ಹರಿಯಾಣದಲ್ಲಿ ಇತ್ತೀಚಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ
ಆಗಸ್ಟ್ 10 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಹರಿಯಾಣದಲ್ಲಿ ಇತ್ತೀಚಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಈ ಚಿತ್ರಗಳು ಭಾರತದಲ್ಲಿ ಹರಿಯಾಣದ ನುಹ್ ಮತ್ತು ಗುರುಗ್ರಾಮ್ ಜಿಲ್ಲೆಗಳಲ್ಲಿ ನಡೆದ ಇತ್ತೀಚಿನ ಘರ್ಷಣೆಗಳಿಗೆ ಸಂಬಂಧಪಟ್ಟಿದ್ದಲ್ಲ.

ಕ್ಲೈಮ್ ಐಡಿ 04dfd378

ಸಂಧರ್ಭ 

ಉತ್ತರ ಭಾರತದ ಹರಿಯಾಣದ ನುಹ್ ಜಿಲ್ಲೆಯಲ್ಲಿ ಸೋಮವಾರ ಬಲಪಂಥೀಯ ಗುಂಪುಗಳ ಮೆರವಣಿಗೆಯನ್ನು ತಡೆಯಲು ಇತರ ಪಂಥೀಯ ಜನಸಮೂಹ ನಡೆಸಿದ ಪ್ರಯತ್ನದಿಂದ ಹಿಂಸಾಚಾರ ಭುಗಿಲೆದ್ದಿತು. ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ನುಹ್‌ನಲ್ಲಿನ ಘರ್ಷಣೆಗಳ ವರದಿಗಳು ಪ್ರಸರಿಸಲು ಆರಂಭಿಸಿದಾಗ, ಗಲುಭೆಗಳು ನೆರೆಯ ಜಿಲ್ಲೆ ಗುರುಗ್ರಾಮ್‌ಗೆ ಹರಡಿತು. 

ಹರಿಯಾಣ ಅಧಿಕಾರಿಗಳು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿರುವಾಗ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ಘರ್ಷಣೆಗಳಿಗೆ ಹಳೆಯ ಮತ್ತು ಸಂಬಂಧವಿಲ್ಲದ ದೃಶ್ಯಗಳನ್ನು ತ್ವರಿತವಾಗಿ ಜೋಡಿಸಿದ್ದಾರೆ. ಅಂತಹ ಬಳಕೆದಾರರು ನಾಲ್ಕು ಫೋಟೋಗಳ ಸೆಟ್ ಅನ್ನು ಟ್ವಿಟ್ಟರ್‌ನಲ್ಲಿ (ಈಗ X ಎಂದು ಕರೆಯಲ್ಪಡುವ) ಕೋಮುವಾದದ ಪೋಷ್ಟ್ ನಲ್ಲಿ ಹಂಚಿಕೊಂಡಿದ್ದಾರೆ---ಗಲಭೆ ಗೇರ್‌ನಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ಸುಡುವ ಭಗ್ನಾವಶೇಷಗಳನ್ನು ನೋಡುತ್ತಿದ್ದಾರೆ; ಬೆಂಕಿಯಲ್ಲಿ ಉರಿಯುತ್ತಿರುವ ಉರುಳಿದ ಕಾರಿನ ಎರಡನೇ ಚಿತ್ರ; ಮೂರನೇ ಚಿತ್ರವು ಪಟ್ಟಣದ ಚೌಕದಲ್ಲಿ ಗಲಭೆ ಗೇರ್‌ನಲ್ಲಿರುವ ಪೊಲೀಸರ ಗುಂಪು ಮತ್ತು ರಸ್ತೆಯ ಮೇಲೆ ಕಲ್ಲುಗಳನ್ನು ಹರಡಿವೆ; ಮತ್ತು ನಾಲ್ಕನೇ ಚಿತ್ರವು ಪೋಲೀಸ್ ಅಧಿಕಾರಿಯೊಬ್ಬರು ಒಬ್ಬ ವ್ಯಕ್ತಿಯನ್ನು ಕೋಲಿನಿಂದ ಹೊಡೆಯುವುದನ್ನು ತೋರಿಸುತ್ತದೆ ಮತ್ತು ಇಬ್ಬರು ಅಧಿಕಾರಿಗಳು ಅವನನ್ನು ಸುತ್ತುವರೆದಿದ್ದಾರೆ. ಹರಿಯಾಣದಲ್ಲಿ ಇತ್ತೀಚಿನ ಅಶಾಂತಿಯನ್ನು ತೋರಿಸುತ್ತವೆ ಎಂಬ ಹೇಳಿಕೆಯೊಂದಿಗೆ ಹಲವಾರು ಇತರ ಬಳಕೆದಾರರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ಕ್ರೀನ್‌ಗ್ರಾಬ್ (ಮೂಲ:X/@ChandanSharmaG)

