ಇಸ್ರೇಲ್ ಮೇಲೆ ಪರಮಾಣು ದಾಳಿಯ ಬೆದರಿಕೆ ನೀಡುವ ಪಾಕಿಸ್ತಾನಿ ಶಾಸಕರ ಹಳೆಯ ವೀಡಿಯೋವನ್ನು ಇತ್ತೀಚಿನ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿ ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಅಕ್ಟೋಬರ್ 25 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಸ್ರೇಲ್ ಮೇಲೆ ಪರಮಾಣು ದಾಳಿಯ ಬೆದರಿಕೆ ನೀಡುವ ಪಾಕಿಸ್ತಾನಿ ಶಾಸಕರ ಹಳೆಯ ವೀಡಿಯೋವನ್ನು ಇತ್ತೀಚಿನ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿ ಹಂಚಿಕೊಳ್ಳಲಾಗಿದೆ

ಅಕ್ಟೋಬರ್ ೨೦೨೩ ರಲ್ಲಿ ಹಮಾಸ್-ಇಸ್ರೇಲ್ ಯುದ್ಧದ ನಡುವೆ ಪಾಕಿಸ್ತಾನಿ ಶಾಸಕರು ಇಸ್ರೇಲ್ ಮೇಲೆ ಪರಮಾಣು ದಾಳಿಗೆ ಕರೆ ನೀಡುತ್ತಾರೆ ಎಂಬ ವೈರಲ್ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

೨೦೨೧ ರಲ್ಲಿ ಪಾಕಿಸ್ತಾನಿ ರಾಜಕಾರಣಿ ಸರ್ವತ್ ಫಾತಿಮಾ ಹೇಳಿಕೆ ನೀಡಿದ ವೀಡಿಯೋವನ್ನು ಮರುಹಂಚಿಕೆ ಮಾಡಿ ಇತ್ತೀಚಿನ ಇಸ್ರೇಲ್-ಹಮಾಸ್ ಯುದ್ಧಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.

ಕ್ಲೈಮ್ ಐಡಿ 104f76c8

ಇಸ್ರೇಲ್-ಹಮಾಸ್ ಸಂಘರ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಗಮನಾರ್ಹ ಜಾಗತಿಕ ಗಮನವನ್ನು ಸೆಳೆದಿವೆ. ಗಾಜಾದ ಮೇಲಿನ ದಾಳಿಗಳು ಮತ್ತು ಸೇನಾ ಕಾರ್ಯಾಚರಣೆಗಳು ಸೇರಿದಂತೆ ಇಸ್ರೇಲ್‌ನ ಕ್ರಮಗಳನ್ನು ಹಲವಾರು ದೇಶಗಳ ಸರ್ಕಾರಗಳು ಟೀಕಿಸಿವೆ. ಪಾಕಿಸ್ತಾನಿ ಸರ್ಕಾರವು ಅಕ್ಟೋಬರ್ ೧೪ ರಂದು ಗಾಜಾಗೆ ಮಾನವೀಯ ನೆರವನ್ನು ರವಾನಿಸುವುದಾಗಿ ಘೋಷಿಸಿತು ಮತ್ತು ಇಸ್ರೇಲ್ ನದ್ದು "ವಿವೇಚನಾರಹಿತ ಆಕ್ರಮಣ" ಎಂದು ಆರೋಪಿಸಿದೆ. ಪಾಕಿಸ್ತಾನದ ಸೇನೆಯು ಅಕ್ಟೋಬರ್ ೧೭ ರಂದು ಪ್ಯಾಲೆಸ್ತೀನ್ ಜನರು "ಪಾಕಿಸ್ತಾನದ ರಾಷ್ಟ್ರದ ನಿಸ್ಸಂದಿಗ್ಧ ರಾಜತಾಂತ್ರಿಕ, ನೈತಿಕ ಮತ್ತು ರಾಜಕೀಯ ಬೆಂಬಲವನ್ನು ಹೊಂದಿದ್ದಾರೆ" ಎಂದು ಹೇಳಿತು.

