ನಿರುದ್ಯೋಗಕ್ಕೆ ಜನಸಂಖ್ಯೆಯ ಬೆಳವಣಿಗೆಯನ್ನು ದೂಷಿಸುವ ಬಿಜೆಪಿಯ ದಿನೇಶ್ ಲಾಲ್ ಯಾದವ್ ಅವರ ವೀಡಿಯೋ ಡೀಪ್‌ಫೇಕ್ ಅಲ್ಲ

ಮೂಲಕ: ಸೋಹಮ್ ಶಾ
ಏಪ್ರಿಲ್ 16 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಿರುದ್ಯೋಗಕ್ಕೆ ಜನಸಂಖ್ಯೆಯ ಬೆಳವಣಿಗೆಯನ್ನು ದೂಷಿಸುವ ಬಿಜೆಪಿಯ ದಿನೇಶ್ ಲಾಲ್ ಯಾದವ್ ಅವರ ವೀಡಿಯೋ ಡೀಪ್‌ಫೇಕ್ ಅಲ್ಲ

ವೈರಲ್ ವೀಡಿಯೋ ಡೀಪ್‌ಫೇಕ್ ಎಂದು ಪ್ರತಿಪಾದಿಸಿ ಶೇರ್ ಮಾಡಲಾದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋ ಸಂದರ್ಶನವನ್ನು ಸ್ಥಳೀಯ ಪತ್ರಕರ್ತ ಸಂತೋಷ್ ಕುಶ್ವಾಹಾ ಅವರು ಏಪ್ರಿಲ್ ೧೩ ರಂದು ಚಿತ್ರೀಕರಿಸಿದ್ದು, ಇದು ಡೀಪ್‌ಫೇಕ್ ಅಲ್ಲ.

ಕ್ಲೈಮ್ ಐಡಿ 9f97a716

ಹೇಳಿಕೆ ಏನು?

ಏಪ್ರಿಲ್ ೧೫, ೨೦೨೪ ರಂದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ (ಎಂಪಿ) ದಿನೇಶ್ ಲಾಲ್ ಯಾದವ್ ಅವರ ವೀಡಿಯೋವೊಂದನ್ನು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಎಕ್ಸ್ (ಹಿಂದೆ ಟ್ವಿಟರ್) ಗೆ  ಪೋಷ್ಟ್ ಮಾಡಿದ್ದಾರೆ.  ವೀಡಿಯೋದಲ್ಲಿ, ಯಾದವ್ ಅವರು ಪತ್ರಕರ್ತರಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ, ಅದರಲ್ಲಿ ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ಮುಂಬರುವ ಭಾರತದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಜಂಗಢ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯಾದವ್, “ಮೋದಿ ಜಿ ಅಥವಾ ಯೋಗಿ ಜಿ ಅವರಿಗೆ ಒಂದಾದರೂ ಮಗುವಿದೆಯೇ ಹೇಳಿ... ಅವರು ನಿರುದ್ಯೋಗವನ್ನು ನಿಲ್ಲಿಸಿದ್ದಾರೆ. ನಾವು ಹೆಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ನಿರುದ್ಯೋಗವನ್ನು ಹೆಚ್ಚಿಸುವವರು ಯಾರು? ಮಕ್ಕಳಿಗೆ ಜನ್ಮ ನೀಡುತ್ತಿರುವವರು.” (ಹಿಂದಿಯಿಂದ ಅನುವಾದಿಸಲಾಗಿದೆ) ಎಂದು ಹೇಳಿದ್ದಾರೆ. 

ಈ ಪೋಷ್ಟ್ ವೈರಲ್ ಆಗುತ್ತಿದ್ದಂತೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ಬಿಜೆಪಿ ನಾಯಕ ತಜೀಂದರ್ ಸಿಂಗ್ ಬಗ್ಗಾ ಅವರು ಈ ವೀಡಿಯೊ ಡೀಪ್‌ಫೇಕ್ ಮತ್ತು ಅದನ್ನು “ಜನರನ್ನು ದಾರಿತಪ್ಪಿಸಲು, ಅಶಾಂತಿಯನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ವಿಭಜನೆಯನ್ನು ಬಿತ್ತಲು ಹಂಚಿಕೊಳ್ಳಲಾಗುತ್ತಿದೆ" ಎಂದು ಪೋಷ್ಟ್ ಮಾಡಿದ್ದಾರೆ. 