ಆದರೆ, ಈ ಯಾವುದೇ ಚಿತ್ರಗಳು ಹರಿಯಾಣದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿಲ್ಲ.

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ ಈ ಚಿತ್ರಗಳು ಹಳೆಯವು ಮತ್ತು ನುಹ್ ಮತ್ತು ಗುರುಗ್ರಾಮ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ. 

ಗಲಭೆ ಗೇರ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೆಲದ ಮೇಲೆ ಉರಿಯುತ್ತಿರುವ ಭಗ್ನಾವಶೇಷಗಳನ್ನು ನೋಡುತ್ತಿರುವ ಮೊದಲ ಚಿತ್ರವನ್ನು ದಿ ಟೈಮ್ಸ್ ಆಫ್ ಇಂಡಿಯಾ (TOI) ಆಗಸ್ಟ್ ೨೬, ೨೦೧೭ ರಂದು ವೀಡಿಯೋ ವರದಿಯಲ್ಲಿ ಪ್ರಕಟಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಚಿತ್ರವನ್ನು ೦:೩೨ ಟೈಮ್‌ಸ್ಟ್ಯಾಂಪ್‌ನಲ್ಲಿ ಗುರುತಿಸಬಹುದು. ವರದಿಯ ಪ್ರಕಾರ, ಸ್ವಯಂ ಘೋಷಿತ ಗುರು ರಾಮ್ ರಹೀಮ್ ಸಿಂಗ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾದುದನ್ನು ವಿರೋಧಿಸಿ ಧಾರ್ಮಿಕ ಗುಂಪು ಡೇರಾ ಸಚ್ಚಾ ಸೌಧದ ಅನುಯಾಯಿಗಳು ಹರಿಯಾಣದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದರು. ಹಿಂಸಾಚಾರದಲ್ಲಿ ೩೦ ಜನರು ಸಾವನ್ನಪ್ಪಿದ್ದರು ಮತ್ತು ೨೫೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು ಎಂದು ವೀಡಿಯೋ ಹೇಳಿದೆ. ಡೇರಾ ಅನುಯಾಯಿಗಳ ಹಿಂಸಾಚಾರದ ವರದಿಯಲ್ಲಿ ಈ ಚಿತ್ರವನ್ನು ಆಗಸ್ಟ್ ೨೬, ೨೦೧೭ ರಂದು ನ್ಯಾಷನಲ್ ಹೆರಾಲ್ಡ್ ಪ್ರಕಟಿಸಿದೆ. ಚಿತ್ರವನ್ನು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಗೆ ಕ್ರೆಡಿಟ್ ಕೊಡಲಾಗಿದೆ.