ಇಲ್ಲಿನ ಹೇಳಿಕೆಯೇನು?

ಇದರ ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೋವೊಂದರಲ್ಲಿ ಪಾಕಿಸ್ತಾನದ ಶಾಸಕರೊಬ್ಬರು "ಇಸ್ರೇಲ್ ಮೇಲೆ ಪರಮಾಣು ದಾಳಿಗೆ ಕರೆ ನೀಡುತ್ತಿದ್ದಾರೆ" ಎಂದು ಹೇಳಿಕೊಂಡಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಕಪ್ಪು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಉರ್ದುವಿನಲ್ಲಿ ಮಾತನಾಡಿದ್ದಾರೆ. ಆಕೆಯ ವೀಡಿಯೋವಿನಲ್ಲಿನ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದಾಗ ಅದು ಹೀಗೆ ಹೇಳುತ್ತದೆ: "ಪಾಕಿಸ್ತಾನವು ಪರಮಾಣು ಸಾಮರ್ಥ್ಯಗಳನ್ನು ಹೊಂದಿದೆ, ಅದು ಕೇವಲ ಪ್ರದರ್ಶನಕ್ಕಾಗಿ ಅಲ್ಲ; ಮುಸ್ಲಿಮರು ಮತ್ತು ಪಾಕಿಸ್ತಾನವನ್ನು ರಕ್ಷಿಸಲು ಅವು ಅಸ್ತಿತ್ವದಲ್ಲಿವೆ. ಪ್ಯಾಲೆಸ್ತೀನ್ ಮತ್ತು ಅದರ ಮೇಲಿನ ಆಕ್ರಮಣದ ವಿರುದ್ಧದ ತನ್ನ ಕ್ರಮಗಳನ್ನು ನಿಲ್ಲಿಸುವಂತೆ ಇಸ್ರೇಲ್ ಅನ್ನು ಕೇಳಲು ನಾನು ಪಾಕಿಸ್ತಾನದ ಪ್ರಧಾನಿಯನ್ನು ಕೋರುತ್ತೇನೆ. ಇದು ವಿಫಲವಾದಲ್ಲಿ  ನಾವು ಜಾಗತಿಕ ಭೂಪಟದಿಂದ ಇಸ್ರೇಲ್ ಅನ್ನು ಅಳಿಸಿ ಹಾಕುತ್ತೇವೆ."