ಲಿಪ್ ಮೂವ್ ಮೆಂಟ್ ಧ್ವನಿಗೆ ಹೊಂದಿಕೆಯಾಗುತ್ತಿಲ್ಲ ಮತ್ತು ಅಂತಹ 'ನಕಲಿ ವೀಡಿಯೋಗಳನ್ನು' ಪ್ರಚಾರ ಮಾಡುವುದು ಕಾಂಗ್ರೆಸ್‌ನಲ್ಲಿರುವವರಿಗೆ 'ಟ್ರೆಂಡ್' ಆಗಿಬಿಟ್ಟಿದೆ ಎಂದು ಯಾದವ್ ಸ್ವತಃ ವೀಡಿಯೋವನ್ನು ಫೇಕ್ ಎಂದು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಅನ್ನು ಶೇರ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲಾ ಮುಖಂಡರು ಒತ್ತಾಯಿಸಿದ್ದಾರೆ. 

ವೈರಲ್ ವೀಡಿಯೋ ಫೇಕ್ ಎಂದು ಹೇಳಿ ಹಂಚಿಕೊಂಡ ಮಾಳವಿಯಾ ಮತ್ತು ಯಾದವ್ ಅವರ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹಿಂದಿ ಸುದ್ದಿ ವಾಹಿನಿ ಇಂಡಿಯಾ ಟಿವಿ ಕೂಡ ಈ ವೀಡಿಯೋವನ್ನು ಪ್ರಸಾರ ಮಾಡಿದ್ದು,  ಅದನ್ನು 'ಡೀಪ್‌ಫೇಕ್' ಎಂದು ಕರೆದಿದೆ.

ಆದರೆ, ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಡೀಪ್‌ಫೇಕ್ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಎಡಿಟ್ ಮಾಡದ ಮೂಲ ದೃಶ್ಯಗಳಲ್ಲಿ ಯಾದವ್ ಅವರ ಈ  ಹೇಳಿಕೆಗಳನ್ನು ನಾವು ನಿಖರವಾಗಿ ಕೇಳಬಹುದು. ಆದರೆ, ವೈರಲ್ ವೀಡಿಯೋವನ್ನು  ಮೂಲ ಕ್ಲಿಪ್‌ನ ಎರಡು ಭಾಗಗಳನ್ನು ಒಟ್ಟಿಗೆ ಜೋಡಿಸಿ ರಚಿಸಲಾಗಿದೆ ಎಂದು ಗಮನಿಸಬಹುದು, ಹಾಗಿದ್ದರೂ ಸಹ ಇದು ಯಾದವ್ ಅವರ ಹೇಳಿಕೆಗಳ ಸಂದರ್ಭ ಅಥವಾ ಅರ್ಥವನ್ನು ಬದಲಾಯಿಸುತ್ತಿಲ್ಲ. 

ನಾವು ಕಂಡುಹಿಡಿದದ್ದು ಏನು?

ಏಪ್ರಿಲ್ ೧೩, ೨೦೨೪ ರಂದು ಪತ್ರಕರ್ತ ಸಂತೋಷ್ ಕುಶ್ವಾಹಾ ಅವರು ನಡೆಸುತ್ತಿರುವ 'ಸೋಲ್ ಅಪ್ ಹಿಂದಿ' ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಪೂರ್ಣ ಸಂದರ್ಶನವನ್ನು ಪೋಷ್ಟ್ ಮಾಡಲಾಗಿದೆ. ವೀಡಿಯೋದ ಶೀರ್ಷಿಕೆ “बेरोजगारी के सवाल पर भड़के सांसद निरहुआ कहा कहा योगी मोदी जी की तरह मत करो पैदा बच्चे” (ನಿರುದ್ಯೋಗದ ಬಗ್ಗೆ ಪ್ರಶ್ನಿಸಿದಾಗ ರಾಜಕಾರಣಿ ನಿರಾಹುವಾ ಕೋಪಗೊಳ್ಳುತ್ತಾರೆ, ಮೋದಿ ಮತ್ತು ಯೋಗಿಯಂತೆ ಮಕ್ಕಳನ್ನು ಮಾಡಿಕೊಳ್ಳಬೇಡಿ ಎಂದು ಹೇಳುತ್ತಾರೆ.) ಪ್ರಶ್ನೆಯಲ್ಲಿರುವ ಟೀಕೆಗಳನ್ನು ವೀಡಿಯೋದ ಕೊನೆಯಲ್ಲಿ, ಸುಮಾರು ೧೧:೦೦ ನಿಮಿಷಗಳಲ್ಲಿ ಕಾಣಬಹುದು.