ಸ್ಕ್ರೀನ್‌ಗ್ರಾಬ್ (ಮೂಲ:ದಿ ಟೈಮ್ಸ್ ಆಫ್ ಇಂಡಿಯಾ)

ಫೆಬ್ರವರಿ ೨೦, ೨೦೧೩ ರಂದು ಎನ್‌ಡಿಟಿವಿ ಪ್ರಕಟಿಸಿದ ವರದಿಯಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಕಾರು ಉರುಳಿಬಿದ್ದಿರುವುದನ್ನು ನೋಡುತ್ತಿರುವ ಎರಡನೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಛಾಯಾಚಿತ್ರವು ಉತ್ತರ ಪ್ರದೇಶದ ನೋಯ್ಡಾದಲ್ಲಿ ೧೧ ಪ್ರಮುಖ ಟ್ರೇಡ್ ಯೂನಿಯನ್‌ಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್ (ರಾಷ್ಟ್ರವ್ಯಾಪಿ ಮುಷ್ಕರ) ಸಮಯದಲ್ಲಿ ತೆಗೆದ ಈ ಚಿತ್ರದ ಜೂಮ್-ಇನ್ ಆವೃತ್ತಿಯಾಗಿದೆ. ಮುಷ್ಕರದ ಸಮಯದಲ್ಲಿ ಯೂನಿಯನ್ ಕಾರ್ಯಕರ್ತರು ಹಲವಾರು ಕಾರ್ಖಾನೆಗಳು ಮತ್ತು ವಾಹನಗಳ ಮೇಲೆ ದಾಳಿ ಮಾಡಿದರು ಮತ್ತು ಚಿತ್ರವು ಅಂತಹ ಒಂದು ನಿದರ್ಶನದಿಂದ ಬಂದಿದೆ. ಚಿತ್ರವು AFP ಗೆ ಕ್ರೆಡಿಟ್ ಕೊಡಲಾಗಿದೆ ಮತ್ತು "ಗಲಭೆಗಳ ಸ್ಥಳದಲ್ಲಿ ಪೊಲೀಸ್" ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ. ಗೆಟ್ಟಿ ಇಮೇಜಸ್‌ನಲ್ಲಿ ನಾವು ಈ ಚಿತ್ರವನ್ನು ಸಹ ಕಂಡುಕೊಂಡಿದ್ದೇವೆ: "ಫೆಬ್ರವರಿ ೨೦, ೨೦೧೩ ರಂದು ಹೊಸ ದಿಲ್ಲಿಯ ಹೊರವಲಯದಲ್ಲಿರುವ ನೋಯ್ಡಾದಲ್ಲಿ ಟ್ರೇಡ್ ಯೂನಿಯನ್ ಮುಷ್ಕರದ ಸಂದರ್ಭದಲ್ಲಿ ಭಾರತೀಯ ಪೋಲೀಸ್ ಒಬ್ಬರು ಸುಡುತ್ತಿರುವ ಕಾರಿನ ಬಳಿ ನಿಂತು ನೋಡುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಚಿತ್ರದ ಕ್ರೆಡಿಟ್ ಅನ್ನು "ಗೆಟ್ಟಿ ಇಮೇಜಸ್ ಮೂಲಕ STRDEL/AFP" ಎಂದು ಹೇಳಲಾಗಿದೆ. ಫೈನಾನ್ಷಿಯಲ್ ಟೈಮ್ಸ್ ಮತ್ತು ಹಿಂದೂಸ್ತಾನ್ ಟೈಮ್ಸ್ ಕೂಡ ಚಿತ್ರವನ್ನು ಪ್ರಕಟಿಸಿದ್ದು, ಇದನ್ನು AFP ಗೆ ಕ್ರೆಡಿಟ್ ನೀಡಿವೆ.

ಸ್ಕ್ರೀನ್‌ಗ್ರಾಬ್ (ಮೂಲ:ಗೆಟ್ಟಿ ಇಮೇಜಸ್)