ಅಕ್ಟೋಬರ್ ೧೭, ೨೦೨೩ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ಪ್ರಕಟಿಸುವ ಭಾರತೀಯ ವಾರಪತ್ರಿಕೆಯಾದ ಪಾಂಚಜನ್ಯದ ಅಧಿಕೃತ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆ ಸೇರಿದಂತೆ ಗಮನಾರ್ಹ ಅನುಯಾಯಿಗಳು ಮತ್ತು ವ್ಯಾಪ್ತಿಯನ್ನು ಹೊಂದಿರುವ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಗಳಲ್ಲಿ ವೀಡಿಯೋ ಹಳೆಯದ್ದು ಎಂದು ಸ್ಪಷ್ಟೀಕರಣ ನೀಡದೆ ಹಂಚಿಕೊಳ್ಳಲಾಗಿದೆ. ಈ ವೀಡಿಯೋ ಇದುವರೆಗೆ ೩,೫೭,೫೦೦ ವೀಕ್ಷಣೆಗಳನ್ನು ಹೊಂದಿದೆ. ಇದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪಾಂಚಜನ್ಯ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಇದು ಕೆಲವು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ ಪೋಷ್ಟ್ ಅನ್ನು ಮರುಹಂಚಿಕೊಳ್ಳಲು ಮತ್ತು ಇಸ್ರೇಲ್‌ನಲ್ಲಿ ನಡೆಯುತ್ತಿರುವ ಸಂಘರ್ಷದೊಂದಿಗೆ ನೇರವಾಗಿ ಸಂಪರ್ಕಿಸಲು ಕಾರಣವಾಯಿತು. ಹಿಂದಿಯಲ್ಲಿ ಕಂಡುಬಂದ ಅಂತಹ ಪೋಷ್ಟ್ ಒಂದರ ಶೀರ್ಷಿಕೆ ಹೀಗಿದೆ: "#Israel वार पे #पाकिस्तान ने एटम बम दिखाने के लिए नहीं रखे हैं। #Israel अगर मुसलमानों पर जुल्म बंद नहीं करेगा तो हम इजरायल को दुनिया के नक्शे से मिटा देंगे…(ಪಾಕಿಸ್ತಾನ ತನ್ನ ಅಣುಬಾಂಬ್ ಅನ್ನು ಕೇವಲ ತೋರ್ಪಡಿಸುವುದಕ್ಕಾಗಿ ಇಟ್ಟುಕೊಂಡಿಲ್ಲ. #ಇಸ್ರೇಲ್ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ನಿಲ್ಲಿಸದಿದ್ದರೆ, ನಾವು ಇಸ್ರೇಲ್ ಅನ್ನು ವಿಶ್ವ ಭೂಪಟದಿಂದ ಅಳಿಸಿಹಾಕುತ್ತೇವೆ)." ಅಂತಹ ಎಕ್ಸ್ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ವಿಷಯವನ್ನು ಪೋಷ್ಟ್ ಮಾಡಲು ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಇತರರು ಅದನ್ನು ಹಂಚಿಕೊಂಡಿದ್ದಾರೆ. ಅಂತಹ ಎಕ್ಸ್ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಹಳೆಯದಾಗಿದ್ದು, ಪಾಕಿಸ್ತಾನಿ ರಾಜಕಾರಣಿ ೨೦೨೧ ರಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ವಾಸ್ತವಾಂಶಗಳು 
ವೈರಲ್ ವೀಡಿಯೋದ ಕೆಲವು ಆವೃತ್ತಿಗಳ ಮೇಲಿನ ಎಡ ಮೂಲೆಯಲ್ಲಿ "TLP" ಲೋಗೋ ಜೊತೆಗೆ ಯೂಟ್ಯೂಬ್ ಲೋಗೋ ಮತ್ತು ಕೆಳಭಾಗದಲ್ಲಿ "TLPOfficialStatus" ಲೋಗೋವನ್ನು ಹೊಂದಿವೆ. ಇದಲ್ಲದೆ, ಎಕ್ಸ್ ಮತ್ತು "TLPMarkaazReal" ಲೋಗೋಗಳನ್ನು ಸ್ಪಷ್ಟವಾಗಿ ನೋಡಬಹುದು.

ಮೇಲಿನ ಎಡ ಮೂಲೆಯಲ್ಲಿ TLP ಲೋಗೋವನ್ನು ತೋರಿಸುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. ಇದಲ್ಲದೆ, ಯೂಟ್ಯೂಬ್ ಲೋಗೋ ಮತ್ತು "TLPOfficialStatus" ಪಠ್ಯ, ಮತ್ತು ಎಕ್ಸ್ ಲೋಗೋ. ಕೆಳಭಾಗದಲ್ಲಿ "TLPMarkaazReal" ಪಠ್ಯವಿದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೈರಲ್ ವೀಡಿಯೋಗಳಲ್ಲಿ ಕಾಣಿಸಿಕೊಂಡಿರುವ ಲೋಗೋಗಳು ಮತ್ತು ಪಠ್ಯಗಳು ನಿರ್ದಿಷ್ಟ ಚಾನಲ್‌ಗಳು ಅಥವಾ ಸಂಸ್ಥೆಗಳೊಂದಿಗಿನ ಸಂಬಂಧವನ್ನು ಸೂಚಿಸುತ್ತವೆ. ಹುಡುಕಿದಾಗ, ಈ ವೈರಲ್ ವೀಡಿಯೋವನ್ನು ಮೂಲತಃ ಮೇ ೨೦೨೧ ರಂದು "TLPOfficialStatus" ಹೆಸರಿನ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಇದರ ವಿವರಣೆ "ಅಲ್ಲಾಮ ಖಾದಿಮ್ ಹುಸೇನ್ ರಿಜ್ವಿ ೨೦೨೧ | MPA ಸರ್ವತ್ ಫಾತಿಮಾ ಸಿಂಧ್ ಅಸೆಂಬ್ಲಿಯಲ್ಲಿ ಪ್ಯಾಲೆಸ್ತೀನ್ ಕುರಿತು ಮಾತನಾಡುತ್ತಿದ್ದಾರೆ" ಎಂದು ಹೇಳಿಕೊಂಡಿದೆ.