 

ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ೫೮ ಸೆಕೆಂಡುಗಳಷ್ಟು ಉದ್ದವಾಗಿದೆ, ಆದರೆ ಪೂರ್ಣ ಸಂದರ್ಶನವು ೧೧ ನಿಮಿಷದಾಗಿದೆ. ಪತ್ರಕರ್ತನು ಫ್ಲೈಓವರ್‌ನ ಕೆಳಗಿರುವ ರಸ್ತೆಯಿಂದ ವರದಿ ಮಾಡುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ, ಯಾದವ್ ಅವರ ವಾಹನವನ್ನು  ಪತ್ರಕರ್ತನು ಸಮೀಪಿಸುತ್ತಾರೆ ಮತ್ತು ಅವರ ಸಂದರ್ಶನವನ್ನು ತೆಗೆದುಕೊಳ್ಳುವಾಗ ನಾಯಕರು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಾರೆ. ಯಾದವ್‌ ಅವರ ಮುಖವು ಫೂಟೇಜ್‌ನಲ್ಲಿ ಹಲವಾರು ಹಂತಗಳಲ್ಲಿ ಫೋಕಸ್‌ನಿಂದ ಹೊರಗಿದ್ದರೂ, ವೀಡಿಯೋವನ್ನು ಕುಶಲತೆಯಿಂದ ನಿರ್ಮಿಸಲಾಗಿದೆ ಎಂದು ತೋರುವ ಯಾವುದೇ ಸೂಚನೆಗಳು ನಮಗೆ ಕಂಡುಬಂದಿಲ್ಲ.

ಈ ಯೂಟ್ಯೂಬ್ ವೀಡಿಯೋದ ಸುಮಾರು ೧೧ ನಿಮಿಷಗಳಲ್ಲಿ ವೈರಲ್ ವಿಭಾಗವು ಕಾಣಿಸಿಕೊಂಡಿದೆ ಎಂದು ನಾವು ಗಮನಿಸಿದ್ದೇವೆ. ಯಾದವ್ ಅವರ ನಿರುದ್ಯೋಗ ಮತ್ತು ಮಕ್ಕಳ ಟೀಕೆಗಳನ್ನು ಸ್ಪಷ್ಟವಾಗಿ ನೋಡಬಹುದು ಮತ್ತು ಕೇಳಬಹುದು. ಹಾಗು, ಯಾದವ್ ಅವರ ತುಟಿ ಚಲನೆಯು ಆಡಿಯೊದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.

ಆದರೆ, ಎಕ್ಸ್ ನಲ್ಲಿನ ಕ್ಲಿಪ್ ಅನ್ನು ದೀರ್ಘ ವೀಡಿಯೋದ ಎರಡು ವಿಭಿನ್ನ ಭಾಗಗಳನ್ನು ಸೇರಲು ಸಂಪಾದಿಸಲಾಗಿದೆ ಎಂದು ಗಮನಿಸಬಹುದು. ಪ್ರಧಾನ ಮಂತ್ರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರಿಗೆ  ಮಕ್ಕಳಿಲ್ಲದ ಬಗ್ಗೆ ಯಾದವ್ ಅವರ ಕಾಮೆಂಟ್‌ಗಳು ಮೂಲಭೂತವಾಗಿ ಅವರ ಉಳಿದ ಕಾಮೆಂಟ್‌ಗಳ ನಂತರ ಮಾಡಲ್ಪಟ್ಟಿವೆ, ಆದರೆ ವೈರಲ್ ಕ್ಲಿಪ್ ಅವುಗಳನ್ನು ಪ್ರಾರಂಭದಲ್ಲಿ ಇರಿಸಿದೆ. ಆದರೆ, ಇದು ಯಾದವ್ ಅವರ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸುತ್ತಿಲ್ಲ.