ಟೌನ್ ಸ್ಕ್ವೇರ್‌ನಲ್ಲಿ ಒಟ್ಟುಗೂಡಿದ ಗಲಭೆ ಗೇರ್‌ನಲ್ಲಿರುವ ಹಲವಾರು ಪೊಲೀಸ್ ಅಧಿಕಾರಿಗಳ ಮೂರನೇ ಚಿತ್ರ ಕಾನ್ಪುರ ನಗರದ್ದು ಮತ್ತು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ೨೦೧೯ ರಲ್ಲಿ ತೆಗೆದದ್ದು. ಡಿಸೆಂಬರ್ ೨೫, ೨೦೧೯ ರಂದು ಪ್ರಕಟವಾದ TOI ವರದಿಯಲ್ಲಿ ಇದನ್ನು ಕಾಣಬಹುದು. ಚಿತ್ರದ ಶೀರ್ಷಿಕೆ ಹೀಗಿದೆ: “ಕಾನ್ಪುರದಲ್ಲಿ ಶನಿವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ರ‍್ಯಾಲಿಯಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸ್ ಸಿಬ್ಬಂದಿ ಘರ್ಷಣೆ ನಡೆಸಿದರು." ಡೆಕ್ಕನ್ ಹೆರಾಲ್ಡ್ ಸಹ ಸಿಎಎ ವಿರೋಧಿ ಪ್ರತಿಭಟನೆಗಳ ವರದಿಯಲ್ಲಿ ಅದೇ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪ್ರಕಟಿಸಿದೆ. ಎರಡೂ ಸುದ್ದಿವಾಹಿನಿಗಳು ಈ ಫೋಟೋವನ್ನು ಪಿಟಿಐಗೆ ಕ್ರೆಡಿಟ್ ನೀಡಿವೆ.

ಸ್ಕ್ರೀನ್‌ಗ್ರಾಬ್ (ಮೂಲ:ದಿ ಟೈಮ್ಸ್ ಆಫ್ ಇಂಡಿಯಾ)

ನಾಲ್ಕನೇ ಚಿತ್ರವು ಒಬ್ಬ ವ್ಯಕ್ತಿಯ ಸುತ್ತಲೂ ನಿಂತಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ತೋರಿಸುತ್ತದೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಅವನತ್ತ ಕೋಲು ಬೀಸುತ್ತಿದ್ದಾರೆ. ಈ ಚಿತ್ರವು ೨೦೧೯ ರಲ್ಲಿ ಕಾನ್ಪುರದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಿಂದ ಬಂದಿದೆ. “ಶುಕ್ರವಾರ ಕಾನ್ಪುರದ ಬಾಬು ಪುರ್ವಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ನಾಗರಿಕನಿಗೆ ಹೊಡೆದಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾದ ಚಿತ್ರವನ್ನು ಪಿಟಿಐ ವೆಬ್‌ಸೈಟ್‌ನಲ್ಲಿ ನಾವು ಕಂಡುಕೊಂಡಿದ್ದೇವೆ. ಪಿಟಿಐ ಚಿತ್ರವನ್ನು ಡಿಸೆಂಬರ್ ೧೯, ೨೦೧೯ ರಂದು ಪ್ರಕಟಿಸಿದೆ. ಪಿಟಿಐಗೆ ಕ್ರೆಡಿಟ್ ನೀಡಿ, ನ್ಯೂಸ್ ೧೮ ಅದೇ ದಿನ ಚಿತ್ರದೊಂದಿಗೆ ವರದಿಯನ್ನು ಪ್ರಕಟಿಸಿದೆ.

ಪಿಟಿಐ ಚಿತ್ರವನ್ನು ಡಿಸೆಂಬರ್ ೧೯, ೨೦೧೯ ರಂದು ಪ್ರಕಟಿಸಿದೆ. ಪಿಟಿಐಗೆ ಕ್ರೆಡಿಟ್ ನೀಡಿ, ನ್ಯೂಸ್ ೧೮ ಅದೇ ದಿನ ಚಿತ್ರದೊಂದಿಗೆ ವರದಿಯನ್ನು ಪ್ರಕಟಿಸಿದೆ.

ಹರಿಯಾಣದಲ್ಲಿ ಏನಾಗುತ್ತಿದೆ?