ಈ ಯೂಟ್ಯೂಬ್ ಚಾನಲ್ ಪಾಕಿಸ್ತಾನದ ರಾಜಕೀಯ ಪಕ್ಷವಾದ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನದೊಂದಿಗೆ ಸಂಯೋಜಿತವಾಗಿದೆ. ಮೂಲ ವೀಡಿಯೋ ೬ ನಿಮಿಷ ೧೭ ಸೆಕೆಂಡುಗಳು ಮತ್ತು ಮಹಿಳಾ ಸ್ಪೀಕರ್ ಅನ್ನು "ಸರ್ವತ್ ಫಾತಿಮಾ ಸದಸ್ಯ ಪ್ರಾಂತೀಯ ಅಸೆಂಬ್ಲಿ (MPA)" ಎಂದು ಗುರುತಿಸುತ್ತದೆ. ಫಾತಿಮಾ ಅವರು ಪಾಕಿಸ್ತಾನಿ ರಾಜಕಾರಣಿಯಾಗಿದ್ದು, ಅವರು ಆಗಸ್ಟ್ ೨೦೧೮ ರಿಂದ ಆಗಸ್ಟ್ ೨೦೨೩ ರವರೆಗೆ ಸಿಂಧ್ ಅಸೆಂಬ್ಲಿಯ ಸದಸ್ಯರಾಗಿದ್ದರು.

TLPOfficialStatus ನ ಎಂಬೆಡ್ ಮಾಡಿರುವ ಯೂಟ್ಯೂಬ್ ವೀಡಿಯೋ. (ಮೂಲ: TLPOfficialStatus/ಯೂಟ್ಯೂಬ್)

