ವಿವೇಕ್.ಜೆ 

(ನವೀಕರಣ: ಹಿಂದಿನ ಭಾರತೀಯ ಜನತಾ ಪಕ್ಷದ ಸರ್ಕಾರದ ಅಡಿಯಲ್ಲಿ ಇದೇ ರೀತಿಯ ಯೋಜನೆ ಅಸ್ತಿತ್ವದಲ್ಲಿತ್ತು ಎಂದು ಪ್ರತಿಬಿಂಬಿಸಲು ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗಿದೆ.)

 

 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