ಸುದ್ದಿವಾಹಿನಿಗಳು ಉತ್ತರಾಖಂಡದ ಸುರಂಗ ಕುಸಿತದ ಸ್ಥಳದಲ್ಲಿ ರಕ್ಷಣಾ ಅಧಿಕಾರಿಗಳ ಎಐ -ರಚಿಸಿದ ಚಿತ್ರವನ್ನು ಪ್ರಕಟಿಸಿವೆ

ಮೂಲಕ: ರಜಿನಿ ಕೆ.ಜಿ
ನವೆಂಬರ್ 29 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಸುದ್ದಿವಾಹಿನಿಗಳು ಉತ್ತರಾಖಂಡದ ಸುರಂಗ ಕುಸಿತದ ಸ್ಥಳದಲ್ಲಿ ರಕ್ಷಣಾ ಅಧಿಕಾರಿಗಳ ಎಐ -ರಚಿಸಿದ ಚಿತ್ರವನ್ನು ಪ್ರಕಟಿಸಿವೆ

ವೈರಲ್ ಚಿತ್ರವನ್ನು ಭಾರತೀಯ ಏಜೆನ್ಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. (ಮೂಲ: ಎಕ್ಸ್//ಸ್ಕ್ರೀನ್‌ಶಾಟ್‌)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಹಲವಾರು ಅಸ್ಪಷ್ಟತೆಗಳನ್ನು ಹೊಂದಿರುವ ಈ ಚಿತ್ರವನ್ನು ಮೊದಲು ಶೇರ್ ಮಾಡಿದ ಎಕ್ಸ್ ಬಳಕೆದಾರರೊಬ್ಬರು ಇದು ಎಐ- ರಚಿತವಾದ ಚಿತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಲೈಮ್ ಐಡಿ 9bcf8d95

ಸಂದರ್ಭ 

ಉತ್ತರ ಭಾರತದ ರಾಜ್ಯವಾದ ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಹದಿನೇಳು ದಿನಗಳ ನಂತರ, ನವೆಂಬರ್ ೨೮ ರಂದು ೪೧ ಸುರಂಗ ಕಾರ್ಮಿಕರನ್ನು ರಕ್ಷಿಸಲಾಯಿತು, ಇದು ೪೦೦ ಗಂಟೆಗಳ ರಕ್ಷಣಾ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ.

ರಕ್ಷಣಾ ಕಾರ್ಯಾಚರಣೆಯ ಒಂದು ದಿನದ ನಂತರ, ಇದಕ್ಕೆ ನೇತೃತ್ವ ವಹಿಸಿದ ಅಧಿಕಾರಿಗಳು ಭಾರತೀಯ ಧ್ವಜದೊಂದಿಗೆ ಛಾಯಾಚಿತ್ರಕ್ಕೆ ಗುಂಪಾಗಿ ಪೋಸ್ ನೀಡುತ್ತಿರುವುದನ್ನು ತೋರಿಸುವ ಚಿತ್ರವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕೃತ ಖಾತೆಯು ಈ ಚಿತ್ರವನ್ನು ರಕ್ಷಿಸಿದ ಕಾರ್ಮಿಕರ ಫೋಟೋದೊಂದಿಗೆ ಹಂಚಿಕೊಂಡಿದೆ.