ಯೂಟ್ಯೂಬ್ ವೀಡಿಯೊದಲ್ಲಿ, ಫಾತಿಮಾ ಇಸ್ರೇಲ್‌ನ ಆಪಾದಿತ ದೌರ್ಜನ್ಯಗಳ ವಿರುದ್ಧ ಕ್ರಮಕ್ಕೆ ಕರೆ ನೀಡುವಂತೆ ಪ್ರತಿಪಾದಿಸುತ್ತಿದ್ದಾರೆ. ೫:೧೦ ಮತ್ತು ೫:೩೮ ಟೈಮ್‌ಸ್ಟ್ಯಾಂಪ್ ನಡುವಿನ ಯೂಟ್ಯೂಬ್ ವೀಡಿಯೋದ ಭಾಗವು ವೈರಲ್ ವೀಡಿಯೋದಲ್ಲಿ ಕಂಡುಬರುವ ಭಾಗಕ್ಕೆ ಹೊಂದಿಕೆಯಾಗುತ್ತದೆ. ಪ್ರಸ್ತುತ ಬಿಕ್ಕಟ್ಟಿನ ಮಧ್ಯೆ ಈ ಭಾಗವನ್ನು ಕ್ರಾಪ್ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಮೇ ೨೦೨೧ ರಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ವ್ಯಾಪಕ ಹಿಂಸಾಚಾರ ಮತ್ತು ಸಂಘರ್ಷದ ಅವಧಿಯಲ್ಲಿ ಎಂಪಿಏ ಫಾತಿಮಾ ತನ್ನ ಹೇಳಿಕೆಯನ್ನು ನೀಡಿದರು. ಮೇ ೭ ರಂದು, ರಾಯಿಟರ್ಸ್ ಪ್ರಕಾರ, ಪ್ಯಾಲೆಸ್ತೀನಿಯರು ಇಸ್ರೇಲಿ ಪೊಲೀಸ್ ಪಡೆಗಳ ಮೇಲೆ ಕಲ್ಲು ತೂರಾಟ ಮಾಡಿದರು. ನಂತರ ರಬ್ಬರ್ ಬುಲೆಟ್‌ಗಳು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಬಳಸಿಕೊಂಡು ಅಲ್-ಅಕ್ಸಾ ಮಸೀದಿಯ ಆವರಣದ ಮೇಲೆ ಇಸ್ರೇಲಿ ಪೊಲೀಸರಿಂದ ದಾಳಿ ನಡೆಯಿತು. ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿತು ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌ನಿಂದ ಅಧಿಕೃತ ಪ್ರತಿಕ್ರಿಯೆಯನ್ನು ಪ್ರೇರೇಪಿಸಿತು. ಅವರು ಈ ಸಂಘರ್ಷವನ್ನು "ಸಂಪೂರ್ಣವಾಗಿ ಭಯಾನಕ" ಎಂದು ವಿವರಿಸಿದರು.

ಆ ಸಮಯದಲ್ಲಿ ಸಿಂಧ್ ಅಸೆಂಬ್ಲಿ ಅಧಿವೇಶನದ ಬಗ್ಗೆ ೨೦೨೧ ರ ಮೇ ೨೨ ರಂದು ಪಾಕಿಸ್ತಾನಿ ದೈನಿಕ ಡಾನ್ ಸುದ್ದಿ ವರದಿಯನ್ನು ಪ್ರಕಟಿಸಿತು. ಅಸೆಂಬ್ಲಿಯಲ್ಲಿ ಶಾಸಕರು ಗಾಜಾದಲ್ಲಿ ಇಸ್ರೇಲ್‌ನಿಂದ "ರಾಜ್ಯ ಭಯೋತ್ಪಾದನೆ" ಎಂದು ಕರೆದದ್ದನ್ನು ಖಂಡಿಸಿದರು ಮತ್ತು ನಿರಾಯುಧ ಪ್ಯಾಲೆಸ್ತೀನಿಯರ "ಹತ್ಯಾಕಾಂಡ"ವನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದರು ಎಂದು ವರದಿ ಹೇಳಿದೆ. ಈ ಕುರಿತು ಮಾತನಾಡಿದವರಲ್ಲಿ ಟಿಎಲ್‌ಪಿಯ ಫಾತಿಮಾ ಇದ್ದರು.

ತೀರ್ಪು 

೨೦೨೧ ರ ಈ ಹಳೆಯ ವೀಡಿಯೋವನ್ನು ಇತ್ತೀಚೆಗೆ ಸ್ಪಷ್ಟವಾದ ಸಂದರ್ಭ ನೀಡದೆ ಮರುಹಂಚಿಕೊಳ್ಳಲಾಗಿದೆ. ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಪಾಕಿಸ್ತಾನಿ ಶಾಸಕರ ಇತ್ತೀಚಿನ ಹೇಳಿಕೆಯಂತೆ ವೀಡಿಯೋವನ್ನು ಹಂಚಿಕೊಳ್ಳಲು ಅನೇಕ ಬಳಕೆದಾರರು ಕಾರಣರಾಗಿದ್ದಾರೆ. ಆದ್ದರಿಂದ, ನಾವು ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.