ಲಾಜಿಕಲಿ ಫ್ಯಾಕ್ಟ್ಸ್ ಕುಶ್ವಾಹಾ ಅವರನ್ನು ಸಂಪರ್ಕಿಸಿತು, ಈ ಸಂದರ್ಶನವನ್ನು ಅವರು ರೆಕಾರ್ಡ್ ಮಾಡಿದ್ದಾರೆ ಎಂದು ಖಚಿತಪಡಿಸಿದರು. ಅವರು ನಮ್ಮೊಂದಿಗೆ ಮೂಲ ವೀಡಿಯೋವನ್ನೂ ಸಹ ಹಂಚಿಕೊಂಡಿದ್ದಾರೆ. ನಾವು ಈ ವೀಡಿಯೋದ ಮೆಟಾಡೇಟಾವನ್ನು ಪರಿಶೀಲಿಸಿದ್ದೇವೆ ಮತ್ತು ಅದನ್ನು ಏಪ್ರಿಲ್ ೧೩, ೨೦೨೪ ರಂದು ಮಧ್ಯಾಹ್ನ ೩:೩೮ ಗಂಟೆಗೆ ರೆಕಾರ್ಡ್ ಮಾಡಲಾಗಿದೆ ಎಂದು ಕಂಡುಬಂದಿದೆ ಹಾಗು ಅದೇ ದಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ವೀಡಿಯೋದ ಮೆಟಾಡೇಟಾ ಇದನ್ನು ಏಪ್ರಿಲ್ ೧೩, ೨೦೨೪ ರಂದು ಚಿತ್ರೀಕರಿಸಲಾಗಿದೆ ಎಂದು ತೋರಿಸುತ್ತದೆ.


ವೀಡಿಯೋ ಕುರಿತು ತಜ್ಞರು ಮತ್ತು ಉಪಕರಣಗಳು ಏನು ಹೇಳುತ್ತಾರೆ?

ದಿ ಮಿಸ್ಇನ್ಫರ್ಮೇಷನ್ ಕಾಂಬ್ಯಾಟ್ ಅಲೈಯನ್ಸ್‌ನ (ಎಂಸಿಎ) ಡೀಪ್‌ಫೇಕ್ಸ್ ಅನಾಲಿಸಿಸ್ ಯುನಿಟ್ (ಡಿಎಯು), ಇದರಲ್ಲಿ ಲಾಜಿಕಲಿ ಫ್ಯಾಕ್ಟ್ಸ್ ಒಂದು ಭಾಗವಾಗಿದೆ, ನಾಲ್ಕು ಉಪಕರಣಗಳ ಮೂಲಕ ವೀಡಿಯೋವನ್ನು ಪ್ರಸಿಶೀಲಿಸಲಾಗಿದೆ ಮತ್ತು ಅದೆಲ್ಲವೂ ವೀಡಿಯೋ ಎಐ- ರಚಿತವಾಗಿಲ್ಲ ಎಂದು ಹೇಳುತ್ತವೆ.

ಇದಲ್ಲದೆ, ಐಐಟಿ ಜೋಧ್‌ಪುರದ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕ ಡಾ ಮಯಾಂಕ್ ವತ್ಸಾ ಅವರಿಗೆ ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿತು, ಅವರು ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೋವನ್ನು ಎಡಿಟ್ ಮಾಡಲಾಗಿದ್ದರೂ, ಅದು ಡೀಪ್‌ಫೇಕ್ ಅಲ್ಲ ಎಂದು ನಮಗೆ ತಿಳಿಸಿದರು. ವೈರಲ್ ಕ್ಲಿಪ್  ಮೂಲ ವೀಡಿಯೋದ ಎರಡು ವಿಭಿನ್ನ ಭಾಗಗಳನ್ನು ಸೇರಿಸಿ ಹಂಚಿಕೊಳ್ಳಲಾಗಿದೆ, ಆದರೆ ಇದು ಯಾದವ್ ಅವರ ಹೇಳಿಕೆಗಳ ಸಂದರ್ಭ ಅಥವಾ ಅರ್ಥವನ್ನು ಬದಲಾಯಿಸುವುದಿಲ್ಲ.

ತೀರ್ಪು

ಯಾದವ್ ಅವರು ವೈರಲ್ ಕ್ಲಿಪ್ ನಲ್ಲಿ ಮಾಡುವ ಹೇಳಿಕೆಗಳನ್ನು ತೋರಿಸುವ ಮೂಲ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ ಮತ್ತು ವೀಡಿಯೋದಲ್ಲಿ ಕುಶಲತೆಯ ಯಾವುದೇ ಗೋಚರ ಲಕ್ಷಣಗಳಿಲ್ಲ. ವೀಡಿಯೋವನ್ನು ಎಡಿಟ್ ಮಾಡಲಾಗಿದ್ದರೂ, ಅದು ಡೀಪ್‌ಫೇಕ್ ಅಲ್ಲ ಎಂದು ತಜ್ಞರು ದೃಢಪಡಿಸಿದ್ದಾರೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.