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಜುಲೈ ೩೧, ಸೋಮವಾರ, ಎರಡು ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ, ನುಹ್‌ನಲ್ಲಿ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ಎಂಬ ಧಾರ್ಮಿಕ ಮೆರವಣಿಗೆ ಆಯೋಜಿಸಿದ್ದ ಸಮಯ ಬೇರೆ ಪಂಥೀಯ ಜನಸಮೂಹ ಮೆರೆವಣಿಗೆಯನ್ನು ತಡೆಯಲು ಪ್ರಯತ್ನಿಸಿದರು. ಈ ಸಮಯ ಇಬ್ಬರು ಗೃಹ ರಕ್ಷಕರು ಸಾವನ್ನಪ್ಪಿದರು ಮತ್ತು ಸುಮಾರು ೧೦ ಜನರು ಗಾಯಗೊಂಡರು. ಜನಸಮೂಹವು ಬಲಪಂಥೀಯ ಗುಂಪುಗಳು ಮತ್ತು ಅವರ ಮೆರವಣಿಗೆಯೊಂದಿಗೆ ಬಂದ ಪೊಲೀಸ್ ತಂಡದ ಮೇಲೆ ಗುಂಡೇಟುಗಳನ್ನು ಹಾರಿಸಿತು ಮತ್ತು ಕಲ್ಲು ತೂರಾಟ ನಡೆಸಿತು.

ಇಂಡಿಯಾ ಟುಡೇ ವರದಿಯ ಪ್ರಕಾರ, ಭಜರಂಗದಳದ ಕಾರ್ಯಕರ್ತರೊಬ್ಬರು ಅಪ್‌ಲೋಡ್ ಮಾಡಿದ ಆಕ್ಷೇಪಾರ್ಹ ವೀಡಿಯೋದಿಂದ ಘರ್ಷಣೆಗಳು ಉಂಟಾಗಿವೆ. ಸ್ವಯಂ ಘೋಷಿತ ಗೋರಕ್ಷಕರಾದ ಮೋನು ಮಾನೇಸರ್ ಅವರು ಮೆರವಣಿಗೆಯಲ್ಲಿ ಉಪಸ್ಥಿತರಿರುತ್ತಾರೆ ಎಂಬ ವದಂತಿಗಳು ಕೋಮು ಉದ್ವಿಗ್ನತೆಯನ್ನು ಉಂಟುಮಾಡಿ ಹಿಂಸಾಚಾರಕ್ಕೆ ಕಾರಣವಾಯಿತು. ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ, ಫೆಬ್ರವರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಜಾನುವಾರು ವ್ಯಾಪಾರಿಗಳ ಹತ್ಯೆಗೆ ಮಾನೇಸರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಮಾನೇಸರ್ ಅವರನ್ನು ಮೆರವಣಿಗೆಯಿಂದ ದೂರವಿರಲು ತಿಳಿಸಲಾಯಿತು ಮತ್ತು ಅದರಲ್ಲಿ ಭಾಗವಹಿಸಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. 

ಸೋಮವಾರ ರಾತ್ರಿ, ಹಿಂಸಾಚಾರವು ಗುರುಗ್ರಾಮ್‌ಗೆ ಹರಡಿತು, ಜಿಲ್ಲೆಯ ಸೆಕ್ಟರ್ ೫೭ ಪ್ರದೇಶದಲ್ಲಿ ಮಸೀದಿಗೆ ಬೆಂಕಿ ಹಚ್ಚಿದಾಗ ೨೬ ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಇತ್ತೀಚಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ ಐದಕ್ಕೆ ಏರಿದೆ.

ನುಹ್‌ನಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ. ನುಹ್, ಗುರುಗ್ರಾಮ್, ಫರಿದಾಬಾದ್, ಪಲ್ವಾಲ್ ಮತ್ತು ರೆವಾರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಿಂಸಾಚಾರವನ್ನು ಖಂಡಿಸಿದ್ದಾರೆ ಮತ್ತು ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಶಾಂತಿಗಾಗಿ ಕರೆ ನೀಡಿದ್ದಾರೆ.

ತೀರ್ಪು
೨೦೧೩, ೨೦೧೭ ಮತ್ತು ೨೦೧೯ ರ ಹಳೆಯ ಮತ್ತು ಸಂಬಂಧವಿಲ್ಲದ ಚಿತ್ರಗಳನ್ನು ಹರಿಯಾಣದ ಇತ್ತೀಚಿನ ಘರ್ಷಣೆಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ನಾವು ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.