ಈ ಚಿತ್ರವನ್ನು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ರಕ್ಷಣಾ ಕಾರ್ಯಾಚರಣೆಯ ವರದಿಯೊಂದರಲ್ಲಿ ಬಳಸಿಕೊಂಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಮಾತೃಭೂಮಿ ನ್ಯೂಸ್, ನಾರ್ತ್ ಈಸ್ಟ್ ಲೈವ್, ನ್ಯೂಸ್ 18, ನ್ಯೂಸ್ 18 ಕನ್ನಡ, ಮತ್ತು ಒನ್ ಇಂಡಿಯಾ ಕನ್ನಡ ಸೇರಿದಂತೆ ಹಲವಾರು ಭಾರತೀಯ ಸುದ್ದಿವಾಹಿನಿಗಳಿಂದ ಚಿತ್ರವನ್ನು ಶೀಘ್ರದಲ್ಲೇ ಮರುಪ್ರಕಟಿಸಲಾಯಿತು. ಈ ಚಿತ್ರವನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಕೆಲವು ಸಂದರ್ಭಗಳಲ್ಲಿ ಶೀರ್ಷಿಕೆಯಿಲ್ಲದೆ ಕೂಡ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಎಐಎಡಿಎಂಕೆ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಲ್ಲಿ ಆರ್ಕೈವ್), ಮತ್ತು ರೈಲ್ವೆ ಸಚಿವ ಅಶ್ವನಿ ವೈಷ್ಣವ್ (ಇಲ್ಲಿ ಆರ್ಕೈವ್) ಸಹ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರವು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೂಡ ವೈರಲ್ ಆಗಿದೆ.

ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಕಟಿಸಿದ ವೈರಲ್ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್/ಟೈಮ್ಸ್ ಆಫ್ ಇಂಡಿಯಾ/ಇಂಡಿಯಾ ಟುಡೇ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಚಿತ್ರವು ಎಐ- ರಚಿತವಾಗಿದೆ ಮತ್ತು ಇದು ರಕ್ಷಣಾ ಅಧಿಕಾರಿಗಳ ನಿಜವಾದ ಛಾಯಾಚಿತ್ರವಲ್ಲ.

ವಾಸ್ತವಾಂಶಗಳು

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅನೇಕ ವ್ಯತ್ಯಾಸಗಳು ಕಂಡುಬಂದವು ಮತ್ತು ಚಿತ್ರವನ್ನು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ. ಇದರಲ್ಲಿನ ಜನರ ಮುಖಗಳು, ವಿಶೇಷವಾಗಿ ಕಣ್ಣುಗಳ ಸುತ್ತಲಿನ ಪ್ರದೇಶವು ವಿರೂಪಗೊಂಡಂತೆ ತೋರುತ್ತದೆ, ಮತ್ತು ಚಿತ್ರದಲ್ಲಿ ಸೆರೆಹಿಡಿಯಲಾದ ಕೆಲವು ಜನರು ಐದಕ್ಕಿಂತ ಹೆಚ್ಚು ಬೆರಳುಗಳನ್ನು ಹೊಂದಿರುವುದಾಗಿ ಕಾಣಿಸುತ್ತದೆ - ಇವೆಲ್ಲವೂ ಈ ಚಿತ್ರ ಕೃತಕವಾಗಿ ರಚಿಸಲ್ಪಟ್ಟಿದೆ ಎಂಬ ಸೂಚನೆಗಳಾಗಿವೆ. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಪ್ಲಿಕೇಶನ್‌ಗಳು ಮಾನವನ ಬೆರಳುಗಳ ಸಂಖ್ಯೆಯನ್ನು ಸರಿಯಾಗಿ ರಚಿಸಲು ಕಷ್ಟ ಪಡುತ್ತಿವೆ ಎಂಬುದು ವ್ಯಾಪಕವಾಗಿ ತಿಳಿದ ಸಂಗತಿ ಮತ್ತು ಈ ವಿಚಾರವು ಚಿತ್ರವನ್ನು ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ಗುರುತಿಸಲು ನಮಗೆ ಸಹಾಯ ಮಾಡಿತು.

ಚಿತ್ರದಲ್ಲಿನ ಸ್ಪಷ್ಟವಾದ ವಿರೂಪಗಳು, ಇದನ್ನು ಕೃತಕವಾಗಿ ರಚಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೈರಲ್ ಚಿತ್ರವನ್ನು ಹಂಚಿಕೊಂಡ ಎಕ್ಸ್ ಪೋಷ್ಟ್ ನಲ್ಲಿ "ಎಕ್ಸ್‌ಕ್ಲೂಸಿವ್ ಮೈಂಡ್ಸ್" ಎಂದು ಇಂಗ್ಲಿಷ್ ಭಾಷೆಯಲ್ಲಿ ಲೇಬಲ್ ಮಾಡಿದ ವಾಟರ್‌ಮಾರ್ಕ್ ಅನ್ನು ಸಹ ನಾವು ಗಮನಿಸಿದ್ದೇವೆ. "@Exclusive_Minds" ನ ಎಕ್ಸ್ ಖಾತೆಯಲ್ಲಿ ಮೂಲ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಈ ಖಾತೆಯು "ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಮತ್ತು ತಪ್ಪುದಾರಿಗೆಳೆಯುವ ವಿಷಯದ ವಿರುದ್ಧ ಹೋರಾಡುವ ನಾಗರಿಕರ ಸಾಮೂಹಿಕ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ವಿವರಿಸುತ್ತದೆ. ಇದು ಉತ್ತರಾಖಂಡದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ  ಅಧಿಕಾರಿಗಳನ್ನು ತೋರಿಸುವ ಇತರ ಚಿತ್ರಗಳನ್ನು ಸಹ ಹಂಚಿಕೊಂಡಿದೆ ಮತ್ತು ಈ ಚಿತ್ರಗಳನ್ನು ಒಳಗೊಂಡಿರುವ ಪೋಷ್ಟ್ ಗಳ ಥ್ರೆಡ್‌ಗೆ ಪ್ರತ್ಯುತ್ತರವಾಗಿ, ಬಳಕೆದಾರರು "ಡಿಸ್ಕ್ಲೈಮೇರ್: ಇದು ಎಐ-ರಚಿತ ಫೋಟೋ" ಎಂದು ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಎಕ್ಸ್ ಬಳಕೆದಾರರ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್ 'ಎಕ್ಸ್ಕ್ಲೂಸಿವ್ ಮೈಂಡ್ಸ್.' (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಈ ಬಳಕೆದಾರರಿಂದ ಸ್ವತಃ ಚಿತ್ರಗಳನ್ನು ರಚಿಸಲಾಗಿದೆಯೇ ಎಂದು ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ಮೇಲಿನ ಸಾಕ್ಷ್ಯವು ಚಿತ್ರವು ಎಐ - ರಚಿತವಾಗಿದೆ ಎಂದು ತೋರಿಸುತ್ತದೆ. ಈ ಚಿತ್ರವನ್ನು ಉತ್ತರಾಖಂಡದಲ್ಲಿ ಕುಸಿದ ನಿರ್ಮಾಣ ಹಂತದ ಸುರಂಗದಿಂದ ೪೧ ಕಾರ್ಮಿಕರನ್ನು ರಕ್ಷಿಸಿದ ಅಧಿಕಾರಿಗಳ ನಿಜವಾದ ಫೋಟೋ ಎಂದು ಹಂಚಿಕೊಳ್ಳಲಾಗಿದೆ.

ತೀರ್ಪು 

ಉತ್ತರಾಖಂಡದಲ್ಲಿ ಕುಸಿದ ನಿರ್ಮಾಣ ಹಂತದ ಸುರಂಗದಿಂದ ೪೧ ಕಾರ್ಮಿಕರನ್ನು ರಕ್ಷಿಸಲು ಸಹಾಯ ಮಾಡಿದ ಅಧಿಕಾರಿಗಳು ರಾಷ್ಟ್ರ ಧ್ವಜವನ್ನು ಹಿಡಿದು ಪೋಸ್ ನೀಡುವ ನೈಜ ಛಾಯಾಚಿತ್ರವಾಗಿ ಹಲವಾರು ಸುದ್ದಿವಾಹಿನಿಗಳು ಎಐ- ರಚಿತವಾದ ಚಿತ್ರವನ್ನು ಹಂಚಿಕೊಂಡಿವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.